ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದಂತಸ್ತಿನ ಕಟ್ಟಡಕ್ಕೆ ಒಂದೇ ದ್ವಾರ!

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ: ಅಮಾವಾಸ್ಯೆಯ ರಾತ್ರಿ ಕಗ್ಗತ್ತಲಾಗುತ್ತದೆ. ಆದರೆ ಅಥಣಿಯ ಕರಣಿಗಲ್ಲಿಯ ಸ್ವಾಮಿ ಕಲೆಕ್ಷನ್ಸ್‌ನಲ್ಲಿ ಮಾತ್ರ ಅಮಾವಾಸ್ಯೆಯ ಬೆಳಗಿನ ಜಾವ ಹೊತ್ತಿಕೊಂಡ ಬೆಂಕಿಯು ಐದು ಜೀವಗಳನ್ನು ಆಹುತಿ ತೆಗೆದುಕೊಳ್ಳುವ ಮೂಲಕ ಹಲವು ಕುಟುಂಬಗಳಲ್ಲಿ ಕಗ್ಗತ್ತಲು ಮೂಡಿಸಿದೆ.

ಮದುವೆಯ ಸೀಸನ್ ಇದ್ದುದ್ದರಿಂದ ವ್ಯಾಪಾರ ಭರ್ಜರಿಯಾಗಿಯೇ ಇತ್ತು. ನಿತ್ಯವೂ ಲಕ್ಷಾಂತರ ರೂಪಾಯಿ ಕಲೆಕ್ಷನ್ ಆಗುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಿಡುವಿಲ್ಲದಂತೆ ಮೈ ದಣಿಯುವ ಹಾಗೆ ಕೆಲಸ ಮಾಡಿ ಮಲಗಿದ್ದವರು ನಿದ್ದೆಯಿಂದ ಏಳುವ ಮೊದಲೇ ಅವರನ್ನು ಜವರಾಯ ತನ್ನ ತೆಕ್ಕೆಗೆ ತೆಗೆದುಕೊಂಡ.

ಮಳಿಗೆಯ ಮಾಲೀಕ ದಾನಯ್ಯ ಹಿರೇಮಠ ಅವರ ಹಿರಿಯ ಪುತ್ರ ಮೃತ್ಯುಂಜಯ ಹಿರೇಮಠ ಅವರು ಬೆಂಕಿ ಹೊತ್ತಿಕೊಂಡ ನಂತರ `ಮೃತ್ಯು~ವನ್ನು ಜಯಿಸಲು ಮಾಡಿದ ಎಲ್ಲ ಯತ್ನಗಳೂ ವಿಫಲವಾದವು. ಜವರಾಯ ಬೀಸಿದ್ದ ಬಲೆಯಿಂದ ಹೊರ ಬರಲು ಅವರಿಗೆ ಸಾಧ್ಯವಾಗಲೇ ಇಲ್ಲ.

`ಅಂಗಡಿಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಉಸಿರುಗಟ್ಟುತ್ತಿದೆ. ಪತ್ನಿ ಸೇರಿದಂತೆ ಕೆಲಸಗಾರರು ಸಿಕ್ಕಿ ಬಿದ್ದಿದ್ದೇವೆ. ಕೆಳಗೆ ಇಳಿಯಲು ಸಾಧ್ಯವಾಗುತ್ತಿಲ್ಲ. ಕಾಪಾಡಿ~ ಎಂದು ತಂದೆ ಹಾಗೂ ಸ್ನೇಹಿತರಿಗೆ ಮೃತ್ಯುಂಜಯ ಅವರು ಮೊರೆ ಇಟ್ಟಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆಯ ಮುಂದೆ ಅವರನ್ನು ರಕ್ಷಿಸಬೇಕು ಎನ್ನುವ ಸ್ನೇಹಿತರ ಆಸೆಯೂ ಕಮರಿ ಹೋಗಿದೆ.

ಒಂದೇ ದ್ವಾರ: ಐದಂತಸ್ತಿನ ಕಟ್ಟಡದ ಒಳ ಹೋಗಲು ಹಾಗೂ ಹೊರಗೆ ಹೋಗಲು ಇದ್ದುದು ಒಂದೇ ದ್ವಾರ.
ಮುಖ್ಯ ದ್ವಾರದ ಕೀಲಿ ಕೈ ಮೇಲಿನ ಅಂತಸ್ತಿನಲ್ಲಿ ಮಲಗಿದ್ದ ಮೃತ್ಯುಂಜಯ ಅವರ ಬಳಿ ಇರುತ್ತಿತ್ತು ಎನ್ನಲಾಗಿದೆ. ಕೆಳಗಿನ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಎಲ್ಲೆಡೆ ಆವರಿಸಿಕೊಂಡ ಕಾರಣ ಕೆಳ ಬಂದು ಬೀಗ ತೆಗೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಒಳಗೆ ಸಿಕ್ಕಿಕೊಂಡ ಯಾರೂ ಹೊರಬರಲಿಲ್ಲ.

ನಿತ್ಯವೂ ತಂದೆ-ತಾಯಿಯೊಂದಿಗೆ ಮಲಗುತ್ತಿದ್ದ ಮೃತ್ಯುಂಜಯ ಅವರ ಹದಿನಾಲ್ಕು ವರ್ಷದ ಏಕೈಕ ಪುತ್ರಿ ಪ್ರತೀಕ್ಷಾ ಮಂಗಳವಾರ ರಾತ್ರಿ ಅಜ್ಜನ ಮನೆಯಲ್ಲಿ ಮಲಗಿದ್ದರಿಂದ ಸಾವಿನಿಂದ ಪಾರಾಗಿದ್ದಾಳೆ.

ಮೃತ್ಯುಂಜಯ ಅವರ ಕಿರಿಯ ಸಹೋದರ ಮಹೇಶ ತಿರುಪತಿಗೆ ಹೋಗಿದ್ದರು. ಅಜ್ಜ-ಅಜ್ಜಿ ಇಬ್ಬರೇ ಆಗುತ್ತಾರೆ ಎಂದು ಪ್ರತೀಕ್ಷಾ ಅಲ್ಲಿಗೆ ಮಲಗಲು ಹೋಗಿದ್ದರಿಂದ ಅನಾಹುತದಿಂದ ಪಾರಾಗಿದ್ದಾಳೆ.
ಎಂಟು ವರ್ಷದ ಹಿಂದೆ ಕರಣಿ ಗಲ್ಲಿಯಲ್ಲಿರುವ ಈ ಕಟ್ಟಡಕ್ಕೆ ಆಗಮಿಸಿದ್ದ ಸ್ವಾಮಿ ಕಲೆಕ್ಷನ್ಸ್ ಮಳಿಗೆಯು ಇನ್ನೊಂದು ತಿಂಗಳು ಕಳೆದಿದ್ದರೆ ನಿರ್ಮಾಣದ ಕೊನೆಯ ಹಂತದಲ್ಲಿರುವ ತಗಾರೆ ಗಲ್ಲಿಯ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿತ್ತು. ಆದರೆ ಜವರಾಯ ಅದಕ್ಕೆ ಅವಕಾಶ ಕೊಡಲಿಲ್ಲ.

ನಿತ್ಯವೂ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಸ್ವಾಮಿ ಕಲೆಕ್ಷನ್ಸ ಮಳಿಗೆಗೆ ಹೋಗುವ ದಾರಿ ಇಕ್ಕಟ್ಟಾಗಿರುವುದರಿಂದ ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸ್ಥಳಕ್ಕೆ ಬರಲು ಆಗಲಿಲ್ಲ. ಹಾಗಾಗಿ ಬೆಂಕಿ ಇನ್ನಷ್ಟು ವ್ಯಾಪಿಸಲು ಅವಕಾಶವಾಯಿತು ಎನ್ನುವುದು ಅಗ್ನಿ ಶಾಮಕ ದಳ ಸಿಬ್ಬಂದಿಯ ಅಭಿಪ್ರಾಯ.

`ಬೆಳಿಗ್ಗೆ ನಾವು ಬಂದಾಗ ರಸ್ತೆಯ ಎರಡು ಬದಿಗಳಲ್ಲಿ ಮನೆಗಳವರು ವಾಹನ ನಿಲ್ಲಿಸಿದ್ದರು. ಅವರನ್ನು ಎಬ್ಬಿಸಿ ವಾಹನಗಳನ್ನು ತೆಗೆಯಿಸಿ, ಮುಂದೆ ಸಾಗಬೇಕಾಯಿತು.

ಜತೆಗೆ ಅಡ್ಡವಿದ್ದ ದೂರವಾಣಿ ಕಂಬವನ್ನು ತೆಗೆದು ಹಾಕಬೇಕಾಯಿತು. ಈ ಕಾರಣಗಳಿಂದಾಗಿ ದುರಂತದ ಸ್ಥಳವನ್ನು ತಲುಪುವುದು ತಡವಾಯಿತು~ ಎಂದು ಸಿಬ್ಬಂದಿ ತಿಳಿಸಿದರು.

ಸ್ಮಶಾನ ಮೌನ: ಬೆಂಕಿ ಹೊತ್ತಿ ಉರಿಯುತ್ತಿದೆ. ಮಗ-ಸೊಸೆ ಸೇರಿದಂತೆ ಕೆಲಸಗಾರರು ಸಾವಿನ ದವಡೆಗೆ ಸಿಲುಕಿದ್ದಾರೆ ಎಂಬುದು ಬೆಳಿಗ್ಗೆ ತಿಳಿದ ಮೃತ್ಯುಂಜಯ ಅವರ ತಂದೆ ದಾನಯ್ಯ ಹಿರೇಮಠ ದಿಗ್ಮೂಢರಾದರು. ಮನೆಯಲ್ಲಿ ಸ್ಮಶಾನಮೌನ ಆವರಿಸಿತ್ತು. ದಾನಯ್ಯ ಹಾಗೂ ಅವರ ಪತ್ನಿಗೆ ಸಾಂತ್ವನ ಹೇಳಲು ಬಂದ ಜನಸಾಗರಕ್ಕೂ ಮೌನವೇ ಅವರ ಪ್ರತಿಕ್ರಿಯೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT