ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ದೇವಾಲಯ ತ್ರಿಕೂಟಾಚಲ

Last Updated 1 ಜೂನ್ 2011, 5:30 IST
ಅಕ್ಷರ ಗಾತ್ರ

ಸುಮಾರು 12ನೇ ಶತಮಾನದ ಅಂತ್ಯಭಾಗದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಮೂರು ಗರ್ಭಗುಡಿಗಳನ್ನು ಹೊಂದಿದ್ದು, ಈಗ  ಮಲ್ಲಿಕಾರ್ಜುನ ದೇವರು ಪೂಜೆಗೊಳ್ಳುತ್ತಿದೆ. ಇನ್ನುಳಿದ ಎರಡು ಗರ್ಭಗುಡಿಗಳಲ್ಲಿ ಕೇಶವ ಮತ್ತು ಸೂರ್ಯದೇವರಿಗೆ ಪೂಜೆ ಮಾಡಲಾಗುತ್ತಿದೆ.

ಮಲ್ಲಿಕಾರ್ಜುನ ದೇವರ ಪೂಜಾಗೃಹದ ಪಕ್ಕದಲ್ಲಿ ಸುಮಾರು 4ಅಡಿ ಎತ್ತರದ ಗಣಪತಿಯ ವಿಗ್ರಹ ಮತ್ತು ಎದುರು ಬೃಹದಾಕಾರದ ನಂದಿಯ ವಿಗ್ರಹಗಳು ಸುಂದರವಾಗಿ ಕೆತ್ತಲ್ಪಟ್ಟಿದ್ದು ನಂದಿವಿಗ್ರಹ ಪ್ರತಿಷ್ಠೆಗೊಂಡಿದೆ.

ಈ ನಂದಿಯ ಕಿವಿಯಲ್ಲಿ ಚಿಕ್ಕಕಲ್ಲು ಹಾಕಿದರೆ ನೀರು ತುಂಬಿದ ಬಾವಿಯಲ್ಲಿ ಕಲ್ಲು ಎಸೆದಂತಹ ಶಬ್ದ ಬರುತ್ತಿತ್ತು, ಸಾವಿರಾರು ಜನ ಕುತೂಹಲಕ್ಕೆ ಕಲ್ಲುಗಳನ್ನು ಹಾಕಿದ್ದರಿಂದ ಶಬ್ದ ನಿಂತುಹೋಗಿ ವಿಗ್ರಹ ಹಾಳಾಗಬಾರದೆಂಬ ದೃಷ್ಟಿಯಿಂದ ನಂದಿಯ ಕಿವಿ ಮುಚ್ಚಲಾಗಿದೆ.

ದೇವಾಲಯವು 16ಅಂಕಣಗಳ ಒಳಾಂಗಣ ವಿಸ್ತೀರ್ಣವಿದ್ದು ನವರಂಗಗಳು ಚಿತ್ತಾಕರ್ಷಕವಾಗಿವೆ. ದೇಗುಲದ ಸುತ್ತಲೂ ವಿಷ್ಣುವಿನ ದಶಾವತಾರದ ಕೆತ್ತನೆಗಳು ಮತ್ತು ಅನೇಕ ದೇವ ದೇವಿಯವರ ಮತ್ತು ಈಶ್ವರನ ನರ್ತನ ಶಿಲ್ಪಗಳನ್ನು ಕೆತ್ತಲಾಗಿದೆ. ಮಧ್ಯದ ಗೋಪುರದ ಮೇಲೆ ಗರುಡ ಕೈ ಮುಗಿದು ನಿಂತಿರುವ ಭಂಗಿಯ ವಿಗ್ರಹವಿದೆ.

ಮಲ್ಲಿಕಾರ್ಜುನ ಗುಡಿಯ ಮೇಲೆ ಹೊಯ್ಸಳ ಲಾಂಛನದ ಸ್ಪಷ್ಟಮೂರ್ತಿ ಚಿತ್ತಾಕರ್ಷಕವಾಗಿದ್ದು ದೇವಾಲಯಕ್ಕೆ ಹೆಚ್ಚಿನ ಕಳೆ ನೀಡುತ್ತಿದೆ.

ನಕ್ಷತ್ರಾಕಾರದ ತಳಪಾಯ ಸುಂದರ ನೋಟ ಹೊಂದಿದ್ದು, ಮೂರು ಗೋಪುರಗಳು ಸಮಾನಾಂತರದಲ್ಲಿದ್ದು ದೇಗುಲದ ಸೌಂದರ್ಯಕ್ಕೆ ಮೆರುಗು ನೀಡುತ್ತಿವೆ. 

ಹಲವಾರು ವರ್ಷಗಳ ಹಿಂದೆ ಶಿಥಿಲವಾಗಿದ್ದ ಐತಿಹಾಸಿಕ ದೇವಾಲಯ ಸಂಸದರಾಗಿದ್ದ ಡಿ.ಸಿ.ಶ್ರೀಕಂಠಪ್ಪ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ವತಿಯಿಂದ ಐದು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದ್ದು ಅನೇಕರು ಒತ್ತುವರಿ ಮಾಡಿಕೊಂಡಿದ್ದ ದೇವಸ್ಥಾನದ ಭೂಮಿಯನ್ನು ವಶಪಡಿಸಿಕೊಂಡಿದ್ದು ಇನ್ನೊಬ್ಬ ವ್ಯಕ್ತಿ ಈವರೆಗೂ ಭೂಮಿ ತೆರವುಗೊಳಿಸಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯ ಎಚ್.ಎನ್.ಶ್ರೀಕಂಠಪ್ಪ.

ಕಾರ್ತಿಕ ಮಾಸದಲ್ಲಿ ವಿಶೇಷ ಕೃತ್ತಿಕೋತ್ಸವ ನಡೆಯುತ್ತದೆ. ಗ್ರಾಮಸ್ಥರು ಸಂಘಟಿತರಾಗಿ ದೇವಾಲಯದ ಎಲ್ಲ ಕೆಲಸ ಕಾರ್ಯಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ದೇವಾಲಯಕ್ಕೆ ಉಂಬಳಿಯಾಗಿ 12ಎಕರೆ ಜಮೀನು ಇದ್ದು ಇದರ ಹರಾಜಿನಿಂದ ಬರುವ ಆದಾಯದಲ್ಲಿ ಉತ್ಸವ ಸೇವೆಗಳನ್ನು ನಡೆಸಲಾಗುತ್ತಿದೆ.

ಇನ್ನು ಹಿರೇನಲ್ಲೂರು ಕಡೂರಿನಿಂದ ಸುಮಾರು 18ಕಿ.ಮೀ ದೂರವಿದ್ದು ಬಸ್‌ಸಂಪರ್ಕ ಉತ್ತಮವಾಗಿದೆ. ಬೆಳಗಿನ 11ರವರೆಗೂ ಅರ್ಚಕರು ಸ್ಥಳದಲ್ಲಿರುತ್ತಾರೆ. ದೇವಾಲಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರೂ ಅನೇಕರು ಎತ್ತು, ದನ, ಎಮ್ಮೆ ಮತ್ತು ಗಾಡಿಗಳನ್ನು ಇಲ್ಲೇ ಬಿಟ್ಟು ಐತಿಹಾಸಿಕ ದೇವಾಲಯದ ಆವರಣವನ್ನು ಕೊಟ್ಟಿಗೆ ಮಾಡಲು ಹೊರಟಿರುವುದು ವಿಷಾದದ ಸಂಗತಿಯಾಗಿದೆ. ಮುಜರಾಯಿ ಇಲಾಖೆ ಮತ್ತು ಗ್ರಾಮಪಂಚಾಯಿತಿ ಮನಸು ಮಾಡಿ ಈ ಸ್ಥಳವನ್ನು ಅಭಿವೃದ್ಧಿ ಪಡಿಸಿದರೆ ಇದೊಂದು ಉತ್ತಮ ಪ್ರವಾಸಿ ತಾಣವಾಗುತ್ತದೆ ಎನ್ನುತ್ತಾರೆ ಸ್ಥಳೀಯರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT