ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಐದನೇ ಅವತರಣಿಕೆ ಮುಂದಿನ ವರ್ಷ ಚೆನ್ನೈನಲ್ಲಿ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ):  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಐದನೇ ಅವತರಣಿಕೆಯ ಟ್ವೆಂಟಿ-20 ಟೂರ್ನಿಯು ಮುಂದಿನ ವರ್ಷ ಏಪ್ರಿಲ್ 4ರಿಂದ ಮೇ 27ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಶುಕ್ರವಾರ ಇಲ್ಲಿ ಸಭೆ ಸೇರಿದ್ದ ಐಪಿಎಲ್ ಆಡಳಿತ ಮಂಡಳಿಯು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ನೀಡಿರುವ ಕಾಲಾವಕಾಶದಲ್ಲಿ ಟೂರ್ನಿಯನ್ನು ಆಯೋಜಿಸಲು ಕಾರ್ಯಕ್ರಮ ಪಟ್ಟಿಯನ್ನು ರೂಪಿಸಲು ತೀರ್ಮಾನಿಸಿತು. ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಆಟಗಾರರು ಲಭ್ಯವಾಗಬೇಕು ಎನ್ನುವ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಈ ಚುಟುಕು ಕ್ರಿಕೆಟ್ ಟೂರ್ನಿಯ ಸಮಯವನ್ನು ನಿಗದಿ ಮಾಡಲಾಗಿದೆ.

ಪಂದ್ಯಗಳ ಪಕ್ಕಾ ಕಾರ್ಯಕ್ರಮ ಪಟ್ಟಿಯನ್ನು ಇನ್ನೂ ಸಿದ್ಧಪಡಿಸುವುದು ಬಾಕಿ ಇದೆ. ಈಗ ನಿಗದಿ ಮಾಡಿರುವ ಅವಧಿಯಲ್ಲಿ ಪಂದ್ಯಗಳನ್ನು ನಿಗದಿ ಮಾಡಲಾಗುವುದು. ಇದಕ್ಕಾಗಿ ಉಪ ಸಮಿತಿಯು ಪ್ರತ್ಯೇಕವಾಗಿ ಸಭೆ ನಡೆಸಲಿದೆ. ಪಾಕಿಸ್ತಾನದ ಆಟಗಾರರನ್ನು ಐದನೇ ಅವತರಣಿಕೆಗೆ ಆಹ್ವಾನಿಸುವ ವಿಷಯವಾಗಿ ಚರ್ಚೆ ಇಲ್ಲಿ ನಡೆದ ಸಭೆಯಲ್ಲಿ ಮಾಡಲಾಯಿತು. ಅಷ್ಟೇ ಅಲ್ಲ ಆಟಗಾರರ ವರ್ಗಾವಣೆ ಹಾಗೂ ನಿಬಂಧನೆಗಳ ಕುರಿತು ವಿಚಾರ ವಿನಿಮಯ ಮಾಡಲಾಯಿತು.

ಈ ಎಲ್ಲ ಅಂಶಗಳನ್ನು ಮುಂಬರುವ ಸಭೆಯಲ್ಲಿ ವಿವರವಾಗಿ ಪರಾಮರ್ಶೆ ಮಾಡಲು ಆಡಳಿತ ಮಂಡಳಿ ಒಪ್ಪಿಗೆ ನೀಡಿತು. ಆದರೆ ಮತ್ತೊಂದು ಸಭೆಯನ್ನು ಯಾವಾಗ ನಡೆಸಲಾಗುವುದೆಂದು ತೀರ್ಮಾನ ಕೈಗೊಳ್ಳಲಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಸಿಸಿಐ) ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಪಿಎಲ್ ನೂತನ ಮುಖ್ಯಸ್ಥ ರಾಜೀವ್ ಶುಕ್ಲಾ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಐದನೇ ಅವತರಣಿಕೆಗೆ ಸಂಬಂಧಿಸಿದ ಅನೇಕ ನಿರ್ವಹಣಾ ವ್ಯವಸ್ಥೆಗಳಿಗೆ ಒಪ್ಪಿಗೆ ದೊರೆತಿದೆ ಎಂದು ಅವರು ವಿವರಿಸಿದ್ದಾರೆ.

ಕೊಚ್ಚಿ ಆಟಗಾರರ ಹಿತ ಕಾಪಾಡಲಾಗುವುದು: ಐಪಿಎಲ್‌ನಿಂದ ವಜಾಗೊಂಡಿರುವ ಕೊಚ್ಚಿ ಟಸ್ಕರ್ಸ್ ತಂಡಕ್ಕಾಗಿ ಆಡುತ್ತಿದ್ದ ಆಟಗಾರರ ಹಿತವನ್ನು ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜೀವ್ ಶುಕ್ಲಾ ಭರವಸೆ ನೀಡಿದ್ದಾರೆ.


`ಕ್ರಿಕೆಟಿಗರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಈ ವಿಷಯವೂ ಸೇರಿದಂತೆ ಆಟಗಾರರಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಪರಿಶೀಲಿಸಲು ಮುಂದಿನ ಸಭೆಯಲ್ಲಿ ಆದ್ಯತೆ ನೀಡಲಾಗುವುದು~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT