ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಜೀತದಾಳುಗಳಿಗೆ ವಿಮುಕ್ತಿ

Last Updated 28 ಜೂನ್ 2011, 8:45 IST
ಅಕ್ಷರ ಗಾತ್ರ

ಮದ್ದೂರು: ತಾಲ್ಲೂಕಿನ ತೊಪ್ಪನ ಹಳ್ಳಿ ಹಾಗೂ ಹಳ್ಳಿಕೆರೆ ಅಕ್ರಮ ಕಲ್ಲು ಗಣಿ ಗಾರಿಕೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 7ಮಂದಿಯನ್ನು ಪಟ್ಟಣ ಪೊಲೀಸರ ಸಹಕಾರದೊಂದಿಗೆ ತಮಿಳು ನಾಡು ಪೊಲೀಸರು ಜೀತದಿಂದ ಸೋಮವಾರ ವಿಮುಕ್ತಿಗೊಳಿಸಿದರು.

ತಮಿಳುನಾಡಿನ ಸೆಲಂ ಜಿಲ್ಲೆಯ ನಡುಪಟ್ಟಿ ಗ್ರಾಮದ ರಾಣಿ (55), ಆಕೆಯ ಮಗ ಕುಮಾರ್(37), ಅಳಿಯ ಸ್ವಾಮಿಕಣ್ಣನ್(40), ಮಗಳು ನೀಲಾ (35) ಹಾಗೂ ಮೊಮ್ಮಕ್ಕಳಾದ ಲತಾ (18), ರಾಜನ್ (11), ನೇತ್ರ (10) ಜೀತದಿಂದ ವಿಮುಕ್ತರಾದವರು.

ಘಟನೆ ವಿವರ: ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡಿನಿಂದ ಕೂಲಿಕಾರರಾಗಿ ತೊಪ್ಪನಹಳ್ಳಿಯ ಜಗನ್ನಾಥ್ ಹಾಗೂ ಹಳ್ಳಿಕೆರೆಯ ಕೃಷ್ಣ ಎಂಬುವರ ಕಲ್ಲು ಗಣಿಗೆ ಆಗಮಿಸಿದ ಅವರು 70ಸಾವಿರ ರೂಪಾಯಿ ಮುಂಗಡ ಪಡೆದು ಕೆಲಸ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಹಬ್ಬಕ್ಕೆಂದು ಊರಿಗೆ ಹೋದ ಕುಮಾರ್ ಜೊತೆಯಲ್ಲಿ ಮಾದೇಶ್, ಆರ್.ಕುಮಾರ್ ಮತ್ತು ಪೂಜಾರಿ ಎಂಬುವರು ತೊಪ್ಪನಹಳ್ಳಿ ಕಲ್ಲುಗಣಿಗೆ ಬಂದು 70ಸಾವಿರ ರೂಪಾಯಿ ಮುಂಗಡ ಪಡೆದು ಕೆಲಸ ಮಾಡಲಾರಂಭಿಸಿದರು. ಒಂದು ತಿಂಗಳು ಕೆಲಸ ಮಾಡಿದ ಇವರು ಹಬ್ಬಕ್ಕೆಂದು ತಮಿಳುನಾಡಿಗೆ ಹೋದವರು ಮತ್ತೇ ಹಿಂದಿರುಗಲಿಲ್ಲ.

ಇದರಿಂದ ಆಕ್ರೋಶಗೊಂಡ ಗಣಿ ಮಾಲೀಕರು ಕುಮಾರ್ ಹಾಗೂ ಆತನ ಕುಟುಂಬವರ್ಗದವರಿಗೆ ಕೂಲಿ ಹಣ ನೀಡದೇ ಪ್ರತಿದಿನ ದುಡಿಸಿಕೊಳ್ಳಲು ಆರಂಭಿಸಿದರು. ಪ್ರತಿದಿನ 2ಹೊತ್ತು ಊಟ ನೀಡಿ, ಪ್ರತಿದಿನ ಕುಮಾರ್‌ನನ್ನು ತೊಪ್ಪನಹಳ್ಳಿಯ ಮನೆಯೊಂದರಲ್ಲಿ ಓಡಿ ಹೋಗದಂತೆ ಕೈಕಾಲು ಕಟ್ಟಿ ಹಾಕುತ್ತಿದ್ದರು ಎನ್ನಲಾಗಿದೆ.

ಗಣಿ ಮಾಲೀಕರ ಶೋಷಣೆಯಿಂದ ಕಂಗಾಲಾದ ಕುಮಾರ್ ತಾಯಿ ರಾಣಿ, ಕೆಲಸ ಮಾಡುತ್ತಿದ್ದ ಸ್ಥಳದಿಂದ ಒಂದು ದಿನ ಪರಾರಿಯಾಗಿ ತಮಿಳುನಾಡಿಗೆ ತೆರಳಿದರು. ಅಲ್ಲಿ ತಮ್ಮ ವ್ಯಾಪ್ತಿಯ ಓಮಲೂರು ಪೊಲೀಸ್ ಠಾಣೆಗೆ ತೆರಳಿ ತಮ್ಮನ್ನು ಜೀತದಿಂದ ವಿಮುಕ್ತಿ ಗೊಳಿಸಬೇಕೆಂದು ದೂರು ನೀಡಿದರು. ಅದರಂತೆ ಕಾರ್ಯ ಪ್ರವೃತ್ತರಾದ ತಮಿಳುನಾಡು ಪೊಲೀಸರು ಸೆಲಂ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ದರು.

ಅವರಿಂದ ಮಂಡ್ಯ ಜಿಲ್ಲಾಧಿಕಾರಿ ಗಳನ್ನು ಸಂಪರ್ಕಿಸಿ ಜೀತದಿಂದ ವಿಮುಕ್ತಿ ಗೊಳಿಸುವಂತೆ ಕೋರಿದರು.
ಅದರಂತೆ ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಓಮ ಲೂರು ಠಾಣೆ ಪಿಎಸ್‌ಐ ಮಾಥಿಯನ್ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಯೂಸೂಫ್, ನಿರೀಕ್ಷಕರಾದ ಲೀನಾ, ಮೋಹನ್ ಅವರೊಂದಿಗೆ ಪಟ್ಟಣಕ್ಕೆ ಆಗಮಿಸಿದರು. ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಜೀತದ ಸಂಗತಿ ವಿವರಿಸಿ ದರು.  ಅದರಂತೆ ಸಿಪಿಐ ಪ್ರಶಾಂತ್, ಪಿಎಸ್‌ಐ ಮಹೇಶ್ ಅವರೊಂದಿಗೆ ತೊಪ್ಪನಹಳ್ಳಿಗೆ ತೆರಳಿದ ತಂಡವು ಅಲ್ಲಿದ್ದ 7ಮಂದಿಯನ್ನು ಜೀತ ವಿಮುಕ್ತ ಗೊಳಿಸಿ ದರು. ಸುದ್ದಿ ತಿಳಿಯುತ್ತಿದ್ದಂತೆ ಗಣಿ ಮಾಲೀಕರು ಸ್ಥಳದಿಂದ ಪರಾರಿ ಯಾಗಿದ್ದು, ಇವರ ಮೇಲೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಅವರ ಪತ್ತೆಗೆ ಜಾಲ ಬೀಸಿದ್ದಾರೆ. 

 ನೋಟ್ ಬುಕ್ ವಿತರಣೆ
ಕಿಕ್ಕೇರಿ: ಮಕ್ಕಳ ಬುದ್ಧಿಮತ್ತೆಗೆ ಹಿರಿಯರು ನೀಡುವ ಕಾಣಿಕೆಗಳು ಜ್ಞಾನದ ಬೆಳಕಿಗೆ ಪೂರಕ ವಾತಾವರಣ ನೀಡುತ್ತವೆ ಎಂದು ಗ್ರಾಪಂ.ಸದಸ್ಯ ಐ.ಕೆ. ಮಂಜುನಾಥ್ ಅಭಿಪ್ರಾಯಿಸಿದರು.

ಅವರು ಸಮೀಪದ ಐಕನಹಳ್ಳಿ ಬಸವೇಶ್ವರ ಪ್ರೌಢಶಾಲೆಯ ನೂತನ ದಾಖಲಾತಿ ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ನೋಟ್ ಬುಕ್ ಲೇಖನಾ ಸಾಮಾಗ್ರಿ ವಿತರಿಸಿ ಮಾತನಾಡಿದರು. ರೇಖಾ ಪ್ರಾರ್ಥಿಸಿದರು. ಮು.ಶಿ. ಎಂ.ಎಸ್.ಹನುಮಂತೇಗೌಡ ಸ್ವಾಗತಿಸಿ ದರು. ಐ.ಆರ್.ಶ್ರೀಧರ್ ನಿರೂಪಿಸಿ, ವೆಂಕಟೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT