ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಜೇಬಿಗೆ ದೊಡ್ಡಣ್ಣನ ಕತ್ತರಿ

Last Updated 5 ಜನವರಿ 2011, 7:15 IST
ಅಕ್ಷರ ಗಾತ್ರ

ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮೇಲೆ ಅಮೆರಿಕ ಮತ್ತೊಮ್ಮೆ ಕೆಂಗಣ್ಣು ಬೀರಿದೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದ ಮೇಲೆ 2001ರ ಸೆಪ್ಟೆಂಬರ್ 11ರಂದು ನಡೆದ ದಾಳಿಯ ಅವಶೇಷಗಳನ್ನು ತೆರವುಗೊಳಿಸುವಾಗ ಬಲಿಯಾದವರಿಗೆ ಪರಿಹಾರ ನೀಡಲು ಹಾಗೂ ಗಾಯಗೊಂಡವರಿಗೆ ಆರೋಗ್ಯದ ವೆಚ್ಚಗಳನ್ನು ಭರಿಸುವ ಜವಾಬ್ದಾರಿಯನ್ನು ತಂತ್ರಜ್ಞಾನ ಸೇವಾ ಕಂಪೆನಿಗಳ ಹೆಗಲಿಗೆ ಹಾಕಲು ಮುಂದಾಗಿದೆ. ದಾಳಿ ನಡೆಸಿದ್ದು ಅಲ್-ಖೈದಾ ಉಗ್ರರು, ಬಲಿಯಾದವರು ಅಮೆರಿಕನ್ನರು, ಆದರೆ, ಇವರಿಗೆ ಭಾರತದ ತಂತ್ರಜ್ಞರು ಪರಿಹಾರ ನೀಡಬೇಕಾಗಿ ಬಂದಿದೆ. ನೋಡಿ ಹೇಗಿದೆ ‘ದೊಡ್ಡಣ್ಣ’ನ ನ್ಯಾಯ!

ದಾಳಿಯ ಅವಶೇಷಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮಡಿದವರಿಗೆ ಪರಿಹಾರ ಹಾಗೂ ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ‘ಜೇಮ್ಸ್ ಜಡ್ರೊಗಾ 9/11 ಹೆಲ್ತ್ ಅಂಡ್ ಕಂಪ್ಯಾನ್ಶೇಷನ್ ಆ್ಯಕ್ಟ್’ ಜಾರಿ ತರಲು ಅಮೆರಿಕ ಸಿದ್ಧತೆ ನಡೆಸಿದೆ. ಈ ಮಸೂದೆಗೆ ಈಗಾಗಲೇ ಸಂಸತ್ತಿನಲ್ಲಿ 206-60 ಮತಗಳ ಅಂತರದಿಂದ ಅನುಮೋದನೆ ದೊರೆತಿದೆ. ಕಾನೂನಾಗಿ ರೂಪುಗೊಳ್ಳಲು ಅಧ್ಯಕ್ಷ ಬರಾಕ್ ಒಬಾಮಾ ಅವರ ಅಂಕಿತವೊಂದೇ ಬಾಕಿ ಇದೆ.

ವಿದೇಶಿ ಕಂಪೆನಿಗಳಿಗೆ ನೀಡಲಾಗುವ ಎಚ್-1ಬಿ, ಎಲ್1 ವೀಸಾ ಶುಲ್ಕವನ್ನು ಹೆಚ್ಚಿಸುವುದು ಹಾಗೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಸುಂಕ ಹೇರುವ ಮೂಲಕ ಹಣ ಸಂಗ್ರಹಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ತಮ್ಮ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸಿಕೊಡಲು ಭಾರತೀಯ ಕಂಪೆನಿಗಳು ಹೆಚ್ಚಾಗಿ ಎಚ್-1ಬಿ ವೀಸಾವನ್ನು ಬಳಸುತ್ತವೆ. ಇದರಿಂದಾಗಿ ಪರೋಕ್ಷವಾಗಿ ಈ ವೆಚ್ಚವನ್ನು ಭಾರತೀಯರೇ ಭರಿಸಿದಂತಾಗುತ್ತದೆ. ಇನ್ನುಳಿದಂತೆ ಚೀನಾ, ಥಾಯ್ಲೆಂಡ್ ಹಾಗೂ ಇತರ ಏಷ್ಯಾದ ಕಂಪೆನಿಗಳು ಸಹ ಎಚ್-1ಬಿ ವೀಸಾ ಬಳಸುತ್ತವೆ.

ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಅಮೆರಿಕ ಮೂಲದ ಕಂಪೆನಿಗಳಾದ ಮೈಕ್ರೊಸಾಫ್ಟ್, ಐಬಿಎಂ, ಅರಾಕಲ್, ಇಂಟೆಲ್, ಆ್ಯಪಲ್ ಹಾಗೂ ಇತರ ಕಂಪೆನಿಗಳ ಉದ್ಯೋಗಿಗಳನ್ನು ಮಸೂದೆಯಿಂದ ಹೊರಗಿಟ್ಟಿರುವುದು. ಇದಕ್ಕೆ ಭಾರತೀಯ ಐ.ಟಿ ರಂಗವು ಸಾಕಷ್ಟು ವಿರೋಧ ವ್ಯಕ್ತಪಡಿಸಿದೆ.

ಅಮೆರಿಕ ಪ್ರತಿ ಬಾರಿ ತೆರಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸುವಾಗ ಸ್ಥಳೀಯ ಕಂಪೆನಿಗಳಿಗೆ ವಿನಾಯ್ತಿ ನೀಡುತ್ತದೆ ಹಾಗೂ ವಿದೇಶಿ ಕಂಪೆನಿಗಳ ಮೇಲೆ ಗದಾಪ್ರಹಾರ ಬೀಸುತ್ತದೆ ಎನ್ನುವುದು ಭಾರತೀಯ ತಂತ್ರಜ್ಞರ ಅಳಲು.

ವೀಸಾ ಶುಲ್ಕ ಹೆಚ್ಚಳವಲ್ಲದೇ, ವಿಶ್ವ ವ್ಯಾಪಾರ ಒಪ್ಪಂದ ಹೊಂದಿರದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಸರಕು ಹಾಗೂ ಸೇವೆಯ ಮೇಲೆ ಶೇ 2ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಆದಾಯಕ್ಕೆ ಕುತ್ತು
ಹಾಗೊಂದು ವೇಳೆ, ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಲ್ಲಿ ಐದು ವರ್ಷಗಳ ಅವಧಿಯಲ್ಲಿ ರೂ 20,150 ಕೋಟಿಗಳಷ್ಟು ಬೃಹತ್ ಮೊತ್ತವನ್ನು ತೆರಿಗೆ ರೂಪದಲ್ಲಿ ಭಾರತೀಯ ಹಾಗೂ ಇತರೆ ದೇಶಗಳ ಕಂಪೆನಿಗಳು ಭರಿಸಬೇಕಾಗುತ್ತದೆ. ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಇನ್ಫೋಸಿಸ್, ಮಹೀಂದ್ರಾ ಸತ್ಯಂ, ವಿಪ್ರೊ ಸೇರಿದಂತೆ ಹಲವು ಕಂಪೆನಿಗಳ ಆದಾಯದ ಮೇಲೆ ಇದು ಭಾರಿ ಪರಿಣಾಮವನ್ನು ಬೀರಲಿದೆ. ಈ ಕಂಪೆನಿಗಳ ಶೇ 60ಕ್ಕೂ ಹೆಚ್ಚು ವಹಿವಾಟು ಅಮೆರಿಕ ಮೂಲದಿಂದ ಬರುವುದರಿಂದ ತೆರಿಗೆ ಮೊತ್ತದ ಹೊಡೆತ ಜೋರಾಗಿ ಬೀಳಲಿದೆ.  ಸದ್ಯಕ್ಕೆ ಅಮೆರಿಕದ ಗ್ರಾಹಕರಿಂದ 2.5 ಲಕ್ಷ ಕೋಟಿ ರೂಪಾಯಿ ಆದಾಯ ಬರುತ್ತಿದೆ.

ಇದೇ ಮೊದಲ ಸಲವಲ್ಲ
‘ಇದಕ್ಕೂ ಮೊದಲು ಆಗಸ್ಟ್ ತಿಂಗಳಿನಲ್ಲಿ ಅಮೆರಿಕ ಸರ್ಕಾರವು ‘ಗಡಿ ಭದ್ರತಾ ಸುರಕ್ಷತೆ’ಗಾಗಿ ಹಣ ಕ್ರೋಡೀಕರಿಸಲು ಎಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿತ್ತು. ಇದರಿಂದಾಗಿ ಒಟ್ಟಾರೆ ಭಾರತೀಯ ಕಂಪೆನಿಗಳಿಗೆ 1,000 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿತ್ತು. ಈಗ ಪುನಃ ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಮತ್ತೊಮ್ಮೆ ‘ವೀಸಾ ಶುಲ್ಕ’ ಬ್ರಹ್ಮಾಸ್ತ್ರವನ್ನು ಅಮೆರಿಕ ಪ್ರಯೋಗಿಸಿದೆ. ‘ಜೇಮ್ಸ್ ಜಡ್ರೊಗಾ 9/11 ಹೆಲ್ತ್ ಅಂಡ್ ಕಂಪ್ಯಾನ್ಶೇಷನ್ ಆ್ಯಕ್ಟ್’ ಹೆಸರಿನಲ್ಲಿ ಚಂದಾ ಎತ್ತಲು ಹೊರಟಿದೆ. ಹೀಗೆ ಪ್ರತಿ ಬಾರಿಯೂ ಅಮೆರಿಕ ಸರ್ಕಾರಕ್ಕೆ ಭಾರತೀಯ ತಂತ್ರಜ್ಞರೇ ಕಣ್ಣಿಗೆ ಬೀಳುವುದು’ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ಹೇಳಿದರು.

ಈಡೇರದ ಒಬಾಮಾ ಆಶ್ವಾಸನೆ
ನವೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಅವೆುರಿಕ ಹಾಗೂ ಭಾರತದ ನಡುವೆ ಇರುವ ವ್ಯಾಪಾರ ಕಟ್ಟಳೆಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದಾಗಿ ಭರವಸೆ ನೀಡಿ ಆಶಾಭಾವನೆ ಚಿಗುರಿಸಿದ್ದರು. ಆದರೆ ಈಗ ಆಗಿದ್ದೇ ಬೇರೆ. ಇಲ್ಲಿಂದ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಹೋದ ಒಬಾಮಾ ತಮ್ಮ ಮಾತು ಮರೆತಂತಿದೆ.

ಒಬಾಮಾ ಭಾರತಕ್ಕೆ ಭೇಟಿ ನೀಡುವ ಮೊದಲು ಅಲ್ಲಿ ನಡೆದ ಬೆಳವಣಿಗೆಗಳನ್ನು ಸ್ವಲ್ಪ ಗಮನಿಸಬೇಕು. ಹೊರಗುತ್ತಿಗೆಯಿಂದ ಸ್ಥಳೀಯರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಹೊರಗುತ್ತಿಗೆ ನೀಡುವ ಕಂಪೆನಿಗಳಿಗೆ ತೆರಿಗೆ ವಿನಾಯಿತಿ ನಿರಾಕರಿಸುವ ಮಸೂದೆಯನ್ನು ಸೆಪ್ಟೆಂಬರ್‌ನಲ್ಲಿ ಜಾರಿಗೆ ತರಲು ಹೊರಟಿದ್ದರು ಆದರೆ, ಅವರದ್ದೇ ಪಕ್ಷದ ರಿಪಬ್ಲಿಕನ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿದ್ದರಿಂದ ಈ ಮಸೂದೆ ಬಿದ್ದು ಹೋಯಿತು ಎನ್ನುವುದು ಗಮನಾರ್ಹ.

ಇದಲ್ಲದೇ, ವಿದೇಶಿಗರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನು ತಡೆಗಟ್ಟುವ ಉದ್ದೇಶ ಹೊಂದಿದ್ದ ‘ಕ್ರಿಯೇಟಿಂಗ್ ಅಮೆರಿಕನ್ ಜಾಬ್ಸ್ ಅಂಡ್ ಆಫ್‌ಶೋರಿಂಗ್ ಆ್ಯಕ್ಟ್’ ಮಸೂದೆಗೂ ಸೋಲು ಉಂಟಾಯಿತು. ಹೊರಗುತ್ತಿಗೆ ನಮಗೆ ಎಷ್ಟು ಮುಖ್ಯವೋ ಅಮೆರಿಕಕ್ಕೂ ಅಷ್ಟೇ ಮುಖ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT