ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲೂ ಮೋಸದಾಟದ ವಾಸನೆ: ಐವರು ಅಮಾನತು

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣದ ಹೊಳೆ ಹರಿಸುತ್ತಿರುವ ಐಪಿಎಲ್‌ಗೂ ಸ್ಪಾಟ್ ಫಿಕ್ಸಿಂಗ್ ಕೊಳೆ ಅಂಟಿಕೊಂಡಿದೆ. ಖಾಸಗಿ ವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು  (ಬಿಸಿಸಿಐ) ಐವರು ಆಟಗಾರರನ್ನು ಅಮಾನತುಗೊಳಿಸಿದ್ದು, ಕ್ಷಿಪ್ರ ತನಿಖೆಗೆ ಆದೇಶಿಸಿದೆ.

ಡೆಕ್ಕನ್ ಚಾರ್ಜರ್ಸ್‌ನ ಟಿ.ಪಿ.ಸುಧೀಂದ್ರ, ಪುಣೆ ವಾರಿಯರ್ಸ್‌ನ ಮೋನಿಷ್ ಮಿಶ್ರಾ, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶಲಭ್ ಶ್ರೀವಾಸ್ತವ, ಅಮಿತ್ ಯಾದವ್ ಹಾಗೂ ಅಭಿನವ್ ಬಾಲಿ ಅವರು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ತಾತ್ಕಾಲಿಕ ಅಮಾನತಿಗೆ ಒಳಗಾಗಿರುವ ಆಟಗಾರರು.

`ಇಂಡಿಯಾ ಟಿ.ವಿ~ ನಡೆಸಿದ ಮಾರುವೇಷದ ಕಾರ್ಯಾಚರಣೆಯಿಂದ ಆಘಾತಕ್ಕೆ ಒಳಗಾಗಿರುವ ಬಿಸಿಸಿಐ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ತನಿಖೆ ನಡೆಸಲು ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ರವಿ ಸವಾನಿ ಅವರನ್ನು ನೇಮಿಸಿದೆ.

`ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಮೋಸದಾಟ ನಡೆಯುತ್ತಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕೆಲ ಆಟಗಾರರು, ಐಪಿಎಲ್ ತಂಡಗಳ ಕೆಲ ಮಾಲೀಕರು, ಒಬ್ಬ ನಾಯಕ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ~ ಎಂದು ಆ ಟಿ.ವಿ ಚಾನೆಲ್ ಹೇಳಿದೆ. ಐಪಿಎಲ್‌ನಲ್ಲಿ ಮಾಲೀಕರು ನಿಗದಿಗಿಂತ ಹೆಚ್ಚಿನ ಹಣ ನೀಡುತ್ತಿದ್ದಾರೆ ಎಂದು ಕೆಲ ಆಟಗಾರರೇ ಹೇಳಿದ್ದಾರೆ ಎಂಬುದಕ್ಕೆ ಅದು ಸಾಕ್ಷಿ ಹೊಂದಿದೆ. ಆಟಗಾರರ ಹೇಳಿಕೆಯನ್ನು ಗೋಪ್ಯವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ.

ಮಂಗಳವಾರ ಮಧ್ಯಾಹ್ನ ಟೆಲಿ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಬಿಸಿಸಿಐ ಹಾಗೂ ಐಪಿಎಲ್ ಅಧಿಕಾರಿಗಳು ಐವರು ಆಟಗಾರರನ್ನು ಅಮಾನತುಗೊಳಿಸಲು ನಿರ್ಧರಿಸಿದರು. `ಐಪಿಎಲ್ ಆಡಳಿತ ಮಂಡಳಿ ಈ ವಿಷಯದ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿತು.
 
ಮಾರುವೇಷದ ಕಾರ್ಯಾಚರಣೆಯ ಕೆಲ ವಿಡಿಯೊ ತುಣುಕುಗಳನ್ನೂ ವೀಕ್ಷಿಸಲಾಯಿತು. ಬಳಿಕ ಇದರಲ್ಲಿ ಕಾಣಿಸಿಕೊಂಡಿರುವ ಆಟಗಾರರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರಿಗೆ ಶಿಫಾರಸು ಮಾಡಲಾಯಿತು~ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳಿದ್ದಾರೆ.

`ಇದು ಹಿಂದಿನ ಐಪಿಎಲ್ ಹಾಗೂ ಇತರ ಪಂದ್ಯಗಳಲ್ಲಿ ನಡೆದಿರುವ ಕಾರಣ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಬಿಸಿಸಿಐ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಅವರು ಪ್ರಾಥಮಿಕ ತನಿಖೆ ನಡೆಸಲು ನಿರ್ಧರಿಸಿದ್ದು, ತನಿಖಾಧಿಕಾರಿಯನ್ನೂ ನೇಮಿಸಿದ್ದಾರೆ. ತನಿಖಾ ವರದಿಯನ್ನು ಅವರು ಶಿಸ್ತು ಸಮಿತಿಗೆ ನೀಡಲಿದ್ದಾರೆ. ಅಲ್ಲಿಯ ವರೆಗೆ ಈ ಐವರು ಆಟಗಾರರು ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ~ ಎಂದು ಶುಕ್ಲಾ ವಿವರಿಸಿದ್ದಾರೆ.

`ಪಂದ್ಯವೊಂದರಲ್ಲಿ ನೋಬಾಲ್ ಮಾಡಲು ಒಬ್ಬ ಆಟಗಾರ 10 ಲಕ್ಷ ಬೇಡಿಕೆ ಇಟ್ಟಿದ್ದ. ಐಪಿಎಲ್ ಆಡಳಿತ ಮಂಡಳಿ ನಿಗದಿ ಪಡಿಸಿದ 30 ಲಕ್ಷ ರೂಪಾಯಿ ಮೂಲ ಬೆಲೆಯ ಆಟಗಾರನೊಬ್ಬ ತನ್ನ ಮಾಲೀಕರಿಂದ 1.45 ಕೋಟಿ ರೂ. ಪಡೆಯುತ್ತಿದ್ದಾನೆ.

ವರದಿಗಾರರೊಬ್ಬರ ಒತ್ತಾಯದ ಮೇಲೆ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ನೋಬಾಲ್ ಹಾಕಿದ್ದೆ ಎಂದು ಮತ್ತೊಬ್ಬ ಬೌಲರ್ ಹೇಳಿದ್ದಾನೆ. 60 ಲಕ್ಷ ನೀಡಿದರೆ ಪಂದ್ಯದ ಫಲಿತಾಂಶ ಬದಲು ಮಾಡುತ್ತೇನೆ ಎಂದು ಆ ಆಟಗಾರ ಹೇಳಿದ್ದಾನೆ~ ಎಂದು ಆ ಚಾನೆಲ್ ತಿಳಿಸಿದೆ.

`ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ಗಾಗಿ ನೋಬಾಲ್ ಹಾಕಲು ಎಷ್ಟು ಹಣ ತೆಗೆದುಕೊಳ್ಳುತ್ತೇನೆ ಎಂದು ಸುಧೀಂದ್ರ ಚರ್ಚೆ ಮಾಡುವ ವಿಷಯದ ದಾಖಲೆ ನಮ್ಮಲ್ಲಿದೆ. ಹಾಗೇ, ಟೂರ್ನಿಯಲ್ಲಿ ಕಪ್ಪು ಹಣ ಹರಿದಾಡುತ್ತಿದೆ~ ಎಂದು ಆ ಚಾನೆಲ್ ಹೇಳಿಕೊಂಡಿದೆ.

ಅಷ್ಟು ಮಾತ್ರವಲ್ಲದೇ, ವಿವಿಧ ರೀತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಆ ಚಾನೆಲ್ ಹೇಳಿಕೊಂಡಿದೆ. `ಒಬ್ಬ ಬೌಲರ್ ಸುಲಭ ಎಸೆತ ಹಾಕುತ್ತಾನೆ. ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಇದು ನಡೆಯುತ್ತಿದೆ~ ಎಂದೂ ಅದು ಹೇಳಿದೆ. ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ಒಬ್ಬ ಬೌಲರ್ ಕಾಲನ್ನು ತುಂಬಾ ಮುಂದೆ ಇಟ್ಟು ನೋಬಾಲ್ ಮಾಡಿದ್ದನ್ನು ಟಿ.ವಿ ಚಾನೆಲ್ ತೋರಿಸಿದೆ. ಜೊತೆಗೆ ಆ ಬೌಲರ್ ಜೊತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವುದನ್ನು ದಾಖಲಿಸಿಕೊಂಡಿದೆ.

ಮಾರುವೇಷದ ಕಾರ್ಯಾಚರಣೆಯ ಪೂರ್ಣ ದಾಖಲೆಯನ್ನು ನೀಡುವಂತೆ ಐಪಿಎಲ್ ಖಾಸಗಿ ವಾಹಿನಿಗೆ ಮನವಿ ಮಾಡಿದೆ. `ಇಂತಹ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲಾರೆವು. ಆರೋಪ ಸಾಬೀತಾದರೆ ಆಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು~ ಎಂದು ಶ್ರೀನಿವಾಸನ್ ನುಡಿದಿದ್ದಾರೆ.

ಆರೋಪ ನಿರಾಕರಿಸಿದ ಆಟಗಾರ: `ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದರೆ ಈ ಬಗ್ಗೆ ನಾನು  ಹೆಚ್ಚು ಪ್ರತಿಕ್ರಿಯೆ ನೀಡಲಾರೆ. ತನಿಖಾ ಆಯೋಗದ ಮುಂದೆ ನಾನು ವಿವರಣೆ ನೀಡುತ್ತೇನೆ~ ಎಂದು      ಶ್ರೀವಾಸ್ತವ ತಿಳಿಸಿದ್ದಾರೆ.

ರಜತ್ ಸಮರ್ಥನೆ: ಇಂಡಿಯಾ ಟಿ.ವಿ. ಮುಖ್ಯ ಸಂಪಾದಕ ರಜತ್ ಭಾಟಿಯಾ ತಾವು ನಡೆಸಿದ ಮಾರುವೇಷದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. `ನಾವು ಆಟಗಾರರಿಗೆ ಹಣದ ಆಮಿಷ ನೀಡಿದ್ದೆವು. ಸ್ಪಾಟ್ ಫಿಕ್ಸಿಂಗ್ ನಡೆಸಿದರೆ ಹಣ ನೀಡಲಾಗುವುದು ಎಂದು ಹೇಳಲಾಗಿತ್ತು~ ಎಂದು ಅವರು ನುಡಿದಿದ್ದಾರೆ.

ಅಮಾನತುಗೊಂಡವರ ವಿವರ
ವಾರಿಯರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮೋನಿಷ್ ಮಿಶ್ರಾ ಮಧ್ಯಪ್ರದೇಶದ ಪರ 31 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. ಕಿಂಗ್ಸ್ ಇಲೆವೆನ್‌ನ ಶಲಭ್ ಶ್ರೀವಾಸ್ತವ  ಉತ್ತರ ಪ್ರದೇಶದ ಪರ 41 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. ಈ ಎಡಗೈ ವೇಗಿ 130 ವಿಕೆಟ್ ಪಡೆದಿದ್ದಾರೆ.  ಕಿಂಗ್ಸ್ ಇಲೆವೆನ್‌ನ ಅಮಿತ್ ಯಾದವ್‌ಗೆ ಇನ್ನೂ 22 ವರ್ಷ. ಗೋವಾ ರಣಜಿ ತಂಡದ ಈ ಆಲ್‌ರೌಂಡರ್ 14 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ.

ಆಂಧ್ರಪ್ರದೇಶದ ಟಿ.ಪಿ.ಸುಧೀಂದ್ರ 27 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ಮಧ್ಯಪ್ರದೇಶ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವೇಗಿ 108 ವಿಕೆಟ್ ಕಬಳಿಸಿದ್ದಾರೆ.

ಅಭಿನವ್ ಬಾಲಿ ಐಪಿಎಲ್ ಪಂದ್ಯ ಆಡಿಲ್ಲ. ದೆಹಲಿಯ ಈ ಆಟಗಾರ ಹಿಮಾಚಲ ಪ್ರದೇಶ ರಣಜಿ ತಂಡದಲ್ಲಿ ಆಡುತ್ತಾರೆ. ಇವರಲ್ಲಿ ನಾಲ್ಕು ಮಂದಿ ಪರ್ಯಾಯ ಲೀಗ್ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್)ನಲ್ಲಿ           ಆಡಿದ್ದವರು ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT