ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಕಂಪೆನಿಗಳ ಗಳಿಕೆ ಸ್ಥಿರ

ತ್ರೈಮಾಸಿಕ ಫಲಿತಾಂಶ: ವಿಶ್ಲೇಷಣೆ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಅಮೆರಿಕದ ಆರ್ಥಿಕ ವ್ಯವಸ್ಥೆಯಲ್ಲಿ ತುಸು ಚೇತರಿಕೆ ಮತ್ತು ಭಾರತೀಯ ಕಂಪೆನಿಗಳಲ್ಲಿ ಕಡೆಯ ಹಂತದ ವಿವೇಚನಾ ವೆಚ್ಚ ಕ್ರಮದಲ್ಲಿ ಸುಧಾರಣೆ ಆಗಿರುವ ಪರಿಣಾಮ ಮಾಹಿತಿ ತಂತ್ರಜ್ಞಾನ(ಐಟಿ) ಕಂಪೆನಿಗಳ ಆದಾಯ ಗಳಿಕೆಯಲ್ಲಿ ತಕ್ಕಮಟ್ಟಿಗಿನ ಪ್ರಗತಿಯಾಗಿದೆ.

4ನೇ ತ್ರೈಮಾಸಿಕ (ಜನವರಿ-ಮಾರ್ಚ್) ಅವಧಿಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಮೂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

4ನೇ ತ್ರೈಮಾಸಿಕ ಮತ್ತು ಒಟ್ಟಾರೆ ಹಣಕಾಸು ವರ್ಷದ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ಪ್ರಮುಖ `ಐಟಿ' ಕಂಪೆನಿಗಳಲ್ಲೊಂದಾದ `ಇನ್ಫೊಸಿಸ್' ಏ. 12ರಂದು ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಏ. 17ಕ್ಕೆ ಫಲಿತಾಂಶ ಪ್ರಕಟಿಸಲಿವೆ. `ಟಿಸಿಎಸ್' ಮತ್ತು ವಿಪ್ರೊ ಮತ್ತಿತರ ಪ್ರಮುಖ ಐಟಿ ಕಂಪೆನಿಗಳು ವಾರ್ಷಿಕ ಫಲಿತಾಂಶವನ್ನು ಘೋಷಿಸುವ ದಿನಾಂಕ ಇನ್ನಷ್ಟೇ ಖಚಿತವಾಗಬೇಕಿದೆ.

`ನಮ್ಮ ವ್ಯಾಪ್ತಿಯಲ್ಲಿರುವ ಪ್ರಮುಖ ಐಟಿ ಕಂಪೆನಿಗಳ ಚಟುವಟಿಕೆ ಅವಲೋಕಿಸಿದರೆ ಈ ಕಡೆಯ ತ್ರೈಮಾಸಿಕದಲ್ಲಿ ಏನಿಲ್ಲವೆಂದರೂ ಸಾಂದರ್ಭಿಕ ಪ್ರಗತಿಯಲ್ಲಿ ಶೇ 2.6ರಷ್ಟು ಏರಿಕೆ ಆಗಿರುವ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ' ಎನ್ನುತ್ತಾರೆ `ಕೊಟಕ್ ಸೆಕ್ಯುರಿಟೀಸ್'ನ ಸಂಶೋಧನಾ ವಿಭಾಗದ ಮುಖ್ಯಸ್ಥ ದಿಪೇನ್ ಷಾ.

ಅಮೆರಿಕ ಮತ್ತು ಯೂರೋಪ್ ವಲಯದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆಗೆ ಇನ್ನೂ ಸಾಕಷ್ಟು ಸಮಯ ಬೇಕಿದೆ. ಆದರೆ, ಅಲ್ಲಿನ ಸರ್ಕಾರಗಳು ಸದ್ಯ ಕೈಗೊಂಡ ಉತ್ತೇಜನಕಾರಿ ಕ್ರಮಗಳಿಂದಾಗಿ ಆ ದೇಶಗಳು ಸದ್ಯಕ್ಕೆ ಸ್ಥಿರತೆಯತ್ತ ಮುಖ ಮಾಡಿವೆ.

ಇದು ಭಾರತದ, ಪ್ರಮುಖವಾಗಿ ಐಟಿ ಕಂಪೆನಿಗಳಿಗೆ ಸಮಾಧಾನ ತರುವ ಸುದ್ದಿ ಎಂದು ಷಾ ವಿಶ್ಲೇಷಿಸಿದರು. ವಾರ್ಷಿಕ ವೆಚ್ಚದ ಬಜೆಟ್ ಲೆಕ್ಕಾಚಾರ ಮುಗಿಯುತ್ತಾ ಬಂದಿರುವ ಹಾಗೂ ಮುಂದಿನ ಹಣಕಾಸು ವರ್ಷದತ್ತ ಮುನ್ನೋಟ ಹರಿಸಬೇಕಾದ ಜನವರಿ-ಮಾರ್ಚ್ ಅವಧಿಯೆಂದರೆ ದೇಶದ ಐಟಿ ಕಂಪೆನಿಗಳ ಪಾಲಿಗೆ ಸೂಕ್ಷ್ಮ ಮತ್ತು ತುಸು ಒತ್ತಡದ ಸಂದರ್ಭ. ಸದ್ಯದ ಮಟ್ಟಿಗೆ ಹೇಳುವುದಾದರೆ ಐಟಿ ಕ್ಷೇತ್ರದಿಂದ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಷಾ.

ಬ್ಯಾಂಕಿಂಗ್ ವಲಯ ಹಿನ್ನಡೆ
ಐಟಿ ಕಂಪೆನಿಗಳ ಸಾಧನೆಯ ಹಾದಿಯಲ್ಲಿ ನಡಿಗೆ ವೇಗಗೊಳಿಸಿದ್ದರೆ, ಇನ್ನೊಂದೆಡೆ ದೇಶದ ಬ್ಯಾಂಕಿಂಗ್ ವಲಯ ಪ್ರಗತಿಯ ಹಾದಿಗೆ ವಿರುದ್ಧ ದಿಕ್ಕಿನಲ್ಲಿದೆ. ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಪ್ರಗತಿ ಪ್ರಸಕ್ತ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಅಷ್ಟೊಂದು ಆಶಾದಾಯಕವಾಗಿಲ್ಲ ಎಂದಿದೆ ಅಧ್ಯಯನ ವರದಿ.

ಸಿಬ್ಬಂದಿ ವೇತನ ಪರಿಷ್ಕರಣೆ, ಬಾಕಿ ತೆರಿಗೆ ಪಾವತಿ ಸೇರಿದಂತೆ ವೆಚ್ಚದ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ, ಇನ್ನೊಂದೆಡೆ ಒಟ್ಟಾರೆ ಆದಾಯದಲ್ಲಿಯೂ ತುಸು ಇಳಿಕೆಯಾಗಿದೆ. ಪರಿಣಾಮ ಜನವರಿ-ಮಾರ್ಚ್ ಅವಧಿಯಲ್ಲಿ ಬ್ಯಾಂಕಿಂಗ್ ವಲಯದ ನಿವ್ವಳ ಲಾಭ ಗಳಿಕೆ ಶೇ 5ರಿಂದ 35ರವರೆಗೂ ಕುಸಿತ ಕಾಣುವ ಸಾಧ್ಯತೆ ಇದೆ ಎಂಬುದು ಇತ್ತೀಚೆಚಿಗೆ ಬ್ಯಾಂಕ್ ಆಫ್ ಅಮೆರಿಕ-ಮೆರಿಲ್ ಲಿಂಚ್ ನಡೆಸಿದ ಜಂಟಿ ಅಧ್ಯಯನ ವರದಿಯಿಂದ ತಿಳಿದುಬಂದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ನಿವ್ವಳ ಲಾಭದ ಕುಸಿತ ಗರಿಷ್ಠ ಮಟ್ಟದಲ್ಲಿದ್ದರೆ, ಖಾಸಗಿ ಬ್ಯಾಂಕ್‌ಗಳು ಸಣ್ಣ ಪ್ರಮಾಣದ ಇಳಿಕೆ ದಾಖಲಿಸುವ ಸಾಧ್ಯತೆ ಇದೆ.

ವಸೂಲಿ ಆಗದ ಸಾಲದ ಮೊತ್ತವೂ ಬಹಳ ಹೆಚ್ಚಿರುವುದು, ಬಡ್ಡಿ ಮೂಲದ ಆದಾಯ ಪ್ರಮಾಣದಲ್ಲಿಯೂ ಈ ಬಾರಿ ಗಮನಾರ್ಹ ಇಳಿಕೆಯಾಗಿರುವುದು ಮೊದಲಾದ ನಕಾರಾತ್ಮಕ ಅಂಶಗಳು ಸರ್ಕಾರದ ಒಡೆತನದ ಬ್ಯಾಂಕ್‌ಗಳನ್ನು ಹಿನ್ನಡೆಗೆ ದೂಡಿವೆ ಎಂದು ಅಧ್ಯಯನ ವರದಿ ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT