ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಬಾಂಧವರನ್ನು ಬೆಸೆಯುವ ಬಾಂಧವ್ಯ...

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ವಾರವಿಡೀ ಒತ್ತಡದಿಂದ ಕೆಲಸ ಮಾಡಿದ ದೇಹ, ಮನ ಕೊಂಚ ವಿಶ್ರಾಂತಿ ಬೇಡುವುದು ಸಹಜ. ದೊಡ್ಡ ದೊಡ್ಡ ಕಂಪನಿಗಳ ಉದ್ಯೋಗಿಗಳಿಗೆ  ಇದಕ್ಕೆಂದೇ ವಾರದ ಎರಡು ದಿನ ಮೀಸಲು. ವೀಕೆಂಡ್ ಎಂದರೆ ಕೇಳಬೇಕೆ, ಶಾಪಿಂಗ್, ಪಾರ್ಟಿ, ಸಿನಿಮಾ, ಮೋಜು, ಮಸ್ತಿ ಇದ್ದೇ ಇರುತ್ತದೆ. ಐಟಿ ಕ್ಷೇತ್ರದ ಉದ್ಯೋಗಿಗಳೆಂದರೆ ಎಲ್ಲರಿಗೂ ಇದೇ ಭಾವನೆ.

ತಂತ್ರಜ್ಞಾನ ಕ್ಷೇತ್ರದಲ್ಲಿದ್ದುಕೊಂಡು ಸಾಹಿತ್ಯ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ವಿರಾಮದ ದಿನಗಳನ್ನು ಕಳೆಯ ಬಯಸುವವರು ಬೆರಳೆಣಿಕೆಯಷ್ಟು. ಆದರೆ ಇಲ್ಲೂ ಸಾಹಿತ್ಯದ ಒಲವಿಟ್ಟುಕೊಂಡವರಿದ್ದಾರೆ. ಇವರೆಲ್ಲರೂ ಒಂದೆಡೆ ಸೇರುವಂತಾದರೆ ?
ಇದರ ಸಾಕಾರಕ್ಕಾಗಿ ಹುಟ್ಟಿದ್ದೇ `ಬಾಂಧವ್ಯ~.

ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಮಾನ ಮನಸ್ಕ ಗೆಳೆಯರ ಒಕ್ಕೂಟವೇ ಬಾಂಧವ್ಯ. ಇದು ವರ್ಷದಿಂದ ಅನೇಕ ಮನಸುಗಳೊಡನೆ ಬಾಂಧವ್ಯ ಬೆಸೆಯುತ್ತಾ ಬಂದಿದೆ.

ಪ್ರತಿ ತಿಂಗಳ ಮೂರನೇ ಶನಿವಾರ ಪ್ರವಚನ, ಗೋಷ್ಠಿ, ಸಂವಾದ ನಡೆಸುತ್ತಾ ಹಲವು ಚಟುವಟಿಕೆಗಳಲ್ಲಿ ನಿರತವಾಗಿರುವ ಬಾಂಧವ್ಯಕ್ಕೀಗ ವರ್ಷ ತುಂಬಿದೆ. 2010 ನವೆಂಬರ್‌ನಲ್ಲಿ `ವಾಕ್ ಮೈಲ್ಸ್ ವಿತ್ ಸ್ಮೈಲ್~ ಎನ್ನುವ ಲೋಗೊ ಇಟ್ಟುಕೊಂಡು ಆರಂಭವಾದ ಸಂಸ್ಥೆ ಇದುವರೆಗೂ 13 ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಮುನ್ನೂರು ಸದಸ್ಯರು ಈಗ ಬಾಂಧವ್ಯದ ಬಳಗಲ್ಲಿದ್ದಾರೆ. ಪ್ರತಿ ತಿಂಗಳು ಸಾಹಿತಿಗಳೊಂದಿಗೆ ಸಂವಾದ ಏರ್ಪಡಿಸಲಾಗುತ್ತದೆ. ಈಗಾಗಲೇ ಅರಳು ಮಲ್ಲಿಗೆ ಪಾರ್ಥಸಾರಥಿ, ಎಚ್.ಎಸ್.ಲಕ್ಷ್ಮಿನಾರಾಯಣ ಭಟ್ ಮೊದಲಾದವರು ಬಾಂಧವ್ಯದ ಆತಿಥ್ಯಕ್ಕೆ ಭಾಜನರಾಗಿದ್ದಾರೆ. ವರ್ಷಾಚರಣೆ ಪ್ರಯುಕ್ತ ಸಂಸ್ಥೆ ಭಿನ್ನ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

`ನಮ್ಮ ವಿರಾಮದ ಸಮಯವನ್ನು ಈ ರೀತಿಯ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ನೆಮ್ಮದಿ ತಂದಿದೆ. ಪ್ರತಿದಿನ ಕಂಪ್ಯೂಟರ್, ಕೀಬೋರ್ಡ್ ಜೊತೆಗಷ್ಟೆ ನಮ್ಮ ಮಾತು. ಹೀಗಾಗಿ ಮಾನವ ಸಂಬಂಧಗಳು ದೂರವಾಗುತ್ತಿವೆ. ಹೀಗಾಗಬಾರದೆಂದು ಒಂದಷ್ಟು ಜನ ಒಟ್ಟುಗೂಡಿ ಬಾಂಧವ್ಯವನ್ನು ಹುಟ್ಟುಹಾಕಿದ್ದೇವೆ~ ಎನ್ನುವಾಗ ದಯಾನಂದ (ಸಂಸ್ಥೆಯ ಪ್ರಧಾನ ಸಮನ್ವಯಕ) ಅವರಲ್ಲಿ ಸಾರ್ಥಕ್ಯಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT