ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಜಾತ್ರೆಯಲ್ಲಿ ಅಜ್ಜಿ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗುರುವಾರ (ಏ. 4) ಸಂಜೆ. ಐಪಿಎಲ್ ಕ್ರಿಕೆಟ್ ಜಾತ್ರೆಯ ಸಂಭ್ರಮ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಜನಜಂಗುಳಿ. ಟಿಕೆಟ್ ಪಡೆದ ಖುಷಿಯಲ್ಲಿ ಕೆಲವರಿದ್ದರೆ, ಇನ್ನು ಕೆಲವರು ಸ್ನೇಹಿತರಿಗೆ ಹೇಗೆ ಬರಬೇಕೆಂಬ ಮಾರ್ಗದರ್ಶನ ನೀಡುತ್ತಿದ್ದರು. ಮತ್ತೆ ಕೆಲವರ ಕಣ್ಣುಗಳಲ್ಲಿ ಕ್ರಿಕೆಟ್ ತಾರೆಯರನ್ನು ನೋಡುವ ತವಕ.

ವಿಧವಿಧ ರಂಗು ಮೆತ್ತಿಕೊಂಡಿದ್ದ ಕೈಗಳು ಯಾರ ಕೆನ್ನೆಗೆ ಬಣ್ಣ ತುಂಬಬೇಕು ಎಂದು ಕಾಯುತ್ತಿದ್ದವು. `ಟೋಪಿ ಕೊಳ್ಳಿ' ಎನ್ನುವವರು ಒಂದು ಕಡೆಯಾದರೆ, `ಟಿ-ಶರ್ಟ್ ಬೇಕಾ...?' ಎನ್ನುವವರು ಮತ್ತೊಂದೆಡೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಐಪಿಎಲ್ ಗುಂಗು ಅಲ್ಲಿ ಆವರಿಸಿತ್ತು. ಇದೆಲ್ಲಾ ಪ್ರತಿ ಪಂದ್ಯದಲ್ಲೂ ಕಾಣಸಿಗುವ ದೃಶ್ಯ. ಆದರೆ ಅಲ್ಲಿದ್ದ ಪೀಪಿ ಮಾರುವ ಅಜ್ಜಿ ಮಾತ್ರ ಅದೇಕೋ ಈ ಬಾರಿ ವಿಶೇಷವಾಗಿ ಕಂಡಿದ್ದರು.

ಸೀದಾ ಸಾದಾ ಹತ್ತಿ ಸೀರೆ ಉಟ್ಟುಕೊಂಡು, ಕೈಯಲ್ಲಿ ಎರಡು ಚೀಲ ಹಿಡಿದು, ಬಾಯಲ್ಲಿ ಪೀಪಿ ಊದುತ್ತಾ ಬಂದವರನ್ನು ತನ್ನ ಪೀಪಿಯಿಂದ ಸ್ವಾಗತಿಸುತ್ತಿದ್ದರು. ಅವರ ಹೆಸರು ಕಮಲ. ವಯಸ್ಸು 74. ಮದ್ರಾಸ್‌ನಿಂದ ಬೆಂಗಳೂರಿಗೆ ಬಂದಿದ್ದಾರೆ; ಪೀಪಿ ವ್ಯಾಪಾರದ ಸಲುವಾಗಿ. ಇದರಲ್ಲಿ ಸಿಗುವ ನಾಲ್ಕು ಪುಡಿಗಾಸು ತಮ್ಮ ಇಳಿ ವಯಸ್ಸಿನ ಜೀವನೋಪಾಯಕ್ಕೆ ಆಗುತ್ತದೆ ಎಂಬ ಆಸೆ ಅಜ್ಜಿಯದ್ದು.

`ಹತ್ತು ಹಾಗೂ ಇಪ್ಪತ್ತು ರೂಪಾಯಿಯ ಪೀಪಿ ನನ್ನ ಬಳಿ ಇದೆ. ಮದ್ರಾಸ್‌ನಿಂದ ಗುರುವಾರ (ಏ 4) ಬೆಳಿಗ್ಗೆ 10ಕ್ಕೆ ರೈಲು ಹತ್ತಿ ಬಂದಿದ್ದೇನೆ. ಇಲ್ಲಿ ಪಂದ್ಯ ಮುಗಿದ ಮೇಲೆ ರಾತ್ರಿ ವಾಪಸಾಗುತ್ತೇನೆ. ಊರಲ್ಲಿ ಗಂಡ ಮಕ್ಕಳು ಇದ್ದಾರೆ. ನನಗೆ ಇಲ್ಲಿ ಯಾರು ಆಡುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಿಲ್ಲ.  ನಾಲ್ಕು ಕಾಸು ಸಿಕ್ಕಿದರೆ ಅದೇ ನನಗೆ ಹಬ್ಬ. ಟೀವಿಯಿಂದ ನನಗೆ ಬೆಂಗಳೂರಿನಲ್ಲಿ  ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ ಎಂಬ ವಿಷಯ ಗೊತ್ತಾಯಿತು. ರೂ 95 ರೈಲು ಟಿಕೆಟ್‌ಗೆ ಖರ್ಚು ಮಾಡಿ ಇಲ್ಲಿಗೆ ಬಂದಿದ್ದೇನೆ. ಪ್ರತಿವರ್ಷವೂ ಇಲ್ಲಿಗೆ ಬರುತ್ತೇನೆ. ಈ ವಯಸ್ಸಿನಲ್ಲಿ ನಾನು ಇದನ್ನು ಬಿಟ್ಟು ಬೇರೆ ಏನು ತಾನೆ ಮಾಡಲು ಸಾಧ್ಯ? ಇರುವಷ್ಟು ದಿನ ದುಡಿದು ತಿನ್ನಬೇಕು' ಎನ್ನುತ್ತಾ ಮಾತಿಗೆ ಶುರುವಿಟ್ಟುಕೊಂಡರು ಅಜ್ಜಿ.

ಪೀಪಿ ಉದ್ಯೋಗಕ್ಕೂ ಅಜ್ಜಿಗೂ ಇರುವ ನಂಟು ಬರೋಬ್ಬರಿ 40 ವರ್ಷದ್ದು. ಕ್ರಿಕೆಟ್ ಮ್ಯಾಚ್‌ಗಳ ಸಂದರ್ಭದಲ್ಲಿ, ಹಬ್ಬ ಹರಿದಿನಗಳಲ್ಲಿ ಸ್ವಲ್ಪ ವ್ಯಾಪಾರ ಕುದುರುತ್ತದಂತೆ. ಉಳಿದ ದಿನ ಊರಲ್ಲಿಯೇ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಮದ್ರಾಸ್‌ನಲ್ಲಿ ಒಂದು ಕಿಲೋಗೆ ರೂ 20 ಕೊಟ್ಟು ಪೇಪರ್ ಕೊಂಡುಕೊಂಡು ಮನೆಯಲ್ಲೇ ಪೇಪರ್‌ಗೆ ಬಣ್ಣ ಹಚ್ಚಿ, ಮಡಚಿ, ಅದರ ತುದಿಗೆ ಚಿಕ್ಕದೊಂದು ಪೀಪಿ ಸಿಕ್ಕಿಸಿ, ಮಾರುತ್ತಾರೆ.

`ಗಂಡ ಕೂಡ ನನ್ನ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಊರಿನಿಂದ ಬರುವಾಗ ಊಟ ಕಟ್ಟಿಕೊಂಡು ಬರುತ್ತೇನೆ. ಇಲ್ಲಿ ದುಡ್ಡುಕೊಟ್ಟು ಊಟ ಮಾಡುವುದಕ್ಕೆ ಆಗಲ್ಲ. ಬೆಳಿಗ್ಗೆ 9ಕ್ಕೆ ಇಲ್ಲಿಗೆ ಬಂದೆ. ರೂ 500 ವ್ಯಾಪಾರವಾಗಿದೆ. ಈಗ ನೀವು ಸ್ವಲ್ಪ ನನಗೆ ವ್ಯಾಪಾರ ಮಾಡುವುದಕ್ಕೆ ಬಿಡಿ' ಎಂದು ಹೇಳುತ್ತಾ, ಮಾತು ತಮಗೆ ಮುಖ್ಯವಲ್ಲ ಎನ್ನುವಂತೆ, ಪೀಪಿ ಊದುತ್ತಾ ಸಾಗಿದರು ಅಜ್ಜಿ. ವ್ಯಾಪಾರದಲ್ಲಿ ಅವರಿಗಿದ್ದ ಉತ್ಸಾಹ ಬೆರಗಾಗಿಸುವಂತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT