ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ವ್ಯಾಮೋಹ;ವಿದೇಶದಲ್ಲಿ ಬೆತ್ತಲು

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

`ಗಲ್ಲಿಯಲ್ಲಿ ಆಡುವ ಕ್ರಿಕೆಟಿಗ ಐಪಿಎಲ್‌ನಲ್ಲಿ ಆಡುವ ಮೂಲಕ ಒಮ್ಮೆಲೇ ಇಲ್ಲಿ ಹೀರೊ ಆಗಿಬಿಡುತ್ತಾನೆ. ಕೆಲವೇ ದಿನಗಳಲ್ಲಿ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಸಿಕ್ಕಿಬಿಡುತ್ತದೆ. ಹೆಚ್ಚು ಶ್ರಮವೇ ಬೇಡ. ನಾವೆಲ್ಲಾ 50-60 ರಣಜಿ ಪಂದ್ಯ ಆಡಿದರೂ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಸಿಕ್ಕಿದರೆ ಅದೇ ದೊಡ್ಡ ವಿಷಯ. ಆದರೆ ಕ್ರಿಕೆಟ್ ಆಡುವ ರೀತಿಯನ್ನು ಐಪಿಎಲ್ ಬದಲಾಯಿಸಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಲು ಐಪಿಎಲ್ ಮಾನದಂಡವಾಗಿದೆ. ಇನ್ನೆಲ್ಲಿ ಕ್ರಿಕೆಟ್ ಬೆಳವಣಿಗೆ ಸಾಧ್ಯ?~

-ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುಧಾಕರ್ ರಾವ್ ಅವರ ಈ ನುಡಿಗಳು ಭಾರತ ಕ್ರಿಕೆಟ್‌ನ ಸದ್ಯದ ವ್ಯವಸ್ಥೆಯನ್ನು ನಗ್ನ ಮಾಡುತ್ತವೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ದೋನಿ ಬಳಗ ಎದುರಿಸಿದ ದುರಂತಕ್ಕೆ ಮೂಕಸಾಕ್ಷಿಯಾಗಿ ನಿಲ್ಲುತ್ತವೆ.

ವಿದೇಶಿ ನೆಲದಲ್ಲಿ ಸತತ ಸೋಲು. ಪರ್ತ್‌ನಲ್ಲಿ ಎರಡೂವರೆ ದಿನದಲ್ಲಿ ಶರಣಾದ ರೀತಿಯ ಸುದ್ದಿಗಳು ಮುಂದುವರಿಯುತ್ತಲೇ ಇರುತ್ತವೆ! ಭಾರತದ ಕ್ರಿಕೆಟ್ ದುರಂತದ ಹಾದಿ ಹಿಡಿದಿರುವುದಕ್ಕೆ ಬೇರೆ ಉದಾಹರಣೆಯೇ ಬೇಡ.

ದೇಶಿ ಕ್ರಿಕೆಟಿಗಿಂತ ಐಪಿಎಲ್, ಚಾಂಪಿ ಯನ್ಸ್ ಲೀಗ್ ಟೂರ್ನಿಗಳೇ ಬಿಸಿಸಿಐಗೆ ಈಗ ತುಂಬಾ ಮುಖ್ಯವಾಗಿಬಿಟ್ಟಿವೆ. ಬಿಸಿಸಿಐ ಪದಾಧಿಕಾರಿಗಳ ಶಕ್ತಿ, ಯೋಜನೆ, ಯೋಚನೆ ಎಲ್ಲವೂ ಐಪಿಎಲ್‌ನಲ್ಲೇ ಮುಗಿದು ಹೋಗುತ್ತಿದೆ. ಕಾರಣ ಐಪಿಎಲ್‌ನಲ್ಲಿ ಹರಿಯುತ್ತಿರುವ ಹಣದ ಹೊಳೆ. ಬಾಲಿವುಡ್ ನಿರ್ಮಾಪಕರಿಗೂ ಬಿಸಿಸಿಐ ಪದಾಧಿಕಾರಿಗಳಿಗೂ ವ್ಯತ್ಯಾಸವಿಲ್ಲದಂತಾಗಿದೆ. ಮನರಂಜನೆ ನೀಡುವುದಷ್ಟೇ ಉದ್ದೇಶ. ಗುಣಮಟ್ಟದ ಮನೆ ಹಾಳಾಗಲಿ!
 

ಜನರಿಗೆ ಮನರಂಜನೆ ನೀಡಲು ರನ್ ಹೊಳೆ ಹರಿಸುವ ಪಿಚ್‌ಗಳನ್ನು ಬಿಸಿಸಿಐ ದೇಶದಾದ್ಯಂತ ನಿರ್ಮಿಸಿದಂತಿದೆ. ಇದೇ ಪಿಚ್‌ಗಳ ಮೇಲೆ ದೇಶಿ ಕ್ರಿಕೆಟ್ ಆಡಿಸಲಾಗುತ್ತದೆ.

ಇಂತಹ ಪಿಚ್‌ಗಳ ಮೇಲೆ ರಾಶಿ ರಾಶಿ ರನ್ ಗಳಿಸುವ ಆಟಗಾರರು `ವೇಗಿಗಳ ಸ್ವರ್ಗ~ ಎನಿಸಿರುವ ಆಸ್ಟ್ರೇಲಿಯಾದ ಪರ್ತ್ ಪಿಚ್‌ನಲ್ಲಿ ಮುಗ್ಗರಿಸಿ ಬೀಳದೇ ಇರುತ್ತಾರೆಯೇ?

ಮುರಳಿ ವಿಜಯ್, ಎಸ್.ಬದರೀನಾಥ್, ವಾಸೀಮ್ ಜಾಫರ್ ರಣಜಿಯಲ್ಲಿ ಪ್ರತಿ ಪಂದ್ಯದಲ್ಲೂ ಶತಕ ಬಾರಿಸುವರಂತೆ ಆಡುತ್ತಾರೆ. ಆದರೆ ವಿದೇಶಿ ಪಿಚ್‌ಗಳಲ್ಲಿ ಶೂನ್ಯ ಸಾಧನೆ. ವಿದೇಶದಲ್ಲಿ ನಡೆಯುವ ಟೆಸ್ಟ್ ಸರಣಿಗೆ ಸಿದ್ಧರಾಗುವುದಕ್ಕಿಂತ ಐಪಿಎಲ್ ಟೂರ್ನಿಗೆ ಹೆಚ್ಚು ಸಿದ್ಧತೆ ನಡೆಸುತ್ತಾರೆ.

ಬುಡವೇ ಜೊಳ್ಳು
ಒಂದೂವರೆ ತಿಂಗಳು ನಡೆಯುವ 70-75 ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಪ್ರೇಕ್ಷಕ ಸುಸ್ತಾಗಿಬಿಡುತ್ತಾನೆ. ಇನ್ನು ರಣಜಿ ಕ್ರಿಕೆಟ್‌ನತ್ತ ಯಾರು ಆಸಕ್ತಿ ವಹಿಸುತ್ತಾರೆ? ಹಾಗಾಗಿ ದೇಶಿ ಕ್ರಿಕೆಟ್ ಟೂರ್ನಿಗಳು ಶಾಲಾ, ಕಾಲೇಜ್ ಟೂರ್ನಿಯಂತಾಗಿವೆ!

ಒಂದು ಉದಾಹರಣೆ; 2011ರ ಅಕ್ಟೋಬರ್ 1-5ರವರೆಗೆ ಜೈಪುರದಲ್ಲಿ ಇರಾನಿ ಟ್ರೋಫಿ  ಪಂದ್ಯವಿತ್ತು. ಅದೇ ಸಮಯದಲ್ಲಿ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್. ಬಿಸಿಸಿಐ ಪೂರ್ಣ ಗಮನವಿದ್ದದ್ದು ಚಾಂಪಿಯನ್ಸ್ ಲೀಗ್‌ನತ್ತ. ಈ ಟೂರ್ನಿಯಲ್ಲಿ ಆಡುವ ಉದ್ದೇಶದಿಂದ ಪ್ರಮುಖ ಆಟಗಾರರು ಅತ್ತ ತಲೆ ಹಾಕಲಿಲ್ಲ.

ಇನ್ನು ಇರಾನಿ ಟ್ರೋಫಿ ಗತಿ ಏನಾಗಬಾರದು? ಹಾಗೇ, ಐಪಿಎಲ್ ಟಿವಿ ಹಕ್ಕುಗಳಿಂದ ಕೋಟಿ ಕೋಟಿ ಹಣ ದುಡಿಯುತ್ತಿದೆ. ಆದರೆ ರಣಜಿ ಪಂದ್ಯಗಳನ್ನು ಪ್ರಸಾರ ಮಾಡುವುದಿಲ್ಲ. ಆಕಸ್ಮಾತ್ ಪ್ರಸಾರ ಮಾಡಿದ್ದರೆ ಆಟಗಾರರಿಗೆ ಮತ್ತಷ್ಟು ಸ್ಫೂರ್ತಿ ಸಿಗುತಿತ್ತು.

ಕೆಲ ಆಟಗಾರರು ಐಪಿಎಲ್‌ನಲ್ಲಿ ಮಿಂಚಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಉದಾಹರಣೆ ರಾಹುಲ್ ಶರ್ಮ, ವರುಣ್ ಆ್ಯರನ್, ಸೌರಭ್ ತಿವಾರಿ. 20 ಎಸೆತಗಳಲ್ಲಿ 50 ರನ್ ಗಳಿಸಿದವನು ಹೀರೊ. 200-250 ಎಸೆತಗಳನ್ನು ಎದುರಿಸಿ ರಣಜಿಯಲ್ಲಿ ಶತಕ ಗಳಿಸುವವರನ್ನು ಕೇಳುವವರೇ ಇಲ್ಲ! ಐಪಿಎಲ್‌ನಲ್ಲಿ ಶತಕ ಗಳಿಸಿದ್ದ ಪಾಲ್ ವಲ್ತಾಟಿ ಅವರದ್ದು ರಣಜಿಯಲ್ಲಿ ಶೂನ್ಯ ಸಾಧನೆ.

ಹಣದ ಹಿಂದೆ ಬಿಸಿಸಿಐ
ಬಿಸಿಸಿಐ ಕ್ರಿಕೆಟಿಗರ ಮೇಲೆ ಕೋಟ್ಯಂತರ ರೂಪಾಯಿ ಸುರಿಯುತ್ತಿದೆ. ಅದರ ಎರಡರಷ್ಟು ಮೊತ್ತವನ್ನು ಬಾಚಿಕೊಳ್ಳುತ್ತಿದೆ. ಇಂದು ಒಬ್ಬ ಆಟಗಾರ ಟೆಸ್ಟ್ ಆಡಿದರೆ ಏಳು ಲಕ್ಷ ಸಂಭಾವನೆ ಪಡೆಯುತ್ತಾನೆ. ಒಂದು ಏಕದಿನ ಪಂದ್ಯಕ್ಕೆ ನಾಲ್ಕು ಲಕ್ಷ, ಒಂದು ಟ್ವೆಂಟಿ-20ಗೆ ಎರಡು ಲಕ್ಷ ಸಂಭಾವನೆ!

ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಫಿಜಿಯೊ, ಮಸಾಜರ್, ವಿಡಿಯೋ ವಿಶ್ಲೇಷಕ, ಮ್ಯಾನೇಜರ್ ಸೇರಿದಂತೆ ಆಟಗಾರರ ಹಿಂದೆ ಸಹಾಯಕ ಸಿಬ್ಬಂದಿಯ ದಂಡು ಇರುತ್ತದೆ. ಅವರಿಗೂ ಲಕ್ಷ ಲಕ್ಷ ಸಂಭಾವನೆ. 

ಆದರೆ ಹಣದಿಂದ ಗೆಲುವು ಅಥವಾ ಯಶಸ್ಸು ಗಳಿಸಲು ಅಸಾಧ್ಯ ಎಂಬುದನ್ನು ಬಿಸಿಸಿಐ ಅರ್ಥ ಮಾಡಿಕೊಳ್ಳುತ್ತಿಲ್ಲ. ಇನ್ನು ಆಟಗಾರರು ಹಣದ ಹಿಂದೆ ಬೀಳದೆ ಇರುತ್ತಾರೆಯೇ?

ಹಣದ ಮೋಹದಲ್ಲಿ ವ್ಯವಸ್ಥೆಗೆ ತೂತು ಬೀಳು ತ್ತಿರುವುದು ಬಿಸಿಸಿಐಗೆ ಗೊತ್ತೇ ಆಗುತ್ತಿಲ್ಲ. ಸತತ 7 ಟೆಸ್ಟ್‌ನಲ್ಲಿ ಸೋತ ಮೇಲೂ...!

`ಹಣದ ಬಲದಿಂದ ಇಡೀ ವಿಶ್ವಕ್ರಿಕೆಟ್ ಅನ್ನು ಬಿಸಿಸಿಐ ನಿಯಂತ್ರಿಸುತ್ತಿದೆ. ಆದರೆ ಇಡೀ ವಿಶ್ವ ಕ್ರಿಕೆಟ್ ಈಗ ಭಾರತ ತಂಡವನ್ನು ನಿಯಂತ್ರಿಸುತ್ತಿದೆ~ ಎಂದು ಈಗ ಟೀಕೆಗಳು ಎದ್ದಿವೆ.
ನಿಜ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಒಂದೂ ಸರಣಿ ಗೆಲ್ಲದೇ ಭಾರತ ಟೆಸ್ಟ್‌ನಲ್ಲಿ ಅಗ್ರಪಟ್ಟ ಪಡೆದಿತ್ತು. ಆಗ ಈ ವಿಷಯದ ಬಗ್ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಏಕೆಂದರೆ ಉಪಖಂಡದಲ್ಲಿ ಆಡಿ ಭಾರತ ಆ ಸಾಧನೆ ಮಾಡಿತ್ತು.

ದೋನಿ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಆದರೆ ಟೆಸ್ಟ್‌ನಲ್ಲಿ ತಂಡ ಮುನ್ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಸ್ವತಃ ದೋನಿ ಬ್ಯಾಟಿಂಗ್‌ನಲ್ಲಿ ಪರದಾಡುತ್ತಿದ್ದಾರೆ. ಟೆಸ್ಟ್ ತಂಡದಿಂದ ಅವರನ್ನೇ ಕೈಬಿಡಬೇಕಾದ ಪರಿಸ್ಥಿತಿ ಇದೆ. ಹಿರಿಯ ಆಟಗಾರರು ತಂಡಕ್ಕೆ ಭಾರವಾಗಿದ್ದಾರೆ.

ಬದಲಾದ ಕ್ರಿಕೆಟ್
`ನಮ್ಮ ಕಾಲಕ್ಕೂ ಈಗಿನ ಕ್ರಿಕೆಟಿಗೂ ಆಕಾಶ-ಭೂಮಿಯಷ್ಟೆ ವ್ಯತ್ಯಾಸ. ಆಗ ನಮಗೆ ಒಬ್ಬರೇ ಒಬ್ಬ ಸಹಾಯಕ ಸಿಬ್ಬಂದಿ ಇರಲಿಲ್ಲ. ಈಗ ಭಾರತ ತಂಡಕ್ಕೆ ಒಂದು ಡಜನ್ ಸಹಾಯಕ ಸಿಬ್ಬಂದಿ ಇದ್ದಾರೆ.

ಪ್ರತಿ ಆಟಗಾರರಿಗೆ ಒಬ್ಬೊಬ್ಬ ಸಹಾಯಕ ಸಿಬ್ಬಂದಿ. ಕ್ರಿಕೆಟ್ ಪ್ರವಾಸದ ವೇಳೆ ನಾವು ಹೋಟೆಲ್‌ನ ಒಂದೇ ಕೋಣೆಯಲ್ಲಿ 3-4 ಮಂದಿ ಉಳಿದುಕೊಳ್ಳುತ್ತಿದ್ದೆವು. ಈಗ ಒಬ್ಬರಿಗೊಂದು ಕೊಠಡಿ. ಆದರೆ ಪ್ರದರ್ಶನದಲ್ಲಿ ಮಾತ್ರ ಕುಸಿತ~ ಎನ್ನುತ್ತಾರೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ.

ಅದಕ್ಕೆ ಸುಧಾಕರ್ ರಾವ್ ಕೂಡ ಧ್ವನಿಗೂಡಿಸುತ್ತಾರೆ. `ನಾವು 1976ರಲ್ಲಿ ನ್ಯೂಜಿಲೆಂಡ್-ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿದ್ದೆವು. ಅದು ಮೂರು ತಿಂಗಳ ಪ್ರವಾಸವಾಗಿತ್ತು. ಆ ಪ್ರವಾಸಕ್ಕೆ ಮೊದಲು ನಮಗೆ ಐದು ಸಾವಿರ ನೀಡಿದ್ದರು. ಅಲ್ಲಿಂದ ಬಂದು ಏಳೆಂಟು ತಿಂಗಳು ಕಳೆದ ಮೇಲೆ ಮತ್ತೆ ಐದು ಸಾವಿರ ಕೊಟ್ಟಿದ್ದರು.

ಆದರೆ ಈಗ ನೋಡಿ, 19 ವರ್ಷದೊಳಗಿನ ಆಟಗಾರರು ಲಕ್ಷ ಲಕ್ಷ ಜೇಬಿಗಿಳಿಸುತ್ತಿದ್ದಾರೆ. ಐಪಿಎಲ್‌ಲ್ಲಿ ಆಡಿದರೆ ಸಾಕು ಎಂಬ ಮನೋಭಾವ ಅವರದ್ದು. ಭವಿಷ್ಯದ ಬಗ್ಗೆ ಅವರಿಗೆ ಚಿಂತೆ ಇಲ್ಲ. ರಣಜಿ ಕ್ರಿಕೆಟ್‌ನಲ್ಲಿ ತವರಿನ ತಂಡದವರು ತಮಗೆ ಬೇಕಾದಂತೆ ಪಿಚ್ ತಯಾರಿಸಿಕೊಳ್ಳುತ್ತಾರೆ. ಇದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು~ ಎನ್ನುತ್ತಾರೆ.

ಬಿಡುವಿಲ್ಲದ ಕ್ರಿಕೆಟ್ ಆಟಗಾರರನ್ನು ಹೈರಾಣಾಗಿಸಿದೆ. ಪ್ರೇಕ್ಷಕರ ನಿರಾಸಕ್ತಿಗೂ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧ ಕೋಲ್ಕತ್ತದಲ್ಲಿ ನಡೆದ ಟೆಸ್ಟ್ ಪಂದ್ಯವೊಂದಕ್ಕೆ ಜನರೇ ಇರಲಿಲ್ಲ. ಅದೂ ಈಡನ್   ಗಾರ್ಡನ್ಸ್‌ನಲ್ಲಿ ಹೀಗಾಗಿದ್ದು ವಿಪರ್ಯಾಸ. 

`ನಮ್ಮ ಕಾಲದ ಕ್ರಿಕೆಟ್‌ಗೂ ಈಗಿನ ಕಾಲದ ಕ್ರಿಕೆಟ್‌ಗೂ ಹೋಲಿಸಲು ಸಾಧ್ಯವೇ ಇಲ್ಲ. ಐಪಿಎಲ್ ಗ್ಲಾಮರ್ ಪ್ರೇಕ್ಷಕರನ್ನು ಸೆರೆ ಹಿಡಿದಿದೆ. ಅದರಿಂದಾಗಿ ಟೆಸ್ಟ್ ಪಂದ್ಯ ವೀಕ್ಷಿಸಲೂ ಜನರು ಬರುತ್ತಿಲ್ಲ.

1982ರಲ್ಲಿ ಕರ್ನಾಟಕ ಹಾಗೂ ಮುಂಬೈ ನಡುವೆ ರಣಜಿ ಸೆಮಿಫೈನಲ್ ಪಂದ್ಯ ನಡೆದಿತ್ತು. ಆ ವೇಳೆ ಇಡೀ ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಿತ್ತು. ಈಗಿನ ರಣಜಿ ಪಂದ್ಯ ನೋಡಿ. ಆಟಗಾರರು, ಕೆಲ ಅಧಿಕಾರಿಗಳು, ಒಂದಿಷ್ಟು ಪತ್ರಕರ್ತರು ಮಾತ್ರ ಇರುತ್ತಾರೆ. ಆಗ ಒಂದು ರಣಜಿ ಪಂದ್ಯ ಆಡಿದರೆ ಸಾವಿರ ರೂಪಾಯಿ ಸಿಗುತಿತ್ತು. ಈಗ ಅದು ಲಕ್ಷ ರೂಪಾಯಿ ದಾಟಿದೆ~ ಎಂದು ವಿವರಿಸುತ್ತಾರೆ ರಘುರಾಮ್ ಭಟ್.                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT