ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ನಲ್ಲಿ ಪಾಸು, ಕೆಎಎಸ್‌ನಲ್ಲಿ ನಪಾಸು!

Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ 677ನೇ ರ‍್ಯಾಂಕ್ ಪಡೆದು ಟೆಲಿಕಾಂ ಸೇವೆಗೆ ಆಯ್ಕೆಯಾದ ಅಭ್ಯರ್ಥಿಯೊಬ್ಬರು ಈ ಬಾರಿ ನಡೆದ ಕೆಪಿಎಸ್‌ಸಿ ಸಂದರ್ಶನದಲ್ಲಿ ನಪಾಸಾಗಿದ್ದಾರೆ!

ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಮಹಿಳೆಯರ ವಿಭಾಗದಲ್ಲಿ 3ನೇ ರ‍್ಯಾಂಕ್ ಪಡೆದಿದ್ದರೂ ಸಂದರ್ಶನದಲ್ಲಿ ದಕ್ಕಿದ್ದು ಕೇವಲ 100 ಅಂಕ. ಈ ಬಾರಿ ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ 3 ಉಪ ವಿಭಾಗಾಧಿಕಾರಿ ಹುದ್ದೆಗಳು ಮೀಸಲಾಗಿದ್ದವು. ರ‍್ಯಾಂಕ್ ಬಂದಿದ್ದರಿಂದ ಉಪ ವಿಭಾಗಾಧಿಕಾರಿ ಹುದ್ದೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದ ಅವರಿಗೆ ನಿರಾಸೆಯಾಗಿದೆ. ಮುಖ್ಯ ಪರೀಕ್ಷೆಯಲ್ಲಿ ಅವರಿಗಿಂತ ಕಡಿಮೆ ಅಂಕ ಪಡೆದವರು ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

2011ರ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ವಂದನಾ ಭಟ್ 1106.5, ಪ್ರಿಯದರ್ಶಿನಿ ಸಾಣಿಕೊಪ್ಪ 1083, ರಶ್ಮಿ ರಮೇಶ್ ದೊಡ್ಡಮನೆ 1082.5, ಕೌಸರ್ ರೇಷ್ಮಾ 1064.5, ಅನುರಾಧಾ ವಸ್ತ್ರದ 1055, ಕೀರ್ತನಾ ಎಚ್.ಎಸ್. 1051.5, ಶಿಲ್ಪ ನಾಗ್ ಸಿ.ಟಿ. 1049.5, ಕಲ್ಪಶ್ರೀ ಸಿ.ಆರ್. 1043.5, ರೋಹಿಣಿ ಸಿ.ಕೆ. 1038.5 ಅಂಕಗಳನ್ನು ಪಡೆದು ಮೊದಲ 9 ಸ್ಥಾನದಲ್ಲಿದ್ದರು. ಆದರೆ, ಸಂದರ್ಶನದಲ್ಲಿ ಮೊದಲ ಸ್ಥಾನದಲ್ಲಿದ್ದ ವಂದನಾ, 5ನೇ ಸ್ಥಾನದಲ್ಲಿದ್ದ ಅನುರಾಧಾ ಹಾಗೂ 9ನೇ ಸ್ಥಾನದಲ್ಲಿದ್ದ ರೋಹಿಣಿ ತಲಾ 150 ಅಂಕಗಳನ್ನು ಪಡೆದು ಒಟ್ಟಾರೆ ಅಂಕದಲ್ಲಿ ಮೊದಲ ಮೂರು ಸ್ಥಾನಕ್ಕೆ ಏರಿದ್ದಾರೆ.

ತಾವು ಹಣ ನೀಡದೇ ಇರುವುದರಿಂದಲೇ ತಮಗೆ ಅನ್ಯಾಯ ಮಾಡಲಾಗಿದೆ ಎಂದು ರಶ್ಮಿ ಅವರ ತಂದೆ ರಮೇಶ್ ದೊಡ್ಡಮನೆ ಅವರು ಈಗ ಸಿಐಡಿ ಡಿಐಜಿ ಸೌಮೇಂದು ಮುಖರ್ಜಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಸಂದರ್ಶನದಲ್ಲಿ ಉದ್ದೇಶಪೂರ್ವಕವಾಗಿಯೇ ಕಡಿಮೆ ಅಂಕ ನೀಡಿ ತಮ್ಮ ಮಗಳಿಗೆ ಸಿಗಬೇಕಾಗಿದ್ದ ಉಪ ವಿಭಾಗಾಧಿಕಾರಿ ಹುದ್ದೆಯನ್ನು ತಪ್ಪಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ರಶ್ಮಿ ದಂತ ವೈದ್ಯೆ. ಎಂಡಿಎಸ್ ಮಾಡಿರುವ ಅವರು ನಾಗರಿಕ ಸೇವಾ ಪರೀಕ್ಷೆ ಕೂಡ ಪಾಸ್ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ 677ನೇ ರ‍್ಯಾಂಕ್ ಪಡೆದು ಟೆಲಿಕಾಂ ಸೇವೆಗೆ ಆಯ್ಕೆಯಾದರು. ಟೆಲಿಕಾಂ ಇಲಾಖೆಯಲ್ಲಿ ಸಹಾಯಕ ಕಂಟ್ರೋಲರ್ ಆಗಿರುವ ಅವರು ಈಗ ಫರೀದಾಬಾದ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಎಂಡಿಎಸ್ ಮುಗಿದ ನಂತರ ತಮ್ಮ ಹಾಗೆಯೇ ಎಂಡಿಎಸ್ ಮುಗಿಸಿರುವ ಕಿರಣ್ ಅವರನ್ನು ಮದುವೆಯಾದರು. ಇಬ್ಬರೂ ಛತ್ತೀಗಡದಲ್ಲಿ ವೈದ್ಯರಾಗಿದ್ದರು.

ಮೊದಲ ಬಾಣಂತನಕ್ಕೆ ತವರು ಮನೆ ಬೆಂಗಳೂರಿಗೆ ಬಂದಾಗ ಅವರು ಕೆಎಎಸ್ ಕನಸು ಕಂಡು ಅಭ್ಯಾಸದಲ್ಲಿ ನಿರತರಾದರು. ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಪಾಸಾಗಿದ್ದರೂ ನಿರೀಕ್ಷಿತ ಹುದ್ದೆ ಸಿಗದೇ ಇರುವುದರಿಂದ ಕೆಎಎಸ್ ಮಾಡಬಹುದು ಎಂಬ ಕನಸು ಕಂಡರು. ಅದರಂತೆ ಬಾಣಂತನ, ಪುಟ್ಟ ಮಗುವಿನ ಸಹವಾಸದ ನಡುವೆಯೂ ಅವರು ಕಷ್ಟಪಟ್ಟು ಓದಿ ಮಹಿಳೆಯರ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದರು. ಅವರ ಪತಿ ಕಿರಣ್ ಕೂಡ ಈ ಬಾರಿ ಕೆಎಎಸ್ ಪರೀಕ್ಷೆ ಬರೆದು ಸಂದರ್ಶನಕ್ಕೂ ಹಾಜರಾಗಿದ್ದರು.

ಮೂರು ವರ್ಷದ ಮಗು ಈಗ ಬೆಂಗಳೂರಿನ ಅಜ್ಜನ ಮನೆಯಲ್ಲಿದೆ. ಕೆಎಎಸ್‌ನಲ್ಲಿ ಉಪ ವಿಭಾಗಾಧಿಕಾರಿ ಹುದ್ದೆ ಲಭ್ಯವಾಗಿದ್ದರೆ ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಬಹುದಾಗಿತ್ತು ಎಂಬುದು ಅವರ ಹಂಬಲವಾಗಿತ್ತು. ಯಾವುದೂ ತಾವು ಎಣಿಸಿದಂತೆ ಆಗಲಿಲ್ಲ ಎಂದು ಈಗ ಅವರು ಕೇಂದ್ರ ಸರ್ಕಾರದ ಹುದ್ದೆಯನ್ನು ಒಪ್ಪಿಕೊಂಡು ಅಲ್ಲಿಗೆ ತೆರಳಿದ್ದಾರೆ.

ಒಡಲ ನೋವಿನ ಪತ್ರ...
ಕೆಎಎಸ್ ಸಂದರ್ಶನ ಎದುರಿಸಿ ತಮಗೆ ಉಪ ವಿಭಾಗಾಧಿಕಾರಿ ಹುದ್ದೆ ದೊರೆಯುವುದಿಲ್ಲ ಎನ್ನುವುದು ಖಚಿತವಾದ ಮೇಲೆ ರಶ್ಮಿ ಅವರು, ಗೋನಾಳ ಭೀಮಪ್ಪ ನಿವೃತ್ತಿ ನಂತರ ಹಂಗಾಮಿ ಅಧ್ಯಕ್ಷರಾಗಿದ್ದ ಕೃಷ್ಣಪ್ರಸಾದ್ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

`ನಾನು ದಂತ ವೈದ್ಯಕೀಯ ಸ್ನಾತಕೋತ್

ತರ ಪದವಿಯನ್ನೂ ಪಡೆದು ವೈದ್ಯ ಕೆಲಸವನ್ನು ಆರಂಭಿಸಿದ ನಂತರ ಐಎಎಸ್ ಮಾಡುವ ಕನಸು ಕಂಡೆ. ಅದಕ್ಕಾಗಿ ಹಗಲೂ ಇರುಳು ಶ್ರಮಿಸಿ ಮೊದಲ ಪ್ರಯತ್ನದಲ್ಲಿಯೇ ಪೂರ್ವಭಾವಿ, ಮುಖ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಪಾಸಾದೆ. ಸಂದರ್ಶನದಲ್ಲಿಯೂ ಪಾಸಾದೆ. ಆದರೆ  ನನಗೆ ಐಎಎಸ್, ಐಪಿಎಸ್ ಹುದ್ದೆ ಸಿಗದೆ ಐಪಿ ಮತ್ತು ಟಿಎಎಫ್‌ಎಸ್ ಸಿಕ್ಕಿತು. ಟೆಲಿಕಾಂ ಸಹಾಯಕ ಕಂಟ್ರೋಲರ್ ಆಗಿ ಆಯ್ಕೆಯಾದೆ.

ಆದರೆ ನನಗೆ ನನ್ನ ತವರು ರಾಜ್ಯದಲ್ಲಿಯೇ ಕೆಲಸ ಮಾಡುವ ಆಸೆ ಇತ್ತು. ಅದಕ್ಕೆ ನಾನು ಬಾಣಂತನಕ್ಕೆ ಬಂದಾಗ ಕೆಎಎಸ್ ಪರೀಕ್ಷೆ ಬರೆಯುವ ನಿರ್ಧಾರವನ್ನು ಕೈಗೊಂಡು ಹಸುಗೂಸನ್ನು ಕಂಕುಳಲ್ಲಿ ಇಟ್ಟುಕೊಂಡೇ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ನಿರಂತರವಾಗಿ ಓದಿ ಮುಖ್ಯ ಪರೀಕ್ಷೆಯಲ್ಲಿ ಮಹಿಳೆಯರ ವಿಭಾಗದಲ್ಲಿ 3ನೇ ರ‍್ಯಾಂಕ್ ಬಂದೆ. ನಾನು ಎಂಡಿಎಸ್ ಪ್ರವೇಶ ಪರೀಕ್ಷೆಯಲ್ಲಿಯೂ ರಾಜ್ಯಕ್ಕೇ 2ನೇ ರ‍್ಯಾಂಕ್ ಬಂದಿದ್ದೆ.

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ದಂತ ವೈದ್ಯಕೀಯ ಪದವಿಯವರೆಗೆ ಎಲ್ಲವನ್ನೂ ಸರ್ಕಾರಿ ಶಾಲೆಯಲ್ಲಿಯೇ ಓದಿದ ನನಗೆ ಜನ ಸೇವೆ ಮಾಡಬೇಕು ಎಂಬ ಬಯಕೆ ತೀವ್ರವಾಗಿತ್ತು. ತಾವು ಅಧ್ಯಕ್ಷರಾಗಿ ಬಂದಾಗ ಮತ್ತು ಕೆಎಎಸ್ ಸಂದರ್ಶನದಲ್ಲಿಯೂ ತಾವು ಇರುವುದರಿಂದ ನನಗೆ ಉಪ ವಿಭಾಗಾಧಿಕಾರಿ ಹುದ್ದೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಸಂದರ್ಶನದಲ್ಲಿ ಕಡಿಮೆ ಅಂಕ ನೀಡಿ ನನ್ನನ್ನು ಅನರ್ಹಗೊಳಿಸಿದಿರಿ. ನಾನು ಯಾರ ಮುಂದೆಯೂ ಕೈಯೊಡ್ಡಿದವಳಲ್ಲ. ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟು ಬೆಳೆದು ಬಂದವಳು. ಆದರೂ ನೀವು ನನಗೆ ಅವಕಾಶ ನೀಡಲಿಲ್ಲ . ಈಗ ಅನಿವಾರ್ಯವಾಗಿ ನನ್ನ ಮಗು, ಪತಿ, ತಂದೆ ತಾಯಿಯನ್ನು ಇಲ್ಲಿಯೇ ಬಿಟ್ಟು ಕೇಂದ್ರ ಸೇವೆಗೆ ಹೋಗುತ್ತಿದ್ದೇನೆ.

ನಾನು 22-23 ವರ್ಷದವಳಾಗಿದ್ದರೆ ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿತ್ತು. ಆದರೆ ಈಗ ಮತ್ತೆ ಪರೀಕ್ಷೆ ಬರೆಯುವ ವಯಸ್ಸು ಮೀರಿದೆ. ನಾನು ನಿಮ್ಮ ಪಂಗಡದವಳಾಗಿದ್ದರೆ ಈ ನೋವು ಅನುಭವಿಸಬೇಕಾಗಿರಲಿಲ್ಲ ಅನ್ನಿಸುತ್ತೆ' ಎಂದು ಅವರು ಹೇಳಿಕೊಂಡಿದ್ದಾರೆ.

ಕಣ್ಣೀರಿಗೆ ಕೆಪಿಎಸ್‌ಸಿ ಕರಗುವುದಿಲ್ಲ. ಈಗ ಈ ಪತ್ರ ಕೂಡ ಸಿಐಡಿ ಕೈ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT