ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ಜಾಮೀನು ಮಂಜೂರು

Last Updated 17 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಗೋಧ್ರಾ ನಂತರದ ಗಲಭೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅಮಾನತಾಗಿ, ಬಂಧನಕ್ಕೆ ಒಳಗಾಗಿದ್ದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಸೋಮವಾರ ಸ್ಥಳೀಯ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
 
ಭಟ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷೆನ್ ನ್ಯಾಯಾಧೀಶ ವಿ.ಕೆ.ವ್ಯಾಸ್ ಅವರು ಪ್ರಕರಣದ ತನಿಖೆಗೆ ಸಹಕರಿಸಲು ಹಾಗೂ ಕರೆ ಕಳುಹಿಸಿದಾಗ ಹಾಜರಾಗುವಂತೆ ಷರತ್ತು ವಿಧಿಸಿ ಜಾಮೀನು ನೀಡಿದರು.

ಗೋಧ್ರಾ ರೈಲು ಹತ್ಯಾಕಾಂಡ ನಡೆದ (27.2.02) ಕೆಲವು ಗಂಟೆಗಳ ನಂತರ ಮುಖ್ಯಮಂತ್ರಿ ನರೇಂದ್ರ ಮೋದಿ ಸಭೆಯೊಂದನ್ನು ಕರೆದಿದ್ದರು ಎಂಬ ಅಂಶವಿದ್ದ ಸುಳ್ಳು ಪ್ರಮಾಣ ಪತ್ರಕ್ಕೆ ಸಹಿ ಮಾಡುವಂತೆ ಸೂಚಿಸಿದ್ದ ಸಂಜೀವ್ ಭಟ್ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಪೊಲೀಸ್ ಕಾನ್‌ಸ್ಟೆಬಲ್ ಕೆ.ಡಿ. ಪಂತ್ ದೂರು ನೀಡಿದ್ದರು. 
 
ದೂರಿನ ಹಿನ್ನೆಲೆಯಲ್ಲಿ ಭಟ್ ಅವರನ್ನು ಸೆಪ್ಟೆಂಬರ 30 ರಂದು ಬಂಧಿಸಿ, ಭಾರತೀಯ ದಂಡ ಸಂಹಿತೆ (ಐಪಿಸಿ) 341 (ಅಕ್ರಮ ತಡೆ), 342 (ಅಕ್ರಮ ಬಂಧನ), 195 (ಸುಳ್ಳು ಸಾಕ್ಷ್ಯ ) ಮತ್ತು 189 (ಸರ್ಕಾರಿ ನೌಕರಿನಿಗೆ ಹಲ್ಲೆ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಬಂಧನದ ನಂತರ ಭಟ್ ಅವರು ಅಕ್ಟೋಬರ್ 3 ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯ ಸರ್ಕಾರವು ಭಟ್‌ಗೆ ಜಾಮೀನು ನೀಡಬಾರದೆಂದು ವಿರೋಧಿಸಿತ್ತು. 

ವಾರಪೂರ್ತಿ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ ಭಟ್ ಪರ ವಕೀಲರಾದ ಐ.ಎಚ್.ಸೈಯದ್ ಅವರು ತಮ್ಮ ಕಕ್ಷಿದಾರರ ವಿರುದ್ದ  ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪ ದಾಖಲಿಸಿ, ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೇ 2002ರಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ನಾಶಮಾಡಲಾಗಿದೆ ಎಂದು ವಾದಿಸಿದರು.

ಕೆಲವು ರಾಜಕೀಯ ಕಾರ್ಯಕರ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಪಿತೂರಿಯಿಂದ ಭಟ್ ವಿರುದ್ದ ಸುಳ್ಳು ಆಪಾದನೆಗಳ ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಸೈಯದ್ ವಾದಿಸಿದರು.

ಗೋಧ್ರಾ ನಂತರ ನಡೆದ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಚೋದಿಸಿದ್ದರೆಂದು ಆರೋಪಿಸಿದ್ದ ಭಟ್, ಆ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು.

ಐಪಿಎಸ್ ಅಧಿಕಾರಿಯಾದ ಭಟ್ ವಿರುದ್ಧ ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾದ ಪ್ರಕರಣವನ್ನು ಗುಜರಾತ್‌ನ ಗೃಹ ಇಲಾಖೆ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT