ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಕನ್ನಡಿಗರ ಸವಾಲು

ಅಥ್ಲೀಟ್‌ಗಳ ಪೈಪೋಟಿಗೆ ಪುಣೆಯಲ್ಲಿ ವೇದಿಕೆ ಸಜ್ಜು
Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಪುಣೆ: ಕರ್ನಾಟಕದ ಏಳು ಮಂದಿ ಅಥ್ಲೀಟ್‌ಗಳು ಇಪ್ಪತ್ತನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪರ ಸವಾಲು ಒಡ್ಡಿದ್ದು, ಇವರಲ್ಲಿ ಎಂ.ಆರ್.ಪೂವಮ್ಮ ಮತ್ತು ವಿಕಾಸ್ ಗೌಡ ಅವರಿಂದ ಬಂಗಾರದ ಸಾಮರ್ಥ್ಯ ನಿರೀಕ್ಷಿಸಬಹುದು.

ಬುಧವಾರ ಆರಂಭವಾಗಲಿರುವ ಐದು ದಿನಗಳ ಈ ಕೂಟದಲ್ಲಿ ಭಾರತದ 120 ಮಂದಿಯ ಪ್ರಬಲ ತಂಡ ಕಣಕ್ಕಿಳಿಯಲಿದೆ. 43 ದೇಶಗಳ ನಡುವಣ ಪೈಪೋಟಿಯಲ್ಲಿ ತ್ರಿವರ್ಣ ಧ್ವಜವನ್ನು ಎತ್ತರಕ್ಕೇರಿಸುವಲ್ಲಿ ಕರ್ನಾಟಕದ ಏಳು ಮಂದಿ ಸಿದ್ಧರಾಗಿದ್ದಾರೆ.

ಮಂಗಳೂರಿನಲ್ಲಿ ತಮ್ಮ ಅಥ್ಲೆಟಿಕ್ಸ್ ಬದುಕು ಆರಂಭಿಸಿದ ಪೂವಮ್ಮ 400 ಮೀಟರ್ಸ್ ಓಟದಲ್ಲಿ ಅಂತರ ವಾರ್ಸಿಟಿ, ಅಂತರ ರಾಜ್ಯ, ರಾಷ್ಟ್ರೀಯ ಜೂನಿಯರ್ ಮತ್ತು ಸೀನಿಯರ್ ಕೂಟಗಳಲ್ಲಿ  ಚಿನ್ನದ  ಹಾದಿಯಲ್ಲಿ  ನಡೆದವರು. ಕಳೆದ ಮೇ 6ರಂದು ತಮ್ಮ 23ನೇ ಹುಟ್ಟುಹಬ್ಬ ಆಚರಿಸಿಕೊಂಡ ಇವರು ಇದೀಗ ಈ ಪ್ರತಿಷ್ಠಿತ ಕೂಟದಲ್ಲಿ ಚಿನ್ನ ಗೆದ್ದು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಈಚೆಗೆ ನಡೆದ ಏಷ್ಯಾ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್‌ನ ಮೂರೂ ಲೆಗ್‌ಗಳಲ್ಲಿಯೂ ಮೊದಲಿಗರಾಗಿ ಗುರಿ ಮುಟ್ಟಿದ್ದು ಚಿನ್ನದ ಹ್ಯಾಟ್ರಿಕ್ ಸಾಧಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಮೊದಲ ಲೆಗ್‌ನಲ್ಲಿ 52.97 ಸೆಕೆಂಡುಗಳಲ್ಲಿ ಓಡಿ ವಿಶ್ವ ಅಥ್ಲೆಟಿಕ್ಸ್‌ನ ಅರ್ಹತಾ ಮಟ್ಟ ತಲುಪಲು ಕೂದಲೆಳೆಯಷ್ಟು ಅಂತರದಿಂದ ವಂಚಿತರಾದರು. ಪಟಿಯಾಲದಲ್ಲಿ ಏಪ್ರಿಲ್‌ನಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ 52.75 ಸೆಕೆಂಡುಗಳಲ್ಲಿ ಓಡಿ ಜೀವನ ಶ್ರೇಷ್ಠ ಸಾಧನೆ ತೋರಿರುವ ಇವರು ಇದೀಗ ಇಲ್ಲಿ ಮೊದಲಿಗರಾಗಿ ಗುರಿ ತಲುಪುವ ಆತ್ಮವಿಶ್ವಾಸ ಹೊಂದಿದ್ದಾರೆ.

ಈ ಅಥ್ಲೆಟಿಕ್ ಋತುವಿನ ಆರಂಭದಲ್ಲಿ 400 ಮೀಟರ್ಸ್ ಓಟದಲ್ಲಿ ಕಜಕಸ್ತಾನದ ಜ್ಯಾಬಕಿನಾ (51.67ಸೆ.), ಮರಿನಾ ಮಸ್ಲೆಂಕೊ (52.26ಸೆ.) ಉತ್ತಮ ಸಾಮರ್ಥ್ಯ ತೋರಿದ್ದರು. ಆದರೆ ಜೂನ್ 8ರಂದು ಜಪಾನಿನ ಹರುಕು ಸುಗ್ಯುರಾ 52.52 ಸೆಕೆಂಡುಗಳಲ್ಲಿ ಕ್ರಮಿಸಿ ಈ ಖಂಡದ ಪ್ರಸಕ್ತ ಋತುವಿನ ಅಗ್ರಮಾನ್ಯ ಓಟಗಾರ್ತಿ ಎನಿಸಿದ್ದಾರೆ. ಆದರೆ ಅವರು ಇಲ್ಲಿ ಪಾಲ್ಗೊಳ್ಳುತ್ತಿಲ್ಲ. ಜ್ಯಾಬಕಿನಾ ಮತ್ತು ಮರಿನಾ ಕೂಡಾ ಇಲ್ಲಿಗೆ ಬಂದಿಲ್ಲ. ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಅಂತರರಾಜ್ಯ ಕೂಟದಲ್ಲಿ 52.85ಸೆಕೆಂಡುಗಳಲ್ಲಿ ಓಡಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಪೂವಮ್ಮ ಇಲ್ಲಿ ಗುರುವಾರ ಸಂಜೆ ಎಲ್ಲರಿಗಿಂತ ಮೊದಲಿಗರಾಗಿ ಗುರಿ ತಲುಪಿದರೆ ಅಚ್ಚರಿ ಪಡುವಂತಹದ್ದೇನಿಲ್ಲ. ಏಕೆಂದರೆ ಪೂವಮ್ಮ ಅವರಿಗೆ ಇಲ್ಲಿ ಕಜಕಸ್ತಾನದ ಯೂಲಿಯಾ ರಕ್‌ಮನೋವಾ (52.86ಸೆ.), ಶ್ರೀಲಂಕಾದ ಚಂದ್ರಿಕಾ ಶುಭಾಷಿಣಿ (53.35ಸೆ.), ಜಪಾನಿನ ಸಯಾಕಾ ಒಕಿ (53.17ಸೆ.), ಚೀನಾದ ಚೆನ್ ಜಿಂಗುವಾ (53.17ಸೆ.) ಅವರಿಂದಷ್ಟೇ ಪ್ರತಿಸ್ಪರ್ಧೆ ಕಂಡು ಬರಲಿದೆ.

`ಇದೇ ಕ್ರೀಡಾಂಗಣದಲ್ಲಿ ಹಿಂದೆ ನಾನು ಕಾಮನ್‌ವೆಲ್ತ್ ಯುವ ಅಥ್ಲೆಟಿಕ್‌ನಲ್ಲಿ ರಜತ ಪದಕ ಗೆದ್ದಿದ್ದೆ. ಈ ಸಲ ಇಲ್ಲಿಯೇ ಚಿನ್ನ ಗೆಲ್ಲುವ ಆತ್ಮವಿಶ್ವಾಸ ಇದೆ' ಎಂದು ಪೂವಮ್ಮ `ಪ್ರಜಾವಾಣಿ'ಗೆ ತಿಳಿಸಿದರು.

ತಮ್ಮ ಐದನೇ ವಯಸ್ಸಿನಿಂದಲೇ ಅಮೆರಿಕಾದಲ್ಲಿ ನೆಲೆಸಿರುವ ಮೈಸೂರಿನ ವಿಕಾಸ್‌ಗೌಡ ಅಲ್ಲಿಯೇ ತರಬೇತಿ ಪಡೆದವರು. ಇವರು ಡಿಸ್ಕಸ್ ಎಸೆತದಲ್ಲಿ ಪದಕ ಗೆಲ್ಲುವುದು ಖಚಿತ. ಆದರೆ ಚಿನ್ನಕ್ಕೆ ತೀವ್ರ ಸ್ಪರ್ಧೆ ಕಂಡು ಬರುವುದೇ ಎಂಬುದು ಈಗ ಕುತೂಹಲ. ಅಥೆನ್ಸ್, ಬೀಜಿಂಗ್, ಲಂಡನ್ ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿರುವ ಅನುಭವಿ ವಿಕಾಸ್ ಅವರು ಕಳೆದ ವರ್ಷ ಅಮೆರಿಕಾದ ನಾರ್ಮನ್‌ನಲ್ಲಿ 66.28 ಮೀಟರ್ಸ್ ದೂರ ಡಿಸ್ಕಸ್ ಎಸೆದಿದ್ದರು. ಕಳೆದ ವರ್ಷ ಅವರು ತೋರಿರುವ ಈ ಸಾಮರ್ಥ್ಯ ನಮ್ಮ ರಾಷ್ಟ್ರೀಯ ದಾಖಲೆಯೂ ಹೌದು. ಕಳೆದ ಏಪ್ರಿಲ್‌ನಲ್ಲಿ ಅಮೆರಿಕಾದ ಮೆಸಾದಲ್ಲಿ ಇವರು 65.82 ಮೀಟರ್ಸ್ ದೂರ ಡಿಸ್ಕಸ್ ಎಸೆದಿದ್ದರು.

ತಾರಾಮೌಲ್ಯದ ಅಥ್ಲೀಟ್ ಇರಾನ್‌ನ ಎಸಾನ್ ಹಡದಿ (68.20 ಮೀ.) ಇಲ್ಲಿ ಪಾಲ್ಗೊಳ್ಳುತ್ತಿಲ್ಲವಾದುದರಿಂದ ವಿಕಾಸ್‌ಗೆ ಚಿನ್ನದ ಬಾಗಿಲು ತೆರೆದಂತೆಯೇ ಆಗಿದೆ. ಕಜಕಸ್ತಾನದ ಸುಲ್ತಾನ್ ಮುಬಾರಕ್ (65.08ಮೀ.), ಇರಾನ್‌ನ ಮೊಹಮ್ಮದ್ ಸಮಿಮಿ (64.77ಮೀ.) ಮತ್ತು ಮಹಮ್ಮದ್ ಸಮಿಮಿ (64.36ಮೀ.) ಮುಂತಾದವರನ್ನು ಗುರುವಾರ ವಿಕಾಸ್ ಹಿಂದಿಕ್ಕುವರೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನುಳಿದಂತೆ ಕರ್ನಾಟಕದ ಪಿ.ಬಾಲಕೃಷ್ಣ, ಎಂ.ಅರ್ಷಾದ್, ಸಹನಾ ಕುಮಾರಿ, ಖ್ಯಾತಿ, ಸಿನಿ ಎ ಮಾರ್ಕೋಸ್ ಭಾರತ ತಂಡದಲ್ಲಿದ್ದಾರೆ.

ಪುರುಷರ ಪೋಲ್‌ವಾಲ್ಟ್‌ನಲ್ಲಿ ಸ್ಪರ್ಧಿಸಲಿರುವ ಪಿ.ಬಾಲಕೃಷ್ಣ ಪದಕ ಗೆದ್ದರೆ ಅದೊಂದು ಪವಾಡವೇ ಸರಿ. ಜಪಾನ್‌ನ ಡೈಚಿ ಸವಾನೊ (5.72ಮೀ.), ಚೀನಾದ ಯಾಂಗ್ ಯಂಗ್‌ಶೇಕ್ (5.70ಮೀ.), ಜಪಾನ್‌ನ ಜೂನ್ ಯ ನಗಾಟ (5.40ಮೀ.) ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಏಷ್ಯಾದ ವಿವಿಧ ಕಡೆ ಕಳೆದೊಂದು ವರ್ಷದಲ್ಲಿ ನಡೆದ ಸ್ಪರ್ಧೆಗಳಲ್ಲಿ 5ಮೀಟರ್ಸ್ ಮೀರಿ ಜಿಗಿದಿದ್ದಾರೆ. ಬಾಲಕೃಷ್ಣ ಕಳೆದ ತಿಂಗಳು ಚೆನ್ನೈನಲ್ಲಿ 4.85ಮೀಟರ್ಸ್ ಎತ್ತರ ಜಿಗಿದಿದ್ದಾರೆ. ಭಾರತದ ಇನ್ನೊಬ್ಬ ಸ್ಪರ್ಧಿ ಹರಿಯಾಣದ ಪ್ರವೀಣ್ ಕುಮಾರ್ ಕೂಡಾ 4.90 ಮೀಟರ್ಸ್ ಸಾಮರ್ಥ್ಯ ತೋರಿದವರು. ಹೀಗಾಗಿ ಇವರಿಬ್ಬರಿಗೂ ಇಲ್ಲಿ ಪದಕ ಬರುವುದು ಸುಲಭವೇನಲ್ಲ.

ಲಾಂಗ್‌ಜಂಪ್‌ನಲ್ಲಿ ಎಂ.ಅರ್ಶಾದ್‌ಗೆ ಇದೊಂದು ಉತ್ತಮ ಅಂತರರಾಷ್ಟ್ರೀಯ ಅನುಭವವಾಗಲಿದೆ. ಇವರು ಈಚೆಗೆ 7.85ಮೀಟರ್ಸ್ ದೂರ ಜಿಗಿದು ಭಾರತದ ಮಟ್ಟಿಗೆ ಗಮನ ಸೆಳೆದಿದ್ದಾರೆ. ಆದರೆ ಏಷ್ಯಾ ಮಟ್ಟದಲ್ಲಿ ಇವರು ಬಲು `ದೂರ'ವೇ ನಿಂತಿದ್ದಾರೆ. ಇದೇ ಋತುವಿನಲ್ಲಿ ಚೀನಾದ ಲೀಜಿಂಜೆ (8.25ಮೀ.) ಮುಂತಾದವರು ಅತ್ಯುತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ ಇಲ್ಲಿ ಅವರು ಭಾಗವಹಿಸುತ್ತಿಲ್ಲ. ಕಜಕಸ್ತಾನದ ಕಾನ್‌ಸ್ಟಾಂಟಿನ್ ಸಫ್ರೊನೊವ್ ಈಚೆಗೆ 8.10 ಮೀಟರ್ಸ್ ದೂರ ಜಿಗಿದಿದ್ದಾರೆ. ಚೀನಾದ ಟ್ಯಾಂಗ್ ಗ್ಯಾಂಗ್‌ಚೆನ್ (7.99 ಮೀ.) ಸ್ಪರ್ಧಿಸಲಿದ್ದಾರೆ. ಭಾರತದ ಇನ್ನೊಬ್ಬ ಸ್ಪರ್ಧಿ ತಮಿಳುನಾಡಿನ ಕುಮಾರವೇಲು ಪ್ರೇಮಕುಮಾರ್ ಈಚೆಗೆ ಚೆನ್ನೈನಲ್ಲಿ 8.00ಮೀಟರ್ಸ್ ದೂರ ಜಿಗಿದು ತೋರಿದ ಸಾಮರ್ಥ್ಯವನ್ನೇ ಇಲ್ಲಿ ಪ್ರದರ್ಶಿಸಿದರೂ ಪದಕ ಖಚಿತ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅನುಭವಿ ಸಹನಾ ಕುಮಾರಿ ಹೈಜಂಪ್‌ನಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ. ಉಜ್ಬೆಕಿಸ್ತಾನದ ನಾಡಿಯಾ ದುಸನೋವಾ (1.93ಮೀ.) ಹಾಗೂ ಕಜಕಸ್ತಾನದ ಮರಿಯಾ ಐತೋವಾ (1.95ಮೀ.) ಮುಂತಾದವರಿಂದ ಪೈಪೋಟಿ ಎದುರಾಗಲಿದೆ. ಮಂಗಳೂರಿನ ಸಹನಾ ಅವರು ದಶಕದ ಹಿಂದೆ ಅಂತರ ವಾರ್ಸಿಟಿ ಕೂಟದಲ್ಲಿ ಸ್ವರ್ಣ ಸಾಧನೆಯ ಮೂಲಕ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಾ ಬಂದಿದ್ದಾರೆ. ಇವರು ಕಳೆದ ವರ್ಷ ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ 1.92 ಮೀಟರ್ಸ್ ಎತ್ತರ ಜಿಗಿದು ಜೀವನ ಶ್ರೇಷ್ಠ ಸಾಧನೆ ಮಾಡಿದ್ದರು. ಆ ಅರ್ಹತೆಯ ಮೇರೆಗೇ ಒಲಿಂಪಿಕ್ಸ್‌ನಲ್ಲಿಯೂ ಸ್ಪರ್ಧಿಸಿ ಬಂದರು. ಆ ನಂತರ ಈವರೆಗೆ ಇವರು ಆ ಸಾಧನೆಯನ್ನು ಹಿಂದಿಕ್ಕಲಾಗಿಲ್ಲ. 32ರ ಹರೆಯದ ಇವರು ಈಚೆಗೆ ಚೆನ್ನೈನಲ್ಲಿ 1.88ಮೀಟರ್ಸ್ ಎತ್ತರವಷ್ಟೇ ಜಿಗಿಯಲು ಶಕ್ತರಾಗಿರುವುದು. ಭಾರತದ ಇನ್ನೊಬ್ಬ ಸ್ಪರ್ಧಿ ಪಶ್ಚಿಮ ಬಂಗಾಳದ ಮಲ್ಲಿಕಾ ಮೊಂಡಲ್ (ಈಚೆಗೆ ಜಿಗಿದದ್ದು 1.74ಮೀ.) ಕೂಡಾ ಪದಕ ಗೆಲ್ಲಲು ಸಾಧ್ಯವೇ ಇಲ್ಲ.

ಮಹಿಳಾ 1,500ಮೀಟರ್ಸ್ ಓಟದಲ್ಲಿ ಬೆಂಗಳೂರಿನ ಸಿನಿ ಎ ಮಾರ್ಕೊಸ್ ಸವಾಲು ಫಲಪ್ರದವಾಗಬಹುದೇ ಎನ್ನುವುದು ಕುತೂಹಲ. ಬಹರೇನ್, ಚೀನಾ ಓಟಗಾರ್ತಿಯರ ಪೈಪೋಟಿಯನ್ನು ಇವರು ಎದುರಿಸಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ. ಬಹರೇನ್‌ನ ಮರಿಯಮ್ ಯೂಸುಫ್ ಜಮಾಲ್ (4ನಿ.01.19ಸೆ.) ಇಲ್ಲಿಗೆ ಬಂದಿಲ್ಲ. ಆದರೆ ಮಿಮಿ ಬೆಲೆಟೆ (4ನಿ.01.72ಸೆ.) ಹಾಗೂ ಗೆಂಜೆಬ್ ಶುಮಿ ರೆಗಾಸಾ (4ನಿ.05.16ಸೆ.) ಅಂತಹವರ ಎದುರು ಸಿನಿ (ಕಳೆದ ತಿಂಗಳು ಚೆನ್ನೈನಲ್ಲಿ ಕ್ರಮಿಸಲು ತೆಗೆದುಕೊಂಡ ಕಾಲ 4ನಿ.17.53ಸೆ.) ತಮ್ಮ ಶಕ್ತಿಮೀರಿ ಓಡಬೇಕಾಗುತ್ತದೆ. ಆದರೆ ಭಾರತದ ಇನ್ನೊಬ್ಬ ಸ್ಪರ್ಧಿ ಒ.ಪಿ.ಜೈಶಾ (ಈ ಋತುವಿನ ಸಾಮರ್ಥ್ಯ: 4ನಿ.16.78ಸೆ.) ಎತ್ತರಕ್ಕೇರಿದರೆ ಅಚ್ಚರಿ ಏನಿಲ್ಲ.

ಮಹಿಳಾ ವಿಭಾಗದ ಪೋಲ್‌ವಾಲ್ಟ್‌ನಲ್ಲಿ 4ಮೀಟರ್ಸ್ ಎತ್ತರ ಜಿಗಿದಿರುವ ಸಾಮರ್ಥ್ಯದ ಕರ್ನಾಟಕದ ಅಥ್ಲೀಟ್ ಖ್ಯಾತಿ ಇಲ್ಲಿ ಮೊದಲ ಮೂರು ಸ್ಥಾನಗಳಿಗೆ ಏರುವುದು ಅಸಾಧ್ಯ. ಈ ಸ್ಪರ್ಧೆಯಲ್ಲಿ ಹಿಂದಿನಿಂದಲೂ ಚೀನಾದ ಅಥ್ಲೀಟ್‌ಗಳೇ ಏಕಸ್ವಾಮ್ಯ ಸಾಧಿಸುತ್ತಾ ಬಂದಿದ್ದಾರೆ.

ಇವರ ನಡುವೆಯೂ ದಕ್ಷಿಣ ಕೊರಿಯಾದ ಚೊಯ್ ಹಿನ್ ಇ (4.41ಮೀ.), ಜಪಾನ್‌ನ ಟೊಮೊಮಿ ಅಬಿಕೊ (4.40ಮೀ.) ಎತ್ತರ ಏರಿದ್ದಾರೆ. ಚೀನಾದ ಲೀ ನಿಂಗ್ (4.40ಮೀ.) ಸೇರಿದಂತೆ ಏಳು ಮಂದಿ ಪ್ರಸಕ್ತ ಏಷ್ಯಾದ ವಿಭಿನ್ನ ಕೂಟಗಳಲ್ಲಿ 4 ಮೀಟರ್‌ಗಳ ಗಡಿ ದಾಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT