ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಐದು ಲಕ್ಷ ಸದಸ್ಯತ್ವ ಗುರಿಯೊಂದಿಗೆ ಅಭಿಯಾನ'

ಛಲವಾದಿ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಶಿವರಾಂ ಹೇಳಿಕೆ
Last Updated 22 ಜುಲೈ 2013, 9:43 IST
ಅಕ್ಷರ ಗಾತ್ರ

ಚಿತ್ರದುರ್ಗ: `ಚುನಾವಣೆ ವೇಳೆ ಆಶ್ವಾಸನೆಗಳನ್ನು ನೀಡಿ ಛಲವಾದಿ ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಹಿಂದೇಟು ಹಾಕುತ್ತಿವೆ' ಎಂದು ಛಲವಾದಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಕೆ.ಶಿವರಾಂ ದೂರಿದರು.

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿ ಆಯೋಜಿಸಿದ್ದ ಛಲವಾದಿ ಸಾಂಸ್ಕೃತಿಕ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಛಲವಾದಿ ಸಮುದಾಯದ 40 ಲಕ್ಷ ಜನರಿದ್ದಾರೆ. ಅನೇಕ ಕಡೆ ಪಕ್ಷಗಳ ಗೆಲುವಿಗೆ ನಿರ್ಣಾಯಕರಾಗಿದ್ದಾರೆ. ಇಷ್ಟಾದರೂ ಸಮುದಾಯಕ್ಕೆ ಸರಿಯಾದ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ' ಎಂದು ವಿಷಾದಿಸಿದರು.

ಛಲವಾದಿ ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚಿನ ಆದ್ಯತೆ ನೀಡದಿದ್ದರೆ, ರಾಜಕೀಯವಾಗಿ ಸಮುದಾಯ ಅಭಿವೃದ್ಧಿ ಸಾಧಿಸುವುದಿಲ್ಲ. ಅಂಬೇಡ್ಕರ್ ಕನಸು ನನಸಾಗುವುದಿಲ್ಲ ಎಂದು ಶಿವರಾಂ ಅಭಿಪ್ರಾಯಪಟ್ಟರು.

`ನಮ್ಮ ಸಮಾಜ ರಾಜಕೀಯವಾಗಿ ಬೆಳೆಯದಿದ್ದರೆ, ಅಭಿವೃದ್ಧಿಯಲ್ಲೂ ಹಿಂದೆ ಉಳಿಯುತ್ತದೆ. ಸಮಾಜದ ಬಂಧುಗಳು ಒಗ್ಗಟ್ಟಾದಲ್ಲಿ ಅಧಿಕಾರ ಹಿಡಿಯುವುದು ಕಷ್ಟವೇನಲ್ಲ. ಹಾಗಾಗಿ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸಮುದಾಯದವರೆಲ್ಲರೂ ಒಂದಾಗಬೇಕು. ಒಗ್ಗಟ್ಟಾಗಿ ರಾಜಕೀಯ ಅಧಿಕಾರ ಹಿಡಿಯದಿದ್ದಲ್ಲಿ ನಮ್ಮ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಈ ನಿಟ್ಟಿನಲ್ಲಿ ಜನಾಂಗದ ನೌಕರ ವರ್ಗದವರು ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯ ಮಾಡಬೇಕು ಎಂದರು.

`ಸಮುದಾಯದವರ ಅಭಿವೃದ್ಧಿಗಾಗಿ ಮಹಾಸಭಾ ಸ್ಥಾಪಿಸಲಾಗಿದೆ. ರಾಜ್ಯದಾದ್ಯಂತ ಪ್ರವಾಸ ಮಾಡುವ ಮೂಲಕ ಜನಾಂಗವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದ ದಕ್ಷಿಣ ಭಾಗದ  ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಛಲವಾದಿ ಎಂದರೆ ತಿಳಿದಿಲ್ಲ. ಚಿತ್ರದುರ್ಗ ಹಾಗೂ ದಾವಣಗೆರೆ ಆಸುಪಾಸಿನ ಜಿಲ್ಲೆಗಳಿಗೆ ಈ ಸಂಘಟನೆ ಹೊಸದಲ್ಲ' ಎಂದು ಹೇಳಿದರು.

`ಈ ಜಿಲ್ಲೆಯಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಜನಾಂಗವನ್ನು ಒಂದೇ ವೇದಿಕೆಯಡಿ ತರುವ ಕೆಲಸವಾಗಬೇಕು. ಈ ಉದ್ದೇಶದಿಂದ ಸಮುದಾಯದವರು ಯಾವುದೇ ಕಾರ್ಯಕ್ರಮ ಆಯೋಜಿಸುವುದಿದ್ದರೂ ಅದು ಛಲವಾದಿ ಮಹಾಸಭಾದ ನೇತೃತ್ವದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

`ನಮ್ಮ ಸಮಾಜದಲ್ಲಿ ನಾಯಕರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಅನುಯಾಯಿಗಳ ಕೊರತೆ ಇದೆ. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಎಡಗೈ ಸಮುದಾಯಕ್ಕೆ ಹೆಚ್ಚಿನ ಪಾಲು ದೊರೆಯುವಂತೆ ಒತ್ತಾಯಿಸಿ ಹಲವು ಸಂಘಟನೆಗಳು ಮನವಿ ಸಲ್ಲಿಸಿವೆ. ಆದರೆ, ನಮ್ಮ ಸಮುದಾಯದಿಂದ ಇಂಥ ಪ್ರಯತ್ನ ನಡೆಯಲಿಲ್ಲ. ಸಮುದಾಯ ನಿರಂತರ ಶೋಷಣೆಗೆ ಒಳಗಾಗುತ್ತಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸಮಾಜದ ಕೆಲವು ಅಧಿಕಾರಿಗಳು ಸಮಾಜದ ಜೊತೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನಿವೃತ್ತರಾದ ನಂತರ ಸಂಘಟನೆ, ರಾಜಕೀಯ ಎಂದು ಜನರ ಮುಂದೆ ಬರುತ್ತಾರೆ' ಎಂದು ಅವರು ವಿಷಾದಿಸಿದರು.

ಸಮುದಾಯದ ಸಂಘಟನೆಗಾಗಿ ತಾಲ್ಲೂಕು, ಹೋಬಳಿ ಸೇರಿದಂತೆ ಹಳ್ಳಿಹಳ್ಳಿಗಳಲ್ಲಿ ಛಲವಾದಿ ಮಹಾಸಭಾದ ಶಾಖೆಗಳನ್ನು ಆರಂಭಿಸುತ್ತೇವೆ. ಕನಿಷ್ಠ ಒಂದು ಲಕ್ಷ ಜನರನ್ನಾದರೂ ಸದಸ್ಯರನ್ನಾಗಿ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಪಕ್ಷ 3-4 ಸಾವಿರ ಸದಸ್ಯತ್ವ ಮಾಡಬೇಕು. 5 ಲಕ್ಷ ಜನರನ್ನು ಸೇರಿಸಿ ್ಙ 3 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 65 ವರ್ಷಗಳು ಕಳೆದಿದ್ದರೂ ಶೋಷಿತ ಸಮುದಾಯ ಒಂದು ಸಂಘಟನೆಯಡಿ ಬರಲಿಲ್ಲ. ಇದಕ್ಕೆ ಕಾರಣ ಜನಾಂಗದ ನಾಯಕರೇ ಹೊರತು ಸಂಘಟನೆಯ ಕಾರ್ಯಕರ್ತರಲ್ಲ.

ನಮ್ಮ ಸಮುದಾಯದಲ್ಲಿ ಅನೇಕ ಉಪಜಾತಿಗಳಿವೆ. ಇದರಿಂದ ಜನರಲ್ಲಿ ಪರಸ್ಪರ ಅಂತರ ಉಂಟಾಗಿದ್ದು, ಇದನ್ನು ಮೆಟ್ಟಿ ಸಂಘಟಿತರಾಗಬೇಕು ಎಂದರು.
ಚಿತ್ತರಗಿ ಮಹಾಸಂಸ್ಥಾನದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಕೆ.ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೃಷ್ಣಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಅಣ್ಣಪ್ಪಸ್ವಾಮಿ, ಜಿ.ಆರ್. ಚಂದ್ರಶೇಖರ್, ಡಾ.ಪಿ.ವಿ.ಶ್ರಿಧರ ಮೂರ್ತಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT