ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್: ವಿಷಯಾವಾರು ಅಧ್ಯಯನ ಸಿದ್ಧತೆ ಹೇಗೆ?

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಐಎಎಸ್ ಪರೀಕ್ಷೆಗೆ ಸಮರ್ಥ ಸಿದ್ಧತೆಗೆ 3-4 ವರ್ಷಗಳ ಕಾಲಾವಧಿ  ಅನಿವಾರ್ಯ ಎನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಒಟ್ಟು 18 ವಿಷಯಗಳಲ್ಲಿ ಮುಖ್ಯ ಅಥವಾ ಮೊದಲನೇ ಪ್ರಾಶಸ್ತ್ಯದ ವಿಷಯಗಳಿಗೆ  ಮೂರು ತಿಂಗಳು ಮತ್ತು ಎರಡನೇ ಹಂತದ ವಿಷಯ ವಸ್ತುಗಳಿಗೆ  ಎರಡು ತಿಂಗಳು ಎಂದು ಬಹಳ ಸ್ಪಷ್ಟವಾಗಿ ನಿಗದಿಪಡಿಸಿಕೊಳ್ಳಬೇಕು. ಆದರೆ ಇಷ್ಟು ಮಾತ್ರಕ್ಕೆ ನಮ್ಮ ಅಧ್ಯಯನ ಪರಿಪೂರ್ಣವಾಗುವುದಿಲ್ಲ. ನಾವೇ ನಿಗದಿ ಮಾಡಿಕೊಂಡಿರುವ ಮೂರು ತಿಂಗಳ ಸಮಯದಲ್ಲಿ ಒಂದು ಮುಖ್ಯ ವಿಷಯ ವಸ್ತುವಿನ, ಮೂಲದಿಂದ ಅಂತ್ಯದವರೆಗೂ ಅಧ್ಯಯನ ಕೈಗೊಳ್ಳಲು ಸಾಧ್ಯವೇ?ಎಂಬ ಯಕ್ಷ ಪ್ರಶ್ನೆ  ಎದ್ದೇಳುತ್ತದೆ. ಈ ಪ್ರಶ್ನೆಗೆ ಉತ್ತರ ಮತ್ತು ಪರಿಹಾರ ಕಂಡುಕೊಳ್ಳುವುದು ಉಚಿತ.

ಆಂತರಿಕ ಪ್ರಾತಿನಿಧ್ಯತೆ?

ನಮ್ಮದೇ ವಿಂಗಡಣೆಯ ಅನ್ವಯ ಅರ್ಥಶಾಸ್ತ್ರ ಎಂಬ ವಿಷಯ ವಸ್ತು ಮೊದಲನೆ ಹಂತದಲ್ಲಿ ನಿಲ್ಲುವಂತದ್ದು. ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳು. ಪ್ರಾದೇಶಿಕ ಅರ್ಥಶಾಸ್ತ್ರದ ಆಯಾಮಗಳು, ಭಾರತದ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಆರ್ಥಿಕ ನೆಲೆಗಟ್ಟನ್ನು ವ್ಯಾಪಿಸಿರುತ್ತವೆ. ವ್ಯಾಪ್ತಿ ಇಷ್ಟೊಂದು ವಿಶಾಲವಾಗಿರುವಾಗ ಕೇವಲ ಮೂರು ತಿಂಗಳ ಅವಧಿಯಲ್ಲಿ ಪರಿಪೂರ್ಣ ಅಧ್ಯಯನ ಹೇಗೆ ಸಾಧ್ಯ? ಒಂದು ವೇಳೆ ಮೂರು ತಿಂಗಳ ಬದಲು ಆರು ತಿಂಗಳು ಅಭ್ಯಾಸಮಾಡಿ ಕ್ರಮಬದ್ಧತೆ ಗಳಿಸಿಕೊಳ್ಳಬಹುದಲ್ಲವೆ? ಎಂಬ ಮತ್ತೊಂದು ಆಲೋಚನೆ ನಿಮ್ಮನ್ನು ಸ್ಪರ್ಶಿಸಬಹುದು. ಆದರೆ ಅದು ಅತ್ಯಂತ ಅಪಾಯಕಾರಿ ಮತ್ತು ಕಷ್ಟಸಾಧ್ಯ. ಕಾರಣವಿಷ್ಟೆ.  ಈ ಸಂದರ್ಭ ಅಧ್ಯಯನ ಅವಧಿ 7-8 ವರ್ಷಗಳವರೆಗೆ ವ್ಯಾಪಿಸಿ ಬಿಡುತ್ತದೆ. ಬಹುತೇಕರಿಗೆ ಆರ್ಥಿಕ ಸ್ಥಿರತೆ ಇರದ ಕಾರಣ ಇಷ್ಟು ಕಾಲದವರೆಗೆ ಸುಸಂಬದ್ಧ ಅಧ್ಯಯನ ಕೈಗೊಳ್ಳಲು ಸಾಧ್ಯವಿಲ್ಲ ಮತ್ತು ಆರ್ಥಿಕವಾಗಿ ಪ್ರಬಲವಾಗಿದ್ದರೂ ಅಷ್ಟು ದೀರ್ಘಾವಧಿಯವರೆಗೆ ಉತ್ಸಾಹ ಕಾಯ್ದಿರುಸುವುದು ಸುಲಭಸಾಧ್ಯವಲ್ಲ. 

ಮಾರ್ಗೋಪಾಯ

ಇಂತಹ ಸಂದರ್ಭ ನಾವು ಮತ್ತಷ್ಟು ತೀಕ್ಷ್ಣರಾಗಬೇಕಾಗುತ್ತದೆ. ಉದಾ: ಭಾರತ ಸಂವಿಧಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳೋಣ. ನಮಗೆ ಇರುವ ಕಾಲಾವಧಿ ಮೂರು ತಿಂಗಳು.  ಮೊದಲಿಗೆ ಯುಪಿಎಸ್‌ಸಿ ಸಿಲಬಸ್‌ನ ಪ್ರಕಾರ ಕೇವಲ 21 ವಿಷಯಗಳನ್ನು ಮಾತ್ರ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಅಧ್ಯಯನ ಮಾಡಬೇಕಿದೆ. ಅಲ್ಲಿಗೆ ನಾವು 21 ವಿಷಯಗಳನ್ನು ಹೊರತು ಪಡಿಸಿದ ಅಭ್ಯಾಸಕ್ಕೆ ಕಡಿವಾಣ ಹಾಕಬೇಕು. 2002ರಿಂದ 2010 ರವರೆಗಿನ ಯುಪಿಎಸ್‌ಸಿ ಪ್ರಾಥಮಿಕ ಪರೀಕ್ಷೆಯಲ್ಲಿ ಭಾರತ ಸಂವಿಧಾನದ 21 ವಿಷಯಗಳ ವಿಂಗಡಣೆ ಸಹಿತ ರಚಿತವಾದ ಪ್ರಶ್ನೆಗಳು ಈ ಪಟ್ಟಿ ನಮಗೆ ಒಂದು ಸ್ಪಷ್ಟ ಸಂದೇಶ ರವಾನಿಸುತ್ತದೆ. ಅದು ಈವರೆಗಿನ ಪರೀಕ್ಷೆಗಳಲ್ಲಿ ಯಾವ ಯಾವ ಭಾಗಕ್ಕೆ ಎಷ್ಟು ಪ್ರಾಶಸ್ತ್ಯ ನೀಡಲಾಗಿದೆ ಎಂಬುದು. ಅಂದರೆ 8-9 ಪ್ರಶ್ನೆಗಳು ರಚಿತವಾಗಿರುವ ರಾಷ್ಟ್ರಪತಿ ವಿಷಯಕ್ಕೆ ಎಷ್ಟು ಒತ್ತು ನೀಡಬೇಕು, ಪ್ರಶ್ನೆಯೇ ರಚಿತವಾಗದ ರಾಜಕೀಯ ಪಕ್ಷಗಳ ವಿಷಯಕ್ಕೆ ಎಷ್ಟು ಅವಧಿಯ ಅಧ್ಯಯನ ಮೀಸಲಿಡಬೇಕೆಂಬುದನ್ನು ಸೂಕ್ಷ್ಮವಾಗಿ ನಿರ್ಧರಿಸಿಕೊಳ್ಳಬೇಕಾಗುತ್ತದೆ.

ನಿರ್ಲಕ್ಷ್ಯ ಸಲ್ಲದು

ಒಂದು ಪ್ರಶ್ನೆಯೂ ಬಾರದ  ರಾಜಕೀಯ ಪಕ್ಷಗಳ  ಭಾಗವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಒಂದೊಮ್ಮೆ ಈ ಬಾರಿ ಪ್ರಶ್ನೆ ರಚಿತವಾಗಲು ಸಾಧ್ಯವೇ ಇಲ್ಲವೆಂದು ನಿರ್ಧಾರ ಮಾಡಲು ಯಾವುದೇ ಆಧಾರವಿರುವುದಿಲ್ಲ. ಆದರೆ ಹಿಂದಿನ ಪ್ರಶ್ನೆ ಪತ್ರಿಕೆಗಳ ಆಧಾರದ ಮೇಲೆ ತಯಾರಿಸಿಕೊಂಡಿರುವ ಪಟ್ಟಿಯನ್ವಯ, ನಾವು ಒಂದು ನಿಗದಿತ ಅವಧಿಯನ್ನು ಆ ಭಾಗಕ್ಕೂ ಮೀಸಲಿಡುವುದು ಉಚಿತ. ಇನ್ನು ಕೇವಲ ಒಂದು ಪ್ರಶ್ನೆ ರಚಿತವಾಗಿರುವ  ಪ್ರಸ್ತಾವನೆಯ  ವಿಷಯಕ್ಕೆ ಬಂದಾಗ ಸ್ವಲ್ಪ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಇದಕ್ಕೆ ಅತ್ಯಂತ ತಳಸ್ಥರದ ಅವಧಿ ಮೀಸಲಿಡುವುದು ಒಳಿತಲ್ಲ. ಅಥವಾ  ರಾಷ್ಟ್ರಪತಿ ,  ಸಂಸತ್ತಿನ ನ ಭಾಗಕ್ಕೆ ಕೊಟ್ಟಷ್ಟು ಪ್ರಾತಿನಿಧ್ಯತೆ ಕೊಡುವುದು ಔಚಿತ್ಯವಲ್ಲ. ಏಕೆಂದರೆ ಹೆಚ್ಚೆಂದರೆ 1 ಇರುವ ಪ್ರಶ್ನೆ 2 ಆಗಬಹುದೇ ಹೊರತು, 8-10 ಆಗಲು ಖಂಡಿತ ಅವಕಾಶವಿಲ್ಲ. ಆದ್ದರಿಂದ ಸ್ವಲ್ಪ ಪ್ರೌಢಿಮೆ ಮೆರೆದರೆ, ಮೇಲ್ಕಂಡ ರೀತಿಯ ಸೂಕ್ಷ್ಮ ಪ್ರಾತಿನಿಧ್ಯತೆಯಿಂದ,  `ಪರೀಕ್ಷಾಭಾರತ ಸಂವಿಧಾನ~ವನ್ನು ಕೇವಲ 3 ತಿಂಗಳಲ್ಲಿ ಅವಶ್ಯಕತೆಗನುಗುಣವಾಗಿ ಅಧ್ಯಯನ ಮಾಡಬಹುದು. ಪ್ರತಿ ವಿಷಯಕ್ಕೆ ಇದೇ ರೀತಿ ಆಂತರಿಕ ವಿಂಗಡಣೆಯ ಪ್ರಾತಿನಿಧ್ಯತೆ ಕಂಡುಕೊಳ್ಳುವುದು ಪರೀಕ್ಷಾ ಯಶಸ್ಸಿನ ಗುಟ್ಟು.

ಬಹುಆಯ್ಕೆ ಪ್ರಶ್ನೆ ಮಾದರಿ
  
ಸಾಕಷ್ಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯೆಂದರೆ, ಅದು  ಬಹು ಆಯ್ಕೆ ಪ್ರಶ್ನೆ (ಆಬ್‌ಜೆಕ್ಟಿವ್) ಮಾದರಿಯ ಅಧ್ಯಯನವೇ ಎಂದು ಬಿಂಬಿಸಹೊರಡುತ್ತಾರೆ.  ಇವರು ಪರೀಕ್ಷೆಯನ್ನು ಹಗುರವಾಗಿ ತೆಗೆದುಕೊಳ್ಳುವ ವರ್ಗ. ಆದರೆ ವಿಪರ್ಯಾಸವೆಂದರೆ ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡ ಅದೆಷ್ಟೋ ವಿದ್ಯಾರ್ಥಿಗಳು ಕೂಡ, ಇಂತಹ ಅಂಧತ್ವದಿಂದಲೇ ತಮ್ಮ ಭವಿಷ್ಯವನ್ನು ಹಾಳುಗೆಡವಿಕೊಂಡಿರುವುದು ದುರಾದೃಷ್ಟಕರ. ಬಹುತೇಕರ ಮನಸ್ಸಿನಲ್ಲಿ, ಒಂದು ಪ್ರಶ್ನೆ ಕೇಳಲಾಗಿರುತ್ತದೆ. ಅದಕ್ಕೆ ನಾಲ್ಕು ಉತ್ತರಗಳನ್ನು ಅಲ್ಲಿಯೇ ನೀಡಿರುವುದರಿಂದ, ನಾವು ಅದೇ ಮಾದರಿಯ ಮ್ಯೋಗ್‌ಜಿನ್‌ಗಳ ಅಧ್ಯಯನ ಕೈಗೊಳ್ಳುವುದು ಸೂಕ್ತವೆಂಬ ನಿರ್ಧಾರ ಮಾಡಿಕೊಳ್ಳುತ್ತಾರೆ. ಮತ್ತಷ್ಟು ಗಂಭೀರ ಅಭ್ಯರ್ಥಿಗಳು ಕೂಡ ಮುಖ್ಯ ಪರೀಕ್ಷೆಯಲ್ಲಿ ಪ್ರಬಂಧ ಮಾದರಿ ಪ್ರಶ್ನೆಗಳಿರುವುದರಿಂದ, ಅಲ್ಲಿ ಮಾತ್ರ ಥಿಯರಿ ಅಧ್ಯಯನ ಬೇಕು. ಪ್ರಾಥಮಿಕ ಪರೀಕ್ಷೆಯಲ್ಲಿ ಅದರ ಅವಶ್ಯಕತೆ ಇಲ್ಲ ಎಂಬ ಭ್ರಮೆಯಲ್ಲಿರುತ್ತಾರೆ. ಬಹುತೇಕ ಮಂದಿ ಉತ್ತೀರ್ಣವಾಗದಿರಲು  ಈ ಅಂಶವೇ ಕಾರಣ ಎಂದರೆ ಉತ್ಪ್ರೇಕ್ಷೆಯಾಗಲಾರದು.
 ಸ್ಪರ್ಧಾತ್ಮಕ ಪರೀಕ್ಷೆಯ ಪ್ರಾರಂಭಿಕ ಕಾಲಘಟ್ಟದಲ್ಲಿ ಈ ರೀತಿಯ ನಂಬಿಕೆ ಸ್ವೀಕಾರಾರ್ಹವಾಗಿತ್ತು. ಅಂದಿನ ಕಾಲಕ್ಕೆ ನೇರ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಉದಾ:  ವಿಧಾನ ಪರಿಷತ್‌ನ ರದ್ಧತಿ ಕೆಳಗಿನ ಯಾವ ತಿದ್ದುಪಡಿಯನ್ವಯ ಮಾಡಬಹುದು ಎಂದು ಪ್ರಶ್ನೆ ಕೇಳಲಾಗುತ್ತಿತ್ತು.  ಯಾವ ಅಭ್ಯರ್ಥಿಗಳಿಗೆ  ಅದು ಸಾಮಾನ್ಯ ತಿದ್ದುಪಡಿಯಡಿಯಲ್ಲಿ ಬರುತ್ತದೆ ಎಂಬುದು ತಿಳಿದಿರುತ್ತಿತ್ತೋ ಅವರು ನೇರವಾಗಿ ಉತ್ತರಿಸಿ ಅಂಕಗಳಿಸಬಹುದಿತ್ತು. ಆದರೆ ಪ್ರಸ್ತುತ ಪರೀಕ್ಷಾ ಆಯಾಮ ಮತ್ತು ವ್ಯಾಪ್ತಿ ಬದಲಾವಣೆ ಕಂಡುಕೊಂಡಿದೆ. ಹೊಸ ಮಾದರಿಯ ಪರೀಕ್ಷೆಗಳಲ್ಲಿ ಇಂತಹ ನೇರ ಪ್ರಶ್ನೆಗಳನ್ನು ನಿರೀಕ್ಷೆ ಮಾಡುವುದು ಮೂರ್ಖತನದ ಪರಮಾವಧಿಯಾಗಿಬಿಡುತ್ತದೆ.

ನವಮಾದರಿ ಪ್ರಶ್ನೆಗಳು

ಐಎಎಸ್‌ನಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಯೇ ಅತ್ಯಂತ ಪ್ರಮುಖ ಘಟ್ಟ. ಮುಖ್ಯ ಪರೀಕ್ಷೆಯಲ್ಲಿ ಒಂದು ಹುದ್ದೆಗೆ ಕೇವಲ 12 ಜನ ಹೆಚ್ಚುವರಿ ಅಭ್ಯರ್ಥಿಗಳ ಜೊತೆ ಪೈಪೋಟಿ ನಡೆಸಬೇಕಾಗುತ್ತೆ. ಆದರೆ ಪ್ರಾಥಮಿಕ ಹಂತದಲ್ಲಿ 7-8 ಲಕ್ಷ ಅಭ್ಯರ್ಥಿಗಳಿರುವುದರಿಂದ ನಮ್ಮ ಯಶಸ್ಸಿನ ಸಿಂಹಪಾಲು ಇಲ್ಲಿಯೇ ನಿರ್ಧಾರವಾಗುವುದು.

ನೇರಪ್ರಶ್ನೆಗಳು ಮಾಯವಾಗಿ  ಥಿಯರಿ ಆಧಾರಿತ  ಪ್ರಶ್ನೆಗಳು ರಚಿತವಾಗುತ್ತವೆ. ಉದಾ : ಹಿಂದೆ ಕೇಳುತ್ತಿದ್ದ ವಿಧಾನ ಪರಿಷತ್‌ನ ಬಗೆಗಿನ ಪ್ರಶ್ನೆ ಈ ಕೆಳಗಿನಂತೆ ಕ್ಲಿಷ್ಟವಾಗಿ ರಚನೆಯಾಗುತ್ತದೆ. ಬಹುತೇಕ ಪ್ರಶ್ನೆಗಳು  `ಹೇಳಿಕೆ~  ಮತ್ತು `ಕಾರಣ~ - ಈ ರೀತಿ ರಚನೆಯಾಗುತ್ತವೆ.

ಹೇಳಿಕೆ - ಎ. ವಿಧಾನ ಪರಿಷತ್‌ನ ರದ್ಧತಿ ಸಾಮಾನ್ಯ ತಿದ್ದುಪಡಿಯಡಿಯಲ್ಲಿ ಬರುತ್ತದೆ.
ಕಾರಣ -ಬಿ. ಸಂವಿಧಾನದ 169ನೇ ವಿಧಿಯನ್ವಯ ಪರಿಷತ್‌ನ ರದ್ಧತಿ ಅಥವಾ ಸ್ಥಾಪನೆ ರಾಜ್ಯ ಶಾಸಕಾಂಗದ ವಿವೇಚನೆಗೆ ಬಿಡಲಾಗಿದೆ.

ಉತ್ತರಗಳು 

1.  ಎ ಮತ್ತು ಬಿ ಎರಡೂ ಸರಿ. ಆದರೆ ಎ ಗೆ ಬಿ ಸರಿಯಾದ ಕಾರಣವಲ್ಲ.

2. ಎ ಮಾತ್ರ ಸರಿ ಬಿ ತಪ್ಪು.

3. ಎ ಮತ್ತುಬಿ ಎರಡು ಸರಿ. ಮತ್ತು ಎ ಗೆ ಬಿ ಸರಿಯಾದ ಕಾರಣವಾಗಿದೆ.

4. ಎ ಮತ್ತು ಬಿ ಎರಡು ತಪ್ಪು.

ಪರಿಕ್ಷಾರ್ಥಿಗಳೇ ಈ ಹಿಂದಿನ ಪ್ರಶ್ನೆಗೆ ಉತ್ತರಿಸಲು ಕೇವಲ ಭಾರತ ಸಂವಿಧಾನದ ತಿದ್ದುಪಡಿಯ ಬಗೆಗೆ ಇರುವ, ಆಬ್ಜೆಕ್ಟಿವ್ ಮಾದರಿಯ ಅಧ್ಯಯನ ಸಕ್ರಮವಾಗುತ್ತಿತ್ತು. ಆದರೆ ಈ ಮೇಲಿನ ಪ್ರಶ್ನೆಗೆ ಉತ್ತರಿಸಬೇಕಾದರೆ, 1. ಭಾರತ ಸಂವಿಧಾನದ ರಾಜ್ಯ ಶಾಸಕಾಂಗಗಳ ರಚನೆ 2. ಅಧಿಕಾರ ಮತ್ತು ಕಾರ್ಯಗಳು 3. ಅವುಗಳ ಮಿತಿ 4. ಕೇಂದ್ರ ಸಂಸತ್ತಿನ ರಾಜ್ಯಪಟ್ಟಿಯಲ್ಲಿನ ಹಾಗೂ ಸಮವರ್ತಿ ಪಟ್ಟಿಯಲ್ಲಿನ ಅಧಿಕಾರ 5. ಸಾಮಾನ್ಯ ಮತ್ತು ವಿಶೇಷ ತಿದ್ದುಪಡಿಗಳ ವಿಶ್ಲೇಷಣಾ ಮಾದರಿಯ ಅಧ್ಯಯನ ಅತ್ಯಗತ್ಯವಾಗಿಬಿಡುತ್ತೆ. ಇಷ್ಟರ ಬಗೆಗಿನ ಪರಿಪೂರ್ಣ ಅಧ್ಯಯನದ ಹೊರತು, ಮೇಲಿನ ಪ್ರಶ್ನೆಗೆ ಉತ್ತರಿಸಲು ಸಾಧ್ಯವೆ ಇಲ್ಲವೆಂಬ ಸತ್ಯವನ್ನು ಮನಗಾಣಬೇಕಿದೆ. ಆದ್ದರಿಂದ ಪ್ರಾಥಮಿಕ ಪರೀಕ್ಷೆಗೆ ಕೂಡ ಪ್ರಬಂಧ ಮಾದರಿಯ ಅಧ್ಯಯನವೇ ಹೆಚ್ಚು ಪೂರಕ.

ಸ್ವಯಂ ಪರೀಕ್ಷೆಗಳ ಸಂರಚನೆ

ಸ್ಪರ್ಧಾತ್ಮಕ ಪರೀಕ್ಷೆಗಳ ಮೌಲ್ಯ ಹಿರಿದಾಗುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ವಿಸ್ತರಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆಯ ಸಂರಚನೆಯನ್ನು ವೈವಿಧ್ಯಮಯ ನೆಲೆಗಟ್ಟಿನೊಳಗೆ ಎಳೆದು ತರುವುದು ಅವಶ್ಯಕವಾಗಿದೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಪ್ರತಿ ಪರೀಕ್ಷೆಯಿಂದ, ಮತ್ತೊಂದು ಪರೀಕ್ಷೆಗೆ ಪ್ರಶ್ನೆ ಪತ್ರಿಕೆಯು ಅದಮ್ಯ ಕಾಠಿಣ್ಯತೆ ಪಡೆದುಕೊಳ್ಳುತ್ತಿರುವುದು ವಾಸ್ತವ. ಆದ್ದರಿಂದ ಅದರ ತೀವ್ರತೆಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆದ್ದರಿಂದ ಪ್ರತಿ ವಿಭಾಗದ, ಪ್ರತಿ ವಿಷಯದ ಹಿಂದಿನ ಪ್ರಶ್ನೆ ಪತ್ರಿಕೆಗಳ ಕಡ್ಡಾಯ ಅಧ್ಯಯನದ ನಂತರ, ಅದೇ ವಿಷಯಕ್ಕೆ ಸಂಬಂಧಪಟ್ಟ ತುಲನಾತ್ಮಕ ಪ್ರಶ್ನೆಗಳನ್ನು, ಸ್ವಯಂ ಪರೀಕ್ಷಾರ್ಥಿಗಳೇ ರಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಏಕೆಂದರೆ ನಾವು ಗಮನಿಸಬೇಕಾದ ಒಂದು ಅಂಶವೆಂದರೆ, ಪ್ರಶ್ನೆಪತ್ರಿಕೆ ಎಷ್ಟು ಕಾಠಿಣ್ಯತೆ ಪಡೆದುಕೊಳ್ಳುತ್ತಿದ್ದರೂ, ಸಿಲಬಸ್ ಹೊರತಾದ ಪ್ರಶ್ನೆಗಳನ್ನು ರಚನೆ ಮಾಡಲು ಕಮಿಟಿಯ ಸದಸ್ಯರಿಗೆ ಅವಕಾಶವಿಲ್ಲದಿರುವುದರಿಂದ, ಅವರು ಅದೇ ವಿಷಯವನ್ನು ಮತ್ತಷ್ಟು ವಿಮರ್ಶಾತ್ಮಕ ಮತ್ತು ತುಲನಾತ್ಮಕವಾಗಿ ನೋಡಬಯಸುತ್ತಾರೆ.

ಆದ್ದರಿಂದ ಪಠ್ಯವಂತೂ  ಅದೇ ಸ್ಥಿರವಾಗಿರುವಾಗ, ಪ್ರಬುದ್ಧ ಹಾಗೂ ಪ್ರಜ್ಞಾಪೂರ್ವಕ ಚಿಂತನೆಯಿಂದ, ಆ ವಿಷಯ ಕುರಿತು ಏನೆಲ್ಲ ಪ್ರಶ್ನೆಗಳನ್ನು ರಚಿಸಲು ಸಾಧ್ಯವೆಂದು ಅವಲೋಕಿಸುವುದು ಬುದ್ಧಿವಂತಿಕೆ. ಹೌದು. ಈ ಮೇಲ್ಕಂಡ ರೀತಿಯ ಅಧ್ಯಯನಕ್ಕೆ ಒಂದಷ್ಟು ವಿಸ್ತಾರವಾದ ಕಾಲದ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಇದು ಅನಿವಾರ್ಯ. ಈ ರೀತಿಯ ಅಧ್ಯಯನ ನಿಮ್ಮನ್ನು ಪರಿಪಕ್ವ, ಸದೃಢ ಹಾಗೂ ಸಮರ್ಥರಾಗಿಸುವುದು ವಾಸ್ತವ. ಅಂದ ಮೇಲೆ ಯಶಸ್ಸು ಕಟ್ಟಿಟ್ಟ ಬುತ್ತಿ. ಪರಿಶ್ರಮದೊಡನೆ ಕಂಡುಕೊಳ್ಳುವ ಯಶಸ್ಸು ಅಜರಾಮರವಾಗುತ್ತದೆ.

ಒಟ್ಟಾರೆ, ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ರಾಜಕೀಯ ವಲಯಕ್ಕೆ ಶಿಕ್ಷಣದ ಮಾನದಂಡ ನಿಗದಿ ಮಾಡದಿರುವುದರಿಂದ, ಅಧಿಕಾರಿವರ್ಗದ ಜವಾಬ್ದಾರಿಗಳು ಹೆಚ್ಚಿನ ಮಟ್ಟದಲ್ಲಿರುತ್ತವೆ. ಬಹುತೇಕ ಈ ರಾಷ್ಟ್ರದ ಭವಿಷ್ಯವನ್ನು ನಿಯೋಜಿತ ಶಾಸನಾಧಿಕಾರದ ಮುಖೇನ ಸುಸಂಬದ್ಧವಾಗಿಸುವಂತಹ ಹುದ್ದೆ ಹಿಡಿಯುವಾಗ ಮೇಲ್ಕಂಡ ರೀತಿಯ ಪರಿಶ್ರಮ ಬಹಳ ಮುಖ್ಯವೆನಿಸುತ್ತದೆ.

(ಲೇಖಕರು ರಾಜ್ಯಮಟ್ಟದ ತರಬೇತುದಾರರು ಹಾಗೂ  ಮುಖ್ಯಸ್ಥರು ರಾಜ್ಯಶಾಸ್ತ್ರ ವಿಭಾಗ ಸೋಮಾನಿ ಕಾಲೇಜು, ಮೈಸೂರು )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT