ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಎ ಅಮಾನತು ನಾಚಿಕೆಗೇಡು

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಭಾರತ ಒಲಿಂಪಿಕ್ ಸಂಸ್ಥೆಯ ದುರಾಡಳಿತದ ವಿರುದ್ಧ ಕೊನೆಗೂ ಚಾಟಿ ಬೀಸಲಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾರತ ಒಲಿಂಪಿಕ್ ಸಂಸ್ಥೆ(ಐಒಎ)ಯನ್ನು ಅಮಾನತಿನಲ್ಲಿಡಲು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾದರೂ, ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳೊಡನೆ ಇತಿಹಾಸದಲ್ಲೇ ತನ್ನ ಗರಿಷ್ಠ ಸಾಧನೆ ತೋರಿದ್ದ ಭಾರತದ ಕ್ರೀಡಾರಂಗಕ್ಕೆ ಇದು ನಾಚಿಕೆಗೇಡಿನ ವಿಷಯ. ಇದರಿಂದಾಗಿ ಭಾರತದ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತದ ಧ್ವಜದಡಿಯಲ್ಲಿ ಸ್ಪರ್ಧಿಸದೇ ಐಒಸಿ ಹೆಸರಲ್ಲಿ ಸ್ಪರ್ಧಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಒಲಿಂಪಿಕ್ ತತ್ವಗಳ ಪ್ರಕಾರ ಯಾವುದೇ ರಾಷ್ಟ್ರದ ಒಲಿಂಪಿಕ್ ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು. ಭಾರತ ಒಲಿಂಪಿಕ್ ಸಂಸ್ಥೆ ಸರ್ಕಾರದ ಕ್ರೀಡಾ ನೀತಿಯಡಿಯಲ್ಲಿ ಚುನಾವಣೆ ನಡೆಸುತ್ತಿದೆ ಎಂದು ಐಒಸಿ ಹೇಳಿರುವುದು ಒಂದು ನೆಪ ಮಾತ್ರ. ಐಒಎಯಲ್ಲಿ ತುಂಬಿರುವ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಎಚ್ಚರಿಕೆ ನೀಡುತ್ತಲೇ ಬಂದಿದ್ದ ಐಒಸಿ, ಅಮಾನತಿನಂಥ ಕಠಿಣ ಕ್ರಮ ತೆಗೆದುಕೊಳ್ಳಲು, ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಲಲಿತ್ ಭಾನೊಟ್ ಐಒಎ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಮುಖ್ಯ ಕಾರಣ. ಭಾನೊಟ್, ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಆಗ ಐಒಎ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಅವರೊಡನೆ ಆರ್ಥಿಕ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜೈಲು ಸೇರಿದ್ದರು. ವಿಚಾರಣೆ ನಡೆಯುತ್ತಿದ್ದು ಅಂತಿಮ ತೀರ್ಪು ಹೊರಬೀಳಬೇಕಿದೆ.

ಆದರೆ ಒಡೆದ ಮನೆಯಾಗಿರುವ ಐಒಎಯಲ್ಲಿರುವ ಒಂದು ಗುಂಪು ಭಾನೊಟ್ ಪರವಾಗಿದೆ ಎಂಬುದು ಸ್ಪಷ್ಟ. ಕಲ್ಮಾಡಿ ಜೈಲಿಗೆ ಹೋದಾಗ ಹಂಗಾಮಿ ಅಧ್ಯಕ್ಷರಾಗಿದ್ದ ವಿ.ಕೆ. ಮಲ್ಹೋತ್ರ (ಬಿಜೆಪಿ) ಮೊದಲಿನಿಂದಲೂ ಕೇಂದ್ರ ಕ್ರೀಡಾ ಇಲಾಖೆಯ ಕ್ರೀಡಾ ನೀತಿ ಜಾರಿಗೆ ವಿರುದ್ಧವಾಗಿಯೇ ಇದ್ದರು. ಆರ್ಥಿಕ ನೆರವಿಗೆ ಸರ್ಕಾರವನ್ನು ನೆಚ್ಚಿಕೊಂಡಿರುವ ಐಒಎ ಪಾರದರ್ಶಕವಾಗಿ ಆಡಳಿತ ನಡೆಸಿದ್ದರೆ, ಕ್ರೀಡಾನೀತಿಯನ್ನು ಒಪ್ಪಿಕೊಳ್ಳುವಂತೆ ಸರ್ಕಾರ ಒತ್ತಡ ಹೇರುವ ಸಂದರ್ಭ ಬರುತ್ತಿರಲಿಲ್ಲ. ಆದರೆ ಐಒಎ ಸರ್ಕಾರದ ಜೊತೆ ತಿಕ್ಕಾಟಕ್ಕಿಳಿಯಿತು. ದೆಹಲಿ ನ್ಯಾಯಾಲಯ ಕ್ರೀಡಾನೀತಿ ಒಪ್ಪಿಕೊಳ್ಳಲೇಬೇಕು ಎಂದು ಹೇಳಿತು. ಗೊಂದಲದ ಮಧ್ಯೆ ಚುನಾವಣೆ ಮುಂದಕ್ಕೆ ಹೋಗಿ ಡಿಸೆಂಬರ್ 5ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಅಭಯ್ ಸಿಂಗ್ ಚೌತಾಲಾ ಗುಂಪು ಭಾನೊಟ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಲ್ಲಿಸಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ಕ್ರೀಡಾಧಿಕಾರಿ ರಣಧೀರಸಿಂಗ್ ಹಾಗೂ  ಅವರ ಬೆಂಬಲಿಗರು ಚುನಾವಣೆಯಿಂದ ಹಿಂದೆ ಸರಿದರು. ಇದರಿಂದ ಚೌತಾಲಾ ಗುಂಪು ಅವಿರೋಧವಾಗಿ ಆಯ್ಕೆಯಾದಂತಾಗಿತ್ತು.

ಆದರೆ ಐಒಸಿ ಈಗ ಐಒಎಯನ್ನು ಅಮಾನತುಗೊಳಿಸಿರುವುದರಿಂದ ಈ ಚುನಾವಣೆಗೆ ಯಾವ ಅರ್ಥವೂ ಉಳಿಯುವುದಿಲ್ಲ. ರಾಷ್ಟ್ರದ ಹಲವು ಹಿರಿಯ ಕ್ರೀಡಾಪಟುಗಳು ಐಒಸಿ ಕ್ರಮವನ್ನು ಸ್ವಾಗತಿಸಿದ್ದಾರಲ್ಲದೇ ಕ್ರೀಡೆಯಲ್ಲಿ ತುಂಬಿರುವ ರಾಜಕೀಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಒಸಿಗೆ ವಸ್ತುಸ್ಥಿತಿಯನ್ನು ವಿವರಿಸಿ ಅಮಾನತು ತೆರವುಗೊಳಿಸುವಂತೆ ಮಾಡುವ ಯತ್ನದಲ್ಲಿ ಸರ್ಕಾರವೂ ಸಹಕರಿಸಬೇಕು. ಇಲ್ಲದಿದ್ದರೆ ಭಾರತ ಕ್ರೀಡಾರಂಗದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿಯೇ ಉಳಿಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT