ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ತಂಡ ಮುನ್ನಡೆಸಲಿರುವ ರಾಜ್ಪಾಲ್

Last Updated 16 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಫಾರ್ವರ್ಡ್ ಆಟಗಾರ ರಾಜ್ಪಾಲ್ ಸಿಂಗ್ ಅವರು ಚೀನಾದ ಒರ್ಡೊಸ್‌ನಲ್ಲಿ ಸೆಪ್ಟೆಂಬರ್ ಮೂರರಿಂದ 11ರವರೆಗೆ ನಡೆಯಲಿರುವ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಕರ್ನಾಟಕದ ಅರ್ಜುನ್ ಹಾಲಪ್ಪ ಗಾಯದ ಕಾರಣ ಮುಂಬರುವ ಟೂರ್ನಿಗೆ ಲಭ್ಯರಾಗಿಲ್ಲ. ಹಾಗಾಗಿ ರಾಜ್ಪಾಲ್‌ಗೆ ಮತ್ತೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.

ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದಕ್ಷಿಣ ಕೇಂದ್ರದಲ್ಲಿ ನಡೆದ ಎರಡು ಹಂತದ ಶಿಬಿರದ ಬಳಿಕ `ಹಾಕಿ ಇಂಡಿಯಾ~ ರಾಷ್ಟ್ರೀಯ ಆಯ್ಕೆದಾರರಾದ ಬಲ್ಬಿರ್ ಸಿಂಗ್, ಬಿ.ಪಿ.ಗೋವಿಂದ ಹಾಗೂ ಎ.ಬಿ.ಸುಬ್ಬಯ್ಯ 18 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಮುಖ್ಯ ಕೋಚ್ ಮೈಕಲ್ ನಾಬ್ಸ್ ಮಾರ್ಗದರ್ಶನದಲ್ಲಿ ಎರಡು ದಿನಗಳ ಆಯ್ಕೆ ಟ್ರಯಲ್ಸ್ ಆಯೋಜಿಸಲಾಗಿತ್ತು.

ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ಆಯೋಜಿಸಿದ್ದ ವಿಶ್ವ ಹಾಕಿ ಸರಣಿ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಟಗಾರರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಡ್ರ್ಯಾಗ್ ಫ್ಲಿಕರ್ ಸಂದೀಪ್ ಸಿಂಗ್ ಹಾಗೂ ಮಿಡ್‌ಫೀಲ್ಡರ್ ಸರ್ದಾರ್ ಸಿಂಗ್ ಸ್ಥಾನ ಪಡೆದ ಆಟಗಾರರು. ಒಟ್ಟು ಐದು ಮಂದಿ ಆಟಗಾರರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಆದರೆ ಗೋಲ್ ಕೀಪರ್ ಆ್ಯಡ್ರಿಯನ್ ಡಿಸೋಜಾ ಹಾಗೂ ಫಾರ್ವರ್ಡ್ ಆಟಗಾರ ಪ್ರಭ್ಜೋತ್ ಸಿಂಗ್ ಅವರನ್ನು ಕೈಬಿಡಲಾಗಿದೆ. ಗಾಯಗೊಂಡಿರುವ ಹಿರಿಯ ಆಟಗಾರರಾದ ಹಾಲಪ್ಪ, ಶಿವೇಂದ್ರ ಸಿಂಗ್, ಧರಮ್‌ವೀರ್, ತುಷಾರ್ ಖಾಂಡೇಕರ್ ಹಾಗೂ ಭರತ್ ಚಿಕಾರ ಅಲಭ್ಯರಾಗಿದ್ದಾರೆ. ಕರ್ನಾಟಕದ ಎಸ್.ವಿ.ಸುನಿಲ್, ಭರತ್ ಚೆಟ್ರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕೋಚ್ ಮೈಕಲ್ ನಾಬ್ಸ್ ಈ ತಂಡದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. `ಇದು ನನ್ನ ಮಾರ್ಗದರ್ಶನದಲ್ಲಿ ಮೊದಲ ಟೂರ್ನಿ. ಇದಕ್ಕೆ ಆಯ್ಕೆ ಮಾಡಿರುವ ತಂಡದ ಬಗ್ಗೆ ನನಗೆ ಖುಷಿ ಇದೆ. ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ~ ಎಂದು ಅವರು ನುಡಿದಿದ್ದಾರೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ  ಹಾಕಿ ಟೂರ್ನಿಯಲ್ಲಿ ಭಾರತ ತಂಡ ಸೆ.3ರಂದು ಆತಿಥೇಯ ಚೀನಾವನ್ನು ಎದುರಿಸಲಿದೆ.

ಅಷ್ಟು ಮಾತ್ರವಲ್ಲದೇ, ಸೆ.9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಪೈಪೋಟಿ ನಡೆಸಲಿದೆ. ಈ ಟೂರ್ನಿಯಲ್ಲಿ ಭಾರತ, ಚೀನಾ,   ಪಾಕ್, ಮಲೇಷ್ಯಾ, ದಕ್ಷಿಣ ಕೊರಿಯಾ ಹಾಗೂ ಜಪಾನ್ ತಂಡಗಳು ಪಾಲ್ಗೊಳ್ಳಲಿವೆ.

ತಂಡ ಇಂತಿದೆ
ಗೋಲ್ ಕೀಪರ್ಸ್‌: ಭರತ್ ಚೆಟ್ರಿ, ಪಿ.ಆರ್.ಶ್ರಿಜೇಶ್.
ಡಿಫೆಂಡರ್ಸ್‌: ಸಂದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್‌ಪ್ರೀತ್ ಸಿಂಗ್.
ಮಿಡ್‌ಫೀಲ್ಡರ್ಸ್: ಸರ್ದಾರ್ ಸಿಂಗ್, ಗುರ್ಬಜ್ ಸಿಂಗ್, ಇಗ್ನೇಸ್ ಟರ್ಕಿ, ಮನ್‌ಪ್ರೀತ್ ಸಿಂಗ್, ಮಂಜಿತ್ ಕುಲ್ಲು.
ಫಾರ್ವರ್ಡ್ಸ್: ರಾಜ್ಪಾಲ್ ಸಿಂಗ್ (ನಾಯಕ), ದನೀಶ್ ಮುಜ್ತಾಬ, ಸರ್ವಣ್‌ಜಿತ್ ಸಿಂಗ್, ಎಸ್.ವಿ. ಸುನಿಲ್, ರವಿಪಾಲ್. ಗುರ‌್ವಿಂದರ್ ಸಿಂಗ್ ಚಂದಿ, ರೋಶನ್ ಮಿನ್ಜ್, ಯುವರಾಜ್ ವಾಲ್ಮಿಕಿ. ಕಾಯ್ದಿರಿಸಿದ ಆಟಗಾರರು: ಕಮಲ್‌ದೀಪ್ ಸಿಂಗ್ (ಗೋಲ್‌ಕೀಪರ್), ವಿ.ಆರ್. ರಘುನಾಥ್ (ಡಿಫೆಂಡರ್), ವಿಕಾಸ್ ಶರ್ಮ ಮತ್ತು ಬಿರೇಂದ್ರ ಲಾಕ್ರಾ (ಮಿಡ್ ಫೀಲ್ಡರ್ಸ್), ಮಂದೀಪ್ ಅಂಟಿಲ್ ಮತ್ತು ಚಿಂಗ್ಲೆನ್‌ಸನಾ ಸಿಂಗ್ (ಇಬ್ಬರೂ ಫಾರ್ವರ್ಡ್ಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT