ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ ವಿದ್ಯಾರ್ಥಿಗಳಿಗೆ ವಿಮೆ

Last Updated 22 ಜನವರಿ 2013, 11:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿದ್ಯಾನಗರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷಗಳ ಹಿಂದೆ ತರಬೇತಿಗೆ ಸಂಸ್ಥೆಗೆ ಬೆಳಿಗ್ಗೆ ಬಂದ ವಿದ್ಯಾರ್ಥಿನಿಯೊಬ್ಬಳು ನಿತ್ರಾಣದಿಂದ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಶಿಕ್ಷಕರೇ ಕೊಡಿಸಿದರು. ಆಕೆಗೆ ಪ್ರಜ್ಞೆ ಬರುವವರೆಗೆ ಆಕೆಯ ಮನೆಯವರನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗಲಿಲ್ಲ. ನಂತರವಷ್ಟೇ ಆಕೆಯ ತಂದೆಗೆ ವಿಷಯ ತಿಳಿಸಲಾಯಿತು. ಹಳ್ಳಿಯ ಹುಡುಗಿ ಆಗಿದ್ದರಿಂದ ಮನೆ ಮಂದಿ ಬರುವಾಗ ತಡ ಕೂಡ ಆಗಿತ್ತು. ಹೀಗಾಗಿ ಆಸ್ಪತ್ರೆ ವೆಚ್ಚವನ್ನು ಶಿಕ್ಷಕರೇ ಭರಿಸಿದ್ದರು.

ತರಬೇತಿಗಾಗಿ ಸಂಸ್ಥೆಗೆ ಬಂದ ವಿದ್ಯಾರ್ಥಿನಿಯರು ಅಸ್ವಸ್ಥರಾದರೆ ಅವರಿಗೆ ಚಿಕಿತ್ಸೆ ಕೊಡಿಸಲು, ಹಣ ಹೊಂದಿಸಿಕೊಳ್ಳಲು ಈಗ ಶಿಕ್ಷಕರು ಪರದಾಡಬೇಕಿಲ್ಲ. ವಿದ್ಯಾರ್ಥಿಗಳಿಗೂ ಯಾವುದೇ ಆತಂಕವಿಲ್ಲ. ಏಕೆಂದರೆ ವಿದ್ಯಾರ್ಥಿಗಳನ್ನು ಆರೋಗ್ಯ ವಿಮೆ ರಕ್ಷಾ ಕವಚದ ವ್ಯಾಪ್ತಿಗೆ ತರಲಾಗಿದೆ.

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭವಾದ 50 ಐಟಿಐಗಳಲ್ಲಿ ಹುಬ್ಬಳ್ಳಿಯ ಈ ಸಂಸ್ಥೆಯೂ ಸೇರಿದೆ. ಈ ಸಂಸ್ಥೆಯಲ್ಲಿ ಸುಮಾರು 20 ವಿಭಾಗಗಳಲ್ಲಿ ಒಟ್ಟು 732 ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರನ್ನೂ ಆರೋಗ್ಯ ವಿಮೆಯ ವ್ಯಾಪ್ತಿಗೆ ತರಬೇಕು ಎಂಬ ಪ್ರಾಚಾರ್ಯ ರವೀಂದ್ರ ಪಿ. ಶಿಗ್ಗಾಂವಕರ ಕನಸು ಈಗ ನನಸಾಗಿದೆ.

ಖಾಸಗಿ ವಿಮಾ ಸಂಸ್ಥೆಯ ಸಹಯೋಗದಲ್ಲಿ ಅವರು ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಒದಗಿಸಿದ್ದಾರೆ. ಸೇವಾ ತೆರಿಗೆ ಒಳಗೊಂಡು ಒಟ್ಟು 100 ರೂಪಾಯಿ ಕೊಟ್ಟರೆ ಸಾಕು. ಗಾಯ ಮತ್ತಿತರ ಗಂಭೀರ ತೊಂದರೆಯಾದರೆ ಒಬ್ಬ ವಿದ್ಯಾರ್ಥಿ ಒಂದು ವರ್ಷದಲ್ಲಿ 25 ಸಾವಿರ ರೂಪಾಯಿವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಸಾವಿಗೀಡಾದರೆ ಹತ್ತಿರದ ಸಂಬಂಧಿಕರಿಗೆ ಇಷ್ಟು ಮೊತ್ತವನ್ನು ನೀಡಲಾಗುವುದು. ಹೊರರೋಗಿಗಳು 1,000 ರೂಪಾಯಿವರೆಗಿನ ಉಚಿತ ಚಿಕಿತ್ಸೆಗೆ ಅರ್ಹರು. ರಾಜ್ಯದ ಐಟಿಐಗಳಲ್ಲಿ ಇಂಥ ಪ್ರಯೋಗ ಇದೇ ಮೊದಲು ಎಂಬುದು ವಿಶೇಷ.

`ಐಟಿಐಗಳಲ್ಲಿ ಕಲಿಕೆ ಹೆಚ್ಚಿನ ಸಂದರ್ಭದಲ್ಲಿ ಯಂತ್ರೋಪಕರಣಗಳ ಮೂಲಕ ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾದ್ದರಿಂದ ಅವರ ಬಳಿ ಚಿಕಿತ್ಸೆಗೆ ತಕ್ಷಣ ಹಣ ಇರುವುದಿಲ್ಲ. ಕೆಲವರಿಗೆ ಆ ನಂತರವೂ ಹಣ ಹೊಂದಿಸುವುದು ಕಷ್ಟವಾಗುತ್ತದೆ. ಇದನ್ನು ಮನಗಂಡು ವಿಮೆ ಮಾಡಿಸಲಾಗಿದೆ' ಎಂದು ಪ್ರಾಚಾರ್ಯರು `ಪ್ರಜಾವಾಣಿ'ಗೆ ತಿಳಿಸಿದರು.

`ಕೆಲವು ಕೋರ್ಸ್‌ಗಳು ಎರಡು ವರ್ಷ ಅವಧಿಯದ್ದು. ಇನ್ನು ಕೆಲವು ಒಂದು ವರ್ಷದ್ದು. ಕನಿಷ್ಠ ಆರು ತಿಂಗಳ ಕೋರ್ಸ್ ಕೂಡ ಇದೆ. ಎರಡು ವರ್ಷಗಳ ಕೋರ್ಸ್ ಮಾಡುವವರು ಪ್ರಥಮಾರ್ಧ ಮುಗಿದ ಕೂಡಲೇ ವಿಮೆಯನ್ನು ನವೀಕರಿಸಿಕೊಳ್ಳಬೇಕಾಗುತ್ತದೆ. ರಾಜ್ಯದ ಎಲ್ಲ ಸಂಸ್ಥೆಗಳಲ್ಲೂ ಈ ರೀತಿಯ ಯೋಜನೆ ಜಾರಿಗೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ' ಎಂಬುದು ಪ್ರಾಚಾರ್ಯರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT