ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್ ಟೆನಿಸ್: ಬಾಲಾಜಿ-ರಾಜಗೋಪಾಲನ್‌ಗೆ ಪ್ರಶಸ್ತಿ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಅಗ್ರಶ್ರೇಯಾಂಕದ ಜೋಡಿ ಎನ್. ಶ್ರೀರಾಮ ಬಾಲಾಜಿ ಮತ್ತು ಅರುಣಪ್ರಕಾಶ್ ರಾಜಗೋಪಾಲನ್ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಜುವಾರಿ ಗಾರ್ಡನ್ ಸಿಟಿ ಐಟಿಎಫ್ ಟೆನಿಸ್ ಟೂರ್ನಿಯ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಮಧ್ಯಾಹ್ನ ನಡೆದ ಫೈನಲ್ ಪಂದ್ಯದಲ್ಲಿ ಬಾಲಾಜಿ ಮತ್ತು ರಾಜಗೋಪಾಲನ್ 3-6, 6-1, 10-6ರಿಂದ ಭಾರತದ ಕುನಾಲ್ ಆನಂದ್ ಮತ್ತು ಅಜಯ್ ಸೆಲ್ವರಾಜ್ ವಿರುದ್ಧ ಜಯಗಳಿಸಿದರು.

58 ನಿಮಿಷ ನಡೆದ ಪಂದ್ಯದಲ್ಲಿ ಉತ್ತಮ ಸಂಯೋಜನೆಯ ಆಟ ಪ್ರದರ್ಶಿಸಿದ ಬಾಲಾಜಿ ರಾಜಗೋಪಾಲ್ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸೋತರೂ ನಂತರದ ಸೆಟ್ ಅನ್ನು ಸುಲಭವಾಗಿ ಗೆದ್ದುಕೊಂಡರು. ಸಿಂಗಲ್ಸ್‌ನಲ್ಲಿ ಪ್ರಯಾಸದ ಜಯ ಸಾಧಿಸಿದ್ದ ಬಾಲಾಜಿ, ಡಬಲ್ಸ್‌ನಲ್ಲಿಯೂ ಚುರುಕಿನ ಆಟ ಪ್ರದರ್ಶಿಸಿದರು.

ಮಂಡ್ಯದ ಟೂರ್ನಿಯಲ್ಲಿಯೂ ಈ ತಮಿಳುನಾಡಿನ ಜೋಡಿಯು ಡಬಲ್ಸ್ ಪ್ರಶಸ್ತಿ ಗೆದ್ದಿತ್ತು.  18 ಪಾಯಿಂಟ್‌ಗಳೊಂದಿಗೆ 35,280 ರೂಪಾಯಿ ಮೊತ್ತದ ಪ್ರಶಸ್ತಿಯನ್ನು ಈ ಜೋಡಿಯು ಗಳಿಸಿತು.
ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಪ್ರಶಸ್ತಿ ವಿತರಿಸಿದರು. ಎಂಟಿಸಿ ಅಧ್ಯಕ್ಷ ಡಾ. ಎನ್.ಎಂ. ಶ್ರೀನಿವಾಸ್, ಪಿಇಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಡಾ. ಎಚ್.ಎಸ್. ರವೀಂದ್ರ ಮತ್ತಿತರರು ಹಾಜರಿದ್ದರು.

ಪ್ರಶಸ್ತಿ ಹಣಾಹಣಿಯಲ್ಲಿ ವಿಷ್ಣು, ಬಾಲಾಜಿ:  ಭಾರತದ ವಿಷ್ಣುವರ್ಧನ್ ಮತ್ತು ಶ್ರೀರಾಮ ಬಾಲಾಜಿ ಶನಿವಾರ ನಡೆಯಲಿರುವ ಸಿಂಗಲ್ಸ್‌ನ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದ್ದಾರೆ.

ಎರಡನೆ ಶ್ರೇಯಾಂಕದ ವಿಷ್ಣುವರ್ಧನ್ 6-7(7), 6-2, 7-6(4) ರಿಂದ ಮೂರನೆ ಶ್ರೇಯಾಂಕದ ವೈಜಯಂತ್ ಮಲ್ಲಿಕ್ ವಿರುದ್ಧ ಜಯಿಸಿದರು.

ತೀವ್ರ ತುರುಸಿನಿಂದ ಕೂಡಿದ್ದ ಸೆಮಿಫೈನಲ್‌ನಲ್ಲಿ ಮೊದಲ ಸೆಟ್‌ನಲ್ಲಿ ವಿಷ್ಣುಗೆ ಮಲ್ಲಿಕ್ ಆಘಾತ ನೀಡಿದರು. ಉತ್ತಮ ಸರ್ವಿಸ್ ಮೂಲಕ ಡೆವಿಸ್ ಕಪ್ ಆಟಗಾರನಿಗೆ ಮಲ್ಲಿಕ್ ಸವಾಲು ಒಡ್ಡಿದರು. ಆದರೆ ಎರಡನೇ ಸೆಟ್ ಅನ್ನು ವಿಷ್ಣು ನಿರಾಯಾಸವಾಗಿ ತಮ್ಮದಾಗಿಸಿಕೊಂಡು ತಿರುಗೇಟು ನೀಡಿದರು.

ನಂತರದ ಟೈಬ್ರೇಕರ್‌ನಲ್ಲಿ ವೈಜಯಂತ್ ಛಲ ಬಿಡದೇ ಹಲವು ಬಾರಿ ವಿಷ್ಣುಗೆ ತಡೆಯೊಡ್ಡಿದರು. ಶಾಂತಚಿತ್ತದಿಂದ ಆಡಿದ ವಿಷ್ಣು  ಎದುರಾಳಿಯನ್ನು ಮಣಿಸಿದರು.

ಕಾಡಿದ ಕಿಟ್ಟಿಪಾಂಗ್: ಗುರುವಾರ ಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಟಿ ಚೇನ್‌ಗೆ ಸೋಲಿನ ರುಚಿ ತೋರಿಸಿದ್ದ ಎಂಟನೇ ಶ್ರೇಯಾಂಕದ ಅಟಗಾರ ಥಾಯ್ಲೆಂಡ್‌ನ ಕಿಟ್ಟಿಪಾಂಗ್ ವಾಚಿರಮನೊವಾಂಗ್ ಶ್ರೀರಾಮ ಬಾಲಾಜಿಯವರಿಗೆ ಸುಲಭವಾಗಿ ಮಣಿಯಲಿಲ್ಲ.

2ತಾಸು, ನಲ್ವತ್ತು ನಿಮಿಷ ನಡೆದ ಸೆಮಿಫೈನಲ್‌ನಲ್ಲಿ ಬಾಲಾಜಿ 4-6, 7-6 (10), 7-5ರಿಂದ ಕಿಟ್ಟಿಪಾಂಗ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು.

ಮೊದಲ ಸೆಟ್‌ನಲ್ಲಿಯೇ ಆಘಾತ ನೀಡಿದ ಕಿಟ್ಟಿಪಾಂಗ್ ಅಪಾಯಕಾರಿಯಾಗಿ ಬೆಳೆದರು. ಎರಡನೆ ಸೆಟ್‌ನಲ್ಲಿ ತೀವ್ರ ಸೆಣಸಾಟ ಕಂಡುಬಂದಿತು. ಈ ಸಂದರ್ಭದಲ್ಲಿ ಕೆಲವು ಸ್ವಯಂಕೃತ ತಪ್ಪುಗಳಿಂದ ಬಾಲಾಜಿ ಕಠಿಣ ಸವಾಲು ಎದುರಿಸಬೇಕಾಯಿತು.

ಈ ಸಂದರ್ಭದಲ್ಲಿ ಮಳೆ ಬಂದು ಕೆಲವು ನಿಮಿಷಗಳವರೆಗೆ ಆಟ ಸ್ಥಗಿತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT