ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಜಾಮೀನು ರದ್ದು

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಓಬಳಾಪುರಂ ಮೈನಿಂಗ್ ಕಂಪೆನಿಗೆ (ಒಎಂಸಿ) ನೆರವಾದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನನ್ನು ಆಂಧ್ರ ಪ್ರದೇಶ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ. ಜನವರಿ 6ರ ಒಳಗಾಗಿ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಶರಣಾಗುವಂತೆ ಕೋರ್ಟ್ ಇದೇ ವೇಳೆ ಅವರಿಗೆ ಆದೇಶಿಸಿದೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪದ ಮೇಲೆ ಶ್ರೀಲಕ್ಷ್ಮಿ  ಅವರನ್ನು ಸಿಬಿಐ ಬಂಧಿಸಿತ್ತು. ಬಂಧನದ ಮೂರು ದಿನಗಳ ನಂತರ ಡಿ. 2ರಂದು ಸಿಬಿಐ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ತನಿಖಾ ಸಂಸ್ಥೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆರೋಪಿ ಐಎಎಸ್ ಅಧಿಕಾರಿಯಾಗಿದ್ದು ಅವರ ಪತಿ ಐಪಿಎಸ್ ಅಧಿಕಾರಿ. ಹೀಗಾಗಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು ಪ್ರಮುಖ ಆರೋಪಿಗಳು ಜೈಲಿನಲ್ಲಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಕೋರಿತ್ತು.

ತನಿಖಾ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಅಧಿಕಾರ ದುರುಪಯೋಗಪಡಿಸಿಕೊಂಡ ಶ್ರೀಲಕ್ಷ್ಮಿ ಅವರಿಗೆ ಜಾಮೀನು ಪಡೆಯುವ ಯೋಗ್ಯತೆ ಇಲ್ಲ, ಅವರಿಗೆ ಜಾಮೀನು ನೀಡಿದ್ದು ತಪ್ಪು ಎಂದು ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ನ ಇಂದಿನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿರುವ ಶ್ರೀಲಕ್ಷ್ಮಿ ಪರ ವಕೀಲರು, ತಮ್ಮ ಕಕ್ಷಿದಾರರು ಎರಡು ಮಕ್ಕಳ ತಾಯಿಯಾಗಿದ್ದು, ದೇಶ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಅದಕ್ಕೂ ಮೇಲಾಗಿ ದೇಶದ ಕಾನೂನಿಗೆ ಬದ್ಧರಾಗಿರುವ ಜವಾಬ್ದಾರಿಯುಳ್ಳ ನಾಗರಿಕರಾದ ಅವರಿಗೆ ಜಾಮೀನು ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT