ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದನೇ ಟ್ರೋಫಿ ಗೆಲ್ಲುವ ವಿಶ್ವಾಸ

Last Updated 20 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ


ಅಹಮದಾಬಾದ್: ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಜಯಿಸುವ ಫೇವರಿಟ್ ತಂಡ ಅಲ್ಲ ಎಂಬ ಮಾತು ಎಲ್ಲ ಕಡೆಗಳಿಂದಲೂ ಕೇಳಿಬರುತ್ತಿದೆ. ಆದರೆ ಇದು ತಂಡದ ನಾಯಕ ರಿಕಿ ಪಾಂಟಿಂಗ್ ಅವರಿಗೆ ಯಾವುದೇ ರೀತಿಯ ಚಿಂತೆ ಉಂಟುಮಾಡಿಲ್ಲವಂತೆ.

‘ಮುಂದಿನ ಕೆಲವು ವಾರಗಳ ಕಾಲ ಉತ್ತಮ ಕ್ರಿಕೆಟ್ ಆಡುವ ಗುರಿ ನಮ್ಮದು. ಮತ್ತೊಂದು ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ವಿಶ್ವಾಸವಿದೆ. ಸೋಮವಾರ ಜಿಂಬಾಬ್ವೆ ವಿರುದ್ಧ ಗೆಲುವು ಪಡೆದು ಶುಭಾರಂಭ ಮಾಡುವೆವು’ ಎಂದು ಪಾಂಟಿಂಗ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2003 ಮತ್ತು 2007 ರಲ್ಲಿ ತಂಡವನ್ನು ಚಾಂಪಿಯನ್‌ಪಟ್ಟದೆಡೆಗೆ ಮುನ್ನಡೆಸಿದ್ದ ಪಾಂಟಿಂಗ್‌ಗೆ ಇದು ಐದನೇ ವಿಶ್ವಕಪ್ ಟೂರ್ನಿ. 1999 ರಲ್ಲಿ ಟ್ರೋಫಿ ಜಯಿಸಿದ್ದ ಆಸೀಸ್ ತಂಡದಲ್ಲೂ ಪಾಂಟಿಂಗ್ ಇದ್ದರು.

‘ಟೂರ್ನಿಯ ಆರಂಭಕ್ಕೆ ಮುನ್ನ ಟ್ರೋಫಿ ಗೆಲ್ಲುವ ಫೇವರಿಟ್ ಎಂಬ ಹಣೆಪಟ್ಟಿ ನಮಗೆ ಲಭಿಸಿಲ್ಲ. ಆದರೆ ಇದು ಚಿಂತೆಯ ವಿಷಯವೇನೂ ಅಲ್ಲ. 1999 ಮತ್ತು 2003 ರಲ್ಲಿ ನಾವು ಫೇವರಿಟ್ ತಂಡವಾಗಿ ಕಣಕ್ಕಿಳಿದಿದ್ದೆವು. ಆದರೆ 2007 ರಲ್ಲಿ ನಮಗೆ ಯಾರೂ ಫೇವರಿಟ್ ಪಟ್ಟ ನೀಡಿರಲಿಲ್ಲ. ಆದರೂ ಚಾಂಪಿಯನ್ ಆಗಿದ್ದೆವು’ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಏಕದಿನ ಪಂದ್ಯಗಳಲ್ಲಿ ಎಂದಿನ ಪ್ರಭುತ್ವ ಕಾಪಾಡಿಕೊಂಡಿದೆ ಎಂದು ಪಾಂಟಿಂಗ್ ನುಡಿದರು. ‘ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಪುಟಿದೆದ್ದು ನಿಲ್ಲಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ. ತವರು ಅಥವಾ ವಿದೇಶಿ ನೆಲವೇ ಇರಲಿ, ಏಕದಿನ ಪಂದ್ಯಗಳಲ್ಲಿ ನಾವು ಉತ್ತಮ ಗುಣಮಟ್ಟ ಕಾಪಾಡಿಕೊಂಡಿದ್ದೇವೆ. ಇದು ಹೆಮ್ಮೆಯ ವಿಚಾರ’ ಎಂದರು.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ದ ತವರಿನಲ್ಲಿ ನಡೆದ ಆ್ಯಷಸ್ ಸರಣಿಯಲ್ಲಿ ಆಸೀಸ್ 1-3 ರಲ್ಲಿ ಸೋಲು ಅನುಭವಿಸಿತ್ತು. ಆದರೆ ಬಳಿಕ ನಡೆದ ಏಳು ಪಂದ್ಯಗಳ ಏಕದಿನ ಸರಣಿಯಲ್ಲಿ ತಿರುಗೇಟು ನೀಡಿ 6-1 ಅಂತರದಲ್ಲಿ ಜಯ ಸಾಧಿಸಿತ್ತು.

ಮೆಕ್‌ಗ್ರಾ ಹಿಂದಿಕ್ಕಲಿರುವ ಪಾಂಟಿಂಗ್
ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಸೋಮವಾರದ ಪಂದ್ಯದ ಮೂಲಕ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲಿದ್ದಾರೆ. ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಆಟಗಾರ ಎಂಬ ಗೌರವ ಪಾಂಟಿಂಗ್‌ಗೆ ಒಲಿಯಲಿದೆ.

ಇದೀಗ ಪಾಂಟಿಂಗ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾ ವಿಶ್ವಕಪ್‌ನಲ್ಲಿ 39 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮವಾರದ ಪಂದ್ಯ ಆಸೀಸ್ ನಾಯಕನಿಗೆ 40ನೇ ಪಂದ್ಯ ಎನಿಸಲಿದೆ. ಆ ಮೂಲಕ ಮೆಕ್‌ಗ್ರಾ ಅವರನ್ನು ಹಿಂದಿಕ್ಕುವರು.

ಸನತ್ ಜಯಸೂರ್ಯ (38), ವಾಸೀಮ್ ಅಕ್ರಮ್ (38) ಮತ್ತು ಸಚಿನ್ ತೆಂಡೂಲ್ಕರ್ (37) ಅವರು ಅತಿಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡವರ ಪಟ್ಟಿಯಲ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT