ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸಿದ್ದೇಶ್ವರಸ್ವಾಮಿ ಬ್ರಹ್ಮ ರಥೋತ್ಸವ

Last Updated 23 ಏಪ್ರಿಲ್ 2013, 8:02 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಸುಕ್ಷೇತ್ರ ವದ್ದೀಕೆರೆಯ ಕಾಲಭೈರವೇಶ್ವರ ಸ್ವಾಮಿ ಅಥವಾ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ಸಾವಿರಾರು ಭಕ್ತರ ಭಕ್ತಿ-ಸಂಭ್ರಮಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಸಿದ್ದಪ್ಪನ ಕುರಿತು ಹಲವಾರು ಜನಪದ ಕತೆಗಳು ಈ ಭಾಗದ ಹಳ್ಳಿಗರ ಬಾಯಲ್ಲಿ ನಲಿದಾಡುತ್ತವೆ. ಹೇಮಾವತಿಯ ಹೆಂಜಾರಪ್ಪನ ತಮ್ಮ ಸಿದ್ದಪ್ಪ ವದ್ದೀಕೆರೆಯ ಬಳಿ ಬಂದಾಗ ಬಾಯಾರಿಕೆಯಾದಾಗ ತ್ರಿಶೂಲದಿಂದ ನೆಲಕ್ಕೆ ತಿವಿದಾಗ ನೀರು ಚಿಮ್ಮಿತಂತೆ.  ನಂತರ ಇಡೀ ವರ್ಷ ಈ ಬಾವಿಯಲ್ಲಿ ನೀರು ತುಂಬಿರುತ್ತದೆ. ಆದರೆ ಜಾತ್ರೆಯ ದಿನ ನೀರು ಇಲ್ಲವಾಗುತ್ತದೆಯಂತೆ. ಈ ಪ್ರದೇಶದಲ್ಲಿ ಬಿದಿರುಮೆಳೆ ಹೆಚ್ಚಾಗಿ ಇದ್ದ ಕಾರಣ ವದ್ದೀಕೆರೆ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಸಿದ್ದಪ್ಪನ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆ.

ಸಿದ್ದಪ್ಪನ ಜಾತ್ರೆ 8 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಏ. 19 ರಂದು ಕಂಕಣಧಾರಣೆಯೊಂದಿಗೆ ಆರಂಭವಾದ ಜಾತ್ರೆಯಲ್ಲಿ ಏ. 20 ರಂದು  ಅಗ್ನಿಗುಂಡ, ಏ. 21 ರಂದು  ಚಿಕ್ಕ ರಥೋತ್ಸವ ನಡೆಸಲಾಯಿತು. ಸೋಮವಾರ ಮಧ್ಯಾಹ್ನ ಹೂವಿನ ಪಲ್ಲಕ್ಕಿ ಉತ್ಸವ, ಜನಪದ ಕಲಾವಿದರಿಂದ ವೈವಿಧ್ಯಮಯ ಮೆರವಣಿಗೆ ನಂತರ ಸಂಜೆ 4.30ಕ್ಕೆ ಬ್ರಹ್ಮರಥೋತ್ಸವ ನಡೆಯಿತು.
ಏ. 24 ರಂದು ಉಂಡೆ, ಮಂಡೆ, ಸಿದ್ಧಭಕ್ತಿ, 24 ರಂದು ಕಿರುಬಾನ, ವಸಂತೋತ್ಸವ ಮತ್ತು ಸಂಜೆ 6ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಕಲ್ಲೇಶ್ವರಸ್ವಾಮಿ ರಥೋತ್ಸವ
ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕು ಹಿರೇಎಮ್ಮಿಗನೂರು ಗ್ರಾಮದಲ್ಲಿ ಸೋಮವಾರ ಸಂಜೆ ಇತಿಹಾಸ ಪ್ರಸಿದ್ಧ ಕಲ್ಲೇಶ್ವರ ಸ್ವಾಮಿ ಮತ್ತು ಆಂಜನೇಯಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಅರ್ಚನೆ ನಡೆಸಲಾಯಿತು. ಮಧ್ಯಾಹ್ನ ಉತ್ಸವ ಮೂರ್ತಿಗಳನ್ನು ಗ್ರಾಮದ ಬೀದಿಗಳಲ್ಲಿ ನಂದಿಕೋಲು ಕುಣಿತ, ತಾಳ-ಮದ್ದಳೆ ಹಾಗೂ ನಾದ ಸ್ವರಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಸಂಜೆ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಕರೆತರಲಾಯಿತು. ರಥೋತ್ಸವಕ್ಕೆ ಮುನ್ನ ದೊಡ್ಡೆಡೆ ಸೇವೆಯನ್ನು ನೆರವೇರಿಸಲಾಯಿತು. ನಂತರ ನೆರೆದಿದ್ದ ಸಹಸ್ರಾರು ಭಕ್ತರು ತೆಂಗಿನಕಾಯಿಗಳನ್ನು ರಥದ ಚಕ್ರಕ್ಕೆ ಹೊಡೆಯುತ್ತಾ ರಥವನ್ನು ಎಳೆಯಲಾರಂಭಿಸಿದರು.
ರಥೋತ್ಸವದಲ್ಲಿ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT