ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್: ಭಾರತ-ಪಾಕ್ ಜಂಟಿ ಚಾಂಪಿಯನ್

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಭಾರತ ಹಾಗೂ ಪಾಕಿಸ್ತಾನ ತಂಡಗಳು 19 ವರ್ಷ ವಯಸ್ಸಿನೊಳಗಿನವರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಂಟಿ ಚಾಂಪಿಯನ್ ಆಗಿವೆ. ಕ್ಷಣ ಕ್ಷಣಕ್ಕೆ ಕುತೂಹಲ ಮೂಡಿಸುತ್ತಾ ಸಾಗಿದ ಫೈನಲ್ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತು. ಹಾಗಾಗಿ ಉಭಯ ತಂಡಗಳಿಗೆ ಪ್ರಶಸ್ತಿ ಹಂಚಲಾಯಿತು.

ಕಿನ್ರಾರಾ ಅಕಾಡೆಮಿ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಪಾಕಿಸ್ತಾನದ 282 ರನ್‌ಗಳಿಗೆ ಉತ್ತರವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು.

ಈ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆಗಲು ಭಾರತಕ್ಕೆ ಕೊನೆಯ ಓವರ್‌ನಲ್ಲಿ ಕೇವಲ ಏಳು ರನ್ ಬೇಕಿತ್ತು. ಆದರೆ ಈ ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡ ಈ ತಂಡ ಗಳಿಸಿದ್ದು ಕೇವಲ ಆರು ರನ್. ನಾಯಕ ಉನ್ಮುಕ್ತ್ ಚಾಂದ್ (121; 150 ಎಸೆತ, 11 ಬೌಂಡರಿ) ಅವರ ಪ್ರಯತ್ನ ಸಾಕಾಗಲಿಲ್ಲ.

ಉನ್ಮುಕ್ತ್‌ಗೆ ಉತ್ತಮ ಬೆಂಬಲ ನೀಡಿದ ಬಿ.ಅಪಾರಜಿತ್ (90; 86 ಎಸೆತ, 12 ಬೌಂಡರಿ) ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಇವರಿಬ್ಬರು ಎರಡನೇ ವಿಕೆಟ್‌ಗೆ 175 ರನ್ ಸೇರಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನಕ್ಕೆ ಸಮಿ ಅಸ್ಲಾಮ್ (134; 124 ಎ, 13 ಬೌಂ. 3 ಸಿ.) ಆಸರೆಯಾದರು. ಅವರು ಉಮರ್ ವಾಹೀದ್ ಜೊತೆಗೂಡಿ ಮೂರನೇ ವಿಕೆಟ್‌ಗೆ ಭರ್ತಿ 100 ರನ್ ಸೇರಿಸಿದರು. ಆದರೆ ಭಾರತದ ರುಶ್ ಕಲಾರಿಯಾ (37ಕ್ಕೆ5) ಅವರ ಪ್ರಭಾವಿ ದಾಳಿ ಕಾರಣ ಪಾಕ್ ಒಮ್ಮೆಲೇ ಕುಸಿತ ಕಂಡಿತು.

ಉಭಯ ತಂಡಗಳ ನಡುವಿನ ಲೀಗ್ ಹಂತದ ಪಂದ್ಯದಲ್ಲಿ ಭಾರತ ಕೇವಲ 1 ರನ್‌ನಿಂದ ಸೋಲು ಕಂಡಿತ್ತು. ಆದರೆ ಫೈನಲ್‌ನಲ್ಲಿ ಆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಜೂನಿಯರ್ ವಿಶ್ವಕಪ್ ಚಾಂಪಿಯನ್‌ಷಿಪ್ ನಡೆಯಲಿದೆ. ಆ ಕಾರಣ ಈ ಸರಣಿ ಮಹತ್ವ ಪಡೆದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 (ಸಮಿ ಅಸ್ಲಾಮ್ 134, ಉಮರ್ ವಾಹೀದ್ 48, ಸಾದ್ ಅಲಿ 23; ರಶ್ ಕಲಾರಿಯಾ 37ಕ್ಕೆ5); ಭಾರತ: 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 (ಉನ್ಮುಕ್ತ್ ಚಾಂದ್ 121, ಬಾಬಾ ಅಪಾರಜಿತ್ 90, ಅಕ್ಷದೀಪ್ ನಾಥ್ 23; ಜಿಯಾ ಉಲ್ ಹಕ್ 53ಕ್ಕೆ2, ಈಶನ್ ಅದಿಲ್ 68ಕ್ಕೆ3, ಮೊಹಮ್ಮದ್ ನವಾಜ್ 45ಕ್ಕೆ3): ಫಲಿತಾಂಶ: ಪಂದ್ಯ ಟೈ ಹಾಗೂ ಜಂಟಿ ಚಾಂಪಿಯನ್ ಗೌರವ. ಪಂದ್ಯ ಶ್ರೇಷ್ಠ: ಉನ್ಮುಕ್ತ್ ಚಾಂದ್ (ಭಾರತ) ಹಾಗೂ ಸಮಿ ಅಸ್ಲಾಮ್ (ಪಾಕಿಸ್ತಾನ). ಟೂರ್ನಿ ಶ್ರೇಷ್ಠ: ಸಮಿ ಅಸ್ಲಾಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT