ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐಗಳಿಗೂ ವಿದ್ಯಾರ್ಥಿಗಳ ಕೊರತೆ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಐಟಿಐ ಪ್ರವೇಶಕ್ಕೆ ಮೂರನೇ ಸುತ್ತಿನ ಕೌನ್ಸೆಲಿಂಗ್ ಮುಗಿದಿದ್ದು, ಈ ಹಿಂದೆ ಅರ್ಜಿ ಸಲ್ಲಿಸದೇ ಇದ್ದವರು ಮತ್ತೆ ಅರ್ಜಿ ಸಲ್ಲಿಸಲು ಇದೇ 26ರ ವರೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಗೆ ಬರಲಿದೆ.

ಪ್ರಸಕ್ತ ಸಾಲಿನ ಐಟಿಐ ಪ್ರವೇಶ ಪ್ರಕ್ರಿಯೆಯು ಆನ್‌ಲೈನ್ ಮೂಲಕ ಮೇ 14ರಿಂದ ಆರಂಭಗೊಂಡಿತ್ತು. ಈ ವರ್ಷ ರಾಜ್ಯದ 158 ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 24,065 ಸೀಟುಗಳನ್ನು ಹಂಚಿಕೆಗೆ ಇಡಲಾಗಿತ್ತು. ಇದೇ 16ರಂದು ಅಂತ್ಯಗೊಂಡ ಮೂರನೇ ಸುತ್ತಿನ ದಾಖಲಾತಿ ಪ್ರಕ್ರಿಯೆ ವೇಳೆಗೆ 14,518 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇನ್ನೂ 9547 ಸೀಟುಗಳು ಉಳಿದುಕೊಂಡಿವೆ.

ಈ ಹಿನ್ನೆಲೆಯಲ್ಲಿ, ಈ ವರ್ಷ ಅರ್ಜಿ ಸಲ್ಲಿಸದವರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 17ರಿಂದ ಆರಂಭಗೊಂಡಿದ್ದು, 26ರ ವರೆಗೆ ಮುಂದುವರಿಯಲಿದೆ.

ರಾಜ್ಯದ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ನಂತರ ಮೆರಿಟ್ ಪಟ್ಟಿ ಪ್ರಕಟಗೊಂಡು ನಾಲ್ಕನೇ ಸುತ್ತಿನ ದಾಖಲಾತಿ ಪ್ರಕ್ರಿಯೆ ನಡೆಯಲಿದೆ.

ಇತ್ತೀಚಿನ ವರ್ಷಗಳಲ್ಲಿ ಐಟಿಐಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ ಇಲಾಖೆಯು ಕೆಲವು ಮಾರ್ಪಾಡುಗಳನ್ನು ಮಾಡಿದೆ. ಸ್ಟೆನೋಗ್ರಫಿ, ಕೋಪಾ ಮೊದಲಾದ ಟ್ರೇಡ್‌ಗಳಿಗೆ ಈ ಹಿಂದೆ ದ್ವಿತೀಯ ಪಿಯು ಉತ್ತೀರ್ಣರಾದವರಿಗೆ ಮಾತ್ರ ಪ್ರವೇಶ ನೀಡಲಾಗುತಿತ್ತು. ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರೂ ಪ್ರವೇಶ ಪಡೆಯಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಉಪನಿರ್ದೇಶಕ ರವೀಂದ್ರನಾಥ ಶಿಗ್ಗಾಂವಕರ ತಿಳಿಸಿದರು.

ಸೆಮಿಸ್ಟರ್ ಪದ್ಧತಿ: ಉದ್ಯೋಗ ಮತ್ತು ತರಬೇತಿ ಇಲಾಖೆಯು ಇದೇ ಮೊದಲ ಬಾರಿಗೆ ರಾಜ್ಯದ ಐಟಿಐಗಳಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಪರಿಚಯಿಸುತ್ತಿದೆ. `ಕಳೆದ ವರ್ಷದವರೆಗೂ ಕೋರ್ಸ್ ಅಂತ್ಯಕ್ಕೆ ಒಮ್ಮೆ ಮಾತ್ರ ಮುಖ್ಯ ಪರೀಕ್ಷೆ ನಡೆಸಲಾಗುತ್ತಿತ್ತು. ಎರಡು ವರ್ಷದ ಕೋರ್ಸ್‌ಗೆ ಸಹ ತರಬೇತಿಯ ಕೊನೆಯಲ್ಲಿ ಮುಖ್ಯ ಪರೀಕ್ಷೆ ನಡೆಯುತ್ತಿತ್ತು. ಆದರೆ ಈಗ ಎರಡು ವರ್ಷದ ಕೋರ್ಸ್‌ಗೆ ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡ ಪಠ್ಯಕ್ರಮ ಜಾರಿಗೆ ಬರಲಿದೆ. ಅಂತೆಯೇ ಒಂದು ವರ್ಷದ ತರಬೇತಿಯು ಎರಡು ಸೆಮಿಸ್ಟರ್‌ಗಳನ್ನು ಒಳಗೊಳ್ಳಲಿದೆ' ಎಂದು ಇಲಾಖೆಯ ಜಂಟಿ ನಿರ್ದೇಶಕ (ಹುಬ್ಬಳ್ಳಿ ವಿಭಾಗ) ಪಿ. ರಮೇಶ `ಪ್ರಜಾವಾಣಿ'ಗೆ ತಿಳಿಸಿದರು.

ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿಯಿಂದಾಗಿ ಕಲಿಕೆಯಲ್ಲಿ ಸುಧಾರಣೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. `ಈ ಹಿಂದೆ ಎರಡು ವರ್ಷದ ಅವಧಿಗೆ ಕೇವಲ ಒಮ್ಮೆ ಮಾತ್ರ ಪರೀಕ್ಷೆ ನಡೆಯುತಿತ್ತು. ವಿದ್ಯಾರ್ಥಿಗಳು ಇಡೀ ವರ್ಷದಲ್ಲಿ ಕಲಿತದ್ದನ್ನು ಒಮ್ಮೆ ಮಾತ್ರ ಪರೀಕ್ಷೆ ಬರೆಯಬೇಕಿತ್ತು. ಅಷ್ಟೆಲ್ಲ ಪಠ್ಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವಾದ ಕಾರಣ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಿದ್ದರು. ಸೆಮಿಸ್ಟರ್‌ನಿಂದಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ನಡೆಯುವ ಕಾರಣ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಅಭ್ಯಸಿಸಿ, ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಲಿದೆ' ಎನ್ನುತ್ತಾರೆ ಶಿಗ್ಗಾಂವಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT