ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐಗಿಂತ ಮೇಟಿ ವಿದ್ಯೆಯೇ ಮೇಲು

Last Updated 6 ಡಿಸೆಂಬರ್ 2013, 10:27 IST
ಅಕ್ಷರ ಗಾತ್ರ

ಕೊಪ್ಪಳ: ಫಿಟ್ಟರ್‌ ಕೆಲಸ ಕಲಿತು ಸ್ಪಾನರ್ ಹಿಡಿಯಬೇಕಾದ ಕೈ ನೇಗಿಲು ಹಿಡಿಯಿತು. ಯಾರದೋ ಹಂಗಿನಲ್ಲಿ ಅಡಿಯಾಳಾಗಿರಬೇಕಾ ಗಿದ್ದ ಸ್ವಾಭಿಮಾನಿ ತನಗೆ ತಾನೇ ಒಡೆಯನಾದ.

–ಇದು ತಾಲ್ಲೂಕಿನ ಬೆಟಗೇರಿ ಗ್ರಾಮದ ರೈತ ಮಂಜುನಾಥ ಅವರ ಯಶೋಗಾಥೆ. ಐಟಿಐಯಲ್ಲಿ ಕಲಿತದ್ದನ್ನು ಕೃಷಿ ಕ್ಷೇತ್ರಕ್ಕೆ ಅಳವಡಿ ಸಿಕೊಂಡಿದ್ದಾರೆ. ಕುಂಟೆ ಹೊಡೆಯುವುದು ಏನೂ ಗೊತ್ತಲ್ಲದಿದ್ದ ಅವರು ಈಗ ಜೋಡೆತ್ತು ಬಳಸಿ ಹೊಲ ಉಳುತ್ತಾರೆ.

2001–02ರಲ್ಲಿ ಐಟಿಐಯಲ್ಲಿ ಶೇ 70 ಅಂಕ ಪಡೆದು ಉತ್ತೀರ್ಣರಾಗಿದ್ದ ಮಂಜುನಾಥ ಸಣ್ಣ ನಿಂಬಣ್ಣ ಗೊರವರ ಅವರಿಗೆ ಯಾಕೋ ನೌಕರಿ ಮಾಡುವ ಮನಸ್ಸಾಗಲಿಲ್ಲ. ಯಾರೋ ಮಾಲೀಕನಿಗ್ಯಾಕೆ ಡೊಗ್ಗು ಸಲಾಮು ಹೊಡೆಯ ಬೇಕು ಎಂಬುದು ಅವರ ನಿಲುವು. ಇರುವ ನಾಲ್ಕು ಎಕರೆಯಲ್ಲಿ ತಮ್ಮನ್ನು ಕಾಯಕದಲ್ಲಿ ತೊಡಗಿಸಿಕೊಂಡರು. ಈಗ ಪ್ರತಿ ಎಕರೆಗೆ ಒಂಬತ್ತೂವರೆ ಕ್ವಿಂಟಲ್‌ ಹತ್ತಿ ಬೆಳೆ ಇಳುವರಿ ಪಡೆಯುತ್ತಿದ್ದಾರೆ. ಮೆಕ್ಕೆಜೋಳವನ್ನೂ ಪ್ರತಿ ಎಕರೆಗೆ 32 ಕ್ವಿಂಟಲ್‌ನಷ್ಟು ಬೆಳೆಯುತ್ತಿದ್ದಾರೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಎಕರೆಗೆ ನಿಗದಿಗಿಂತ ಹೆಚ್ಚು ಬೆಳೆ ತೆಗೆದರೆ ಈಗ ಇರುವ ಬೆಲೆ ಕುಸಿತಕ್ಕೆ ಸವಾಲೊಡ್ಡಬಹುದು ಎಂಬುದು ಅವರ ಅಭಿಮತ. ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಆರ್ಥಿಕ ಸಂಕಷ್ಟಕ್ಕೂ ಸಿಲುಕಿಲ್ಲ. ಬೆಳೆ ಸಾಲ ಮಾಡುವ ಪರಿಸ್ಥಿತಿಯೂ ಬಂದಿಲ್ಲ ಎಂದು ಖುಷಿಯಿಂದ ಹೇಳುತ್ತಾರೆ ಮಂಜುನಾಥ.

ಪ್ರಯೋಗಶೀಲ: ಬೇಸಾಯದಲ್ಲಿ ತೀವ್ರವಾಗಿ ಕಾಡುವ ಆಳುಗಳ ಕೊರತೆ ಸಮಸ್ಯೆಗೆ ಇವರು ತಾಂತ್ರಿಕತೆಯ ಮೊರೆ ಹೋದರು. ಮೆಕ್ಕೆಜೋಳ ಬಿತ್ತನೆಗೆ ಮೂವರು ಆಳು ಬೇಕಾಗುತ್ತದೆ. ಆದರೆ, ಇವರು ರೂಪಿಸಿದ ಬಿತ್ತನೆ ಬೀಜ ಊರುವ ಸಲಕರಣೆ ನಾಲ್ಕು ಆಳಿನ ಕೆಲಸ ಮಾಡಿತು. ಆಲಿಕೆಯೊಂದಕ್ಕೆ ನಾಲ್ಕು ಕವಲು ರೂಪಿಸಿ ಒಂದಿಂಚು ಪೈಪ್‌ ಮೂಲಕ ಬಿತ್ತನೆ ಬೀಜ ಸುರಿಯುತ್ತಾರೆ. ಅತ್ಯಂತ ವ್ಯವಸ್ಥಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಭೂಮಿ ಸೇರುತ್ತದೆ. ಇಲ್ಲಿಗೆ ಮೂರು ಆಳುಗಳ ಸಮಸ್ಯೆ ಬಗೆಹರಿಯಿತು. ಮನೆಯಲ್ಲಿ ಬಿದ್ದಿದ್ದ ಮುರುಕು ಬೈಸಿಕಲ್‌ನ ಮುಂಭಾಗದ ಚಕ್ರ ಬಳಸಿ ಕಳೆ ಕೀಳುವ ಯಂತ್ರವನ್ನು ರೂಪಿಸಿದ್ದಾರೆ. ಒಂದೆಡೆ ರಬ್ಬರ್‌ ಗಾಲಿ, ಮತ್ತೊಂದು ಪಾರ್ಶ್ವದಲ್ಲಿ ಜೋಡಿಸಿರುವ ಹರಿತವಾದ ಅಲಗು ಕಳೆಯನ್ನು ಬೇರು ಸಹಿತ ಕಿತ್ತು ಹಾಕುತ್ತದೆ. ಕಳೆಯ ಸ್ವರೂಪ, ಭೂಮಿಯ ಅಗತ್ಯಕ್ಕನುಗುಣವಾಗಿ ಈ ಅಲಗು (ಬ್ಲೇಡ್‌) ಬದಲಾಯಿಸಬಹುದು. ತಮ್ಮ ಜಮೀನಿನ ಕಳೆ ತೆಗೆಯಲು ಆಳಿನ ಅವಲಂಬನೆ ಮಾಡಿದರೆ 50 ಆಳು ಬೇಕು. ಈಗ ಕೇವಲ 7 ಆಳುಗಳ ಮೂಲಕ ನಿರ್ವಹಿಸಬ ಹುದು ಎನ್ನುತ್ತಾರೆ ಮಂಜುನಾಥ. ತೀರಾ ಅಗತ್ಯ ಬಿದ್ದರೆ ಮಾತ್ರ ಆಳುಗಳನ್ನು ಕರೆಯು ತ್ತಾರೆ. ಉಳಿದಂತೆ ತಾಯಿ, ಪತ್ನಿ ಕುಟುಂಬ ಸಮೇತ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ರೈತ ಅನುವುಗಾರ ಏಳುಕೋಟೇಶ ಕೋಮಲಾಪುರ ಅವರು ಸೇರಿದಂತೆ ಹಲವು ಸ್ನೇಹಿತರು ಕೃಷಿ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ. ಮಂಜುನಾಥ ಅವರ ಪರಿಶ್ರಮಕ್ಕೆ ಎಲ್ಲರೂ ಅಚ್ಚರಿಪಟ್ಟಿದ್ದಾರೆ.

ಹಸಿರು ತರಕಾರಿ: ಹೊಲದಲ್ಲೇ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಸೊಪ್ಪು ತರಕಾರಿ ಬೆಳೆದಿದ್ದಾರೆ. ತಾಯಿ ನಿಂಗಮ್ಮ ಈ ಸೊಪ್ಪು ತರಕಾರಿ ಕಿತ್ತು ಮನೆಮನೆಗೆ ಹೊತ್ತು ಮಾರು ತ್ತಾರೆ. ದೈನಂದಿನ ಖರ್ಚು ಅದರಲ್ಲೇ ಸರಿದೂಗು ತ್ತದೆ. ಕೊತ್ತಂಬರಿ, ಪಾಲಕ್‌, ರಾಜಗಿರಿ, ವಡಿಚಿಕ್ಕ, ಹಸಿಮೆಣಸು ಇಲ್ಲಿ ಬೆಳೆಯುತ್ತಾರೆ.

ಜಾಗ ವ್ಯರ್ಥವಿಲ್ಲ: ಜಮೀನಿನಲ್ಲಿ ಎಲ್ಲಿಯೂ ಸ್ಥಳ ವ್ಯರ್ಥವಾಗಲು ಬಿಟ್ಟಿಲ್ಲ. ಅಲ್ಲೆಲ್ಲಾ ಕುಂಬಳಕಾಯಿ, ಹೀರೇಕಾಯಿ ಮತ್ತಿತರ ತರಕಾರಿ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಹೀಗೆ ಪ್ರತಿ ಇಂಚು ಭೂಮಿಯಿಂದಲೂ ಆದಾಯ ಪಡೆಯುವ ತಂತ್ರ ಇವರದ್ದು. ಮೊದಲಿದ್ದ ನಾಲ್ಕು ಎಕರೆ ಜಮೀನಿನ ಆದಾಯದಿಂದ ಮತ್ತೆ ನಾಲ್ಕು ಎಕರೆ ಜಮೀನು ಖರೀದಿಸಿ ಹತ್ತಿ ಬೆಳೆದಿದ್ದಾರೆ.

ಬಹುಬೆಳೆ, ಕೈಕೆಸರಾಗಿಸಿ ಬಾಯಿ ಮೊಸರು ಮಾಡಿಕೊಂಡ ತಪಸ್ವಿ ತನ್ನಂತೆ ಓದಿರುವ ಹುಡುಗರಿಗೆ ಮಾದರಿಯಾಗಿದ್ದಾರೆ. ತಾಯಿ, ಪತ್ನಿ ಇಬ್ಬರು ಮಕ್ಕಳು, ಪ್ರಾಣಿಗಳನ್ನೊಳಗೊಂಡ ಮಂಜುನಾಥ ಅವರದ್ದು ನಿಜ ಅರ್ಥದಲ್ಲಿ ತುಂಬು ಸಂಸಾರ. ಐಟಿಐಗಿಂತ ಮೇಟಿ ವಿದ್ಯೆ ಅವರ ಪಾಲಿಗೆ ನೆಮ್ಮದಿಯ ಬದುಕು ಕೊಟ್ಟಿದೆ.
ಮಾಹಿತಿಗೆ 89707 29134 ಸಂಪರ್ಕಿಸಿ.

ಪ್ರಾಣಿ ಪ್ರೀತಿ
ಮಂಜುನಾಥ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಕೆಲಕಾಲದ ಹಿಂದೆ ಒಂದು ಕೋತಿಯನ್ನೂ ಸಾಕಿದ್ದರು. ಇತ್ತೀಚೆಗೆ ಅದು ಮೃತಪಟ್ಟಿದೆ. ಈಗ ಒಂದು ಕರಿ ನಾಯಿ ಇದೆ. ಮಂಜುನಾಥ ಇಲ್ಲದ ವೇಳೆ ಯಾರಾ ದರೂ ಹೊಲಕ್ಕೆ ಕಾಲಿಟ್ಟರೆ ಅವರ ಕಥೆ ಮುಗಿದಂತೆಯೆ. ಹೊಲದ ಸುತ್ತಮುತ್ತ ಇರುವ ಮುಸಿಯನ ಕಾಟ ಇವರ ಹೊಲಕ್ಕಿಲ್ಲ. ಅಂಥ ನಿಷ್ಠಾವಂತ ಕಾವಲುಗಾರ ಕರಿಯ.

‘ಕೃಷಿಯೇ ಈತನ ಲೋಕ’
ಮಂಜುನಾಥ ದಿನದ 24 ಗಂಟೆಯೂ ಹೊಲದಲ್ಲೇ ಇರುತ್ತಾನೆ. ಹೊತ್ತಾದರೆ ಗದ್ದೆ ಬದುವಿನಲ್ಲೇ ಮಲಗುವುದೂ ಇದೆ. ಅದೂ ದಿನಕ್ಕೆ ಒಂದೆರಡು ತಾಸು ಅಷ್ಟೆ.
ಬಿಟ್ಟರೆ ಭೂಮಿ, ಜಾನುವಾರು ಇವಿಷ್ಟೆ ಅವನ ಲೋಕ.
–ಏಳು ಕೋಟೇಶ್‌,  ರೈತ ನುವುಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT