ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿ ವಿರುದ್ಧ ಕೊಲೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ

Last Updated 25 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ತಾವು ಹೇಳಿದ ಕೆಲಸ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ತಹಶೀಲ್ದಾರರೊಬ್ಬರನ್ನು ಕೊಲೆ ಮಾಡಿಸಿರುವ ಆರೋಪ ಹೊತ್ತ ಬೆಂಗಳೂರು ನಗರ ಜಿಲ್ಲೆಯ ಅಂದಿನ ವಿಶೇಷ ಜಿಲ್ಲಾಧಿಕಾರಿ (ತುಮಕೂರಿನ ಹಾಲಿ ಜಿಲ್ಲಾಧಿಕಾರಿ) ಡಾ. ಸಿ.ಸೋಮಶೇಖರ ಹಾಗೂ ಇತರರ ವಿರುದ್ಧದ ವಿಚಾರಣೆಯನ್ನು ಸಿಐಡಿಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.

2000ನೇ ಸಾಲಿನಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಸೋಮಶೇಖರ, ಪೌರಾಡಳಿತ ನಿರ್ದೇಶನಾಲಯದ ಉಪ ನಿರ್ದೇಶಕರಾಗಿದ್ದ ಕೆ.ವಿ.ವೆಂಕಟೇಶಯ್ಯ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುಮಾಸ್ತರಾಗಿರುವ ಎಲ್.ಸಿ.ವೀರೇಶ್ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ತಿರಸ್ಕರಿಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಕೊಲೆಯಾದ ಎಸ್.ಎನ್.ರಾಮೇಗೌಡ ಅವರ ಪುತ್ರ ಕೋಲಾರ ನಗರಸಭೆಯ ಉಪಾಧ್ಯಕ್ಷರಾಗಿರುವ ಎಸ್.ಆರ್.ಮುರಳಿಗೌಡ ಅವರು ಇವರೆಲ್ಲರ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯಪೀಠ ತನಿಖೆಗೆ ಆದೇಶಿಸಿತ್ತು. ಇದನ್ನು ಆರೋಪಿಗಳು 2003ರಲ್ಲಿ ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿದ್ದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಮೇಲ್ಮನವಿ ಸಲ್ಲಿಸಿ ಎಂಟು ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.

ಪ್ರಕರಣದ ವಿವರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ರೂಪೇನ ಅಗ್ರಹಾರದ ಬಳಿ ವೆಂಕೋಜಿ ರಾವ್ ಎನ್ನುವವರಿಗೆ ಸೇರಿದ್ದ ಜಮೀನನ್ನು ಅವರು ‘ಶಿಕ್ಷಕರ ಸಂಘ’ ಹಾಗೂ ಗರ್ಗ್ ಎನ್ನುವವರಿಗೆ ಮಾರಾಟ ಮಾಡಿದ್ದರು. ಗರ್ಗ್ ಅವರಿಗೆ ಜಮೀನು ನೀಡಿದ್ದನ್ನು ಪ್ರಶ್ನಿಸಿ ಸಂಘವು ಹೈಕೋರ್ಟ್ ಮೊರೆ ಹೋಗಿ, ತಡೆಯಾಜ್ಞೆ ಪಡೆದುಕೊಂಡಿತ್ತು.

ಸೋಮಶೇಖರ ಅವರ ಒತ್ತಾಯದ ಹೊರತಾಗಿಯೂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗರ್ಗ್ ಅವರ ಹೆಸರಿಗೆ ಖಾತಾ ಮಾಡಿಕೊಡಲು ತಮ್ಮ ತಂದೆ ನಿರಾಕರಿಸಿದರು. ಇದರಿಂದಾಗಿ ಕೊಲೆ ಮಾಡಿಸಲಾಗಿದೆ. ಆದರೆ ಇದನ್ನು ಮುಚ್ಚಿಹಾಕಿದ ಪೊಲೀಸರು ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ‘ಬಿ ರಿಪೋರ್ಟ್’ ಹಾಕಿದ್ದಾರೆ ಎಂದು ಮುರಳಿಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ.

ಆಸಿಡ್ ದಾಳಿ: ಜೀವಾವಧಿ ಶಿಕ್ಷೆ
ಪ್ರೀತಿಸಲು ನಿರಾಕರಿಸಿದ 16 ವರ್ಷದ ಬಾಲಕಿ (ಈಗ 25 ವರ್ಷ) ಶ್ರುತಿ ಮೇಲೆ ಆಸಿಡ್ ಎರಚಿ ಆಕೆಯನ್ನು ವಿರೂಪಗೊಳಿಸಿದ ಪಾತಕಿ ನಗರದ ರಾಜೇಶ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಈತನಿಗೆ ಸೆಷನ್ಸ್ ಕೋರ್ಟ್ ಆರು ವರ್ಷಗಳ ಶಿಕ್ಷೆ ವಿಧಿಸಿತ್ತು (2008ರಲ್ಲಿ ಶಿಕ್ಷೆಯ ಅವಧಿಯೂ ಮುಗಿದು ಬಿಡುಗಡೆಗೊಂಡಿದ್ದಾನೆ). ಶಿಕ್ಷೆ ಹೆಚ್ಚಳಕ್ಕೆ ಕೋರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಹಾಗೂ ಕೆ.ಎನ್.ಕೇಶವ ನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಾನ್ಯ ಮಾಡಿದೆ. ಇದರ ಜೊತೆಗೆ ದಾಳಿಗೆ ಒಳಗಾದ ಶ್ರುತಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪೀಠ ನಿರ್ದೇಶಿಸಿದೆ.

2002ನೇ ಸಾಲಿನ ಆಗಸ್ಟ್‌ನಲ್ಲಿ ಈ ಘಟನೆ ನಡೆದಿತ್ತು. ಆಗ ಶ್ರುತಿ ನಗರದ ಕಾಲೇಜೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. 18ರ ವರ್ಷ ವಯಸ್ಸಿನವನಾಗಿದ್ದ ರಾಜೇಶ್ ಕೆಲಸವೂ ಇಲ್ಲದೇ, ಕಾಲೇಜಿಗೂ ಹೋಗದೇ ಸುಮ್ಮನೆ ಓಡಾಡಿಕೊಂಡು ಇದ್ದ.

ಶ್ರುತಿಯನ್ನು ಶಾಲೆಯ ಬಳಿ ನೋಡಿದ್ದ ಆತ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ. ಆಕೆ ನಿರಾಕರಿಸಿದ್ದಕ್ಕೆ ಆಸಿಡ್ ಎರಚಿದ್ದ. ಆಕೆಯ ದೇಹ ಸಂಪೂರ್ಣ ವಿರೂಪಗೊಂಡಿದೆ. ಪ್ಲಾಸ್ಟಿಕ್ ಸರ್ಜರಿ ಮಾಡುವುದೂ ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ 2005ರ ಏ.12ರಂದು ಸೆಷನ್ಸ್ ಕೋರ್ಟ್ ನೀಡಿರುವ ಆರು ವರ್ಷಗಳ ಶಿಕ್ಷೆ ಬಹಳ ಕಡಿಮೆಯಾಗಿದೆ ಎಂದು ಸರ್ಕಾರ ಮೇಲ್ಮನವಿಯಲ್ಲಿ ತಿಳಿಸಿತ್ತು.

ರಾಜೇಶ್‌ಗೆ ಕೆಲಸವಿಲ್ಲ. ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಆತನ ಪರ ವಕೀಲರು ಮಾಡಿಕೊಂಡ ಮನವಿಯನ್ನು ಪೀಠ ತಿರಸ್ಕರಿಸಿದೆ.ಆಸಿಡ್ ದಾಳಿ ನಡೆಸಿದ ಪಾತಕಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿರುವುದು ಇದು ಎರಡನೆಯ ಪ್ರಕರಣವಾಗಿದೆ.

1999ರಲ್ಲಿ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹಸೀನಾ ಎಂಬ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ್ದ ಜೋಸೆಫ್ ರೋಡ್ರಿಗಸ್ ಎಂಬಾತನಿಗೆ ಇದೇ ಶಿಕ್ಷೆ ವಿಧಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT