ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಮತ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಪ್ಯಾಲೆಸ್ಟೈನ್ ಜನರಿಗೆ ಪ್ರತ್ಯೇಕ, ಸ್ವತಂತ್ರ ದೇಶ ನಿರ್ಮಿಸಿಕೊಡುವುದಾಗಿ 65 ವರ್ಷಗಳ ಹಿಂದೆ ನಿರ್ಣಯದ ಮೂಲಕ ಭರವಸೆ ನೀಡಿದ್ದ ವಿಶ್ವಸಂಸ್ಥೆ, ಈಗ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿದೆ. ಕಳೆದ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ಯಾಲೆಸ್ಟೈನ್‌ಗೆ ವೀಕ್ಷಕರ ಸ್ಥಾನಮಾನ ನೀಡುವ ಗೊತ್ತುವಳಿ ಅಂಗೀಕರಿಸಿದೆ. ಅದರ ಪರವಾಗಿ ಭಾರತ ಸೇರಿ 139 ದೇಶಗಳು, ವಿರುದ್ಧವಾಗಿ 9 ದೇಶಗಳು ಮತ ಚಲಾಯಿಸಿದ್ದು ಐತಿಹಾಸಿಕ ಹೆಜ್ಜೆ.  41 ದೇಶಗಳು ಗೈರುಹಾಜರಾಗಿವೆ.

ತಮಗೊಂದು ಸಾರ್ವಭೌಮ ದೇಶ ಬೇಕು ಎಂಬ ಪ್ಯಾಲೆಸ್ಟೈನ್ ಪ್ರಜೆಗಳ ಸುದೀರ್ಘ ಕನಸಿಗೆ ಇದು ಬಣ್ಣ ತುಂಬಿದಂತಾಗಿದೆ. ಇದೊಂದು ಸಾಂಕೇತಿಕ ಸಾಧನೆ ಎಂಬುದು ಕೆಲವರ ವ್ಯಾಖ್ಯಾನ. ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೈನ್ ಆಡಳಿತ ಕ್ರಮಿಸಬೇಕಾದ ದಾರಿ ಇನ್ನೂ ದೂರವಿದೆ. ಏಕೆಂದರೆ ಅಂಥ ನಿರ್ಣಯಕ್ಕೆ ಭದ್ರತಾ ಮಂಡಳಿ ಒಪ್ಪಿಗೆ ಅವಶ್ಯ. ಅಲ್ಲಿ ಅಮೆರಿಕ ವಿಟೊ ಚಲಾಯಿಸುವುದಂತೂ ಖಚಿತ. ಆದಾಗ್ಯೂ ಸಾಮಾನ್ಯ ಸಭೆಯ ನಿರ್ಣಯ ಪ್ಯಾಲೆಸ್ಟೀನಿಯರ ಪಾಲಿಗೆ ದೊಡ್ಡ ಜಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸದಸ್ಯೇತರ ವೀಕ್ಷಕರ ಸ್ಥಾನಮಾನ ಆ ಜನರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ದನಿ ನೀಡುತ್ತದೆ.

ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ, ವಿಶ್ವಸಂಸ್ಥೆ ವಿವಿಧ ಸಂಘಟನೆಗಳಲ್ಲಿ ಸೇರುವ ಹಾದಿಯನ್ನು ಸುಗಮಗೊಳಿಸುತ್ತದೆ. ಗಾಜಾ ಪ್ರದೇಶದಲ್ಲಿ ಅನಗತ್ಯ ನಿರ್ಬಂಧಗಳನ್ನು ಹೇರುವ ಮೂಲಕ ಪ್ಯಾಲೆಸ್ಟೀನಿಯರನ್ನು ದಮನ ಮಾಡುವ ಇಸ್ರೇಲ್‌ನ ತಂತ್ರಗಾರಿಕೆಗೆ ಕಡಿವಾಣ ಹಾಕುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ 1967ರ ಮುಂಚೆ ಇದ್ದ ಗಡಿಗಳಿಗೆ ಪರೋಕ್ಷವಾಗಿ ಮಾನ್ಯತೆ ನೀಡಿದಂತಾಗಿದೆ. ಅಂತರರಾಷ್ಟ್ರೀಯ ಅಪರಾಧ ತನಿಖಾ ನ್ಯಾಯಾಲಯದ ಬಾಗಿಲು ತಟ್ಟುವ ಅವಕಾಶವೂ ಸಿಗಬಹುದು. ಇದರಿಂದ ಇಸ್ರೇಲ್‌ನ ದಬ್ಬಾಳಿಕೆ ಬಗ್ಗೆ ದೂರು ನೀಡಬಹುದಾಗಿದೆ.

ಸಾಮಾನ್ಯ ಸಭೆಯ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದ ಅಮೆರಿಕ ಮತ್ತು ಇಸ್ರೇಲ್‌ಗಳು ಏಕಾಂಗಿಯಾಗಿವೆ. ಇಷ್ಟು ಕಾಲ ಪ್ಯಾಲೆಸ್ಟೈನ್ ವಿಷಯದಲ್ಲಿ ಇವುಗಳ ಪರ ನಿಲ್ಲುತ್ತಿದ್ದ ಯುರೋಪ್‌ನ ಅನೇಕ ದೇಶಗಳು ಈ ಸಲ ಒಂದೋ ನಿರ್ಣಯ ಬೆಂಬಲಿಸಿ ಮತ ಹಾಕಿವೆ ಅಥವಾ ಗೈರುಹಾಜರಾಗಿವೆ. ಇದೊಂದು ಗಮನಾರ್ಹ ಪರಿವರ್ತನೆ. ವಿಶ್ವಸಂಸ್ಥೆಯಲ್ಲಿ ಕಾಲೂರುವ ಪ್ಯಾಲೆಸ್ಟೈನ್ ಹೆಜ್ಜೆಗೆ ಅಮೆರಿಕ ಮತ್ತು ಇಸ್ರೇಲ್ ಬಲವಾಗಿಯೇ ಅಡ್ಡಗಾಲು ಹಾಕಿದ್ದವು. ವಿಶ್ವಸಂಸ್ಥೆಯ ಕದ ತಟ್ಟುವ ಬದಲು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಒತ್ತಡ ಹೇರುತ್ತಲೇ ಬಂದಿದ್ದವು.

ಆದರೆ ವಾಸ್ತವವೇ ಬೇರೆ. ಪ್ಯಾಲೆಸ್ಟೀನಿಯರ ಭೂಮಿಯನ್ನು ಇಸ್ರೇಲ್ ಕಬಳಿಸಿದೆ, ಅಲ್ಲಿ ತನ್ನ ನಾಗರಿಕರಿಗೆ ಅಕ್ರಮವಾಗಿ ನೆಲೆ ಕಲ್ಪಿಸಿದೆ, ಸೇನಾ ದಾಳಿ ನಡೆಸುತ್ತಿದೆ. ಇದಕ್ಕೆ ಅಮೆರಿಕದ ಕುಮ್ಮಕ್ಕೂ ಇದೆ. ಇಸ್ರೇಲ್‌ಗೆ ಆಧುನಿಕ ಶಸ್ತ್ರ ಪೂರೈಸುತ್ತ, ಪ್ಯಾಲೆಸ್ಟೈನ್ ಜತೆ ಮಾತುಕತೆ ನಡೆಸಲು ಒತ್ತಡ ಹೇರದೆ ಮೌನ ತಂತ್ರ ಅನುಸರಿಸುತ್ತಿದೆ. `ಮಾತುಕತೆ ಮಾಡೋಣ' ಎಂದು ಪ್ಯಾಲೆಸ್ಟೀನಿಯರು ಅನೇಕ ದಶಕಗಳಿಂದ ಗೋಗರೆಯುತ್ತ ಬಂದಿದ್ದರೂ ಸೊಪ್ಪು ಹಾಕದೆ ದಾರ್ಷ್ಟ್ಯ ಮೆರೆದಿದೆ. ಹೀಗಾಗಿ ವಿಶ್ವಸಂಸ್ಥೆ ಮೊರೆಹೋದ ಪ್ಯಾಲೆಸ್ಟೈನ್ ವರ್ತನೆಯಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಇನ್ನಾದರೂ, ಪ್ಯಾಲೆಸ್ಟೈನನ್ನು ದಂಡಿಸಬೇಕು ಎಂಬ ಧೋರಣೆ ಬಿಟ್ಟು, ಸ್ವತಂತ್ರ ರಾಷ್ಟ್ರದ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT