ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಿಂಗಳಲ್ಲಿ ಮತ್ತೆ ಅದೇ ಸ್ಥಿತಿ...!

Last Updated 24 ಜನವರಿ 2011, 12:10 IST
ಅಕ್ಷರ ಗಾತ್ರ

ಕೂಡಲಸಂಗಮ:  ರಸ್ತೆ ಕಳಪೆ ಕಾಮಗಾರಿಯಾವ ರೀತಿ ಮಾಡಬೇಕು ಎಂಬ ಅಂಶವನ್ನು ತಿಳಿಯಬೇಕಾದರೆ ಹುನಗುಂದ ತಾಲ್ಲೂಕಿನ ಬಸವಣ್ಣವರ ಐಕ್ಯಸ್ಥಳ ಹಾಗೂ ವಿದ್ಯಾಭೂಮಿ ಕೂಡಲಸಂಗಮಕ್ಕೆ ನಿರ್ಮಾಣವಾದ ರಸ್ತೆಯನ್ನು ಒಂದು ಬಾರಿ ವೀಕ್ಷಿಸಿದರೆ ಸಾಕು. ಅದು ತಾನಾಗಿಯೇ ಅರಿವಿಗೆ ಬರುತ್ತದೆ.

ಕೂಡಲಸಂಗಮಕ್ಕೆ ರಾಜ್ಯದ ನಾನಾ ಭಾಗಗಳಿಂದ ನಿತ್ಯ ಸಾವಿರಾರು ಜನರು ಬರುತ್ತಾರೆ. ಕಳೆದ 10 ವರ್ಷದಿಂದ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಲೇ ಇದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ 13ರಿಂದ ಕೂಡಲಸಂಗಮದ ಚಾಲುಕ್ಯ ಮಹಾದ್ವಾರದ ವರೆಗೆ 5.6 ಕಿ.ಮೀ ರಸ್ತೆ ವಿಸ್ತಾರ ಮತ್ತು ಡಾಂಬರೀಕರಣಕ್ಕಾಗಿ ರೂ. 2.10 ಕೋಟಿ ಮೊತ್ತದ ಅಂದಾಜು ಪತ್ರಿಕೆಯನ್ನು ತಯಾರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ನಿಗಮಕ್ಕೆ ಕಾಮಗಾರಿಯ ಉಸ್ತುವಾರಿ ವಹಿಸಲಾಯಿತು.

2007 ನವೆಂಬರ್ ತಿಂಗಳಲ್ಲಿ ಟೆಂಡರ್ ಮೂಲಕ ಕಾಮಗಾರಿ ಗುತ್ತಿಗೆ ನೀಡಿದ ಕೃಷ್ಣಾ ಮೇಲ್ದಂಡೆ ಯೋಜನೆಯ ನಿಗಮ, ಕಾಮಗಾರಿಯನ್ನು ಮಳೆಗಾಲ ಸೇರಿ ಒಂದು ವರ್ಷದಲ್ಲಿ ಪೂರ್ಣಗೊಳಿಸುವಂತೆ ಗುತ್ತಗೆದಾರರಿಗೆ ಷರತ್ತು ವಿಧಿಸಿತ್ತು.ಇಲಾಖೆಯ ಷರತ್ತಿನಂತೆ 2007ರ ಅಕ್ಟೋಬರ್‌ಗೆ ಪೂರ್ಣಗೊಳ್ಳಬೇಕಾದ ಕಾಮಗಾರಿ ಗುತ್ತಿಗೆದಾರರ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಂದಗತಿಯ ಕಾಮಗಾರಿಯಿಂದಾಗಿ ಪೂರ್ಣಗೊಂಡಿದ್ದು 2010ರ ಮೇ ತಿಂಗಳಲ್ಲಿ.

ಕಾಮಗಾರಿ ತಡವಾಗಲು ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವಾಗಿದ್ದರೂ 2007ರಲ್ಲಿ ತಯಾರಿಸಲಾಗಿದ್ದ ರೂ. 2.10 ಕೋಟಿ ಅಂದಾಜು ವೆಚ್ಚಕ್ಕೆ ಮತ್ತೆ ರೂ. 54 ಲಕ್ಷ ಸೇರಿಸುವ ಮೂಲಕ ಕಾಮಗಾರಿಯ ಮೊತ್ತವನ್ನು ರೂ. 2.64 ಕೋಟಿಗೆ ಹೆಚ್ಚಿಸಲಾಗಿದೆ. ಇಷ್ಟೊಂದು ಹಣ ಹೆಚ್ಚಿಸಿದರೂ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಮಗಾರಿ ಪೂರ್ಣಗೊಂಡ  ಕೆಲವೇ ತಿಂಗಳಲ್ಲಿ ಡಾಂಬರ್ ಕಿತ್ತು ಹೋಗಿ ರಸ್ತೆ ತುಂಬಾ ದೊಡ್ಡ ಗುಂಡಿಗಳು ಬಿದ್ದಿವೆ.

ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ರೂ. 2.19 ಕೋಟಿ ಬಿಲ್ ಪಾವತಿಸಲಾಗಿದ್ದು, ರೂ. 45 ಲಕ್ಷ ಇನ್ನೂ ಪಾವತಿಸಬೇಕಾಗಿದೆ. ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ ಪರಿಣಾಮ ಇದಕ್ಕಾಗಿ ಖರ್ಚು ಮಾಡಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಕಾಮಗಾರಿ ಸಂಪೂರ್ಣ ಪೂರ್ಣಗೊಂಡ ನಂತರ ಒಂದು ವರ್ಷಕಾಲ ಅದರ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ಸಂಬಂಧಿಸಿದ ಗುತ್ತಿಗೆದಾರರಿಗೆ ಸೇರುತ್ತದೆ. ಇದರಿಂದಾಗಿ ರಸ್ತೆ ತುಂಬಾ ಬಿದ್ದಿರುವ ಗುಂಡಿಗಳನ್ನು ಮಣ್ಣಿನ ಮೂಲಕ ಮುಚ್ಚಿ ತೇಪೆ ಹಾಕುವ ಕಾರ್ಯದಲ್ಲಿ ಗುತ್ತಿಗೆದಾರ ತೊಡಗಿದ್ದರೆ, ಸಂಬಂಧಿಸಿದ ಅಧಿಕಾರಿಗಳು ಇತ್ತ ತಿರುಗಿ ಸಹ ನೋಡದೆ ಜಾಣ ಕುರುಡುತನ ಪ್ರದರ್ಶೀಸುತ್ತಿದ್ದಾರೆ.  ನಿತ್ಯ  ಇಲ್ಲಿ ಬರುವ ಭಕ್ತರು ಪ್ರವಾಸಿಗರು ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮೌನಕ್ಕೆ ಶರಣಾದ ರಾಜಕಾರಣಿಗಳು: ಸ್ಥಳೀಯ ಶಾಸಕರಿಂದ ಹಿಡಿದು ಜಿಲ್ಲೆಯ ಎಲ್ಲ ಶಾಸಕರಿಗೂ ಈ ಕಾಮಗಾರಿ ಕಳಪೆ ಮಟ್ಟದು ಎಂದು ಎಲ್ಲರಿಗೂ ಗೊತ್ತು. ಆದರೆ ಇದನ್ನು ಪರಿಶೀಲಿಸುವಂತಹ ಧೈರ್ಯವನ್ನು ಯಾರೂ ಮಾಡುತ್ತಿಲ್ಲ. ಗುತ್ತಿಗೆದಾರನಿಂದ ಶೇ 20ರಷ್ಟು ಹಣ ಪಡೆದಿರುವುದರಿಂದ ಇಂತಹ ಗುತ್ತಿಗೆದಾರರು ರಾಜಾರೋಷವಾಗಿ ಕಳಪೆ ಕಾಮಗಾರಿ ಮಾಡುತ್ತಿರುವರು ಎಂದು ಗ್ರಾಮಸ್ಥರು ಹೇಳುವರು.

ಹಿರಿಯ ಮುಖಂಡ ಗಂಗಾಧರ ದೊಡ್ಡಮನಿ ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿ, ‘ಈ ಕುರಿತು ಇಲಾಖೆಯವರಿಗೆ ಸತತ 2 ವರ್ಷ ನಿತ್ಯ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರು ಗುತ್ತಿಗೆದಾರನೊಂದಿಗೆ ಸೇರಿರುವುದರಿಂದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇಂತಹ ಕಾಮಗಾರಿಯಿಂದ ನಿತ್ಯ ಬರುವ ಪ್ರವಾಸಿಗರಿಗೆ, ಭಕ್ತರಿಗೆ ಬಹಳ ತೊಂದರೆ ಆಗುತ್ತದೆ ಎಂಬುದನ್ನು ಅರಿಯುತ್ತಿಲ್ಲ” ಎಂದು ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT