ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಐ ಇಲ್ಲದ ನೀರಿಗೆ ನಿಷೇಧ

Last Updated 12 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಎಸ್‌ಐ ಗುಣಮಟ್ಟ ಹೊಂದಿರದ ಪ್ಯಾಕ್ ಮಾಡಿದ ನೀರಿನ (ಬಾಟಲಿ, ಕ್ಯಾನ್ ಇತ್ಯಾದಿ) ಉತ್ಪಾದನೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಈ ಆದೇಶವನ್ನು ಶೀಘ್ರದಲ್ಲಿ ಪಾಲಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಧಾರವಾಡದ `ಪ್ರಜಾಂದೋಲನ ಗ್ರಾಹಕರ ವೇದಿಕೆ~ಯ ಅಧ್ಯಕ್ಷ ಲೋಚನೇಶ ಹೂಗಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

ಅರ್ಜಿದಾರರ ದೂರೇನು?: `ಭಾರತೀಯ ಗುಣಮಟ್ಟದ ಉತ್ಪಾದನೆ ಕಾಯ್ದೆ~ಯ 15ನೇ ಕಲಮು ಹಾಗೂ `ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ~ಯ ಅಡಿ ಕುಡಿಯುವ ನೀರನ್ನು ಮಾರಾಟ ಮಾಡುವಾಗ ಸಂಬಂಧಿತ ಇಲಾಖೆಗಳ ಅನುಮತಿ, ಪರವಾನಗಿ ಅಥವಾ ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯ.

ಆದರೆ ರಾಜ್ಯದ ಹಲವಾರು ಕಡೆಗಳಲ್ಲಿ ಈ ಕಾನೂನು ಪಾಲನೆ ಆಗುತ್ತಿಲ್ಲ. ಕುಡಿಯುವ ನೀರನ್ನು ಮನಸೋ ಇಚ್ಛೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ~ ಎನ್ನುವುದು ಅರ್ಜಿದಾರರ ದೂರು.

`ರಾಜ್ಯದಲ್ಲಿ ಕುಡಿಯುವ ನೀರನ್ನು ಸಂಸ್ಕರಿಸುವ ಹಲವಾರು ಘಟಕಗಳಿವೆ. ಹೆಚ್ಚಿನ ಕಡೆಗಳಲ್ಲಿ ನೀರನ್ನು ಕೃಷಿ ಭೂಮಿಯಲ್ಲಿನ ಕೊಳವೆ ಬಾವಿಗಳಿಂದ ಸಂಗ್ರಹಿಸಲಾಗುತ್ತಿದೆ. ಈ ಕೊಳವೆ ಬಾವಿಗಳಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಕೆಲವು ವ್ಯಕ್ತಿಗಳು ಹಾಗೂ ಕಂಪೆನಿಗಳು ಕುಡಿಯುವ ನೀರನ್ನು ಸಂಗ್ರಹಿಸುವ ಮೂಲಕ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕುಡಿಯಲು ಯೋಗ್ಯವಲ್ಲದ ನೀರು ಕೂಡ ಮಾರಾಟವಾಗುತ್ತಿದೆ.

`ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಬೆಂಗಳೂರು ನೀರು ಸರಬರಾಜು ಮಂಡಳಿ ಪೂರೈಕೆ ಮಾಡುವ ಕಾವೇರಿ ನೀರನ್ನು ಬಾಟಲಿಗಳಲ್ಲಿ ತುಂಬಿಸಲಾಗುತ್ತದೆ. ಇದು ಕೆಲವೊಮ್ಮೆ ಕಲುಷಿತವಾಗಿರುವ ಕಾರಣ, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ~ ಎನ್ನುವುದು ಅರ್ಜಿದಾರರ ಆರೋಪ.

ಲೋಕಸಭೆಯಲ್ಲಿ ಚರ್ಚೆ: `ಕುಡಿಯಲು ಯೋಗ್ಯವಲ್ಲದ ನೀರು ದೇಶದಾದ್ಯಂತ ಮಾರಾಟ ಆಗುತ್ತಿದೆ ಎಂಬ ವಿಷಯ 2004ರ ಜುಲೈನಲ್ಲಿ ಲೋಕಸಭೆಯಲ್ಲಿ ಚರ್ಚೆಗೆ ಬಂದಿತ್ತು. ನಲ್ಲಿ ನೀರನ್ನು `ಮಿನರಲ್ ವಾಟರ್~ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ವಿಷಯ ಚರ್ಚೆಗೆ ಒಳಗಾಗಿತ್ತು. ಕುಡಿಯುವ ನೀರನ್ನು ಹೇಗೆ ಸಂಸ್ಕರಣೆ ಹಾಗೂ ಮಾರಾಟ ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಆದರೆ, ಇದಾವುದೂ ಜಾರಿಗೆ ಬಂದಿಲ್ಲ~.

`ಕುಡಿಯಲು ಮಾರಾಟ ಆಗುತ್ತಿರುವ ನೀರಿನ ಗುಣಮಟ್ಟ ಕಾಪಾಡಲು ಕ್ರಮ ಜರುಗಿಸುವಂತೆ ಕೋರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅರ್ಜಿದಾರರು ಪತ್ರ ಬರೆದಿದ್ದರು. ಆದರೆ ಯಾರೊಬ್ಬರೂ ಅದರಲ್ಲಿ ಆಸಕ್ತಿ ತೋರಿಲ್ಲ~ ಎಂದು ಅರ್ಜಿದಾರರ ಪರ ವಕೀಲ ಜಯಕುಮಾರ್ ಎಸ್. ಪಾಟೀಲ್ ಕೋರ್ಟ್ ಗಮನಕ್ಕೆ ತಂದರು.

ಆದುದರಿಂದ ಯಾವುದೇ ವ್ಯಕ್ತಿ, ವ್ಯಾಪಾರಿ ಅಥವಾ ಕಂಪೆನಿ ಇದರ ತಯಾರಿಕೆ ಅಥವಾ ಮಾರಾಟದಲ್ಲಿ ತೊಡಗಿದ್ದರೆ ಅದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಅವರು ಕೋರಿದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT