ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಕ್ರೇಜು ಕ್ರಿಕೆಟ್ ಆಟದ ಮೋಜು...

Last Updated 10 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಅಬ್ಬಾ! ಅಂತೂ ಇಂತೂ ಭಾರತ ತಂಡ ವಿಶ್ವಕಪ್ ಗೆದ್ದು ಬಿಟ್ಟಿತು ಎಂದು ನಿಟ್ಟುಸಿರು ಬಿಟ್ಟವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸ್ಸಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳು. ವಿಶ್ವಕಪ್‌ನ ಭಾರತ ಹಾಗೂ ಆಸ್ಟ್ರೇಲಿಯ ನಡುವಣ ಕ್ವಾರ್ಟರ್‌ಫೈನಲ್ ಪಂದ್ಯಕ್ಕೂ ಮುನ್ನ ಭಾರತ ಈ ಟೂರ್ನಿಯಲ್ಲಿ ಸೋತು ಹೊರ ಬಿದ್ದರೆ ಎನ್ನುವ ಆತಂಕ ಬಹುತೇಕ ಕ್ರೀಡಾಭಿಮಾನಿಗಳನ್ನು ಕಾಡಿತ್ತು. ಏಕೆಂದರೆ ವಿಶ್ವಕಪ್ ಕ್ರಿಕೆಟ್ ಹಬ್ಬ ಮುಗಿದ ಆರೇ ದಿನಕ್ಕೆ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಬರಲಿದೆ ಎನ್ನುವುದು ಅಭಿಮಾನಿಗಳಲ್ಲಿದ್ದ ಆಲೋಚನೆಯಾಗಿತ್ತು.

ಒಂದು ವೇಳೆ ಭಾರತ ಟೂರ್ನಿಯಿಂದ ಬೇಗನೆ ನಿರ್ಗಮಿಸಿ ಬಿಟ್ಟಿದ್ದರೆ ಅದರ ಪರಿಣಾಮ ಐಪಿಎಲ್ ಮೇಲೂ ಉಂಟಾಗುತ್ತಿತ್ತು ಎನ್ನುವುದನ್ನು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಕೂಡಾ ಒಪ್ಪಿಕೊಳ್ಳುತ್ತಾರೆ. ಆದ್ದರಿಂದಲೇ ‘ಮಹಿ’ ಪಡೆ ವಿಶ್ವಕಪ್ ಜಯಿಸಿದ್ದು ಐಪಿಎಲ್ ಕ್ರೇಜ್ ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ವಾರ್ಟರ್‌ಫೈನಲ್ ಅಥವಾ ಸೆಮಿಫೈನಲ್‌ನಲ್ಲಿ ಸೋತು ಬಿಟ್ಟಿದ್ದರೆ ಐಪಿಎಲ್ ಕ್ರೇಜು ಹಾಗೂ ಮೋಜು ಎರಡೂ ತಣ್ಣಗಾಗುತ್ತಿತ್ತು. ಕೊನೆಗೂ ಭಾರತ ವಿಶ್ವಕಪ್ ಗೆದ್ದದ್ದು ಆಯಿತು. 2008ರಲ್ಲಿ ಮೊದಲ ಬಾರಿಗೆ ಆರಂಭವಾದ ಐಪಿಎಲ್ ಕೇವಲ ಮೂರು ವರ್ಷದಲ್ಲಿ 50 ಓವರ್‌ಗಳ ಕ್ರಿಕೆಟ್‌ಗಿಂತಲೂ ಹೆಚ್ಚು ಜನಪ್ರಿಯತೆ ಪಡೆಯಿತು. ಐಪಿಎಲ್‌ಗೆ ದೊರೆತ ಜನಪ್ರಿಯತೆ 50 ಓವರ್‌ಗಳ ಕ್ರಿಕೆಟ್‌ನ ಮೇಲೆ ಪರಿಣಾಮ ಉಂಟು ಮಾಡುತ್ತದೆಯೇ? ಮುಂದಿನ ಕೆಲ ವರ್ಷಗಳಲ್ಲಿ 50ರ ಆಟಕ್ಕೆ ಪೂರ್ಣ ವಿರಾಮ ಬೀಳಲಿದೆಯೇ ಎನ್ನುವ ಸಂದೇಹವನ್ನು ಹುಟ್ಟು ಹಾಕುವಂತ ಜನಪ್ರಿಯತೆ ಐಪಿಎಲ್‌ಗೆ ದೊರಕಿ ಬಿಟ್ಟಿತು.

ತಾರೆಯರ ಬೆಂಬಲ: ಕೇವಲ ಮೂರು ವರ್ಷಗಳ ಅವಧಿಯಲ್ಲಿ ಐಪಿಎಲ್ ಕ್ರಿಕೆಟ್ ನಿರೀಕ್ಷೆಗೂ ಮೀರಿ ಬೆಳೆಯಲು ಕಾರಣವಾಗಿದ್ದು ಬಹುತೇಕ ತಂಡಗಳಿಗೆ ತಾರಾಮಣಿಗಳು, ಉದ್ಯಮಿಗಳು ಫ್ರಾಂಚೈಸ್ಸಿಗಳಾಗಿದ್ದು ಹಾಗೂ ಕೋಟಿ ಕೋಟಿ ಹಣದ ಹೊಳೆ ಹರಿದದ್ದು!
ರಾಯಲ್ ಚಾಲೆಂಜರ್ಸ್-ವಿಜಯ ಮಲ್ಯ, ಕೋಲ್ಕತ್ತ ನೈಟ್ ರೈಡರ್ಸ್-ಶಾರೂಖ್ ಖಾನ್, ಕಿಂಗ್ಸ್ ಇಲೆವನ್ ಪಂಜಾಬ್-ಪ್ರೀತಿ ಜಿಂಟಾ, ರಾಜಸ್ತಾನ್ ರಾಯಲ್ಸ್-ಶಿಲ್ಪಾ ಶೆಟ್ಟಿ ಹೀಗೆ ನಟನೆಗೆ, ಉದ್ಯಮಕ್ಕೆ ಸೀಮಿತವಾಗಿದ್ದವರು ಕ್ರಿಕೆಟ್‌ಗೂ ಕಾಲಿರಿಸಿದರು. ಅಲ್ಲಿಯೂ ಕೋಟಿ ಕೋಟಿ ಹಣದ ಹೊಳೆಯನ್ನೇ ಹರಿಸಿದರು. 

ಐಪಿಎಲ್‌ಗೆ ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸ್ಸಿಗಳು ಸುರಿದ ಕೋಟಿ ಕೋಟಿ ಹಣ ಆಟಗಾರರನ್ನು ಆಕರ್ಷಿಸಿತು. ಆಗ ಚುಟುಕು ಕ್ರಿಕೆಟ್‌ಗೆ ಹಣದ ಜೊತೆಗೆ ಮನರಂಜನೆ ನೀಡಲು ಚಿಯರ್ ಗರ್ಲ್ಸ್‌ನ ಬೆಡಗಿಯರೂ ಕೂಡಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಪ್ರತಿ ತಂಡಕ್ಕೆ ಅಂತಲೇ ನಿರ್ದಿಷ್ಟವಾಗಿ ಅವರು ಬೆಂಬಲ ನೀಡ ತೊಡಗಿದರು. 50ರ ಆಟದ ಹಾಗೆ ಗಂಟೆಗಟ್ಟಲೇ ಕ್ರೀಡಾಂಗಣದಲ್ಲಿ ಕೂಡುವ ಅವಶ್ಯತೆಯಿರದ ಈ ಚುಟುಕು ಕ್ರಿಕೆಟ್ ಕೂಡಾ ಕ್ರೀಡಾಭಿಮಾನಿಗಳನ್ನು ಬೇಗನೆ ಆಕರ್ಷಿಸಿತು.

ಟ್ವೆಂಟಿ-20 ಕ್ರಿಕೆಟ್‌ಗೆ ಶುಕ್ರವಾರ ಚೆನ್ನೈಯಲ್ಲಿ ಚಾಲನೆ ದೊರೆಯಿತು. ಮೊದಲ ಪಂದ್ಯಕ್ಕೆ ಟಿಕೆಟ್ ‘ಸೋಲ್ಡ್ ಔಟ್’ ಆಗಿದ್ದು ಕೂಡ ಅದರ ಜನಪ್ರಿಯತೆಯನ್ನು ತಿಳಿಸುತ್ತದೆ. ಆಟಗಾರರು ಬ್ಯಾಟ್, ಬೌಲ್‌ನ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರೆ, ತುಂಡುಡುಗೆ ತೊಟ್ಟ ನರ್ತಕಿಯರು ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ.

ಮೊನ್ನೆ ಮೊನ್ನೆಯ ತನಕ ಗೌತಮ್ ಗಂಭೀರ್, ಮಹೇಂದ್ರ ಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಎಲ್ಲರೂ ಸೇರಿ ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್ ಗೆದ್ದು ಕೊಟ್ಟರು. ಆದರೆ ಈಗ ಅವರೇ ಬೇರೆ ಬೇರೆ ತಂಡಗಳ ನೇತೃತ್ವ ವಹಿಸಿಕೊಂಡಿದ್ದಾರೆ. ಒಂದೇ ತಂಡದಲ್ಲಿ ಆಡಿದ ಕುಮಾರ ಸಂಗಕ್ಕಾರ ಹಾಗೂ ಮಹೇಲ ಜಯವರ್ಧನೆ ಕೂಡಾ ಈಗ ಬೇರೆ ಬೇರೆ ( ಡೆಕ್ಕನ್ ಚಾರ್ಜಸ್ ಹಾಗೂ ಕೊಚ್ಚಿ ಟಸ್ಕರ್ ಕೇರಳ ) ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇಲ್ಲಿ ಯಾವ ತಂಡ ಸೋಲಲಿ ಗೆಲ್ಲಲಿ. ಅದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲವಿಲ್ಲ. ನಿರಾಸೆಯಿಲ್ಲ. ಏಕೆಂದರೆ ಯಾವ ತಂಡ ಸೋತರೇನು? ಗೆದ್ದರೇನು? ಎಲ್ಲಾ ತಂಡಗಳಲ್ಲಿಯೂ ವಿವಿಧ ದೇಶಗಳ ಆಟ      ಗಾರರು ಇದ್ದಾರೆ. ಯಾವ ತಂಡ ಸೋತರೂ, ಗೆದ್ದರೂ ನಮ್ಮ ದೇಶದ ಆಟಗಾರರಂತೂ ಇದ್ದೇ ಇರುತ್ತಾರೆ.

ಒಟ್ಟಿನಲ್ಲಿ ಆಟದ ಸವಿ ಸವೆಯಲು ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್ ವೇದಿಕೆಯಾಗಿದೆ. ಇಲ್ಲಿ ಏನಿದ್ದರೂ ಅಬ್ಬರದ ಬ್ಯಾಟಿಂಗ್‌ನದ್ದೇ ಸಂಭ್ರಮ. ಇರುವ ಕೇವಲ 120 ಎಸೆತಗಳಲ್ಲಿ ಉತ್ತಮ ಮೊತ್ತ ಸೇರಿಸಬೇಕು ಎನ್ನುವುದು ಎಲ್ಲಾ ತಂಡಗಳ ಆಶಯ. ಅದಕ್ಕಾಗಿ ಚೆಂಡು ಬೌಂಡರಿ ಗೆರೆ ಮುಟ್ಟಿಸುವುದರತ್ತವೇ ಆಟಗಾರರ ಚಿತ್ತ ಅಡಗಿರುತ್ತದೆ. ಚೆಂಡು ಬೌಂಡರಿ ಗೆರೆ ಮುಟ್ಟಿದಾಗ ಚಿಯರ್  ಗರ್ಲ್‌ಗಳ ನೃತ್ಯ ಆಟಗಾರರನ್ನು ಮತ್ತು ಅಭಿಮಾನಿಗಳನ್ನು ಮತ್ತಷ್ಟು ಹುರಿದುಂಬಿಸುತ್ತದೆ. ಮನರಂಜನೆ ನೀಡುತ್ತದೆ.

ಒಂದೇ ದೇಶಕ್ಕಾಗಿ, ಒಂದೇ ತಂಡದಲ್ಲಿ 50 ಓವರ್‌ಗಳ ಕ್ರಿಕೆಟ್‌ನಲ್ಲಿ  ಆಡಿದವರು ಈಗ ಬೇರೆ ಬೇರೆ ತಂಡಗಳಲ್ಲಿ ಆಡಲಿದ್ದಾರೆ. ಅದಕ್ಕಾಗಿಯೇ ಈ ಆಟದ ಕ್ರೇಜು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಒಟ್ಟು 40 ಓವರ್‌ಗಳಲ್ಲಿ ಎರಡೂ ತಂಡಗಳಿಂದಲೂ ನಡೆಯುವ ಆಕ್ರಮಣಕಾರಿ ಆಟವೇ ಪ್ರೇಕ್ಷಕರ ಕ್ರೇಜು ಹೆಚ್ಚಿಸುತ್ತದೆ. ಈಗ ತಾನೆ ವಿಶ್ವಕಪ್ ಕ್ರಿಕೆಟ್‌ನಿಂದ ಹೊರ ಬಂದು ಕೊಂಚ ನೆಮ್ಮದಿ ಪಡೆಯೋಣ ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದರೆ, ಐಪಿಎಲ್ ಕ್ರಿಕೆಟ್‌ನ ಕ್ರೇಜು ಮತ್ತೆ ಆವರಿಸಿಕೊಳ್ಳುತ್ತಿದೆ. ಒಟ್ಟಿನಲ್ಲಿ ಬೇಸಿಗೆಯ ಬಿರು ಬಿಸಿಲಿನ ಮಧ್ಯೆ ಆಟದ ಸವಿ ಸವೆದು ಮನ ತಂಪು ಮಾಡಿಕೊಳ್ಳಲು ಐಪಿಎಲ್ ವೇದಿಕೆಯಾಗುವುದಂತೂ ಖಂಡಿತ.!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT