ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಂದ್ರೆ ಸುಮ್ನೆ ಅಲ್ಲ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇದೊಂಥರಾ ಫ್ಯಾಷನ್ ಆಗ್ಬಿಟ್ಟಿದೆ ಈಗ.  ನಮ್ ಹುಡುಗ/ಹುಡುಗಿ ಐ.ಎ.ಎಸ್.ಗೆ ಪ್ರಿಪೇರ್ ಆಗ್ತಿದ್ದಾನೆ/ಳೆ ಅಂತ ಹೇಳ್ಕೊಂಡು ಓಡಾಡೋದು ದೊಡ್ಡಸ್ತಿಕೆ ಲಕ್ಷಣ ಅನ್ನಿಸ್ತಿದೆ.

ಪದವಿ/ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಕೆಲಸಕ್ಕೆಂದು ಹುಡುಕಾಡುತ್ತಲೇ ಜೊತೆಗೆ ಇರಲಿ ಅಂತ ಸಿವಿಲ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳುವವರೂ ಜಾಸ್ತಿಯಾಗ್ತಿದ್ದಾರೆ.  ಸೀರಿಯಸ್ ಆಗಿ ಅಟೆಂಪ್ಟ್ ಮಾಡೋರು ಸಿಗ್ತಾ ಇಲ್ಲ.

`ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ~ ಅನ್ನೋರಿಗೆ ಈ ಕಾಂಪಿಟಿಟಿವ್ ಎಕ್ಸಾಂ ಒಲಿಯೋಲ್ಲರೀ.  ಡೈ ಹಾರ್ಡ್ ಮನೋಭಾವದವರು, ಇದನ್ನು ಮಾಡಿಯೇ ತೀರ‌್ತೇನೆ ಅನ್ನೋರು ಇಲ್ಲಿ ಯಶಸ್ವಿಯಾಗ್ತಾರೆ ಎನ್ನುತ್ತಾರೆ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಛಾಯಾಪತಿ.

ಮಾರ್ಚ್ 5- ಅರ್ಜಿ ಸಲ್ಲಿಕೆಗೆ ಕಡೆ ದಿನ
ಆಗಸ್ಟ್ ಎರಡನೇ ವಾರ ಕೇಂದ್ರ ಲೋಕ ಸೇವಾ ಆಯೋಗದ ಅಂತರಜಾಲತಾಣದಲ್ಲಿ  2012ರಲ್ಲಿ ನಡೆಸಲು ಉದ್ದೇಶಿಸಿರುವ 22 ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದ್ದು ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಗಳು 2012ರ ಮೇ 20 ರಂದು ನಡೆಯಲಿವೆ.  ಅರ್ಜಿಗಳನ್ನು 2012ರ ಫೆಬ್ರವರಿ 4 ರಂದು ಆಹ್ವಾನಿಸಲಾಗುವುದು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನ 2012ರ ಮಾರ್ಚ್ 5 ಆಗಿರುತ್ತದೆ. 

ಈ ವೇಳಾಪಟ್ಟಿಯ ಜೊತೆಗೇ 2011ರ ಜೂನ್ 12 ರಂದು ನಡೆಸಿದ ಗೆಝೆಟೆಡ್ ಪ್ರೊಬೇಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.  ಕರ್ನಾಟಕದ ಬಹಳಷ್ಟು ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಬರುವ ಅಕ್ಟೋಬರ್ 29 ರಿಂದ ಮುಖ್ಯ ಪರೀಕ್ಷೆ ಆರಂಭವಾಗಲಿದೆ. 

ಕನಿಷ್ಠ ಒಂದು ವರ್ಷ ಫೋಕಸ್ಡ್ ಸ್ಟಡಿ ಮಾಡಲು ಮನಸ್ಸು ಮಾಡುವ ಮತ್ತು ಗೆದ್ದೇ ಗೆಲ್ಲುವೆ ಎಂಬ ವೊಲಿಷನ್ ಕೋಷಂಟ್, ಇಚ್ಛಾಶಕ್ತಿ ಅಥವಾ ನಿರ್ಧಾರ ಸಾಮರ್ಥ್ಯವುಳ್ಳ ಅಭ್ಯರ್ಥಿಗಳು ಮಾತ್ರ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಖಂಡಿತಾ ಯಶಸ್ವಿಯಾಗುತ್ತಾರೆ.  ಅಂತಹ ಯುವಜನರ ಅಗತ್ಯ ಬಹಳವಿದೆ.

ಬದಲಾದ ಪಠ್ಯಕ್ರಮ
ಪತ್ರಿಕೆ 1: ಸಾಮಾನ್ಯ ಜ್ಞಾನ  - 200 ಅಂಕಗಳು  - ಅವಧಿ ಎರಡು ಗಂಟೆ

* ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಸಂಗತಿಗಳನ್ನು ಒಳಗೊಂಡಂತೆ.

* ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.

* ಭಾರತ ಮತ್ತು ಪ್ರಪಂಚದ ಭೂಗೋಳ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ


* ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ - ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.

* ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು ಇತ್ಯಾದಿ.

* ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ, ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ತುಂಬಾ ಆಳವಾದ ತಜ್ಞತೆಯ ಅಗತ್ಯವೇನಿಲ್ಲ.)

* ಸಾಮಾನ್ಯ ವಿಜ್ಞಾನ

ಪತ್ರಿಕೆ 2 : ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ - 200 ಅಂಕಗಳು -ಅವಧಿ ಎರಡು ಗಂಟೆ
* ಕಾಂಪ್ರಹೆನ್ಷನ್ (ಮಾಹಿತಿಯನ್ನು ಅರ್ಥೈಸಿಕೊಂಡು ಉತ್ತರಿಸುವುದು)

* ಸಂವಹನ ಕೌಶಲಗಳು ಮತ್ತು ಇಂಟರ್‌ಪರ್ಸನಲ್ ಸ್ಕಿಲ್ಸ್ (ವೈಯಕ್ತಿಕ ಕೌಶಲಗಳು)

* ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ

* ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ

* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ

* ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ ಕಠಿಣತೆ.)

* ಇಂಗ್ಲಿಷ್ ಭಾಷೆಯಲ್ಲಿರುವ ನೀಡಲಾಗಿರುವ ಮಾಹಿತಿ ಪ್ಯಾರಾಗ್ರಾಫನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.

* ಇಂಗ್ಲಿಷ್ ಕಾಂಪ್ರೆಹನ್ಷನ್

ಬೌದ್ಧಿಕ ಮಟ್ಟ ಉನ್ನತವಾಗಿರುವ ಅಭ್ಯರ್ಥಿಗಳಿಗಿಂತ ನಾಗರಿಕ ಸೇವೆಗಳಲ್ಲಿ ತೊಡಗುವ ಅಭಿರುಚಿ ಇರುವ ಅಭ್ಯರ್ಥಿಗಳು ಉತ್ತಮ ಅಧಿಕಾರಿಗಳಾಗಬಲ್ಲರು.  ಪ್ರತಿಷ್ಠಿತ ಐ.ಎ.ಎಸ್,, ಐ.ಎಫ್.ಎಸ್., ಐ.ಪಿ.ಎಸ್., ಐ.ಆರ್.ಎಸ್. ಮುಂತಾದ ಹುದ್ದೆಗಳಿಗೆ ಆಯ್ಕೆಯಾಗುವ ದೃಢನಿರ್ಧಾರ ಹೊಂದಿರುವ ಅಭ್ಯರ್ಥಿಗಳು ಆಡಳಿತದಲ್ಲಿಯೂ ದೃಢನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು ಎಂಬುದು ಈ ಎಲ್ಲಾ ಸುಧಾರಣೆಗಳ ಹಿಂದಿರುವ ಸೂತ್ರ. 

ವಿವಿಧ ವಿಷಯಗಳಲ್ಲಿ ತಜ್ಞತೆ ಹೊಂದಿರುವುದರ ಜೊತೆ ಆಡಳಿತಾಧಿಕಾರಿಗೆ ಬೇಕಾದ ಅಗತ್ಯ ಕಾನೂನು ಪರಿಜ್ಞಾನ, ದೇಶದ ಸಮಸ್ಯೆಗಳ ಪರಿಚಯ ಹಾಗೂ ನಿರ್ವಹಣೆಯ ಕೌಶಲ ಅಪೇಕ್ಷಣೀಯ. 

ಅರ್ಹತಾ ಪರೀಕ್ಷೆಗಳು
ಕನ್ನಡ ಅಥವಾ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಒಂದು ಭಾರತೀಯ ಭಾಷೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿದ್ದು ಅರ್ಹತೆ ಪಡೆಯಲು ಒಂದೊಂದರಲ್ಲೂ ಕನಿಷ್ಠ ಶೇ. 30 ರಷ್ಟು ಮತ್ತು ಸರಾಸರಿ ಶೇ. 35ರಷ್ಟು ಅಂಕಗಳನ್ನು ಗಳಿಸಿಕೊಳ್ಳಬೇಕು. ಈ ಅಂಕಗಳನ್ನು ಅಭ್ಯರ್ಥಿಯ ಆಯ್ಕೆಯ ಅರ್ಹತೆ ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ. 

ಈ ಎರಡೂ ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಐಚ್ಛಿಕ ವಿಷಯಗಳಲ್ಲಿ ಎಷ್ಟೇ ಹೆಚ್ಚು ಅಂಕ ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳು ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ.

ಸಾಮಾನ್ಯ ಅಧ್ಯಯನ ಕಡ್ಡಾಯ ಪತ್ರಿಕೆಗಳು
ಸಾಮಾನ್ಯ ಅಧ್ಯಯನಕ್ಕೆ ಸಂಬಂಧಪಟ್ಟ ವಿಷಯಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿರುತ್ತವೆ. ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಸಂಗತಿಗಳು, ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ,

ಭಾರತ ಮತ್ತು ಪ್ರಪಂಚದ ಭೂಗೋಳ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳು, ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ, ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.

ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು, ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು, ಸಾಮಾನ್ಯ ವಿಜ್ಞಾನ, ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ, ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ,
 
ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ)
ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಲ್ಲಿ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಬಳಸಿಕೊಂಡು ಹತ್ತು ಹಲವು ರೀತಿಯಲ್ಲಿ ಸಂಯೋಜನೆ ಮಾಡಲಾಗಿರುತ್ತದೆ. 

ಮುಖ್ಯವಾಗಿ ಸಂಖ್ಯಾಸರಣಿ, ಅಕ್ಷರ ಸರಣಿ, ಸರಣಿಯಲ್ಲಿನ ತಪ್ಪುಗಳನ್ನು ಹುಡುಕುವುದು, ಸರಣಿಗೆ ಸಂಬಂಧಿಸದ ಅಕ್ಷರ ಅಥವಾ ಸಂಖ್ಯೆಯನ್ನು ತೆಗೆಯುವುದು, ವೆನ್ ಚಿತ್ರಗಳು, ಚಿಹ್ನೆಗಳು ಮತ್ತು ಸಂಖ್ಯೆಗಳ ಸಾಮಾನ್ಯ ಹೋಲಿಕೆ, ವರ್ಗೀಕರಣ, ಸರಣಿ ಪೂರ್ಣಗೊಳಿಸುವುದು, ಕೋಡಿಂಗ್ ಮತ್ತು ಡಿ-ಕೋಡಿಂಗ್, ತಾಳೆ ನೋಡುವುದು, ದಿಕ್ಕು, ರಕ್ತ ಸಂಬಂಧ, ತರ್ಕ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಪ್ರಶ್ನೆಗಳಿರುತ್ತವೆ.

ಐಚ್ಛಿಕ ವಿಷಯಗಳು
ಐಚ್ಛಿಕ ವಿಷಯಗಳು ಅಭ್ಯರ್ಥಿಯ ವಿಷಯದ ಪರಿಜ್ಞಾನ, ಅಧ್ಯಯನದ ಆಳ, ದೃಷ್ಟಿಕೋನ ಮತ್ತು ನಿಲುವುಗಳನ್ನು ಆಧರಿಸಿ ಅವರವರ ಭಾವಕ್ಕೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತರಿಸಿ ಯಶಸ್ಸುಗಳಿಸುವಂತೆ ರೂಪಿತವಾಗಿರುತ್ತವೆ.  ಮುಖ್ಯ ಪರೀಕ್ಷೆಗೆ ನಿಗದಿಗೊಳಿಸಿರುವ 25 ಐಚ್ಛಿಕ ವಿಷಯಗಳು ಹಾಗೂ 26 ಭಾಷಾ ಸಾಹಿತ್ಯ ವಿಷಯಗಳು ಅಂದರೆ ಒಟ್ಟು 51 ಐಚ್ಛಿಕ ವಿಷಯಗಳಲ್ಲಿ ಕೇವಲ ಎರಡನ್ನು ಮಾತ್ರ ಆಯ್ದುಕೊಳ್ಳಬೇಕು.

ಐಚ್ಛಿಕ ವಿಷಯಗಳ ಪಟ್ಟಿ ಹೀಗಿದೆ:
ಕೃಷಿ -ಪಶುಸಂಗೋಪನೆ ಮತ್ತು ಪಶುವಿಜ್ಞಾನ, ಮಾನವಶಾಸ್ತ್ರ,  ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಸಿವಿಲ್ ಇಂಜಿನಿಯರಿಂಗ್, ವಾಣಿಜ್ಯಶಾಸ್ತ್ರ (ಕಾಮರ್ಸ್), ಅರ್ಥಶಾಸ್ತ್ರ, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಭೂಗೋಳ, ಭೂಗರ್ಭಶಾಸ್ತ್ರ, ಭಾರತೀಯ ಇತಿಹಾಸ, ಕಾನೂನು,
 
ನಿರ್ವಹಣೆ (ಮ್ಯೋನೇಜ್‌ಮೆಂಟ್), ಗಣಿತಶಾಸ್ತ್ರ, ಮೆಕ್ಯಾನಿಕಲ್ ಇಂಜಿನಿಯರಿಂಗ್, ವೈದ್ಯ ವಿಜ್ಞಾನ, ತತ್ವಶಾಸ್ತ್ರ (ಫಿಲಾಸಫಿ), ಭೌತಶಾಸ್ತ್ರ, ಮನಃಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಸ್ಟ್ಯಾಟಿಸ್ಟಿಕ್ಸ್, ಪ್ರಾಣಿಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಇವುಗಳ ಜೊತೆಗೆ ಇಲ್ಲಿ ನೀಡಿರುವ 26 ಭಾಷೆಗಳಲ್ಲಿ  ಒಂದನ್ನು ಮಾತ್ರ ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಬಹುದು.

ಕನ್ನಡ, ಅಸ್ಸಾಮಿ, ಕಾಶ್ಮೀರಿ, ಪಂಜಾಬಿ, ಬಂಗಾಳೀ, ಕೊಂಕಣಿ, ಮರಾಠಿ, ಸಂಸ್ಕೃತ, ಮಲಯಾಳಂ, ಸಿಂಧಿ, ಮಣಿಪುರಿ, ತಮಿಳು, ತೆಲುಗು, ಗುಜರಾತಿ, ಒಡಿಯಾ, ಉರ್ದು, ಹಿಂದಿ, ಪಾಳಿ, ಅರೇಬಿಕ್, ಪರ್ಶಿಯನ್, ಇಂಗ್ಲಿಷ್, ಫ್ರೆಂಚ್, ರಷ್ಯನ್, ಚೀನೀ,  ಜರ್ಮನ್, ನೇಪಾಳೀ . 

ವ್ಯಕ್ತಿತ್ವ ಪರೀಕ್ಷೆ  
ಆಯೋಗವು ನಿಯಮಾನುಸಾರ ನಡೆಸುವ ಮುಖ್ಯ ಪರೀಕ್ಷೆಯಲ್ಲಿ  ಗಳಿಸಿದ ಅಂಕಗಳ ಜೇಷ್ಠತೆ ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ಮೀಸಲಾತಿ ಅನ್ವಯ ಪ್ರಕಟಿಸಲಾದ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1 : 3 ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ / ಸಂದರ್ಶನಕ್ಕೆ ಪರಿಗಣಿಸಲಾಗುವುದು.

ಸಂದರ್ಶನಗಳಲ್ಲಿ ಆಯಾ ಸಂದರ್ಭ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳುವುದು ರೂಢಿ. ಪ್ರಶ್ನೆಗಳನ್ನು ಕೇಳುವಾಗ ಈ ಕೆಳಕಂಡ ಆಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿರುತ್ತದೆ :

* ವೈಯಕ್ತಿಕ / ಕೌಟುಂಬಿಕ ಹಿನ್ನೆಲೆ

* ದೈಹಿಕ ಸಾಮರ್ಥ್ಯ/ಆರೋಗ್ಯ, ಬಲ, ದೇಹದಾರ್ಢ್ಯ, ಅಂಗಸೌಷ್ಟವ, ನಡವಳಿಕೆ

* ಸಾಧನೆ - ೆಸಾಂಸ್ಕೃತಿಕ - ಸಾಹಿತ್ಯಕ ಇತ್ಯಾದಿ

* ಸಾಮಾನ್ಯ ಜ್ಞಾನ - ಸಮಸ್ಯಾ ನಿರ್ವಹಣಾ ಕೌಶಲ - ಬೌದ್ಧಿಕ ಸಾಮರ್ಥ್ಯ

* ಮನೋಭಾವ (ಆಟಿಟ್ಯೂಡ್) ಸಾಮರ್ಥ್ಯ/ಯೋಗ್ಯತೆ (ಆಪ್ಟಿಟ್ಯೂಡ್) 

*ಆಸಕ್ತಿಗಳು - ಹವ್ಯಾಸಗಳು - ಸಾಮಾಜಿಕ ಸಂಪರ್ಕ - ಸ್ವಭಾವ - ಮನೋವೃತ್ತಿ - ವ್ಯಕ್ತಿತ್ವ 

*ವಿಶ್ವಾಸಾರ್ಹತೆ - ಜವಾಬ್ದಾರಿಯ ನಡವಳಿಕೆ - ಸ್ವಯಂ ಸ್ಫೂರ್ತಿ - ಸ್ವಸಾಮರ್ಥ್ಯ

*ಜೀವನದಲ್ಲಿ ಹೆಮ್ಮೆಪಡುವ ಸಂಗತಿ - ಇಷ್ಟಪಡುವ ವ್ಯಕ್ತಿ- ಕ್ರೀಡೆ -ಕ್ಷೇತ್ರ  

* ಪ್ರಚಲಿತ ವಿದ್ಯಮಾನ

*ದೇಶದ ಮೂಲಭೂತ ಔದ್ಯೋಗಿಕ ಸಂಸ್ಥೆಗಳ ಕುರಿತು - ಸರ್ಕಾರದ ನೀತಿಗಳು ಮತ್ತು ಔದ್ಯೋಗಿಕ ರಂಗದ ಮೇಲೆ ಅವುಗಳ ಪರಿಣಾಮ - ವೃತ್ತಿಪರ ತರಬೇತಿ - ಸಾಮರ್ಥ್ಯ ಮತ್ತು ಬಲಹೀನತೆ

* ಭಾರತ - ಇಂದು - ನಿನ್ನೆ - ನಾಳೆ - ನೆರೆಹೊರೆ ದೇಶಗಳೊಡನೆ ಇರುವ ಸಂಬಂಧ ಇತ್ಯಾದಿ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳನ್ನು ಸಂಪರ್ಕಿಸಿರಿ:
http://upsc.gov.in
 http://www.upscportal.com
 http://civilserviceindia.com
 www.employmentnews.gov.in
 www.yojana.gov.in
 www.upscportal.com
 www.iaspapers.info 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT