ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಾಳರಿಗೆ ಅಕಾಡೆಮಿ ಪ್ರಶಸ್ತಿ ಕಿರೀಟ

Last Updated 13 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

`ಪ್ರಶಸ್ತಿ ಬರಲಿ ಎಂದು ಸಂಗೀತ ಸಾಧನೆ ಮಾಡಲಿಲ್ಲ. ಆದರೆ ಪ್ರಶಸ್ತಿ ಬಂದಿರುವುದು ಸಂತಸವಾಗಿದೆ. ಎಲ್ಲ ದೇವರ ದಯೆ~.
ಕರ್ನಾಟಕ ಸಂಗೀತದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ (2012-13ನೇ ಸಾಲಿನ) ಪ್ರಶಸ್ತಿಗೆ ಭಾಜನರಾಗಿರುವ ಬಿ.ವಿ. ನಾರಾಯಣ ಐತಾಳ್ ಅವರ ಮನದಾಳದ ಮಾತುಗಳಿವು.

ಸಂಗೀತ ಸಾಧನೆ ಮೂಲಕ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಹೆಸರು ಮಾಡಿರುವ ಐತಾಳರು ಉಡುಪಿ ಜಿಲ್ಲೆಯ ಕಾಪುವಿನ ಪಾದೂರಿನವರು ಎಂಬುದು ಅವಿಭವಿತ ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿ. 87ರ ಹರೆಯದ ಐತಾಳರಿಗೆ ಪ್ರಶಸ್ತಿ ಬಂದಿರುವುದು ರಾಜ್ಯ ಮಟ್ಟದ ಪ್ರಶಸ್ತಿಗೂ ಒಂದು ಗೌರವ ಲಭ್ಯವಾದಂತಾಗಿದೆ ಎಂಬುದು ಅವರ ಅಭಿಮಾನಿಗಳ ಅಂಬೋಣ. ಅವರ ಸಂಗೀತ ಸಾಧನೆ ನೋಡಿದರೆ ಅಭಿಮಾನಿಗಳ ಮಾತು ಉತ್ಪ್ರೇಕ್ಷೆ ಎನಿಸದು.

1925ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಐತಾಳರ ಜನನವಾಯಿತು. ಐದನೇ ತರಗತಿ ವರೆಗೆ ಕಲಿತ ಹುಡುಗನಿಗೆ ಸಂಗೀತದಲ್ಲಿ ಅತೀವ ಆಸಕ್ತಿ. ಹತ್ತು- ಹನ್ನೆರಡರ ವಯಸ್ಸಿನಲ್ಲಿಯೇ ಅವರು ಸಂಗೀತ ಕಲಿಯಲು ಆರಂಭಿಸಿದರು. ಉಡುಪಿಯ ಮಂಜುನಾಥಯ್ಯ ಅವರ ಬಳಿ ಮೊದಲು ಅವರು ಸಂಗೀತ ಅಭ್ಯಾಸ ಮಾಡಿದರು. ಆ ನಂತರ ಅವರು ತೆರಳಿದ್ದು ಕೇರಳದ ಪಾಲ್ಗಾಟ್‌ಗೆ. ಅದಾಗಲೇ ಖ್ಯಾತರಾಗಿದ್ದ ಚೆಂಬೈ ವೈದ್ಯನಾಥ ಭಾಗವತರ ಶಿಷ್ಯರಾದರು. ಬಹು ಕಾಲದವರೆಗೆ ವೈದ್ಯನಾಥರ ಶಿಷ್ಯರಾಗಿದ್ದ ಐತಾಳರು ಸಂಗೀತವನ್ನು ಕಲಿತರು. ಸಂಗೀತವನ್ನೇ ಜೀವನ ಮಾಡಿಕೊಂಡರು. ಹಾಡುವುದು, ಕಲಿಸುವುದು ಅವರ ಕಾಯಕವಾಗಿ ಹೋಯಿತು.

ಮಂಗಳೂರಿನಲ್ಲಿ ಸಂಗೀತ ಶಾಲೆ ಆರಂಭಿಸಿದ ಅವರು ಸುಮಾರು 40 ವರ್ಷ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದ್ದಾರೆ.

`ಆ ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತ ಹೇಳಿಕೊಡುವವರು ಹೆಚ್ಚಾಗಿ ಇರಲಿಲ್ಲ. ಆದ್ದರಿಂದಲೇ ನಾನು ಕೇರಳಕ್ಕೆ ಹೋದೆ. ಬಳಿಕ ಮಂಗಳೂರಿನ ಕೋಡಿಯಾಲ್‌ಬೈಲ್‌ನಲ್ಲಿ ತ್ಯಾಗರಾಜ ಕರ್ನಾಟಕ ಸಂಗೀತ ಶಾಲೆ ಆರಂಭಿಸಿದೆ. ಇದುವರೆಗೆ ಸಾವಿರಾರು ಮಂದಿ ನನ್ನ ಶಾಲೆಯಲ್ಲಿ ಸಂಗೀತ ಕಲಿತಿದ್ದಾರೆ. ಬೆಂಗಳೂರು, ಮೈಸೂರು, ಬಳ್ಳಾರಿ, ಮಂಗಳೂರು, ಕೇರಳದ ಹಲವೆಡೆ ನೂರಾರು ಸಂಗೀತ ಕಛೇರಿ ನಡೆಸಿಕೊಟ್ಟಿದ್ದೇನೆ. ವಯಸ್ಸಾದ ನಂತರ ಶಾಲೆಯನ್ನು ನಿಲ್ಲಿಸಿ ಹುಟ್ಟೂರು ಸೇರಿಕೊಂಡೆ~ ಎನ್ನುತ್ತಾರೆ ನಾರಾಯಣ ಐತಾಳ್.

ಶೀಘ್ರ ಜೀವನ ಚರಿತ್ರೆ: ರಘುಪತಿ ತಂತ್ರಿ ಅವರು ನನ್ನ ಜೀವನ ಚರಿತ್ರೆಯ ಪುಸ್ತಕವನ್ನು ಬರೆಯುತ್ತಿದ್ದಾರೆ. ಜನವರಿಯಲ್ಲಿ ಆ ಪುಸ್ತಕವನ್ನು ಉಡುಪಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎಂದು ಅವರು ಹೇಳಿದರು. ಈ ಪುಸ್ತಕ ಐತಾಳರ ಜೀವನ, ಸಂಗೀತ, ಸಾಧನೆಗಳನ್ನು ಎಳೆ ಎಳೆಯಾಗಿ ಬಿಡಿಸಿಡಲಿದೆ.
ಹಲವು ಪ್ರಶಸ್ತಿಗಳು: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರಶಸ್ತಿ ಬರುವ ಮೊದಲೇ ಐತಾಳರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುಬ್ರಹ್ಮಣ್ಯದ ಸಂಗೀತ ಕಲಾ ತಿಲಕ ಪ್ರಶಸ್ತಿ, ಬಳ್ಳಾರಿಯ ವಿದ್ಯಾಭೂಷಣರ ಸಂಗೀತ ಸರಸ್ವತಿ ಪ್ರಶಸ್ತಿ, ಬೆಂಗಳೂರಿನ ವೆಂಕಟ ಶ್ರೀನಾಥ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ.

ನಾರಾಯಣ ಐತಾಳ್ ಮತ್ತು ಜಾನಕಿ ದಂಪತಿಗೆ ಗುರುರಾಜ, ಸುಬ್ರಹ್ಮಣ್ಯ ಮತ್ತು ರಾಮದಾಸ ಎಂಬ ಮೂವರು ಮಕ್ಕಳಿದ್ದಾರೆ. ಪತ್ನಿ ಜಾನಕಿ ಅವರು ಎಂಟು ವರ್ಷಗಳ ಹಿಂದೆ ವಿಧಿವಶರಾಗಿದ್ದಾರೆ. ಮಕ್ಕಳ ಜೊತೆಗೆ ಪಾದೂರಿನಲ್ಲಿ ಅವರು ಬದುಕು ಸಾಗಿಸುತ್ತಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT