ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳೂರು ಒಡೆಯ ಕುಪ್ಪಿಭೀಮ ಸಂಭ್ರಮ ನೋಡ ಬನ್ನಿ

ಕುಪ್ಪಿಭೀಮ ಮಹಾರಥೋತ್ಸವ ನಾಳೆ
Last Updated 27 ಡಿಸೆಂಬರ್ 2012, 8:59 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಲಿಂಗಸುಗೂರ: ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಐತಿಹಾಸಿಕ ಸ್ಥಳಗಳ ಪೈಕಿ ಕಸಬಾಲಿಂಗಸುಗೂರ ಕೂಡ ಒಂದು. 12ನೇ ಶತಮಾನದಲ್ಲಿ ಈ ಗ್ರಾಮವು ಕುಪ್ಪಿ, ಬಾಗಲವಾಡ, ಯಕ್ಸಟ್ಟಿ, ನಾಗೋಲಿ, ಅಂತರಗಂಗಿ, ಬೆಳಗುಂದಿ ಮತ್ತು ಮೂಕಾರತಿ ಎಂಬ ಏಳು ಗ್ರಾಮಗಳಲ್ಲಿ ವಿಂಗಡಣೆಯಾಗಿತ್ತು. ಈ ಏಳೂರು ಒಡೆಯನೆಂದು ಪ್ರಖ್ಯಾತಿ ಹೊಂದಿದ ಕುಪ್ಪಿಭೀಮನ ಇತಿಹಾಸದೊಂದಿಗೆ ಅನೇಕ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಐತಿಹ್ಯ ಕಸಬಾಲಿಂಗಸುಗೂರಿಗೆ ಸಲ್ಲುತ್ತದೆ.

ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡ ಸರಳವಾದ ಆಧಿಷ್ಠಾನದ ಮೇಲೆ ಗರ್ಭಗುಡಿ ಮತ್ತು ಸಭಾ ಮಂಟಪಗಳಿವೆ. ಇಂಡೋಸಾರ್ಸೆನಿಕ್ ವಾಸ್ತು ಶೈಲಿಯ ಕಮಾನು ಹೊಂದಿರುವ ದೇವಸ್ಥಾನ ದಕ್ಷಿಣಾಭಿಮುಖವಾಗಿದೆ. ಇದೇ ಗ್ರಾಮದ ಹಾಡು ಹಕ್ಕಿ ಹಂಪವ್ವ ಪೂಜಾರಿ ಅವರು ಹೋಗಿ ನೊಡೋಣ ನಡಿಯ, ಕುಪ್ಪಿಸ್ವಾಮಿಯ ಗುಡಿಯ. ಸುತ್ತಲೂ ಪವಳಿ ಕಮಲವ. “ನಮ್ಮ ಕನ್ನಡ ಪ್ರೇಮ ಜ್ಯೋತಿ”ಯ ಎಂಬ ಹಾಡಿನಲ್ಲಿ ಇತಿಹಾಸ ಹಿಡಿದಿಟ್ಟಿದ್ದಾಳೆ.

ಕುಪ್ಪಿಭೀಮನ ವಿಗ್ರಹವನ್ನು ಜನುಮಜೇಯ ರಾಜರಿಂದ ಪ್ರತಿಷ್ಠಾಪಿಸಲ್ಪಟ್ಟಿತು ಎಂಬ ಐತಿಹ್ಯವಿದೆ. ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾದ ಮದ್ವವ್ಯಾಸರಾಯರು ಕುಪ್ಪಿಭೀಮನ ಪೂಜಿಸಿದ ತಪೋಬಲದಿಂದ ಸ್ವಾಮಿಯ ಸನ್ನಿಧಾನ ಸ್ಥಾಪಿಸಿ ನಾಡಿನ ವಿವಿಧೆಡೆಗಳಲ್ಲಿ ಪ್ರಾಣದೇವರ ಪ್ರತಿಷ್ಠಾಪನೆ ಮಾಡಿಸಿದರು ಎಂದು ಹೇಳಲಾಗುತ್ತದೆ. 1620ರಿಂದ ಈಚೆಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮಸ್ಥರ ಸಹಕಾರದಿಂದ ಸುಂದರವಾದ ಮಹಾದ್ವಾರವನ್ನು ನಿರ್ಮಿಸಲಾಗಿದೆ. 

ಮಹಾದ್ವಾರದ ಒಳಗಡೆಯ ಬಲಭಾಗದಲ್ಲಿ ಚರ್ಮದ ಪಾದುಕೆಗಳು ಪೂಜಿಸಲ್ಪಡುವುದು ಈ ದೇವಸ್ಥಾನದ ವಿಶೇಷ. ಅದೇ ಗ್ರಾಮದ ನಡುವಿನಮನಿ ಕುಟುಂಬದವರು ಮಡಿ-ಉಡೆಗಳಿಂದ ಸಿದ್ಧಪಡಿಸಿದ ಪಾದುಕೆಗಳನ್ನು ಭಕ್ತರು ಭಕ್ತಿ ಭಾವದಿಂದ ಪೂಜಿಸುತ್ತಾರೆ.

ಸಂಪ್ರದಾಯದಂತೆ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಕುಪ್ಪಿಭೀಮ ಮಹಾರಥೋತ್ಸವ ಜರುಗುವುದು ವಾಡಿಕೆ. ಅಂತೆಯೆ ಡಿಸೆಂಬರ್ 27ರಂದು ಹೋಮ ಹವನ, ಉತ್ಸವಗಳು ಜರಗುವವು. ಡಿಸೆಂಬರ್ 28ರಂದು ಬೆಳಿಗ್ಗೆ ರಥಾಂಗ ಹೋಮ, ಸಂಜೆ ಮಹಾರಥೋತ್ಸವ ಜರುಗುತ್ತದೆ.

ಪ್ರಾಣೇಶ ದಾಸರ ಸುಳಾದಿಗಳ ಅಧ್ಯಯನದಿಂದ ಮಾತ್ರ ಕುಪ್ಪಿಭೀಮನ ಪವಾಡಗಳು ಹಾಗೂ ಮಹತ್ವದ ಅರಿವು ಬರಲು ಸಾಧ್ಯ. ಜನಪದ ಹಾಡುಗಳು, ಸುಳಾದಿಗಳ ಒಳಸುಳಿವು, ಗೀಗಿ ಪದಗಳ ಶೈಲಿಯಲ್ಲಿ ಕುಪ್ಪಿ ಭೀಮನ ವರ್ಣನೆ ತಿಳಿದುಕೊಳ್ಳಬಹುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಅಮರೇಶ ಯತಗಲ್ ಅಭಿಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT