ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಸಿಯಿಂದ ಐಒಎ ಅಮಾನತು

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಸಾನೆ (ಸ್ವಿಟ್ಜರ್‌ಲೆಂಡ್), ನವದೆಹಲಿ (ಪಿಟಿಐ): ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಭಾರತ ಒಲಿಂಪಿಕ್ ಸಂಸ್ಥೆಯನ್ನು (ಐಒಎ) ಅಮಾನತಿನಲ್ಲಿರಿಸಿದೆ.

ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿ ನಡೆದು ಕೊಳ್ಳುವುದಾಗಿ ಐಒಎ ಹೇಳಿರುವ ಹಿನ್ನಲೆಯಲ್ಲಿ ಐಒಸಿ ಈ ನಿರ್ಧಾರ ತೆಗೆದುಕೊಂಡಿದೆ. ಐಒಸಿಯ ಈ ನಿಲುವು ಭಾರತ ಒಲಿಂಪಿಕ್ ಆಂದೋಲನಕ್ಕೆ ಪ್ರತಿಕೂಲ ಪರಿಸ್ಥಿತಿ ಉಂಟು ಮಾಡಿದೆ.

ಐಒಸಿಯ ಕಾರ್ಯಕಾರಿ ಸಮಿತಿ ಸಭೆಯ ಮೊದಲ ದಿನದ ಕಲಾಪದ ವೇಳೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಒಸಿಯ ಇಬ್ಬರು ಉನ್ನತ ಅಧಿಕಾರಿಗಳು ಖಚಿತ ಪಡಿಸಿದ್ದಾರೆಂದು `ಅಸೋಸಿಯೇಟೆಡ್ ಪ್ರೆಸ್' ತಿಳಿಸಿದೆ.

ಬುಧವಾರ ಭಾರತ ಒಲಿಂಪಿಕ್ ಸಂಸ್ಥೆಗೆ ಚುನಾವಣೆಯನ್ನು ಭಾರತ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರ ನಡೆಸಲಿದ್ದು, ಈ ಮೂಲಕ `ಒಲಿಂಪಿಕ್ ಸಮಿತಿಯ ನಿಯಮ'ಗಳನ್ನು ಕಡೆಗಣಿಸಲಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

`ನಾವು ದೆಹಲಿ ಹೈಕೋರ್ಟ್ ತೀರ್ಪಿಗೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ' ಎಂದು ಐಒಎ ವಕ್ತಾರರು ಹೇಳಿರುವುದನ್ನು ಕೂಡಾ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ `ಅಮಾನತು' ನಿರ್ಧಾರದ ಬಗ್ಗೆ ತಮಗೆ ಈವರೆಗೆ ಸಂದೇಶ ಬಂದಿಲ್ಲ ಎಂದು ಐಒಎ ವಕ್ತಾರರು ತಿಳಿಸಿದ್ದಾರೆ.

ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲೇಬೇಕೆಂದು ಐಒಎ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬಾರದೆಂದು ನಾವು ಕಳೆದ ಎರಡು ವರ್ಷಗಳಿಂದ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಲೇ ಬಂದಿದ್ದೇವೆ. ಆದರೆ ಅದಕ್ಕೆ ಫಲ ಸಿಗಲಿಲ್ಲ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯಕುಮಾರ್ ಮಲ್ಲೋತ್ರಾ ಮಂಗಳವಾರ ಹೇಳಿದ್ದಾರೆ.

ಇಂತಹದ್ದೊಂದು ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಬಗ್ಗೆ ವಿವರವಾಗಿ ಬರೆದು ಪ್ರಧಾನ ಮಂತ್ರಿಗಳಿಗೇ ತಿಳಿಸಲಾಗಿತ್ತು ಎಂದಿರುವ ಮಲ್ಲೋತ್ರ `ಈಗ ಉಂಟಾಗಿರುವ ಗೊಂದಲ'ಕ್ಕೆ ಸರ್ಕಾರವೇ ಹೊಣೆ ಎಂದಿದ್ದಾರೆ.

ಐಒಸಿ ಈ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡಿದೆ ಎನ್ನುವಂತಿಲ್ಲ. ಏಕೆಂದರೆ ಕೆಲವು ದಿನಗಳ ಹಿಂದೆ ಐಒಸಿಯ ಮಹಾ ನಿರ್ದೇಶಕ ಕ್ರಿಸ್ಟೋಫ್ ಡಿ ಕೆಪ್ಪರ್ ಅವರು ಈ ಬಗ್ಗೆ ಐಒಎ ಹಂಗಾಮಿ ಅಧ್ಯಕ್ಷರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT