ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವರ್ಷ ಕಳೆದರೂ ದೊರಕದ ಸಾಗುವಳಿ ಚೀಟಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ-ಸಕ್ರಮ ಯೋಜನೆಯಡಿ 2004ರಲ್ಲೇ ಭೂ ಮಂಜೂರಾತಿ ಮಾಡಿಸಿಕೊಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ 916 ರೈತರಿಗೆ ಸಾಗುವಳಿ ಚೀಟಿ ಪಡೆದುಕೊಳ್ಳುವ ಭಾಗ್ಯ ಇದುವರೆಗೂ ದೊರೆತಿಲ್ಲ. ಹಲವು ಬಾರಿ ಪ್ರತಿಭಟನೆ ನಡೆಸಿ, ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿಲ್ಲ.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಎಚ್. ರಂಗನಾಥ್ ಅವರು ಹಿರಿಯೂರಿನ ಶಾಸಕರು ಮತ್ತು ಅರಣ್ಯ ಸಚಿವರಾಗಿದ್ದರು. ಅವರ ಅವಧಿಯಲ್ಲಿ ತಾಲ್ಲೂಕಿನ 917 ಮಂದಿ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ಮಂಜೂರಾಯಿತು.

ಹಿರಿಯೂರು ತಾಲ್ಲೂಕಿನ ಅಂದಿನ ತಹಶೀಲ್ದಾರ್ ಅವರು 917 ರೈತರಿಗೆ ವಿತರಿಸಬೇಕಾದ ಸಾಗುವಳಿ ಚೀಟಿಗೆ ಸಹಿ ಮಾಡಿದ್ದಾರೆ. ಇವರಲ್ಲಿ ಒಬ್ಬ ರೈತನಿಗೆ ಚೀಟಿ ವಿತರಣೆಯೂ ಆಗಿದೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಕರ್ನಾಟಕ ಬಗರ್‌ಹುಕುಂ ಮತ್ತು ಸಣ್ಣ ರೈತರ ಹಿತ ರಕ್ಷಣಾ ಸಮಿತಿಯ ರಾಜ್ಯ ಸಂಚಾಲಕ ಟಿ. ಬಸವರಾಜ ನಾಯಕ ಅವರು, `2004ರ ಮೇ ತಿಂಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಜೆಡಿಎಸ್‌ನ ಡಿ. ಮಂಜುನಾಥ್ ಹಿರಿಯೂರು ಶಾಸಕರಾಗಿದ್ದರು.
 
ಅವರ ಮೌಖಿಕ ಆದೇಶದ ಮೇರೆಗೆ ಉಳಿದ 916 ರೈತರಿಗೆ ಸಾಗುವಳಿ ಚೀಟಿ ವಿತರಿಸುವುದನ್ನು ತಡೆಹಿಡಿಯಲಾಯಿತು~ ಎಂದು ದೂರಿದರು.

2009ರಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅಂದಿನ ಕಂದಾಯ ಸಚಿವರಾದ ಜಿ. ಕರುಣಾಕರ ರೆಡ್ಡಿ ಅವರೂ ರೈತರಿಗೆ ಸಾಗುವಳಿ ಚೀಟಿ ನೀಡುವ ಭರವಸೆ ನೀಡಿದ್ದರು. ಆದರೆ ಅದೂ ಕಾರ್ಯಗತವಾಗಿಲ್ಲ ಎಂದು ತಿಳಿಸಿದರು.

2009ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶದ ಆಧಾರದಲ್ಲಿ ಹಲಗಲದ್ದಿ ಗ್ರಾಮದ ನರಸಪ್ಪ ಎನ್ನುವವರಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ. ಅದೇ ಆದೇಶವನ್ನು ಇತರ ರೈತರಿಗೂ ಅನ್ವಯಿಸಿ ತಕ್ಷಣ ಸಾಗುವಳಿ ಚೀಟಿ ವಿತರಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ಅಂದಾಜು ಎರಡೂವರೆ ಸಾವಿರ ರೈತರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದರ ಕುರಿತು ಕಂದಾಯ ಇಲಾಖೆ ಇದುವರೆಗೂ ಕಾನೂನು ಸಲಹೆ ಪಡೆದಿಲ್ಲ. ಸಮಸ್ಯೆಗೆ ಪರಿಹಾರ ಇದೆಯೇ, ಇಲ್ಲವೇ ಎಂಬುದನ್ನೂ ಸ್ಪಷ್ಟಪಡಿಸುತ್ತಿಲ್ಲ.

ಸಮಸ್ಯೆಯ ಕುರಿತು ವಿರೋಧ ಪಕ್ಷಗಳ ಮುಖಂಡರಾಗಲಿ, ರೈತ ಸಂಘದ ಪ್ರತಿನಿಧಿಗಳಾಗಲಿ ಧ್ವನಿ ಎತ್ತುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೃಷ್ಣ ಕಾಲದಲ್ಲಿ ಆಗಿತ್ತು

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಎಚ್. ರಂಗನಾಥ್ ಅವರು ಅರಣ್ಯ ಸಚಿವರಾಗಿದ್ದರು. ಅವರ ಅವಧಿಯಲ್ಲಿ 917 ಮಂದಿ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ಮಂಜೂರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT