ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಎಂ ಕೈವಾಡದ ಶಂಕೆ

ಮೃತರಲ್ಲಿ ಭಾಲ್ಕಿಯ ಪದ್ಮಾಕರ ಕುಲಕರ್ಣಿ ಬ ಸತ್ತವರ ಸಂಖ್ಯೆ 16ಕ್ಕೆ
Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಗುರುವಾರ ಸಂಜೆ ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಅವಳಿ ಸ್ಫೋಟದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ (ಐಎಂ) ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಪ್ರಾಥಮಿಕ ತನಿಖೆಗಳೆಲ್ಲ ಇಂಡಿಯನ್ ಮುಜಾಹಿದ್ದೀನ್‌ನತ್ತಲೇ ಬೊಟ್ಟು ಮಾಡುತ್ತಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳದ ತಂಡ, ಆಂಧ್ರಪ್ರದೇಶ ಪೊಲೀಸರ ಸಹಕಾರದೊಂದಿಗೆ ತನಿಖೆಯ ನೇತೃತ್ವ ವಹಿಸಿಕೊಂಡಿದೆ.

ಸ್ಫೋಟದಿಂದಾಗಿ ಸತ್ತವರ ಸಂಖ್ಯೆ 16ಕ್ಕೆ ಏರಿದೆ. ಸತ್ತವರಲ್ಲಿ ಕರ್ನಾಟಕದ ಬೀದರ್ ಜಿಲ್ಲೆ ಭಾಲ್ಕಿಯ ಪದ್ಮಾಕರ ನಾರಾಯಣರಾವ ಕುಲಕರ್ಣಿ (40) ಸೇರಿದ್ದಾರೆ.

ದಿಲ್‌ಸುಖ್‌ನಗರದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ತಂತಿಗಳನ್ನು ಒಂದು ದಿನ ಮೊದಲೇ ಕತ್ತರಿಸಿ ಅವುಗಳನ್ನು ನಿಷ್ಕ್ರಿಯಗೊಳಿಸಿರುವುದು ತನಿಖೆಯಿಂದ ಬಯಲಾಗಿದ್ದು, ಇದರಿಂದ ದುಷ್ಕರ್ಮಿಗಳು ವ್ಯವಸ್ಥಿತ ಸಿದ್ಧತೆ ಮಾಡಿಕೊಂಡೇ ಈ ಕೃತ್ಯ ನಡೆಸಿರುವುದು ದೃಢಪಟ್ಟಿದೆ. ಕ್ಯಾಮೆರಾಗಳು ಹಾಳಾಗಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ಜನನಿಬಿಡ ಪ್ರದೇಶಗಳಲ್ಲೇ ಸ್ಫೋಟ ನಡೆಸಲು ದುಷ್ಕರ್ಮಿಗಳು ಕೆಲ ದಿನಗಳಿಂದ ಈ ಭಾಗದ ವಸತಿಗೃಹಗಳಲ್ಲಿ ಕುಳಿತು ಕಾರ್ಯತಂತ್ರ ರೂಪಿಸಿರುವುದು ಸಹ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

ಈ ಭಾಗದಲ್ಲಿರುವ ಸಾಯಿಬಾಬಾ ಮಂದಿರ ಬಳಿ ಸ್ಫೋಟಕ ಇಡಲು ಮೊದಲು ಯೋಜಿಸಲಾಗಿತ್ತು. ಆದರೆ ಗುರುವಾರವಾದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರುವುದರಿಂದ ಪೊಲೀಸರ ಕಾವಲು ಗಮನಿಸಿ ಸ್ಫೋಟಕವನ್ನು ಅಲ್ಲಿಂದ ಸ್ವಲ್ಪ ದೂರದಲ್ಲಿ ಇಡಲಾಯಿತು. ಒಂದು ವೇಳೆ ಮಂದಿರದ ಬಳಿಯೇ ಸ್ಫೋಟ ನಡೆದಿದ್ದರೆ ಇದೇ ಸಮಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ್ದ ನಗರ ಪೊಲೀಸ್ ಕಮೀಷನರ್ ಅನುರಾಗ ಶರ್ಮಾ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗುವ ಸಾಧ್ಯತೆ ಇತ್ತು. ಮೊದಲ ಸ್ಫೋಟ ನಡೆದಾಗ ಶರ್ಮಾ ಅಲ್ಲಿಂದ ತೆರಳಿ ಕೇವಲ 15ರಿಂದ 20 ನಿಮಿಷಗಳಾಗಿದ್ದವು.

ಈ ಸ್ಫೋಟ ನಡೆಸಲು ಕಚ್ಚಾ ಬಾಂಬ್ ಬಳಸಲಾಗಿದ್ದು, ಇಂಡಿಯನ್ ಮುಜಾಹಿದ್ದೀನ್ ಹಲವು ಬಾರಿ ಇದೇ ಮಾದರಿಯಲ್ಲಿ ಉಗ್ರಗಾಮಿ ಕೃತ್ಯ ನಡೆಸಿತ್ತು.

ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದ `ಐಎಂ' ಉಗ್ರ ಮಕ್ಬೂಲ್‌ನನ್ನು ದೆಹಲಿ ಹಾಗೂ ಹೈದರಾಬಾದ್ ಪೊಲೀಸರು ಮತ್ತಷ್ಟು ಪ್ರಶ್ನಿಸುವ ಸಾಧ್ಯತೆಯಿದೆ. ತಿಹಾರ್ ಜೈಲಿನಲ್ಲಿ ಬಂಧಿತನಾಗಿರುವ ಮಕ್ಬೂಲ್, ತನ್ನ ಸಂಘಟನೆ ಹೈದರಾಬಾದ್‌ನ ಕೆಲವೆಡೆ ಸ್ಫೋಟ ನಡೆಸಲು ಸಂಚು ನಡೆಸಿದೆ ಎಂದು ಹೇಳಿದ್ದ.

ನಟ್, ಬೋಲ್ಟ್, ಗಾಜಿನ ಚೂರು: ಸ್ಫೋಟದಲ್ಲಿ ಸತ್ತವರು ಹಾಗೂ ಗಾಯಾಳುಗಳ ದೇಹದಲ್ಲಿ ನಟ್‌ಗಳು, ಬೋಲ್ಟ್‌ಗಳು, ಮೊಳೆ ಹಾಗೂ ಗಾಜಿನ ಚೂರುಗಳು ಪತ್ತೆಯಾಗಿವೆ.

2007ರಲ್ಲಿ ನಡೆದ ಘಟನೆಯಲ್ಲಿ ಬಳಸಿದ ಸ್ಫೋಟಕದಲ್ಲಿಯೂ  ಈ ವಸ್ತುಗಳನ್ನು ಬಳಸಲಾಗಿತ್ತು. ಸಂತ್ರಸ್ತರಿಗೆ ಆದ ಗಾಯಗಳು ಒಂದೇ ರೀತಿಯಾಗಿವೆ. ತನಿಖೆಯ ದೃಷ್ಟಿಯಿಂದ ಈ ಎರಡೂ ಸ್ಫೋಟದ ಘಟನೆಗಳ ಸಾಮ್ಯತೆ ಪಟ್ಟಿ ಮಾಡಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸತ್ತವರ ಸಂಖ್ಯೆ ಏರಿಕೆ: ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಈಗ 16ಕ್ಕೆ ಏರಿದೆ. ಸತ್ತವರಲ್ಲಿ ಐವರು ವಿದ್ಯಾರ್ಥಿಗಳು.

12 ಶವಗಳನ್ನು ಸಂಬಂಧಿಗಳಿಗೆ ನೀಡಲಾಗಿದೆ. ಎರಡು ಶವಗಳು ಶವಾಗಾರದಲ್ಲಿ ಇವೆ. ಇಬ್ಬರ ಗುರುತು ಇನ್ನೂ ಪತ್ತೆಯಾಗಬೇಕಿದೆ ಎಂದು ಉಸ್ಮಾನಿಯಾ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಒಟ್ಟು 117 ಜನ ಗಾಯಗೊಂಡಿದ್ದಾರೆ. ಆರು ಮಂದಿಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಂಧೆ ಭೇಟಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಶುಕ್ರವಾರ ಬೆಳಿಗ್ಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಸ್ಫೋಟ ನಡೆದ ಸ್ಥಳ ಹಾಗೂ ಆಸ್ಪತ್ರೆಗೂ ಭೇಟಿ ನೀಡಿದ್ದರು. ಸ್ಫೋಟದ ಕುರಿತು ಯಾವುದೇ ಖಚಿತ ಮಾಹಿತಿ ಇರಲಿಲ್ಲ. ರಾಜ್ಯಗಳಿಗೆ ಒಟ್ಟಾರೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ.

`ಸೈಕಲ್ ಬಾಂಬ್'
ಹೈದರಾಬಾದ್:
ಇದೇ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಸೈಕಲ್‌ನಲ್ಲಿ ಸ್ಫೋಟದ ಸಲಕರಣೆಗಳನ್ನು ಇರಿಸಿ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ.  ನೈಟ್ರೊ ಸಂಯುಕ್ತ ಉಪಯೋಗಿಸಿತಯಾರಿಸಿದ ಕಚ್ಚಾಬಾಂಬ್ ಮೂಲಕ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂದು ಆಂಧ್ರಪ್ರದೇಶ ಪೊಲೀಸರು ಹೇಳಿದ್ದಾರೆ. ಉಗ್ರರು ಸ್ಫೋಟದ ಸಲಕರಣೆಗಳನ್ನು ರೆಕ್ಸಿನ್ ಬ್ಯಾಗ್‌ನಲ್ಲಿ ಇಟ್ಟು ಅದನ್ನು  ಸೈಕಲ್‌ಗೆ ಕಟ್ಟಿ ಈ ಕೃತ್ಯ ಎಸಗಿದ್ದಾರೆ. ಅವಳಿ ಸ್ಫೋಟ ನಡೆಸಲು ಟೈಮರ್ ಸಹ ಬಳಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT