ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ10 ಈಗ ಗ್ರಾಂಡ್ ಆಗಿದೆ!

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಹನ ಪ್ರಪಂಚದಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ. ಹೊಸ ಕಾರುಗಳ ಬಿಡುಗಡೆಗೆ ಮತ್ತೆ ಪೈಪೋಟಿ ಆರಂಭವಾಗಿದೆ. ಮಾರುತಿ ಸ್ಟಿಂಗ್ರೇ ಬಿಡುಗಡೆ ನಂತರದ ಸರದಿ ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಹ್ಯುಂಡೈ ಗ್ರಾಂಡ್‌ ಐ10 ನದ್ದು. ವರ್ನಾ ಹಾಗೂ ಐ20 ಕಾರುಗಳಿಗೆ ಫ್ಲೂಡಿಕ್‌ ಸ್ಪರ್ಶ ನೀಡಿದ ನಂತರ ಇದೀಗ ಹ್ಯುಂಡೈ ಸಣ್ಣ ಕಾರುಗಳಲ್ಲಿ ಭರವಸೆ ಮೂಡಿಸಿದ್ದ ಐ10 ಕಾರಿಗೂ ಅದೇ ಸ್ಪರ್ಶ ನೀಡಿದೆ.

ಹೀಗಾಗಿ ಹೊಸ ಗ್ರಾಂಡ್‌ ಐ10 ಅಳತೆಯಲ್ಲಿ ಸ್ವಲ್ಪ ಉದ್ದ, ಅಗಲ ಹಾಗೂ ಕಡಿಮೆ ಎತ್ತರ, ಆದರೂ ಹೆಚ್ಚು ಸ್ಥಳಾವಕಾಶ ಹೊಂದಿರುವ ಈ ಕಾರನ್ನು ಹ್ಯುಂಡೈ ‘ಗ್ರಾಂಡ್‌ ಐ10’ ಎಂಬ ಹೆಸರು ನೀಡಿ ಬಿಡುಗಡೆ ಮಾಡಿದೆ. ಕೊರಿಯಾ ಮೂಲದ ಹ್ಯುಂಡೈ ತನ್ನ ಸಿಗ್ನೇಚರ್‌ ವಿನ್ಯಾಸ ಫ್ಲೂಡಿಕ್‌ ವಿನ್ಯಾಸವನ್ನು ಜರ್ಮನಿಯಲ್ಲಿರುವ ಹ್ಯುಂಡೈ ಯುರೋಪಿಯನ್‌ ಡಿಸೈನ್‌ ಸೆಂಟರ್‌ನಲ್ಲಿ ಸಿದ್ಧಪಡಿಸಿತ್ತು.

ಇದೀಗ ಗ್ರಾಂಡ್‌ ಐ10ಗೂ ಸಹ ಅಲ್ಲಿಯದೇ ವಿನ್ಯಾಸ ಎಂದು ಹೇಳಿದೆ. ಆದರೆ ಇದರ ವಿನ್ಯಾಸ ತನ್ನ ಎಲ್ಲಾ ಸಣ್ಣ ಕಾರುಗಳ ಸಂಗ್ರಹ ಮಿಶ್ರಣದಂತಿದೆ. ಇಯಾನ್‌ನ ಹೆಡ್‌ಲ್ಯಾಂಪ್‌ ಹಾಗೂ ಇಕ್ಕೆಲಗಳು, ಐ10ನ ಪಿಲ್ಲರ್‌ಗಳು ಹಾಗೂ ಐ20ಯ ಚಾಸೀಸ್‌ ಸೇರಿ ಗ್ರಾಂಡ್‌ ಐ10 ಎಂದರೆ ತಪ್ಪಾಗಲಾರದು.

ದೂರದಿಂದಲೇ ಹ್ಯುಂಡೈ ಎಂದು ಕಾಣುವಂತಹ ಷಟ್ಭುಜ ಏರ್ ಡ್ಯಾಮ್‌ ಹಾಗೂ ಗ್ರಿಲ್‌ ಹೊಂದಿದ್ದರೂ, ಹೊಸ ಬಗೆಯ ಫಾಗ್‌ ಲ್ಯಾಂಪ್‌ ಹಾಗೂ ಮುಂಭಾಗದ ಬಂಪರ್‌ ಈ ಕಾರಿನತ್ತ ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಏರೋಡೈನಾಮಿಕ್‌ ವಿನ್ಯಾಸದಿಂದಾಗಿ ಕಾರಿಗೊಂದು ಸ್ಫೋರ್ಟಿ ರೂಪ ಸಿಕ್ಕಿದೆ. ಡೈಮಂಡ್‌ ಕಟ್‌ ಅಲಾಯ್‌ ವೀಲ್‌ನಿಂದಾಗಿ ಕಾರಿಗೊಂದು ಶ್ರೀಮಂತ ಕಳೆ ದೊರೆತಿದೆ.

ಹಿಂಬದಿಯ ದೀಪಗಳು ಕಾರಿಗೆ ಹದಿಹರೆಯದ ನೋಟ ನೀಡಿವೆ. ಇದು ಹ್ಯುಂಡೈನ ಹೊಸ ಪ್ರಯತ್ನ. ಆದರೂ ಹಿಂಬದಿಯ ಕೆಳಭಾಗದಲ್ಲಿ ನೀಡಿರುವ ದೊಡ್ಡದಾದ ರಿಫ್ಲೆಕ್ಟರ್‌ಗಳು ಅತಿ ಎನಿಸುತ್ತದೆ. ಆದರೂ ಹೊರನೋಟದಲ್ಲೇ ಇದು ಸ್ಫೋರ್ಟಿ ರೂಪವನ್ನು ನೀಡಿರುವ ಹ್ಯುಂಡೈ ಯುವಜನತೆಯನ್ನು ಗುರಿಯಾಗಿಟ್ಟುಕೊಂಡು ಅಭಿವೃದ್ಧಿಪಡಿಸಿರುವುದು ಖಾತರಿಯಾಗುತ್ತದೆ.

ಗ್ರಾಂಡ್‌ ಐ10 ಎಂಜಿನ್‌
ಸಣ್ಣ ಕಾರಿನಲ್ಲಿ ಕೇವಲ ಪೆಟ್ರೋಲ್‌ ಮಾದರಿಯನ್ನು ಮಾತ್ರ ಪರಿಚಯಿಸಿದ್ದ ಹ್ಯುಂಡೈ, ಗ್ರಾಂಡ್‌ ಐ10 ಮೂಲಕ ಪೆಟ್ರೋಲ್‌ ಹಾಗು ಡೀಸೆಲ್‌ ಎರಡೂ ಎಂಜಿನ್‌ಗಳನ್ನು ಪರಿಚಯಿಸಿದೆ. 1.1 ಲೀ. ಸಾಮರ್ಥ್ಯದ 2ನೇ ತಲೆಮಾರಿನ ಯು2 ಸಿಆರ್‌ಡಿಐ ಡೀಸೆಲ್‌ ಎಂಜಿನ್‌ ಹಾಗೂ 1.2 ಲೀ. ಸಾಮರ್ಥ್ಯದ ಡುಯಲ್‌ ವಿಟಿವಿಟಿಯ ಕಪ್ಪ ಎಂಜಿನ್‌ಗಳಲ್ಲಿ ಗ್ರಾಂಡ್‌ ಐ10 ಲಭ್ಯ. ಡೀಸೆಲ್‌ ಎಂಜಿನ್‌ ಬೇಡಿಕೆ ಹೆಚ್ಚಿದ್ದ ಕಾಲದಲ್ಲಿ ಅಭಿವೃದ್ಧಿಗೊಂಡ ಯು2 ಸಿಆರ್‌ಡಿಐ ಎಂಜಿನ್‌ 71ಪಿಎಸ್‌ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

1500ರಿಂದ 2750 ಆರ್‌ಪಿಎಂನಲ್ಲಿ 16.3ಕೆಜಿಎಂನಷ್ಟು ಗರಿಷ್ಠ ಟಾರ್ಕ್‌ ಅನ್ನು ಇದು ಉತ್ಪಾದಿಸಲಿದೆ. ಇಷ್ಟಿದ್ದರೂ ಇಂಧನ ಕ್ಷಮತೆಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ 24 ಕಿ.ಮೀ. ನೀಡುತ್ತದೆ ಎನ್ನುವುದು ಕಂಪೆನಿಯ ಹೇಳಿಕೆ. ಆದರೆ ಇದರ ಗುಣಾತ್ಮಕ ಅಂಶಗಳಲ್ಲೊಂದು ಗ್ರಾಂಡ್‌ ಐ10 ಯುರೊ 5 ಮಾನ್ಯತೆಯನ್ನು ಪಡೆದಿದೆ. ಪರಿಸರವನ್ನು ಹೆಚ್ಚು ಮಾಲಿನ್ಯ ಮಾಡದ ಹಾಗೂ ಎನ್‌ವಿಎಚ್‌ (ಶಬ್ಧ, ಕಂಪನ ಹಾಗೂ ಪರಿಗೆ) ಮಾಪನವನ್ನು ಕಾಪಾಡುವ ತಂತ್ರಜ್ಞಾನವನ್ನು ಇದು ಹೊಂದಿದೆ.

ಡೀಸೆಲ್‌ ಎಂಜಿನ್‌ ಅಧಿಕ ಟಾರ್ಕ್‌ ಉತ್ಪಾದಿಸುವುದರಿಂದ ಹೆಚ್ಚು ಗೇರ್‌ ಬದಲಿಸುವ ಗೋಜು ಇರದು. ಹೀಗಾಗಿ ನಗರ ಸಂಚಾರಕ್ಕೆ ಹೇಳಿಮಾಡಿಸಿದ ಕಾರು. ಸಂಪೂರ್ಣ ಅಲ್ಯುಮಿನಿಯಂ ಲೋಹದಿಂದ ತಯಾರಾಗಿರುವ 1.2 ಲೀ. ಕಪ್ಪ ಪೆಟ್ರೋಲ್‌ ಎಂಜಿನ್‌ ಡುಯಲ್‌ ವಿಟಿವಿಟಿ ತಂತ್ರಗಾರಿಕೆಯನ್ನು ಹೊಂದಿದೆ. ಡೀಸೆಲ್‌ಗೆ ಹೋಲಿಸಿದಲ್ಲಿ ಪೆಟ್ರೋಲ್‌ ಕೊಂಚ ಶಕ್ತಿ ಶಾಲಿ. 83ಪಿಎಸ್‌ ಗರಿಷ್ಠ ಶಕ್ತಿ ಉತ್ಪಾದಿಸುವ ಸಾಮರ್ಥ್ಯವಿರುವ ಈ ಎಂಜಿನ್‌ 11.6 ಕೆಜಿಎಂ ಟಾರ್ಕ್‌ ಹೊಂದಿದೆ.

ಐದು ಗೇರ್‌ಗಳನ್ನು ಹೊಂದಿರುವ ಪೆಟ್ರೋಲ್‌ ಗ್ರಾಂಡ್‌ ಐ10 ಪ್ರತಿ ಲೀಟರ್‌ಗೆ 18.9 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಪೆಟ್ರೋಲ್‌ ಎಂಜಿನ್‌ನಲ್ಲಿ ಮ್ಯಾನುಯಲ್‌ ಹಾಗೂ ಆಟೊಮ್ಯಾಟಿಕ್ ಗೇರ್‌ಗಳಿರುವುದು ಇದರ ಮತ್ತೊಂದು ವಿಶೇಷ. ಇನ್ನು ಕಾರಿನ ಒಳಾಂಗಣಕ್ಕೆ ಬಂದಲ್ಲಿ, ಭಾರತೀಯರು ಕಾರಿನ ಒಳಗೆ ಏನೇನು ಅಪೇಕ್ಷಿಸುತ್ತಾರೋ ಅವೆಲ್ಲವನ್ನೂ ನೀಡಲು ಹ್ಯುಂಡೈ ಪ್ರಯತ್ನಿಸಿದೆ.

ಉದ್ದನೆಯವರ ಕಾಲು ಕೂಡಾ ಹಿಡಿಸುವಂತೆ ಲೆಗ್‌ರೂಂ, ಕಾರಿನ ಮೇಲ್ಛಾವಣಿ ತಲೆಗೆ ಬಡಿಯದಂತ ಹೆಡ್‌ರೂಂ ಹಾಗೂ ಸಾಮಾನು ಸರಂಜಾಮು ಸಾಗಿಸಲು ಉತ್ತಮ ಬೂಟ್‌ ಸ್ಪೇಸ್‌ ನೀಡಲಾಗಿದೆ. ಬೇಜ್‌ ಹಾಗೂ ಕಪ್ಪು ಬಣ್ಣದಲ್ಲಿರುವ ಒಳಾಂಗಣ ವಿಲಾಸಿ ಕಾರಿನಂತೆ ಕಾಣುತ್ತದೆ. ಕಾರಿನಲ್ಲಿ ಬಳಸಿರುವ ಸ್ವಿಚ್‌, ನಾಬ್‌ ಉತ್ತಮ ಗುಣಮಟ್ಟದ್ದಾಗಿದೆ. ಅದರಲ್ಲೂ ಈ ಹಿಂದಿನ ಐ10ಗೆ ಹೋಲಿಸಿದಲ್ಲಿ ಡ್ಯಾಶ್‌ಬೋರ್ಡ್‌ಗೊಂದು ಹೊಸ ರೂಪ ನೀಡಲಾಗಿದೆ.

ಹಿಂಬದಿಯ ಆಸನದಲ್ಲಿ ಕುಳಿತವರಿಗೂ ಹಿತವಾದ ಗಾಳಿ ಬೀಸಲು ಹಿಂಭಾಗದಲ್ಲಿಯೂ ಎಸಿ ವೆಂಟ್‌ ನೀಡಲಾಗಿದೆ. ಯುಎಸ್‌ಬಿ ಸೌಲಭ್ಯವಿರುವ ಮ್ಯೂಸಿಕ್‌ ಸಿಸ್ಟಂನ ಗುಣಮಟ್ಟ ಉತ್ತಮವಾಗಿದೆ. ಜತೆಗೆ ಒಂದು ಗಿಗಾಬೈಟ್‌ನಷ್ಟು ಆಂತರಿಕ ಸ್ಮೃತಿಕೋಶ ಅಳವಡಿಸಿರುವುದರಿಂದ ಮೆಚ್ಚಿನ ಗೀತೆಗಳನ್ನು ಇದರಲ್ಲೇ ಉಳಿಸಿಕೊಂಡು ಕೇಳಬಹುದಾಗಿದೆ.

ಹ್ಯುಂಡೈ ಐ10ನ ಗೇರ್‌ಬಾಕ್ಸ್‌ ಹಾಗೂ ನಾಬ್‌ ಅಳವಡಿಸಿರುವ ರೀತಿ ಮುಂಚಿನಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಗ್ರಾಂಡ್‌ ಐ10ನಲ್ಲೂ ಸಹ ಅದು ಅಷ್ಟೇ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಜತೆಗೆ ಮೂರು ಸ್ಪೋಕ್‌ಗಳ ಸ್ಟಿಯರಿಂಗ್‌ ಕೂಡಾ ಆರಾಮ ಚಾಲನೆಗೆ ಹೇಳಿಮಾಡಿಸಿದಂತಿದೆ. ಅಗತ್ಯಕ್ಕನುಗುಣವಾಗಿ ಹೊಂದಿಸಿಕೊಳ್ಳಬಹುದಾದ ಸ್ಟಿಯರಿಂಗ್‌ ವ್ಯವಸ್ಥೆ ಕೂಡಾ ಚಾಲಕ ಸ್ನೇಹಿಯಾಗಿದೆ.

ಗ್ರಾಂಡ್‌ ಐ10ನಲ್ಲಿ ಅಳವಡಿಸಿರುವ ಅತ್ಯಾಧುನಿಕ ಸೌಲಭ್ಯಗಳಲ್ಲಿ ಪುಷ್‌ ಬಟ್ಟನ್‌ ಸ್ಟಾರ್ಟ್‌ ಕೂಡಾ ಒಂದು. ಜತೆಗೆ ಸ್ಮಾರ್ಟ್‌ ಕೀ, ಕೀಲಿ ಇಲ್ಲದೆ ಬಾಗಿಲು ತೆರೆದುಕೊಳ್ಳುವ ಸೌಲಭ್ಯ, ಹೊರಭಾಗದ ಕನ್ನಡಿ ಸ್ವಯಂಚಾಲಿತವಾಗಿ ಮುಚ್ಚುವುದು ಹಾಗೂ ತೆರೆಯುವ ವ್ಯವಸ್ಥೆ. ತಂಪು ಪಾನೀಯ ಹಾಗೂ ಹಣ್ಣಿನ ತಾಜಾತನವನ್ನು ಕಾಪಾಡಲು ಕೂಲ್ಡ್‌ ಗ್ಲೋ ಬಾಕ್ಸ್‌ ನೀಡಿರುವುದೂ ಸಹ ಕಾರಿನ ವಿಲಾಸಿತನಕ್ಕೆ ಉದಾಹರಣೆಯಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ಗಮನಿಸಿದರೆ ಎರಡು ಏರ್‌ಬ್ಯಾಗ್‌ಗಳು, ಅಪಘಾತ ಸಂಭವಿಸಿದ್ದೇ ಆದಲ್ಲಿ ಸಪ್ಲಿಮೆಂಟರಿ ರಿಸ್ಟ್ರೈಂಟ್‌ ಸಿಸ್ಟಂ, ಉತ್ತಮ ರಸ್ತೆ ಹಿಡಿತಕ್ಕೆ ಎಬಿಎಸ್‌ ವ್ಯವಸ್ಥೆ ಇದೆ. ಇದರ ಜತೆಯಲ್ಲಿ ಸೆಂಟ್ರಲ್‌ ಲಾಕಿಂಗ್‌, ಎಂಜಿನ್‌ ಇಮ್ಮೊಬಲೈಸರ್‌ ಹಾಗೂ ಹಿಂಬದಿಯ ಪಾರ್ಕಿಂಗ್‌ ಸೆನ್ಸರ್‌ ಕೂಡಾ ಕಾರಿನಲ್ಲಿ ಇದೆ ಎಂಬುದನ್ನು ಸಾಬೀತು ಪಡಿಸಿದೆ.

ಒಟ್ಟಿನಲ್ಲಿ ಹ್ಯುಂಡೈ ಗ್ರಾಂಡ್‌ ಐ10 ಬಿಡುಗಡೆಯ ಮೂಲಕ ಭಾರತದ ನಂ. 1 ಕಾರು ತಯಾರಿಕಾ ಕಂಪೆನಿಗೆ ಸವಾಲೊಡ್ಡುವುದರ ಜತೆಗೆ ಗ್ರಾಹಕರು ನೀಡುವ ಹಣಕ್ಕೆ ತಕ್ಕಂಥ ಸೌಲಭ್ಯ ನೀಡಿದೆ. ಭಾರತದ ರಸ್ತೆಯಲ್ಲಿ ಹ್ಯುಂಡೈನ ಭರವಸೆಯನ್ನು ಗ್ರಾಂಡ್‌ ಐ10 ಬೆಳಗಲಿದೆಯೇ ಕಾದು ನೋಡಬೇಕು. ಎರಾ, ಮ್ಯಾಗ್ನಾ, ಸ್ಫೋರ್ಟ್ಸ್‌ ಹಾಗೂ ಆಸ್ತಾ ಎಂಬ ನಾಲ್ಕು ಮಾದರಿಯಲ್ಲಿ ಲಭ್ಯವಿರುವ ಹ್ಯುಂಡೈ ಗ್ರಾಂಡ್‌ ಐ10 ಬೆಂಗಳೂರಿನಲ್ಲಿ ಪೆಟ್ರೋಲ್‌ ₨ 4.38ಲಕ್ಷ ದಿಂದ ₨ 5.6. ಡೀಸೆಲ್‌ ಕಾರಿನ ಬೆಲೆ ₨ 5.33ಲಕ್ಷ ದಿಂದ ₨ 6.53ಲಕ್ಷ. 
-ಇ.ಎಸ್. ಸುಧೀಂದ್ರ ಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT