ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ-ಲೀಗ್‌ನಲ್ಲಿ ಕಳಪೆ ಪ್ರದರ್ಶನ: ವಿದೇಶಿ ಆಟಗಾರರತ್ತ ಎಚ್‌ಎಎಲ್ ಚಿತ್ತ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಈ ಋತುವಿನ ಐ-ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ಇದರಿಂದ ಮುಂದಿನ ವರ್ಷದ ಐ ಲೀಗ್‌ನಿಂದ ಹೊರ ಬೀಳುವ ಭೀತಿ ಎದುರಿಸುತ್ತಿದೆ. ಆದ್ದರಿಂದ ಈ ಹಿನ್ನಡೆಯನ್ನು ತಡೆಯಲು ಎಚ್‌ಎಎಲ್ ಇನ್ನಷ್ಟು ವಿದೇಶಿ ಆಟಗಾರರನ್ನು ಖರೀದಿಸುವತ್ತ ಗಮನ ಹರಿಸಿದೆ.

ಈಗಾಗಲೇ 13 ಪಂದ್ಯಗಳನ್ನಾಡಿರುವ ಎಚ್‌ಎಎಲ್‌ಗೆ ಈ ಋತುವಿನಲ್ಲಿ ಒಂದೂ ಪಂದ್ಯದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಷ್ಟೇ ಈ ತಂಡದ ಸಾಧನೆ. ಒಟ್ಟು 27 ಪಾಯಿಂಟ್ ಹೊಂದಿರುವ ಗೋವಾದ ಡೆಂಪೋ ಸ್ಪೋರ್ಟ್ಸ್ ಕ್ಲಬ್ ಅಗ್ರಸ್ಥಾನದಲ್ಲಿದೆ.

ಒಟ್ಟು 14 ತಂಡಗಳು ಸ್ಪರ್ಧಿಸಿರುವ ಐ ಲೀಗ್‌ನಲ್ಲಿ ಕೊನೆಯ ಸ್ಥಾನ ಆತಿಥೇಯ ಎಚ್‌ಎಎಲ್ ತಂಡದ್ದು. ಈಗ ಮೊದಲ ಸುತ್ತು ಮುಕ್ತಾಯ ಕಂಡಿದೆ. ಇನ್ನೂ 13 ಪಂದ್ಯಗಳನ್ನು ಆಡಬೇಕಿದೆ. ಇದರಲ್ಲಿ ಕನಿಷ್ಠ ಆರರಿಂದ-ಏಳು ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.

ಇತರ ಪಂದ್ಯಗಳ ಫಲಿತಾಂಶವನ್ನು ಸಹ ಅವಲಂಬಿಸಿದೆ. ಇಲ್ಲವಾದರೆ, ಎರಡನೇ ಡಿವಿಷನ್‌ಗೆ ಹಿಂಬಡ್ತಿ ಪಡೆಯಬೇಕಾಗುತ್ತದೆ. ಆದ್ದರಿಂದ, ತಂಡಕ್ಕೆ ವಿದೇಶಿ ಆಟಗಾರರನ್ನು ಕರೆ ತರಲು ಎಚ್‌ಎಎಲ್ ಮುಂದಾಗಿದೆ.

`ಜಗಬ್ ಹಮ್ಜಾ ಹಾಗೂ ಜೋಸೆಫ್ ಸೆಮಿ (ಇಬ್ಬರೂ ನೈಜೇರಿಯಾ) ಅವರು ಈಗಾಗಲೇ ತಂಡದಲ್ಲಿದ್ದಾರೆ. ರೋಹಿತ್ ಚಂದ್ (ನೇಪಾಳ) ಅವರನ್ನು ತಂಡಕ್ಕೆ ಕರೆತರಲಾಗಿದೆ. ಮುಂದಿನ ಪಂದ್ಯದಲ್ಲಿ ಅವರು ಆಡುವ ನಿರೀಕ್ಷೆ ಇದೆ. ತಂಡದ `ಶಕ್ತಿ~ಯನ್ನು ಇನ್ನಷ್ಟು ಬಲ ಪಡಿಸಲು ಇನ್ನೂ ಇಬ್ಬರು ಆಟಗಾರರನ್ನು ಖರೀದಿಸಲು ನಿರ್ಧರಿಸಲಾಗಿದೆ. ಶೀಫ್ರದಲ್ಲಿಯೇ ಈ ಕಾರ್ಯ ಮುಗಿಯಲಿದೆ~ ಎಂದು ಎಚ್‌ಎಎಲ್ ತಂಡದ ಮ್ಯಾನೇಜರ್ ಎಂ. ಮುರಳೀಧರನ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ತಂಡದಲ್ಲಿ ಈಗಾಗಲೇ ವಿದೇಶಿ ಆಟಗಾರರು ಇದ್ದಾರೆ. ಅದರಲ್ಲಿ ಸೆಮಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಅವರು ನಮ್ಮ ತಂಡದ ಮುಖ್ಯ ಆಟಗಾರ. 2011 ನಮ್ಮ ಪಾಲಿಗೆ ಕರಾಳವಾಗಿತ್ತು. ಹೊಸ ವರ್ಷದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದೇವೆ. ಇನ್ನುಳಿದ ಪಂದ್ಯಗಳಲ್ಲಿ ಗೆಲುವು ಪಡೆಯುತ್ತೇವೆ~ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

`ಆಡಿರುವ 13 ಪಂದ್ಯಗಳಲ್ಲಿ 11ರಲ್ಲಿ ಎಚ್‌ಎಎಲ್ ಸೋಲು ಕಂಡಿದೆ. ಉತ್ತಮ ಆರಂಭ ಪಡೆದರೂ, ದ್ವಿತಿಯಾರ್ಧದಲ್ಲಿ ಬಿಗಿ ಹಿಡಿತವನ್ನು ಸಡಿಲುಗೊಳಿಸುತ್ತಿರುವುದೇ ಸೋಲಿಗೆ ಕಾರಣವಾಗುತ್ತದೆ. ರಕ್ಷಣಾ ವಿಭಾಗದಲ್ಲಿ ಆಗುತ್ತಿರುವ ಲೋಪ ಎದುರಾಳಿ ತಂಡಕ್ಕೆ ವರವಾಗುತ್ತದೆ~ ಎನ್ನುವುದು ಮುರಳೀಧರನ್ ಅಭಿಪ್ರಾಯ.

ಕೇವಲ ಎರಡು ಪಾಯಿಂಟ್ ಹೊಂದಿರುವ ಆತಿಥೇಯ ತಂಡ ಅಗ್ರ 11ರ ಒಳಗೆ ಸ್ಥಾನ ಪಡೆಯಬೇಕು. ಪೈಲಾನ್ ಆ್ಯರೋಸ್ (7 ಪಾಯಿಂಟ್), ಚಿರಾಗ್ ಯುನೈಟೆಡ್ ಕೇರಳ (8) ಹಾಗೂ ಗೋವಾದ ಸ್ಪೋರ್ಟಿಂಗ್ ಕ್ಲಬ್ (13) ಎಚ್‌ಎಎಲ್‌ಗಿಂತ ಮೇಲಿನ ಸ್ಥಾನದಲ್ಲಿವೆ. ಎಚ್‌ಎಎಲ್ `ಹಣೆ ಬರಹ~ ಈ ತಂಡಗಳ ಫಲಿತಾಂಶವನ್ನೂ ಸಹ ಅವಲಂಬಿಸಿದೆ. ಇದರ ಜೊತೆಗೆ ಆತಿಥೇಯ ತಂಡ ಗೆಲುವು ದಾಖಲಿಸಬೇಕು. ಅಂದಾಗ ಮಾತ್ರ ಆರ್.ಸಿ. ಪ್ರಕಾಶ್ ನೇತೃತ್ವದ ಎಚ್‌ಎಎಲ್ ತಂಡ ಮುಂದಿನ ಋತುವಿನಲ್ಲಿ ಆಡಲು ಸಾಧ್ಯವಾಗುತ್ತದೆ.

`ನಮ್ಮ ತಂಡದ ಆಟಗಾರರು ಎದುರಾಳಿ ತಂಡಕ್ಕೆ ತಕ್ಕಂತೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಫಲಿತಾಂಶ ಮಾತ್ರ ನಮ್ಮ ಪರ ಬರುತ್ತಿಲ್ಲ. ಸತತವಾಗಿ ಕಾಡುತ್ತಿರುವ ಗಾಯದ ಸಮಸ್ಯೆಯೂ ಇದಕ್ಕೆ ಕಾರಣ~ ಎಂದು ತಂಡದ ಕೋಚ್ ಆರ್. ತ್ಯಾಗರಾಜನ್ ಹೇಳಿದ್ದಾರೆ.

ಮುಂದಿನ ಪಂದ್ಯಗಳಲ್ಲಿ `ಮಾಡು ಇಲ್ಲವೇ ಮಡಿ~ ಹೋರಾಟ ಅನಿವಾರ್ಯವಾದ್ದರಿಂದ ಮೂರರಿಂದ- ನಾಲ್ವರು ಆಟಗಾರರನ್ನು ಕೈ ಬಿಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನುವ ಸುಳಿವನ್ನು ಸಹ ಅವರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT