ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಲಕ್ಕಿ ಬಾಳೆಹಣ್ಣು ಗ್ರಾಹಕನಿಗೆ ಕಹಿ

Last Updated 13 ಸೆಪ್ಟೆಂಬರ್ 2011, 6:35 IST
ಅಕ್ಷರ ಗಾತ್ರ

ಮೈಸೂರು: ಕೆ.ಜಿ.ಗೆ 30 ರೂಪಾಯಿ ಇದ್ದ ಏಲಕ್ಕಿ ಬಾಳೆಹಣ್ಣು ಇದೀಗ ಬರೋಬರಿ 50 ರೂಪಾಯಿ. ಇದು ರೈತ ಸಮುದಾಯಕ್ಕೆ ಒಂದೆಡೆ ಸಂತಸ ತಂದರೆ, ಗ್ರಾಹಕರಿಗೆ ಕಹಿಯಾಗಿ ಪರಿಣಮಿಸಿದೆ.

ಈ ಹಿಂದೆ ಬಾಳೆ ಬೆಲೆ ಹೆಚ್ಚಳವಾಗಿದ್ದು ಕಡಿಮೆ. ಹಬ್ಬ ಬಿಟ್ಟರೆ ಇನ್ನಿತರ ದಿನಗಳಲ್ಲಿ ಕುಸಿತ ಕಂಡಿತ್ತು. ಆದರೆ, ಈಗ ಹಬ್ಬಗಳ ಭರಾಟೆ ಇಲ್ಲ. ವರಮಹಾಲಕ್ಷ್ಮೀ ಹಬ್ಬ ಮತ್ತು ಗಣೇಶ ಹಬ್ಬ ಮುಗಿದಿದ್ದರೂ ಏಲಕ್ಕಿ ಬಾಳೆಹಣ್ಣು ಬೆಲೆ ಮಾತ್ರ ಕಡಿಮೆಯಾಗಿಲ್ಲ. ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ಹಾಪ್‌ಕಾಮ್ಸನಲ್ಲಿ 44 ರೂಪಾಯಿ ಇದ್ದರೆ, ನಗರದ ಮಾರುಕಟ್ಟೆಯಲ್ಲಿ 48-50 ರೂ. ಇದೆ. ಕಳೆದ ವರ್ಷ ಸಹ ಈ ವೇಳೆಗೆ ಏಲಕ್ಕಿ ಬಾಳೆಹಣ್ಣು 40 ರೂಪಾಯಿ ಇತ್ತು.

`ಜೂನ್-ಜುಲೈ ತಿಂಗಳಲ್ಲಿ ಏಲಕ್ಕಿ ಬಾಳೆ ಬೆಳೆಯುವುದು ಕಡಿಮೆ. ಕಾರಣ ಆಗ ತಾನೆ ಮಳೆಗಾಲ ಆರಂಭವಾಗುವುದರಿಂದ ಮಳೆಗೆ ಬಾಳೆ ಗಿಡಗಳು ನಾಶವಾಗಿ ಫಸಲು ಕೈಗೆ ಸಿಗುವುದಿಲ್ಲ ಎಂದು ರೈತರು ಹಿಂದೇಟು ಹಾಕುತ್ತಾರೆ. ಆದ್ದರಿಂದ ಜೂನ್‌ನಿಂದ ಅಕ್ಟೋಬರ್‌ವರೆಗೆ ಬಾಳೆಯನ್ನು ರೈತರು ಹೆಚ್ಚು ಬೆಳೆಯುವುದಿಲ್ಲ. ಅಲ್ಲದೆ ಕಳೆದ ವರ್ಷ ಅರಿಶಿನಕ್ಕೆ ಹೆಚ್ಚು ಲಾಭ ಇದುದ್ದರಿಂದ ಮತ್ತು ನಿರ್ವಹಣೆ ಸುಲಭವಾದುದ್ದರಿಂದ ಕೆಲ ರೈತರು ಅರಿಶಿನದತ್ತ ಮುಖ ಮಾಡಿದ್ದರು. ಇದರಿಂದ ಈ ಬಾರಿ ಫಸಲು ಕಡಿಮೆಯಾಗಿ ಏಲಕ್ಕಿ ಬಾಳೆಹಣ್ಣು ಬೆಲೆ ಏರಿಕೆಯಾಗಲು ಕಾರಣವಾಗಿದೆ~ ಮೈಸೂರು ಹಾಪ್‌ಕಾಮ್ಸನ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗಪ್ಪ.

ನಂಜನಗೂಡು, ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲ್ಲೂಕುಗಳಲ್ಲಿ ಏಲಕ್ಕಿ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ಮೈಸೂರು ಮಾರುಕಟ್ಟೆಗೆ ಏಲಕ್ಕಿ ಬಾಳೆ ಈ ತಾಲ್ಲೂಕಿನಂದಲೇ ಸರಬರಾಜಾಗುತ್ತದೆ.  ಈ ಭಾಗದ ಏಲಕ್ಕಿ ಬಾಳೆಹಣ್ಣು ಹೆಚ್ಚು ಸಿಹಿಯಾಗಿದ್ದು, ಗಾತ್ರದಲ್ಲೂ ಉತ್ತಮವಾಗಿರುತ್ತದೆ. ಹಾಸನ ಮತ್ತು ಕೊಡಗು ಜಿಲ್ಲೆಗಳಿಂದಲೂ ಏಲಕ್ಕಿ ಬಾಳೆಹಣ್ಣು ಮೈಸೂರು ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಆದರೆ. ಈ ಭಾಗದ ಹಣ್ಣು ಸಣ್ಣ ಮತ್ತು ಸ್ವಲ್ಪ ಕಪ್ಪಗಿರುತ್ತವೆ. ಇದನ್ನು ಜನರು ಹೆಚ್ಚು ಇಷ್ಟಪಡುವುದಿಲ್ಲ.

ತಮಿಳುನಾಡಿನ ಸತ್ಯಮಂಗಲದಿಂದಲೂ ಏಲಕ್ಕಿ ಬಾಳೆಹಣ್ಣು ಮೈಸೂರು ಮಾರುಕಟ್ಟೆಗೆ ಬರುತ್ತವೆ. ಇದು ಸಹ ಮೈಸೂರು ಭಾಗದ ಏಲಕ್ಕಿ ಬಾಳೆಯಷ್ಟು ರುಚಿಕರವಾಗಿರುವುದಿಲ್ಲ. ಏಲಕ್ಕಿ ಬಾಳೆ ಕಂದು ಸಣ್ಣದಾಗಿದ್ದರೆ ಫಸಲು ಬರಲು 14-15 ತಿಂಗಳು ಬೇಕು. ಕಂದು ಮಧ್ಯಮವಾಗಿದ್ದರೆ 12-13 ತಿಂಗಳಲ್ಲಿ ಫಸಲು ಸಿಗುತ್ತದೆ. ಏಲಕ್ಕಿ ಬಾಳೆ ರೈತರು ಕಳೆದ ವರ್ಷ ನವೆಂಬರ್ ನಂತರದಲ್ಲಿ ಬೆಳೆ ಹಾಕಿರುವುದರಿಂದ ನವೆಂಬರ್ ತಿಂಗಳಲ್ಲಿ ಏಲಕ್ಕಿ ಬಾಳೆ ಹೆಚ್ಚಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ ಹಾಗೂ ಬೆಲೆಯೂ ತಗ್ಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT