ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಸಿ ದಾಳಿ ನಂಟು ಅಬು ಹಮ್ಜಾ ಸಾವು

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ): 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ದೇಶದ ವಿವಿಧೆಡೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಬು ಹಮ್ಜಾ ಈಗಾಗಲೇ ಮೃತಪಟ್ಟಿರುವುದಾಗಿ ಪೊಲೀಸ್ ವಶದಲ್ಲಿರುವ ಅಬು ಜಬಿಯುದ್ದೀನ್ ಅಲಿಯಾಸ್   ಜುಂದಾಲ್ ತನಿಖೆ ವೇಳೆ ಹೇಳಿದ್ದಾನೆ.

ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದ ಹಮ್ಜಾ 2009ರಲ್ಲಿ ಸಾವನ್ನಪ್ಪಿದ್ದು, ಆತನ ಶವಸಂಸ್ಕಾರದಲ್ಲಿ ಪಾಲ್ಗೊಂಡಿರುವುದಾಗಿ ಜಬಿಯುದ್ದೀನ್ ನೀಡಿರುವ ಹೇಳಿಕೆಯ ದಾಖಲೆ ಪ್ರತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.

ಅಬು ಹಮ್ಜಾನ ನಿಜವಾದ ಹೆಸರು ಮೊಹಮ್ಮದ್ ರಮಾದಾನ್ ಮೊಹಮ್ಮದ್ ಸಿದ್ದಿಕಿ ಎಂದು ತಿಳಿಸಿರುವ ಜಬಿಯುದ್ದೀನ್,  ಹಮ್ಜಾ ವಿರುದ್ಧ 2010ರಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಆದರೆ ಅದಾಗಲೇ ಹಮ್ಜಾ ಸಾವನ್ನಪ್ಪಿದ್ದ ಎಂದಿದ್ದಾನೆ.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಶ್ರೇಣಿ ವ್ಯವಸ್ಥೆ ಕುರಿತು ವಿಸ್ತೃತವಾದ ಮಾಹಿತಿಯನ್ನು ಜಬಿಯುದ್ದೀನ್ ನೀಡಿದ್ದಾನೆ ಎಂದು ಹೇಳಲಾಗಿದೆ.2005ರ ಡಿಸೆಂಬರ್ 28ರಂದು ಅಪರಿಚಿತ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ದೆಹಲಿ ಐಐಟಿಯ ನಿವೃತ್ತ ಪ್ರೊಫೆಸರ್ ಎಂ.ಸಿ. ಪುರಿ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು.

26/11ರ ದಾಳಿಗೆ ಸಂಬಂಧಿಸಿದಂತೆ ಕರಾಚಿಯಿಂದ ಬಂದಿದ್ದ ದೂರವಾಣಿ ಕರೆ ಹಮ್ಜಾನದು ಎಂದು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ಹೇಳಿದ ನಂತರ ಮೊದಲ ಬಾರಿಗೆ ಹಮ್ಜಾ ಹೆಸರು ಕೇಳಿ ಬಂದಿತ್ತು. ಆದರೆ ಈಗ ಜಬಿಯುದ್ದೀನ್ ನೀಡಿರುವ ಹೇಳಿಕೆಯಿಂದಾಗಿ ಗೊಂದಲ ಉಂಟಾಗಿದೆ.

ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಜಬಿಯುದ್ದೀನ್ ವಿರುದ್ಧ ದೆಹಲಿ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ, ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ, ಬೆಂಗಳೂರು ಮತ್ತು ಗುಜರಾತ್ ಪೊಲೀಸರು ಜಬಿಯುದ್ದೀನ್ ವಿರುದ್ಧ ಅರೋಪ ಹೊರಿಸಿದ್ದಾರೆ.

ಜಬಿಯುದ್ದೀನ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಹಲವು ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾನೆ. ಸೈಬರ್ ಕೇಂದ್ರಗಳನ್ನು ಬಳಸಿಕೊಂಡು ಸಂಘಟನೆಗೆ ಹೊಸಬರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಜಬಿಯುದ್ದೀನ್ ಬಂಧನ ಬಹಳ ಮಹತ್ವದ್ದು ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT