ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಆಡಲು ಒಪ್ಪಿಗೆ, ಭಾರತ ತಂಡದ ಪ್ರಾಯೋಜಕತ್ವ ಮುಂದುವರಿಸಲು ಹಸಿರು ನಿಶಾನೆ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್ ಖಾನ್ ಅವರ ಮಧ್ಯ ಪ್ರವೇಶ ಯಶಸ್ವಿಯಾಗಿದೆ. ಈ ಕಾರಣ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಹಾಗೂ ಐಪಿಎಲ್ ಸಂಬಂಧ ಬಿಸಿಸಿಐ ಮತ್ತು ಸಹಾರಾ ಸಮೂಹ ನಡುವೆ ಕೆಲ ದಿನಗಳಿಂದ ಕಗ್ಗಂಟಾಗಿ ಪರಿಣಮಿಸಿದ್ದ ಬಿಕ್ಕಟ್ಟು ಬಗೆ ಹರಿದಿದೆ.

ಈ ಪರಿಣಾಮ ಐಪಿಎಲ್‌ನಲ್ಲಿ ಆಡಲು ಹಸಿರು ನಿಶಾನೆ ತೋರಿಸಿರುವ ಸಹಾರಾ ಸಮೂಹ ಭಾರತ ತಂಡದ ಪ್ರಾಯೋಜಕತ್ವವನ್ನು ಮುಂದುವರಿಸಲು ಒಪ್ಪಿಗೆ ನೀಡಿದೆ. ಜಂಟಿ ಪತ್ರಿಕಾ ಹೇಳಿಯಲ್ಲಿ ಸಹಾರಾ ಇಂಡಿಯಾ ಪರಿವಾರ ಮುಖ್ಯಸ್ಥ ಸುಬ್ರತಾ ರಾಯ್ ಹಾಗೂ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಗುರುವಾರ ಈ ವಿಷಯ ತಿಳಿಸಿದ್ದಾರೆ.

ಬಿಕ್ಕಟ್ಟು ಉಲ್ಬಣವಾದ ಕಾರಣ ಶಶಾಂಕ್ ಅವರು ಸಮಾಲೋಚನೆಗೆ ಮುಂದಾಗಿದ್ದರು. ಪುಣೆ ವಾರಿಯರ್ಸ್ ತಂಡವನ್ನು ಸಹಾರಾ 1702 ಕೋಟಿ ರೂ. ನೀಡಿ ಖರೀದಿಸಿದಾಗ ಮಂಡಳಿ ಅಧ್ಯಕ್ಷರಾಗಿದ್ದವರು ಶಶಾಂಕ್. ಐಪಿಎಲ್ ಹಿತಾಸಕ್ತಿ ಕಾಪಾಡಲು ಬಾಲಿವುಡ್ ನಟ ಶಾರೂಖ್ ಕೂಡ ಮಾತುಕತೆಯಲ್ಲಿ ಭಾಗಿಯಾಗಿದ್ದರು.

ಎಲ್ಲಾ ಫ್ರಾಂಚೈಸಿಗಳು ಒಪ್ಪಿಗೆ ನೀಡಿದರೆ ಸಹಾರಾ ಪುಣೆ ವಾರಿಯರ್ಸ್ ತಂಡದವರು ಐಪಿಎಲ್ ಐದನೇ ಅವತರಣಿಕೆಯಲ್ಲಿ ಕಣಕ್ಕಿಳಿಯುವ 11 ಆಟಗಾರರಲ್ಲಿ ವಿದೇಶದ ಐದು ಮಂದಿಗೆ ಅವಕಾಶ ನೀಡಬಹುದು  ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅನಾರೋಗ್ಯಕ್ಕೆ ಒಳಗಾಗಿರುವ ಯುವರಾಜ್ ಸಿಂಗ್ ಏಪ್ರಿಲ್ ನಾಲ್ಕರಂದು ಆರಂಭವಾಗಲಿರುವ ಈ ಬಾರಿಯ ಐಪಿಎಲ್‌ಗೆ ಅಲಭ್ಯರಾಗಿರುವ ಕಾರಣ ಪುಣೆ ವಾರಿಯರ್ಸ್ ತಂಡ ಈ ಮನವಿ ಮಾಡಿತ್ತು.

`ಐಪಿಎಲ್ ಆಟಗಾರರ ಹಸ್ತಾಂತರ ಹಾಗೂ ಬದಲಾವಣೆ ಪ್ರಕ್ರಿಯೆ ಫೆಬ್ರುವರಿ 17ಕ್ಕೆ ಮುಗಿಯಬೇಕಿತ್ತು. ಆದರೆ ಅದನ್ನು ಫೆ.29ರವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ಪುಣೆ ವಾರಿಯರ್ಸ್ ತಂಡದವರು ಉಳಿದ ಫ್ರಾಂಚೈಸಿಗಳೊಂದಿಗೆ ಸಮಾಲೋಚನೆ ನಡೆಸಿ ಆಟಗಾರರನ್ನು ಖರೀದಿಸಬಹುದು. ಈ ಮೂಲಕ ತಂಡ ಬಲಪಡಿಸಿಕೊಳ್ಳಬಹುದು~ ಎಂದು ಜಂಟಿ ಪ್ರಕಟಣೆಯಲ್ಲಿ ಬಿಸಿಸಿಐ ತಿಳಿಸಿದೆ.

ಕಳೆದ ಐಪಿಎಲ್‌ನಲ್ಲಿ ಪಂದ್ಯಗಳನ್ನು 94ರಿಂದ 74ಕ್ಕೆ ಇಳಿಸಿದ ಕಾರಣ ಬ್ಯಾಂಕ್ ಖಾತರಿ ಹಣದಲ್ಲಿ ಕಡಿತಗೊಳಿಸುವಂತೆ ಸಹಾರಾ ಕೋರಿತ್ತು. ಈ ಬಗ್ಗೆ ಕೂಡ ಬಿಸಿಸಿಐ ಸಕಾರಾತ್ಮಕ ಹೆಜ್ಜೆ ಇರಿಸಿದೆ. ಅಷ್ಟು ಮಾತ್ರವಲ್ಲದೇ, ಎರಡು ಕಂತುಗಳಲ್ಲಿ ಬ್ಯಾಂಕ್ ಖಾತರಿ ಹಣ ನೀಡಲು ಒಪ್ಪುವ ಸಾಧ್ಯತೆ ಇದೆ. 

`ಹರಾಜು ಪ್ರಕ್ರಿಯೆ ವೇಳೆ ಹೆಸರು ನೋಂದಾಣಿ ಆಗದ ವಿದೇಶಿ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಹಾರಾ ಬಯಸಿದೆ. ಈ ಬಗ್ಗೆ ಕೂಡ ಎಲ್ಲಾ ಫ್ರಾಂಚೈಸಿಗಳ ಒಪ್ಪಿಗೆ ಇದ್ದರೆ ಮುಂದಿನ ಹೆಜ್ಜೆ ಇಡಬಹುದು~ ಎಂದು ಅದು ಹೇಳಿದೆ.

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಪ್ಲೇಆಫ್‌ನ ಪಂದ್ಯವೊಂದನ್ನು ಪುಣೆಯ ನೂತನ ಕ್ರೀಡಾಂಗಣದಲ್ಲಿ ಆಯೋಜಿಸಲು ಸಹಾರಾ ಸಮೂಹ ಮನವಿ ಮಾಡಿತ್ತು. ಆದರೆ ಇದಕ್ಕೆ ರಾಯಲ್    ಚಾಲೆಂಜರ್ಸ್ ಬೆಂಗಳೂರು ತಂಡ ಒಪ್ಪಿಗೆ ನೀಡಿದರೆ ನಮ್ಮ ಅಡ್ಡಿ ಇಲ್ಲ ಎಂದು ಬಿಸಿಸಿಐ ಹೇಳಿದೆ. ಕಳೆದ ಬಾರಿ ಫೈನಲ್ ತಲುಪಿದ್ದ ಕಾರಣ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು ಆರ್‌ಸಿಬಿಗೆ ಅವಕಾಶ ನೀಡಲಾಗಿತ್ತು.

`ಬಿಕ್ಕಟ್ಟು ಶಮನಗೊಂಡಿದೆ. ಸಹಾರಾದ ಮನವಿಗೆ ಸ್ಪಂದಿಸಲಾಗಿದೆ. ನಿಯಮದಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಯಾವುದೇ ನಿಯಮ ಉಲ್ಲಂಘಿಸಿಲ್ಲ~ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಸಹಕರಿಸಿದ ಶಾರೂಖ್ ಖಾನ್ ಹಾಗೂ ಶಶಾಂಕ್ ಮನೋಹರ್ ಅವರಿಗೂ ಧನ್ಯವಾದ ಹೇಳಿದ್ದಾರೆ.

ಆದರೆ ಐಪಿಎಲ್ ಟೂರ್ನಿಯನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸಲು ಮುಕ್ತ ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರಬೇಕು ಎಂದು ಸುಬ್ರತಾ ರಾಯ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT