ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐನ್‌ಸ್ಟೀನ್ ಹಾದಿಯ ಕನಸಲ್ಲಿ ನೇಹಾ

Last Updated 2 ಏಪ್ರಿಲ್ 2013, 19:49 IST
ಅಕ್ಷರ ಗಾತ್ರ

ಬೆಂಗಳೂರು: `ನಾನು ಆಲ್ಬರ್ಟ್ ಐನ್‌ಸ್ಟೀನ್ ಅವರಷ್ಟು ದೊಡ್ಡವಳಲ್ಲ. ಆದರೆ, ಅವರ ದಾರಿಯಲ್ಲಿ ಸಾಗುವ ಕನಸು ಕಾಣುತ್ತಿರುವವಳು'
ಮೆನ್ಸಾ ಗಣಿತ ಪರೀಕ್ಷೆಯಲ್ಲಿ 162 ಅಂಕಗಳನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದ ಹನ್ನೆರೆಡು ವರ್ಷದ ಬಾಲಕಿ ನೇಹಾ ರಾಮು ಹೇಳಿದ ಮಾತುಗಳಿವು. ಎಲ್ಲರೂ ಆಕೆಯ ಬುದ್ಧಿಮತ್ತೆಯನ್ನು ಆಲ್ಬರ್ಟ್ ಐನ್‌ಸ್ಟೀನ್, ಬಿಲ್ ಗೇಟ್ಸ್ ಅವರಿಗೆ ಹೋಲಿಸುವಾಗ ಆಕೆ ಹೇಳುವ ವಿನಯದ ನುಡಿಗಳಿವು.

`ಮೆನ್ಸಾ ಗಣಿತ ಪರೀಕ್ಷೆಯು ನನ್ನ ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವಂತಿತ್ತು. ನಾನು ಸವಾಲುಗಳನ್ನು ಎದುರಿಸಲು ಸಮರ್ಥಳು ಎಂಬುದನ್ನು ಈ ಪರೀಕ್ಷೆ ಮನವರಿಕೆ ಮಾಡಿಕೊಟ್ಟಿದೆ. ನನ್ನ ಬುದ್ಧಿಮತ್ತೆ ಈ ಪರೀಕ್ಷೆಯಲ್ಲಿ ಹೆಚ್ಚು ಕೆಲಸ ಮಾಡಿದೆ' ಎನ್ನುವ ಆಕೆಗೆ ಪರೀಕ್ಷೆ ಎದುರಿಸಿದ ಬಗ್ಗೆ ಹೆಮ್ಮೆ ಇದೆ.

ರಜೆಯ ದಿನಗಳನ್ನು ಕಳೆಯಲು ಕೆಲ ದಿನಗಳ ಹಿಂದೆ ಲಂಡನ್‌ನಿಂದ ನಗರಕ್ಕೆ ಬಂದಿರುವ ನೇಹಾ ನಗರದಲ್ಲಿ ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾಳೆ. `ನಗರದ ವಾತಾವರಣ ನನಗೆ ಹೆಚ್ಚು ಇಷ್ಟ. ಲಂಡನ್‌ನಲ್ಲಿ ಸದಾ ಶೀತದ ಮತ್ತು ಮಂಜಿನ ವಾತಾವರಣವಿರುತ್ತದೆ.  ಆದರೆ, ನಗರದ ಹವೆ ಹಿತವಾಗಿರುತ್ತದೆ' ಎನ್ನುತ್ತಾಳೆ ಆಕೆ.

ವೃತ್ತಿಯಿಂದ ವೈದ್ಯರಾಗಿರುವ ತಂದೆ ತಾಯಿಯ ಜತೆ 2007ರಿಂದ ಲಂಡನ್‌ನಲ್ಲಿರುವ ನೇಹಾಗೆ ನಗರದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಹೀಗಾಗಿಯೇ ಪ್ರತಿ ವರ್ಷ ರಜೆಯ ದಿನಗಳಲ್ಲಿ ತಪ್ಪದೇ ನಗರಕ್ಕೆ ಭೇಟಿ ನೀಡುವುದನ್ನು ಆಕೆ ಹಾಗೂ ಆಕೆಯ ಪೋಷಕರು ತಪ್ಪಿಸಿಲ್ಲ.

ಅತ್ಯಂತ ಬುದ್ಧಿವಂತೆ ಎಂದು ಗುರುತಿಸಿಕೊಂಡಿರುವ ನೇಹಾ ಓದಲು ನೀಡುವಷ್ಟೇ ಸಮಯವನ್ನು ಆಟಕ್ಕೂ ಮೀಸಲಿಡುವ ಜಾಣೆ. ಹೆಚ್ಚು ಒತ್ತಡದಿಂದ ಮಾಡುವ ಕೆಲಸದಿಂದ ಪರಿಪೂರ್ಣತೆ ಸಿಗುವುದಿಲ್ಲ ಎನ್ನುವ ನೇಹಾ, `ನಾನು ಓದಿಗೆ ನೀಡುವಷ್ಟು ಮಹತ್ವವನ್ನು ಆಟಕ್ಕೂ ನೀಡುತ್ತೇನೆ. ಆಟ ಮತ್ತು ಪಾಠದ ಮಧ್ಯೆ ಸಮತೋಲನ ಸಾಧಿಸುವುದು ಮುಖ್ಯ. ಎರಡು ಗಂಟೆ ಅಧ್ಯಯನ ನಡುವೆ ಒಂದು ಗಂಟೆ ಬಿಡುವು ತೆಗೆದುಕೊಳ್ಳುತ್ತೇನೆ. ಒಂಬತ್ತರಿಂದ ಹತ್ತು ಗಂಟೆ ನಿದ್ರೆ ಮಾಡುತ್ತೇನೆ' ಎಂದು ತನ್ನ ಅಧ್ಯಯನದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಳು ಆಕೆ.

ಬೆಂಗಳೂರಿನಲ್ಲಿದ್ದಾಗ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದುದನ್ನು ಸ್ಮರಿಸಿದ ಆಕೆ ಇಲ್ಲಿನ ಕಲಿಕೆಯ ಒತ್ತಡ ಮರೆತಿಲ್ಲ.   
`ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಒತ್ತಡ ಹೆಚ್ಚು. ನಾನು ಇಲ್ಲಿದ್ದಾಗ ನನಗೆ ನೀಡುತ್ತಿದ್ದ ಮನೆ ಕೆಲಸ ಹಾಗೂ ಪರೀಕ್ಷೆಗಳು ಒತ್ತಡ ತರುತ್ತಿದ್ದವು. ಆದರೆ, ಲಂಡನ್‌ನಲ್ಲಿ ಕಲಿಯುತ್ತಿರುವುದು ಒತ್ತಡ ಎನಿಸುತ್ತಿಲ್ಲ. ಅಲ್ಲಿನ ಕಲಿಕೆ ಭಾರತದಲ್ಲಿ ಓದುವುದಕ್ಕಿಂತ ಎರಡು ಪಟ್ಟು ಮುಂದಿದ್ದೇನೆ ಎನಿಸುತ್ತಿದೆ. ಲಂಡನ್‌ನ ಶೈಕ್ಷಣಿಕ ವ್ಯವಸ್ಥೆ ಆಸಕ್ತಿದಾಯಕವಾಗಿದೆ. ಭಾರತದಂತೆ ಹಿಂದಿನ ಪಠ್ಯಕ್ರಮವನ್ನೇ ಮುಂದುವರಿಸದೇ, ಪ್ರಾಯೋಗಿಕ ಕಲಿಕೆಗೆ ಅಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಾರೆ' ಎಂಬುದು ಆಕೆ ವಿವರಣೆ.

`ತರ್ಕದ ವಿಷಯದ ಮೇಲೆ ನನಗೆ ಹೆಚ್ಚು ಹಿಡಿತವಿರಲಿಲ್ಲ. ಹೀಗಾಗಿ ಮೆನ್ಸಾ ಗಣಿತ ಪರೀಕ್ಷೆಯಲ್ಲಿ ತರ್ಕದ ವಿಷಯ ಹೆಚ್ಚು ಕ್ಲಿಷ್ಟವಾಗಿತ್ತು. ಇದರಿಂದ ಶೇ 60ರಷ್ಟು ಅಂಕವನ್ನು ತರ್ಕದ ವಿಷಯದಿಂದ ಕಳೆದುಕೊಳ್ಳಬೇಕಾಯಿತು. ಆದರೆ, ನಾನು ಹೆಚ್ಚು ಪ್ರೀತಿಸುವ ವಿಷಯ ಗಣಿತ. ವಿಜ್ಞಾನದಿಂದ ಸದಾ ಹೊಸತನ್ನು ಪಡೆಯಲು ಸಾಧ್ಯ. ಈ ಕಾರಣಕ್ಕಾಗೇ ವಿಜ್ಞಾನ ವಿಷಯ ನನ್ನನ್ನು ಸೆಳೆಯುತ್ತದೆ' ಎನ್ನುವ ಆಕೆಗೆ ಮುಂದೆ ನರ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸಿದೆ.

`ಕಳೆದ ವರ್ಷ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಬೇಸಿಗೆ ಕೋರ್ಸ್‌ನಲ್ಲಿ ಪಾಲ್ಗೊಂಡಿದ್ದೆ. ಆಗ `ಇಂದ್ರಿಯ ಸಂವೇದನೆ ಮತ್ತು ಗ್ರಹಣ ಶಕ್ತಿ'ಯ ಬಗ್ಗೆ ಕಲಿಸಲಾಯಿತು. ಆಗ ಮಿದುಳಿನ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿದುಕೊಂಡೆ. ಆ ವೇಳೆ ನರವಿಜ್ಞಾನದ ಬಗ್ಗೆ ಹೆಚ್ಚು ಸಂಶೋಧನೆಯಾಗಿಲ್ಲ ಎನಿಸಿತು. ಹೀಗಾಗಿ ನರವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆ ಮಾಡಬೇಕು ಎಂದು ನಿರ್ಧರಿಸಿದ್ದೇನೆ' ಎನ್ನುತ್ತಾಳೆ ಆಕೆ.

`ಸ್ನೇಹಿತರು ಹಾಗೂ ಪೋಷಕರೊಂದಿಗೆ ವಂಡರ್‌ಲಾಗೆ ಹೋಗಿ ನೀರಾಟ ಆಡಬೇಕು ಎಂಬ ಆಸೆ ಇದೆ. ಸದ್ಯ ಬೆಂಗಳೂರಿನ ವಾತಾವರಣ ಈಜಾಡಲು ಉತ್ತಮವಾಗಿದೆ. ಮುಂದಿನ ವಾರ ಲಂಡನ್‌ಗೆ ಹೋಗುತ್ತೇವೆ' ಎನ್ನುವ ಬುದ್ಧಿವಂತೆ ನೇಹಾಗೆ ನಗರದ ಹಲವು ಸಂಸ್ಥೆಗಳು ಈ ವಾರ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT