ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸಾಧನೆಯ ಅಪ್ಪುಗೆಗಾಗಿ ಕಾತರ

ಕ್ರಿಕೆಟ್: ಸರಣಿ ಕೈತಪ್ಪಿ ಹೋಗುವ ಆತಂಕದಲ್ಲಿ ಭಾರತ; ಡ್ರಾನತ್ತ ಇಂಗ್ಲೆಂಡ್ ತಂಡದ ಚಿತ್ತ
Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾಗಪುರ: `ನೀರಿನಲ್ಲಿ ಮೀನಿನ ಹೆಜ್ಜೆ ಗುರುತುಗಳನ್ನಾದರೂ ಕಂಡು ಹಿಡಿಯಬಹುದು, ಮಹಿಳೆಯರ ಮನಸ್ಸನ್ನಾದರೂ ಅರ್ಥ ಮಾಡಿಕೊಳ್ಳಬಹುದು. ಆದರೆ ಭಾರತದ ಈ ಪಿಚ್‌ಗಳ ಮರ್ಮ ಅರಿಯುವುದು ಕಷ್ಟ' ಎಂದು ಹೇಳಿಕೆಯೊಂದನ್ನು ತಿರುಚಿ ವೀಕ್ಷಕ ವಿವರಣೆಗಾರ ನವಜೋತ್ ಸಿಂಗ್ ಸಿಧು ಸುಮ್ಮನೇ ವ್ಯಂಗ್ಯ ಮಾಡಿಲ್ಲ.

ಏಕೆಂದರೆ ದಿನಕ್ಕೊಂದು ರೀತಿ ತಿರುವು ಪಡೆಯುತ್ತಾ, ವಿಚಿತ್ರವಾಗಿ ವರ್ತಿಸುತ್ತಿರುವ ಜಾಮ್ತಾ ಕ್ರೀಡಾಂಗಣದ ಈ ಪಿಚ್ ಗಮನಿಸಿದರೆ ಸಿಧು ಅವರ ಹೇಳಿಕೆ ನೂರರಷ್ಟು ಸತ್ಯ. ಪರಿಣಾಮ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯ ಡ್ರಾ ಹಾದಿ ಹಿಡಿದಿದೆ.

ಇದು ದೋನಿ ಬಳಗಕ್ಕೆ ಖಂಡಿತ ಒಳ್ಳೆಯ ಸುದ್ದಿ ಅಲ್ಲ. ಕಾರಣ ಈ ಪಂದ್ಯ ಡ್ರಾನಲ್ಲಿ ಕೊನೆಗೊಂಡರೂ ಭಾರತ ತಂಡದ ಕೆಲ ಆಟಗಾರರ ತಲೆದಂಡಕ್ಕೆ ಆಗ್ರಹ ಜೋರಾಗಲಿದೆ. ಏಕೆಂದರೆ ಸರಣಿ 2-1ರಲ್ಲಿ ಆಂಗ್ಲರ ಪಾಲಾಗಲಿದೆ. ಹಾಗಾಗಿ ನಿರಾಶೆಯ ಗೆರೆಗಳು ಆತಿಥೇಯರ ಮೊಗದಲ್ಲಿ ಈಗಲೇ ಹರಿದಾಡುತ್ತಿವೆ. ಆದರೆ ಪ್ರವಾಸಿ ತಂಡದವರು ಐತಿಹಾಸಿಕ ಕ್ಷಣದ ಆ ಅಪ್ಪುಗೆಗಾಗಿ ತಮ್ಮ ಎರಡೂ ಕೈಗಳನ್ನು ಮುಂದೆ ಚಾಚಿಯಾಗಿದೆ.

ಭಾನುವಾರ 4 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡದವರು ನಾಲ್ಕನೇ ದಿನದಾಟದ ಅಂತ್ಯಕ್ಕೆ 79 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದ್ದಾರೆ.

ಈ ಮೂಲಕ ಒಟ್ಟು 165 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ. ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 143 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಒಂದು ದಿನದ ಆಟ ಬಾಕಿ ಇದೆ. ಗೆದ್ದರೆ ಮಾತ್ರ ದೋನಿ ಬಳಗ ಸರಣಿ ಸಮಬಲ ಮಾಡಿಕೊಳ್ಳಬಹುದು.

ಆದರೆ ಕುಕ್ ಬಳಗದವರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಆಡುತ್ತಿರುವಂತಿದೆ. ಈ ತಂಡದ 2.03 ರನ್‌ರೇಟ್ ಇದಕ್ಕೆ ಸಾಕ್ಷಿ. ಜೊತೆಗೆ ಈ ಪಿಚ್‌ನ್ಲ್ಲಲಿ ರನ್ ಗಳಿಸಲು ತುಂಬಾ ಕಷ್ಟವಾಗುತ್ತಿದೆ.

ವಿಚಿತ್ರ ಪಿಚ್‌ನಲ್ಲಿ ನಿಧಾನವೇ ಪ್ರಧಾನ: ಬಿಷನ್ ಸಿಂಗ್ ಬೇಡಿ ಸೇರಿದಂತೆ ಕೆಲ ಮಾಜಿ ಆಟಗಾರರಿಂದ ಟೀಕೆಗೆ ಗುರಿಯಾಗಿರುವ ಈ ಪಿಚ್‌ನಲ್ಲಿ ನಾಲ್ಕನೇ ದಿನದಾಟ ಒಟ್ಟು 91.5 ಓವರ್‌ಗಳಲ್ಲಿ ಕೇವಲ 190 ರನ್ ಪೇರಿಸಲು ಸಾಧ್ಯವಾಯಿತು.

ಅದರಲ್ಲೂ ಪ್ರವಾಸಿ ತಂಡದ ನಾಯಕ ಕುಕ್ ಒಂದು ಹಂತದಲ್ಲಿ 46 ಎಸೆತ ಎದುರಿಸಿ ಕೇವಲ 1 ರನ್ ಗಳಿಸಿದ್ದರು. ಕೊನೆಯಲ್ಲಿ ಅವರು 93 ಎಸೆತಗಳಿಂದ 13 ರನ್ ಕಲೆಹಾಕಿದರು. ಬೌಲರ್‌ಗಳು ಹಾಗೂ ಪ್ರೇಕ್ಷಕರ ಪಾಡು ಹೇಳತೀರದು. ಇಷ್ಟವಿಲ್ಲದ ಭಾಷಣವನ್ನು ಗಂಟೆಗಟ್ಟಲೇ ಕುಳಿತು ಕೇಳಬೇಕಾದ ಪರಿಸ್ಥಿತಿಯಂತಿತ್ತು ಈ ದಿನದಾಟ.

34 ರನ್ ಗಳಿಸಲು ಕಾಂಪ್ಟನ್ 135 ಎಸೆತ ಎದುರಿಸಿದರೆ, 66 ರನ್ ಪೇರಿಸಲು ಜೊನಾಥನ್ ಟ್ರಾಟ್ 153 ಎಸೆತ ತೆಗೆದುಕೊಂಡರು. ಇಷ್ಟು ಕಡಿಮೆಯ ರನ್‌ರೇಟ್ ಈ ಹಿಂದಿನ 10 ವರ್ಷಗಳಲ್ಲಿ ದಾಖಲಾಗಿಲ್ಲ. ಕ್ರೀಸ್‌ಗೆ ಅಂಟಿಕೊಂಡು ಆಡಿದ ಪರಿ ನೋಡಿದರೆ ಈ ಆಟಗಾರರು ಕಾಲಿಗೆ ಪೆವಿಕಾಲ್ ಅಂಟಿಸಿಕೊಂಡು ಬಂದಿದ್ದರೇನೊ ಅನಿಸಬೇಕು!

ಇದರಲ್ಲಿ ಡ್ರಾ ಮಾಡಿಕೊಳ್ಳುವ ಆಂಗ್ಲರ ಉದ್ದೇಶವೂ ಸೇರಿದೆ. ಈಗಾಗಲೇ ಟ್ರಾಟ್ ಹಾಗೂ ಬೆಲ್ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 67 ರನ್ (141 ಎಸೆತ) ಸೇರಿಸಿದ್ದಾರೆ.

ಸ್ಲಿಪ್‌ನಲ್ಲಿ ಬೆಲ್ ನೀಡಿದ ಕಷ್ಟದ ಕ್ಯಾಚ್‌ವೊಂದನ್ನು ಸೆಹ್ವಾಗ್ ಕೈಚೆಲ್ಲಿದರು. ಜೊತೆಗೆ ಫೀಲ್ಡಿಂಗ್ ಹಾಗೂ ಬೌಲಿಂಗ್ ಸಂಯೋಜನೆಯಲ್ಲಿ ದೋನಿ ಎಡವಿದಂತೆ ಕಾಣುತ್ತಿತ್ತು. ಏಕೆಂದರೆ ಆಫ್ ಸ್ಪಿನ್ನರ್ ಅಶ್ವಿನ್- ಲೆಗ್ ಸ್ಪಿನ್ನರ್ ಚಾವ್ಲಾ ಬದಲಿಗೆ ಎಡಗೈ ಸ್ಪಿನ್ನರ್‌ಗಳಾದ ಓಜಾ-ಜಡೇಜಾ ಜೋಡಿಗೆ ಹೆಚ್ಚು ಬೌಲ್ ಮಾಡಲು ಚೆಂಡು ನೀಡುತ್ತಿದ್ದರು. ನಾಲ್ವರು ಸ್ಪಿನ್ನರ್‌ಗಳನ್ನು ಹೊಂದಿದ್ದರೂ ತಂತ್ರ ಕೈಕೊಟ್ಟಿದೆ.  

ಪ್ರವಾಸಿ ತಂಡದವರ ಬಳಿ ಇನ್ನೂ ಏಳು ವಿಕೆಟ್ ಇರುವುದರಿಂದ ಭಾರತ ತಂಡದವರ ಗೆಲುವಿನ ಆಸೆ ಈಡೇರುವುದು ಕಷ್ಟವಿದೆ. ಕುಕ್ ಪಡೆಯನ್ನು ಬೇಗನೇ ಆಲ್‌ಔಟ್ ಮಾಡಿದರೂ ಗುರಿ ಬೆನ್ನಟ್ಟಲು ಈ ಪಿಚ್‌ನಲ್ಲಿ ಭಾರಿ ಸವಾಲು ಎದುರಿಸಬೇಕಾಗುತ್ತದೆ.

ಸ್ವ್ಕೇರ್ ಲೆಗ್‌ಗೆ ಹೋಗಿ ಬೌಂಡರಿ: ಜಡೇಜಾ ಬೌಲಿಂಗ್ ಮಾಡುತ್ತಿದ್ದಾಗ ಒಂದು ಎಸೆತ ಅವರ ನಿಯಂತ್ರಣ ತಪ್ಪಿ ಸ್ಕ್ವೇರ್ ಲೆಗ್‌ನತ್ತ ಹೋಯಿತು. ತಕ್ಷಣವೇ ಅಂಪೈರ್ ನೋಬಾಲ್ ಎಂದು ಘೋಷಿಸಿದರು. ಆಗ ಟ್ರಾಟ್ ಕ್ರೀಸ್ ಬಿಟ್ಟು ಮಾರು ದೂರ ತೆರಳಿ ನಿಧಾನವಾಗಿ ಉರುಳಿ ಬರುತ್ತಿದ್ದ ಚೆಂಡನ್ನು ಬಾರಿಸಿದರು. ಅದು ಬೌಂಡರಿ ಸೇರಿತು.

ತುಂಬಾ  ಎಚ್ಚರಿಕೆಯಿಂದ ಆಡುತ್ತಿದ್ದ ಪೀಟರ್ಸನ್ ಎಡವಟ್ಟು ಮಾಡಿಕೊಂಡರು. ಜಡೇಜಾ ಎಸೆತವನ್ನು ಹೊರಬಿಡಲು ಬ್ಯಾಟ್ ಮೇಲೆತ್ತಿದರು. ಆದರೆ ಚೆಂಡು ಆಫ್‌ಸ್ಟಂಪ್‌ಗೆ ಅಪ್ಪಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಟ್ರಾಟ್ ಕೂಡ ಇದೇ ರೀತಿ ವಿಕೆಟ್ ಒಪ್ಪಿಸಿದ್ದರು.

ಟ್ರಾಟ್‌ಗೆ ಅಶ್ವಿನ್ ಎಚ್ಚರಿಕೆ: ಅಶ್ವಿನ್ ಬೌಲ್ ಮಾಡಲು ಮುಂದಾಗುತ್ತಿದ್ದಾಗಲೆಲ್ಲಾ ನಾನ್-ಸ್ಟ್ರೈಕ್ ತುದಿಯಲ್ಲಿದ್ದ ಟ್ರಾಟ್ ಪದೇಪದೇ ಕ್ರೀಸ್ ಬಿಡುತ್ತಿದ್ದರು. ಆಗ ಅವರಿಗೆ ಅಶ್ವಿನ್ ಎಚ್ಚರಿಕೆ ನೀಡಿದರು. ಆದರೆ ಟ್ರಾಟ್ ಉದ್ದೇಶಪೂರ್ವಕವಾಗಿ ಹಾಗೇ ಮಾಡಲಿಲ್ಲ. ಜೊತೆಗೆ ಅಶ್ವಿನ್ ಬೌಲಿಂಗ್ ಮಾಡಲು ಶುರು ಮಾಡಿದ ಮೇಲೆ ಅವರು ಆ ರೀತಿ ಮಾಡಿದರು. ಹಾಗಾಗಿ ಅಶ್ವಿನ್ ಅವರ ವರ್ತನೆಯನ್ನು ವೀಕ್ಷಕ ವಿವರಣೆಗಾರರು ಕೂಡ ಟೀಕಿಸಿದರು.

ಅಚ್ಚರಿ ಮೂಡಿಸಿದ ದೋನಿ ನಿರ್ಧಾರ: ಭಾರತ ತಂಡ ನಾಲ್ಕನೇ ದಿನ 12.5 ಓವರ್‌ಗಳಲ್ಲಿ ಕೇವಲ 29 ರನ್ ಗಳಿಸಿತು. ದಿನದಾಟ ಆರಂಭವಾಗಿ ಒಂದು ಗಂಟೆಯ ಬಳಿಕ ನಾಯಕ ಮಹೇಂದ್ರ ಸಿಂಗ್ ದೋನಿ ಮೊದಲ ಇನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಇನಿಂಗ್ಸ್ ಮುನ್ನಡೆ ಸರಿಗಟ್ಟಲು ಕೇವಲ 4 ರನ್ ಬೇಕಿದ್ದಾಗ ಅವರು ಈ ನಿರ್ಧಾರ ತೆಗೆದುಕೊಂಡಿದ್ದು ಅಚ್ಚರಿ ಮೂಡಿಸಿತು.

ಆದರೆ ಒಂದು ಹಂತದಲ್ಲಿ 71 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡ 326 ರನ್ ಗಳಿಸಿದ್ದು ಮೆಚ್ಚುವಂಥದ್ದು. ಅದಕ್ಕೆ ಕಾರಣವಾಗಿದ್ದು ಮೂರನೇ ದಿನದಾಟ ಮೂಡಿಬಂದ ದೋನಿ ಹಾಗೂ ಕೊಹ್ಲಿ ಜೊತೆಯಾಟ. ಅಶ್ವಿನ್ (ಔಟಾಗದೆ 29) ಪ್ರಯತ್ನವನ್ನು ಮರೆಯುವಂತಿಲ್ಲ.

ಸ್ಕೋರ್ ವಿವರ

ಇಂಗ್ಲೆಂಡ್ ಮೊದಲ ಇನಿಂಗ್ಸ್ 145.5 ಓವರ್‌ಗಳಲ್ಲಿ 330
ಭಾರತ ಮೊದಲ ಇನಿಂಗ್ಸ್ 143 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 326 ಡಿಕ್ಲೇರ್ಡ್
(ಶನಿವಾರ 130.1 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 297)

ಆರ್.ಅಶ್ವಿನ್ ಔಟಾಗದೆ  29
ಪ್ರಗ್ಯಾನ್ ಓಜಾ ಬಿ ಮಾಂಟಿ ಪನೇಸರ್  03
ಇಶಾಂತ್ ಶರ್ಮ ಔಟಾಗದೆ  02
ಇತರೆ (ಬೈ-5, ಲೆಗ್‌ಬೈ-7)  12
ವಿಕೆಟ್ ಪತನ: 1-1 (ಸೆಹ್ವಾಗ್; 0.3); 2-59 (ಪೂಜಾರ; 22.3); 3-64 (ಸಚಿನ್; 27.5); 4-71 (ಗಂಭೀರ್; 31.4); 5-269 (ಕೊಹ್ಲಿ; 116.1); 6-288 (ಜಡೇಜಾ; 123.6); 7-295 (ದೋನಿ; 129.1); 8-297 (ಚಾವ್ಲಾ; 130.1); 9-317 (ಓಜಾ; 140.1)
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 32-5-81-4, ಟಿಮ್ ಬ್ರೆಸ್ನನ್ 26-5-69-0, ಮಾಂಟಿ ಪನೇಸರ್ 52-15-81-1, ಗ್ರೇಮ್ ಸ್ವಾನ್ 31-10-76-3, ಜೊನಾಥನ್ ಟ್ರಾಟ್ 1-0-2-0, ಜೋ ರೂಟ್ 1-0-5-0

ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 79 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161
ಅಲಸ್ಟೇರ್ ಕುಕ್ ಸಿ ದೋನಿ ಬಿ ಆರ್.ಅಶ್ವಿನ್  13
ನಿಕ್ ಕಾಂಪ್ಟನ್ ಎಲ್‌ಬಿಡಬ್ಲ್ಯು ಬಿ ಪ್ರಗ್ಯಾನ್ ಓಜಾ  34
ಜೊನಾಥನ್ ಟ್ರಾಟ್ ಬ್ಯಾಟಿಂಗ್  66
ಕೆವಿನ್ ಪೀಟರ್ಸನ್ ಬಿ ರವೀಂದ್ರ ಜಡೇಜಾ  06
ಇಯಾನ್ ಬೆಲ್ ಬ್ಯಾಟಿಂಗ್  24
ಇತರೆ (ಬೈ-8, ಲೆಗ್‌ಬೈ-6, ನೋಬಾಲ್ -4)  18
ವಿಕೆಟ್ ಪತನ: 1-48 (ಕುಕ್; 29.5); 2-81 (ಕಾಂಪ್ಟನ್; 46.4); 3-94 (ಪೀಟರ್ಸನ್; 55.5)
ಬೌಲಿಂಗ್: ಇಶಾಂತ್ ಶರ್ಮ 12-3-27-0 (ನೋಬಾಲ್-1), ಪ್ರಗ್ಯಾನ್ ಓಜಾ 23-10-39-1, ಆರ್.ಅಶ್ವಿನ್ 18-9-34-1, ಪಿಯೂಷ್ ಚಾವ್ಲಾ 10-2-20-0 (ನೋಬಾಲ್-2), ರವೀಂದ್ರ ಜಡೇಜಾ 16-9-27-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT