ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸರಣಿ ವಿಜಯದ ಕನಸು

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಸೆಂಚೂರಿಯನ್: ಸಮಬಲ ಸಾಧಿಸಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡದವರು ಐದು ಏಕದಿನ ಪಂದ್ಯಗಳ ಕೊನೆಯ ಹಣಾಹಣಿಯಲ್ಲಿ ಗೆಲುವು ಪಡೆದು ಸರಣಿ ವಿಜಯದ ಸಂಭ್ರಮ ಪಡೆಯುವ ಕನಸು ಕಂಡಿದ್ದಾರೆ. ಮಳೆಯ ಕಾರಣ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ‘ಡಕ್ವರ್ಥ್-ಲೂಯಿಸ್’ ಲೆಕ್ಕಾಚಾರದ ನಿಯಮವು ದಕ್ಷಿಣ ಆಫ್ರಿಕಾ ತಂಡಕ್ಕೆ ವರವಾಯಿತು. 48 ರನ್‌ಗಳ ಅಂತರದ ಅದೃಷ್ಟದ ಗೆಲುವಿನೊಂದಿಗೆ ಅದು ಸರಣಿಯಲ್ಲಿ ಮತ್ತೆ ಭಾರತಕ್ಕೆ ಸಮನಾಗಿ ನಿಂತಿತು. 2-2 ಈಗಿನ ಸ್ಥಿತಿ; ಇದು ಯಾರ ಪರವಾಗಿ 3-2 ಆಗುತ್ತದೆ ಎನ್ನುವುದು ಆಸಕ್ತಿ ಕೆರಳಿಸಿದೆ.

ನಾಲ್ಕನೇ ಪಂದ್ಯ ಗೆದ್ದು ಸರಣಿ ವಿಜಯದ ಸಂಭ್ರಮ ಪಡೆಯುವ ಕನಸು ಕಂಡಿದ್ದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡಕ್ಕೆ ಪ್ರಕೃತಿಯು ಅವಕೃಪೆ ಆಯಿತು.ಆದ್ದರಿಂದ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕು ಎನ್ನುವ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಆಫ್ರಿಕಾ ಕೂಡ ಅಷ್ಟೇ ಒತ್ತಡದಲ್ಲಿದೆ. ಆದರೆ ಅದು ಸರಣಿಯಲ್ಲಿ ಹಿನ್ನಡೆ ಅನುಭವಿಸಿ ಮತ್ತೆ ಚೇತರಿಸಿಕೊಂಡಿರುವುದರಿಂದ ಸಹಜವಾಗಿಯೇ ಉತ್ಸಾಹಿತವಾಗಿದೆ.

ಭಾನುವಾರ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವೇ ನಿರ್ಣಾಯಕ. ಸ್ವಂತ ನೆಲದಲ್ಲಿ ಸರಣಿ ಸೋಲಿನ ಆಘಾತ ಅನುಭವಿಸುವ ಅಪಾಯವನ್ನು ತಪ್ಪಿಸಿಕೊಳ್ಳುವುದು ಗ್ರೇಮ್ ಸ್ಮಿತ್ ನೇತೃತ್ವದ ಪಡೆಯ ಗುರಿ. ‘ಮಹಿ’ ಬಳಗವು ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟ ಮೊದಲ ಏಕದಿನ ಸರಣಿ ಗೆಲುವಿನ ಐಸಿಹಾಸಿಕ ಸಾಧನೆಯ ಶ್ರೇಯ ಪಡೆಯುವತ್ತ ಗಮನ ಕೇಂದ್ರೀಕರಿಸಿದೆ. ಟೆಸ್ಟ್ ಸರಣಿಯನ್ನು ಸಮಮಾಡಿಕೊಂಡು ಕ್ರಿಕೆಟ್ ಇತಿಹಾಸದ ಪುಟದಲ್ಲಿ ಹೊಸ ಅಧ್ಯಾಯ ಬರೆದಿರುವ ‘ಟೀಮ್ ಇಂಡಿಯಾ’ ಏಕದಿನ ಕ್ರಿಕೆಟ್‌ನಲ್ಲಿಯೂ ಅದ್ಬುತವೊಂದನ್ನು ಸಾಧಿಸುತ್ತದೆಂದು ಆಸೆಯಿಂದ ಎದುರು ನೋಡಲಾಗುತ್ತಿದೆ.

ಸರಣಿ ಗೆಲುವಿನ ಕನಸು ಕಾಣುತ್ತಿದ್ದರೂ, ಭಾರತವು ಬ್ಯಾಟಿಂಗ್‌ನಲ್ಲಿನ ಕೊರತೆಯನ್ನು ತುಂಬಿಕೊಳ್ಳಲು ತಕ್ಕ ಪ್ರಯತ್ನವನ್ನು ಮಾಡಿಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದವರೆಗೆ ನಿರೀಕ್ಷಿಸಿದ ಶಕ್ತಿ ಕಾಣಿಸದಾಗಿದೆ. ಶುಕ್ರವಾರದ ಪಂದ್ಯದಲ್ಲಿ ಆರಂಭದಲ್ಲಿಯೇ ಚುರುಕಾಗಿ ರನ್ ಗಳಿಸುವಂಥ ಸಾಹಸವನ್ನು ಮಾಡಲಿಲ್ಲ.ಅದರ ಪರಿಣಾಮವಾಗಿ ಡಕ್ವರ್ಥ್-ಲೂಯಿಸ್ ನಿಯಮದ ಲೆಕ್ಕಾಚಾರವು ದಕ್ಷಿಣ ಆಫ್ರಿಕಾ ಪರವಾಯಿತು. ಔಟಾಗದೆ ಉಳಿದ ವಿರಾಟ್ ಕೊಹ್ಲಿ (87; 126 ನಿ., 92 ಎ., 7 ಬೌಂ, 2 ಸಿಕ್ಸರ್) ಹೊರತು ಬೇರೆ ಎಲ್ಲರೂ ಲಯ ತಪ್ಪಿದರು.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಇಲ್ಲದಿದ್ದರೆ ಸರದಿಯ ಆರಂಭದಲ್ಲಿ ಬ್ಯಾಟಿಂಗ್ ದುರ್ಬಲವಾಗುತ್ತದೆ ಎನ್ನುವ ಅಭಿಪ್ರಾಯ ಮೂಡಿದೆ. ಇಂಥ ಪ್ರಭಾವಿ ಬ್ಯಾಟ್ಸ್‌ಮನ್‌ಗಳ ಅನುಪಸ್ಥಿತಿಯಲ್ಲಿ ತಂಡಕ್ಕೆ ರನ್‌ಗಳ ಬಲ ನೀಡುವುದಕ್ಕೆ ಶುರುವಿನಲ್ಲಿ ಕೊರತೆ ಕಾಡುತ್ತಿದೆ. ಆದ್ದರಿಂದ ಕೆಳಮಧ್ಯಮ ಹಾಗೂ ಸರದಿಯ ಕೊನೆಯ ಆಟಗಾರರ ಮೇಲೆ ಹೊರೆ ಬೀಳತೊಡಗಿದೆ.

ಸರಣಿಯಲ್ಲಿ ಈವರೆಗೆ ಮಹೇಂದ್ರ ಸಿಂಗ್ ದೋನಿ ಹಾಗೂ ಸುರೇಶ್ ರೈನಾ  ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲ. ರೋಹಿತ್ ಶರ್ಮ ಕೂಡ ಪ್ರಭಾವಿ ಎನಿಸಿಲ್ಲ. ಮುರಳಿ ವಿಜಯ್ ಹಾಗೂ ಪಾರ್ಥೀವ್ ಪಟೇಲ್ ನಡುವೆ ಮಾಡಲಾದ ಬದಲಾವಣೆಯೂ ಪ್ರಯೋಜನಕಾರಿ ಎನಿಸಲಿಲ್ಲ. ಆದ್ದರಿಂದ ಆತಂಕ ಹೆಚ್ಚಿದೆ. ಮುಖ್ಯವಾಗಿ ನಾಯಕ ದೋನಿ ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕು.

ಬೌಲಿಂಗ್ ವಿಭಾಗದಲ್ಲಿ ಅಷ್ಟೇನು ಚಿಂತೆ ಕಾಡಿಲ್ಲ. ರನ್ ಗತಿಗೆ ಕಡಿವಾಣ ಹಾಕುವುದಕ್ಕೆ ಬೌಲರ್‌ಗಳು ತಕ್ಕ ಪ್ರಯತ್ನ ಮಾಡಿದ್ದಾರೆ. ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿರುವುದು ಸರದಿಯ ಆರಂಭದ ಬ್ಯಾಟ್ಸ್‌ಮನ್‌ಗಳು. ಅವರು ಯಶಸ್ವಿಯಾದರೆ; ಗೆಲುವಿನ ಹಾದಿಯು ಕಷ್ಟದ್ದಾಗುವುದಿಲ್ಲ.

ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಮುರಳಿ ವಿಜಯ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಜಹೀರ್ ಖಾನ್, ಮುನಾಫ್ ಪಟೇಲ್, ಆಶಿಶ್ ನೆಹ್ರಾ, ಎಸ್.ಶ್ರೀಶಾಂತ್, ಇಶಾಂತ್ ಶರ್ಮ, ಆರ್.ಅಶ್ವಿನ್, ಪಿಯೂಶ್ ಚಾವ್ಲಾ ಮತ್ತು ಪಾರ್ಥೀವ್ ಪಟೇಲ್.

ದಕ್ಷಿಣ ಆಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜಾನ್ ಬೊಥಾ, ಅಬ್ರಹಾಮ್ ಡಿ ವೀಲಿಯರ್ಸ್, ಜೆನ್ ಪಾಲ್ ಡುಮಿನಿ, ಫಾಫ್‌ಡು ಪ್ಲೆಸ್ಸಿಸ್, ಇಮ್ರಾನ್ ತಾಹೀರ್, ಕಾಲಿನ್ ಇನ್‌ಗ್ರಾಮ್, ಡೇವಿಡ್ ಮಿಲ್ಲರ್, ಮಾರ್ನ್ ಮಾರ್ಕೆಲ್, ವಯ್ನೆ ಪರ್ನೆಲ್, ರಾಬಿನ್ ಪೀಟರ್ಸನ್, ಡೆಲ್ ಸ್ಟೇನ್ ಮತ್ತು ಲಾನ್‌ವಾಬೊ ತ್ಸೊತ್ಸೊಬೆ.

ಪಂದ್ಯ ಆರಂಭ (ಭಾರತೀಯ ಕಾಲಮಾನ): ಮಧ್ಯಾಹ್ನ 1.30ಕ್ಕೆ.ನೇರ ಪ್ರಸಾರ: ಟೆನ್ ಕ್ರಿಕೆಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT