ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಐಐಎಫ್‌ಸಿಎಲ್' ಟ್ಯಾಕ್ಸ್ ಫ್ರೀ ಬಾಂಡ್

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಬೆಂಗಳೂರು: ಕೇಂದ್ರ ಸರ್ಕಾರದ ಒಡೆತನದ `ಭಾರತೀಯ ಮೂಲ ಸೌಕರ್ಯ ಹಣಕಾಸು ಕಂಪೆನಿ ನಿಯಮಿತ'(ಐಐಎಫ್‌ಸಿಎಲ್), ಪ್ರಸಕ್ತ ಹಣಕಾಸು ವರ್ಷಕ್ಕೆ `ಟ್ಯಾಕ್ಸ್ ಫ್ರೀ ಬಾಂಡ್'(ತೆರಿಗೆ ಮುಕ್ತ ಸಾಲಪತ್ರ) ಪರಿಚಯಿಸಿದೆ.
 
2006ರ ಏಪ್ರಿಲ್‌ನಲ್ಲಿ ಕಾರ್ಯಾರಂಭ ಮಾಡಿದ `ಐಐಎಫ್‌ಸಿಎಲ್', ರಸ್ತೆ, ಸೇತುವೆ, ಮೆಟ್ರೊ, ಬಂದರು, ವಿಮಾನ ನಿಲ್ದಾಣ ನಿರ್ಮಾಣದಂತಹ ಮೂಲ ಸೌಕರ್ಯ ಅಭಿವೃದ್ಧಿ ವಲಯಕ್ಕೆ ಹಣಕಾಸಿನ ನೆರವು ನೀಡುತ್ತಿದೆ. ಹೆಚ್ಚಿನ ಬಂಡವಾಳ ಕ್ರೋಡೀಕರಣಕ್ಕಾಗಿ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಗ್ರೀನ್ ಷೂ ಆಪ್ಷನ್‌ನಲ್ಲಿ ರೂ. 1500 ಕೋಟಿ ಸೇರಿದಂತೆ ಗರಿಷ್ಠ ರೂ. 9215 ಕೋಟಿವರೆಗೂ ಬಂಡವಾಳ ಸಂಗ್ರಹಿಸುವ ಗುರಿ ಇದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಹರ್ಷಕುಮಾರ್ ಬನ್ವಾಲಾ ಹೇಳಿದರು.
 
ಗುರುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆದಾಯ ತೆರಿಗೆ ಪಾವತಿಸುವವರು ಈ ಬಾಂಡ್ ಖರೀದಿಸಿ ತೆರಿಗೆ ಉಳಿತಾಯ ಮಾಡಬಹುದು. ರೂ. 1000 ಮುಖಬೆಲೆ ಬಾಂಡ್ ಮೂಲಕ ಕನಿಷ್ಠ ರೂ. 5000 ಹೂಡಿಕೆ ಮಾಡಬೇಕು. ಡಿಸೆಂಬರ್ 26ರಿಂದ ಮುಂದಿನ ಜನವರಿ 11ರವರೆಗೂ ಬಾಂಡ್ ಖರೀದಿಸಬಹುದು.

ಚಿಲ್ಲರೆ ಹೂಡಿಕೆದಾರರಿಗೆ 10 ವರ್ಷಕ್ಕೆ ಶೇ 7.69 ಮತ್ತು 15 ವರ್ಷಕ್ಕೆ ಶೇ 7.86 ಹಾಗೂ 20 ವರ್ಷಕ್ಕೆ ಶೇ 7.90ರಷ್ಟು ಬಡ್ಡಿ ದೊರೆಯುತ್ತದೆ. ಹೂಡಿಕೆ ವಾಪಸ್ ಪಡೆಯಲು ಕಾಲಮಿತಿ ಇಲ್ಲ. ಮಾರುಕಟ್ಟೆಯಲ್ಲಿ ಯಾವಾಗ ಬೇಕಾದರೂ ಬಾಂಡ್ ಮಾರಾಟ ಮಾಡಿ ಹಣ ಪಡೆಯಬಹುದು ಎಂದರು.
 
ಬೆಂಗಳೂರಿನಲ್ಲಿ ಎನ್‌ಪಿಎ
ಬೆಂಗಳೂರಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೆ ರೂ. 15 ಕೋಟಿ ಸಾಲ ನೀಡಲಾಗಿದೆ. ಆದರೆ, ಪರಿಸರ ಮಾಲಿನ್ಯ ಸಮಸ್ಯೆ ಕಾರಣ ಯೋಜನೆ ಇನ್ನೂ ಕಾರ್ಯಾರಂಭ ಮಾಡದ ಕಾರಣ ಸಾಲ ವಸೂಲಿ ಆಗದಂತಾಗಿದೆ. ಈ ಮೊತ್ತ ಸದ್ಯ `ಎನ್‌ಪಿಎ'ಗೆ ಕಾರಣವಾಗಿದೆ ಎಂದು ಬನ್ವಾಲ್ ವಿವರಿಸಿದರು.
 
ಕರ್ನಾಟಕದಲ್ಲಿ 14 ಯೋಜನೆಗಳಿಗೆ ಒಟ್ಟು ರೂ. 2978 ಕೋಟಿ ಸಾಲ ನೀಡಲಾಗಿದೆ ಎಂದರು. `ಐಐಎಫ್‌ಸಿಎಲ್' ಆರು ವರ್ಷಗಳಲ್ಲಿ ಒಟ್ಟು 300 ಯೋಜನೆಗಳಿಗೆ ರೂ. 71,000 ಕೋಟಿ ಸಾಲ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 26,000 ಕೋಟಿ ಸಾಲ ವಿತರಿಸಿದ್ದು, ಮಾರ್ಚ್ 31ಕ್ಕೆ ಮುನ್ನ 30,000 ಕೋಟಿ ಸಾಲ ವಿತರಣೆ ಗುರಿ ಇದೆ. ಸಾಲ ವಸೂಲಿಯೂ ಉತ್ತಮವಾಗಿದ್ದು, 2010ರವರೆಗೂ `ಎನ್‌ಪಿಎ' ಇರಲಿಲ್ಲ. ಬೆಂಗಳೂರಿನ ಘಟಕದಿಂದಾಗಿ ಎನ್‌ಪಿಎ ಲೆಕ್ಕ ತೋರುವಂತಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT