ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಭೋಗದ ಕುಣಿಗಲ್ ಕೆರೆ

Last Updated 12 ಜನವರಿ 2011, 10:55 IST
ಅಕ್ಷರ ಗಾತ್ರ

‘ಮೂಡಲ್ ಕುಣ್ಗಲ್ ಕೆರೆ ನೋಡೋಕೊಂದ್ ಐಭೋಗ
ಮೂಡಿ ಬತ್ತಾನೆ ಚಂದಿರಾಮ....’
ಈ ಜನಪದ ಗೀತೆಯನ್ನು ಗಾಯಕ ಹಾಡುತ್ತಿದ್ದರೆ ಕೇಳುತ್ತಿದ್ದ ಜನರು ಮೈಮರೆಯುತ್ತಿದ್ದ ಕಾಲವೊಂದಿತ್ತು. ಒಂದು ಕೆರೆಯ ಅಂದ ಚೆಂದವನ್ನು ಹೊಗಳಲು ನಮ್ಮ ಜನಪದರು ಹಾಡು ಕಟ್ಟಿ ಸಂಭ್ರಮದಿಂದ ಹಾಡುತ್ತಿದ್ದರು. ಹೀಗೆ ಹಾಡುವುದೂ ನಿಸರ್ಗಾರಾಧನೆಯ ಸಂಕೇತ. ‘ಜಾನಪದ ಕೋಗಿಲೆ’ ಎಂದು ಹೆಸರಾಗಿದ್ದ ಪಿ. ಕಾಳಿಂಗರಾಯರ ಕಂಠಸಿರಿಯಿಂದ ಹೊರಬರುತ್ತಿದ್ದ ಕುಣಿಗಲ್ ಕೆರೆಯ ಹಾಡು ಇಂದಿಗೂ ರೋಮಾಂಚನ ಉಂಟು ಮಾಡುತ್ತದೆ.


ಕುಣಿಗಲ್ ಕೆರೆ ರಾಜ್ಯದ ದೊಡ್ಡ ಕೆರೆಗಳಲ್ಲಿ ಒಂದು. ಸುಮಾರು 50 ವರ್ಷಗಳ ಹಿಂದಿನ ಕುಣಿಗಲ್ ಕೆರೆಯ ವೈಭವವನ್ನು ನೆನಪು ಮಾಡಿಕೊಂಡರೆ ಸಾಕು ಮನಸ್ಸು ಪುಳಕಗೊಳ್ಳುತ್ತದೆ. ಪ್ರತಿ ನವರಾತ್ರಿ ವೇಳೆಗೆ ಕೆರೆ ತುಂಬಿ ತೇಪಾಡುತ್ತಿತ್ತು. ಸುಮಾರು ಎರಡು ಕಿ.ಮೀ. ಉದ್ದದ ಏರಿಯ ಮೇಲೆ ನಡೆಯುತ್ತ ಕೆರೆಯನ್ನು ನೋಡುವುದು ಅಪೂರ್ವ ಅನುಭವವಾತ್ತು. ಹುಣ್ಣಿಮೆ ಆಸುಪಾಸಿನ ರಾತ್ರಿಗಳಲ್ಲಿ ಮೂಡಿ ಬರುವ ಚಂದಿರನ ಪೂರ್ಣ ಬಿಂಬ ಪ್ರಶಾಂತ ಕೆರೆಯಲ್ಲಿ ಫ್ರತಿಫಲನಗೊಂಡು ಮಿಂಚುತ್ತಿದ್ದ ದೃಶ್ಯ ಅವರ್ಣನೀಯ!

ಉತ್ತರಕ್ಕೆ ಕೊತ್ತಗೆರೆ ಎಂಬ ಊರಿಗೆ ಅಂಟಿಕೊಂಡಿರುವ ಕೋಡಿಯಿಂದ ತುಂಬಿ ಹರಿಯುತ್ತಿದ್ದ ನೀರು ನೊರೆ ನೊರೆಯಾಗಿ ಧುಮ್ಮಿಕ್ಕುತ್ತ ಮಿನಿ ಜೋಗದ ನೆನಪು ತರುತ್ತಿತ್ತು. ಪಾತಾಳಗಂಗೆಯಂತೆ ಕಾಣುವ ಆನೆ ಮಡುವಿಗೆ ಕೋಡಿ ನೀರು ಬಿದ್ದು ಅದು ತುಂಬಿ ಮುಂದಕ್ಕೆ ಹರಿದು ಮಂಗಳಾ ಕೆರೆಯತ್ತ ಸಾಗುತ್ತಿದ್ದ ದೃಶ್ಯ ಅಸದೃಶವಾದದು. ಆನೆಯೊಂದು ಜಾರಿ ಕೋಡಿಯೊಳಕ್ಕೆ ಬಿದ್ದಾಗ ಅದರ ಸುಳಿವೇ ಕಾಣಲಿಲ್ಲವಂತೆ. ಈ ಕಾರಣಕ್ಕಾಗಿ ಕೋಡಿಯ ಜಾಗಕ್ಕೆ ‘ಆನೆ ಮಡು’ ಎಂಬ ಹೆಸರು ಬಂತು ಎನ್ನಲಾಗಿದೆ. ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಸಾವಿರಾರು ಜನರು ಅಲ್ಲಿ ನಿಂತು ಆದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಕೆರೆಯ ನೀರು ತಾಲ್ಲೂಕಿನ ಸಾವಿರಾರು ಎಕರೆ ಭೂಮಿಗೆ ವರ್ಷ ಪೂರ್ತಿ ಹರಿಯುತ್ತಿತ್ತು. ವರ್ಷಕ್ಕೆರಡು ಭತ್ತದ ಹಾಗೂ ಒಂದು ಕಬ್ಬಿನ ಬೆಳೆ ಬೆಳೆಯುತ್ತ ರೈತರು ನೆಮ್ಮದಿಯಾಗಿದ್ದರು. ಕುಣಿಗಲ್ ತಾಲ್ಲೂಕಿಗೆ ಭತ್ತದ ಕಣಜ ಎಂಬ ಹೆಸರಿತ್ತು. ಕೆರೆಯ ಬಯಲಲ್ಲಿ ತಿಂಗಳುಗಟ್ಟಲೆ ಕಬ್ಬು ಅರೆದು ಬೆಲ್ಲ ಮಾಡುವ ಆಲೆಮನೆಗಳು ತಲೆ ಎತ್ತುತ್ತಿದ್ದವು. ಆ ಕಾಲ ರೈತರ ಪಾಲಿಗೆ ಅಕ್ಷರಶಃ ಸುವರ್ಣಯುಗವಾಗಿತ್ತು.

ಆ ಸಂಭ್ರಮ ಈಗ ಇಲ್ಲ. ಹಲವು ದಶಕಗಳ ಕಾಲ ಕೆರೆ ತುಂಬಲಿಲ್ಲ. ಶಿವಗಂಗೆ ಬೆಟ್ಟದ ತಪ್ಪಲಿಂದ ಹರಿದು ಬಂದು ಕೆರೆ ತುಂಬಿಸುತ್ತಿದ್ದ ನೀರಿನ ಮೂಲಗಳು ಕಣ್ಮರೆಯಾದವು. ಕೆರೆಯ ಜಲಾನಯನ ಪ್ರದೇಶದ ಹಳ್ಳ ಕೊಳ್ಳಗಳನ್ನು ಒತ್ತುವರಿ ಮಾಡಿಕೊಂಡದ್ದರ ಪರಿಣಾಮ ಇದು. ಕೆರೆಯ ಮೇಲ್ಭಾಗದಲ್ಲಿ ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದ ಬಳಿ ಕೆರೆ (ಕಲ್ಯಾಣಿ)ಯೊಂದನ್ನು ನಿರ್ಮಿಸಿದ್ದರಿಂದ ಕುಣಿಗಲ್ ಕೆರೆಗೆ ನೀರಿನ ಆಸರೆ ತಪ್ಪಿಹೋಯಿತು.

ಅದೇನೇ ಇರಲಿ, ಕುಣಿಗಲ್ ಕೆರೆಯ ನಿರ್ಮಾಣದ ಹಿಂದೆ ರೋಚಕ ಕಥೆಯೊಂದಿದೆ. ಈಗಿನ ಕೆರೆ ಪ್ರದೇಶ ನೂರಾರು ವರ್ಷಗಳ ಹಿಂದೆ ಕಾಡು ಹಾಗೂ ಈಚಲು ಮರಗಳಿಂದ ಕೂಡಿದ್ದ ಜೌಗು ಪ್ರದೇಶವಾಗಿತ್ತು. ಇಲ್ಲಿ ಗಂಗೆ-ಗೌರಿ ಎಂಬ ಕೊಳಗಳಿದ್ದುವಂತೆ. ಶಿವಗಂಗೆ ಬೆಟ್ಟದಲ್ಲಿ ಹುಟ್ಟುವ ನಾಗಿನಿ ಮತ್ತು ನಳಿನಿ ಎಂಬ ನದಿಗಳು ಕುದೂರು, ತಿಪ್ಪಸಂದ್ರ, ಕುಣಿಗಲ್, ಕಗ್ಗೆರೆ, ಮಂಗಳಾ ಮಾರ್ಗವಾಗಿ ಹರಿದು ಶಿವನಸಮುದ್ರ ಸೇರುತ್ತಿದ್ದವಂತೆ. ಈ ನದಿಗಳನ್ನು ತಡೆದು ನಿಲ್ಲಿಸಲು ಕೆರೆ ಕಟ್ಟುವ ಆಲೋಚನೆ ಮಾಡಿದವರು ಚೋಳ ದೊರೆಗಳು. ಅವರು ಈ ಕಾರ್ಯವನ್ನು ಶಿವಗಂಗೆ ಮೂಲದ ಕೊತ್ತಪ್ಪ ಎಂಬ ಪಾಳೇಗಾರರಿಗೆ ವಹಿಸಿದರು.

ಪ್ರಕೃತಿದತ್ತವಾಗಿ ಮೈಲುಗಟ್ಟಲೆ ಉದ್ದಕ್ಕೆ ಬೆಳೆದು ನಿಂತ ಕರಿಕಲ್ಲು ಸಾಲನ್ನು ಕಂಡ ಕೊತ್ತಪ್ಪ ಅದನ್ನೇ ಕೆರೆಯ ಏರಿಗೆ ಬಳಸಿಕೊಳ್ಳಲು ನಿರ್ಧರಿಸಿದರು. ಅಸ್ತವ್ಯಸ್ತವಾಗಿದ್ದ ಕರಿ ಕಲ್ಲುಗಳನ್ನು ವ್ಯವಸ್ಥಿತವಾಗಿ ಜೋಡಿಸಿದರು. ಈ ಕೆಲಸದಲ್ಲಿ ಅವರು ಕಾಡುಕೋಣಗಳನ್ನು ಬಳಸಿಕೊಂಡರಂತೆ! ಉತ್ತರ ದಿಕ್ಕಿನ ಕೊತ್ತಗೆರೆ ಊರು ಮತ್ತು ಕುಣಿಗಲ್ ನಡುವೆ ಏರಿ ನಿರ್ಮಾಣವಾಯಿತು. ಏರಿ ಮೇಲೆ ಕುಣಿಗಲ್ ಪಟ್ಟಣಕ್ಕೆ ಅಂಟಿಕೊಂಡಂತೆ ಚೋಳ ಶಿಲ್ಪಕಲಾ ವೈಭವ ಸಾರುವ ಸೋಮೇಶ್ವರ ದೇವಾಲಯವನ್ನು ಅವರು ನಿರ್ಮಿಸಿದರು. ಕುಣಿಗಲ್ ಮತ್ತು ಕೊತ್ತಗೆರೆ ಬಳಿ ಎರಡು ತೂಬುಗಳು ನಿರ್ಮಾಣವಾದವು.

ಕೆರೆ ನಿರ್ಮಾಣಕ್ಕೆ ಹಲವು ವರ್ಷಗಳು ಬೇಕಾಯಿತು. ಶಿಲ್ಪಿ ಕೊತ್ತಪ್ಪ ಪಾಳೇಗಾರರಿಗೆ ಕೆರೆಯ ಕೆಲಸ ತೃಪ್ತಿ ತರಲಿಲ್ಲ.ಕುಣಿಗಲ್ ಕೆರೆ ಕೋಡಿಗೆ ಸುಮಾರು ಎಂಟು ನೂರು ಮೀಟರ್ ದೂರದಲ್ಲಿ ಮತ್ತೊಂದು ಕೆರೆ ನಿರ್ಮಾಣಕ್ಕೆ ಆಲೋಚಿಸಿದರು. ಅದಕ್ಕೂ ಕರಿ ಕಲ್ಲು ಸಾಲು ಏರಿಯಾಯಿತು. ಅದರ ನಿರ್ಮಾಣ ಮುಕ್ಕಾಲು ಭಾಗದಷ್ಟು  ಮುಗಿಯುತ್ತ ಬಂದಾಗ ಒಂದು ದಿನ ಕೊತ್ತಪ್ಪ ಕೆರೆಯ ಹಿಂಭಾಗದಲ್ಲಿ ಐದಾರು ಕಿಮೀ ದೂರದಲ್ಲಿರುವ ರಂಗನಾಥಸ್ವಾಮಿ ಬೆಟ್ಟದ ಮೇಲೆ ನಿಂತು ನೋಡಿದರು. ಎರಡೂ ಕೆರೆಗಳ ನಡುವೆ ದೂರದಲ್ಲಿ ಶಿವಗಂಗೆ ಬೆಟ್ಟ! ಅದ್ಭುತವಾಗಿ ಕಾಣುತ್ತಿತ್ತು. ಆಗ ಅವರ ತಲೆಯಲ್ಲಿ ಹೊಸ ಆಲೋಚನೆ ಬಂತು. ಎರಡೂ ಕೆರೆಗಳನ್ನು ಒಗ್ಗೂಡಿಸಿದರೆ? ಬಹುದೊಡ್ಡ ಕೆರೆಯಾಗಿ ಇಡೀ ಸೀಮೆಯಲ್ಲೇ ಅತ್ಯಂತ ದೊಡ್ಡ ಕೆರೆ ಎಂಬ ಖ್ಯಾತಿ ಪಡೆಯುತ್ತದೆ ಎಂದು ಕನಸು ಕಂಡರು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ಸಹಸ್ರಾರು ಎಕರೆ ಭೂಮಿಗೆ ಹರಿಸುವ ಕನಸು ಕಾಣತೊಡಗಿದರು.

ಆದರೆ ಕೆರೆ ನಿರ್ಮಾಣಕ್ಕೆ ದುಡಿಯುತಿದ್ದ ಕಾರ್ಮಿಕರ ಆಲೋಚನೆ ಬೇರೆಯೇ ಇತ್ತು. ಹಲವು ವರ್ಷಗಳಿಂದ ಕೆರೆ ಕಟ್ಟುವ ಕೆಲಸ ಮಾಡಿ, ಮಾಡಿ ಬೇಸತ್ತಿದ್ದ ಅವರು ಕೊತ್ತಪ್ಪನವರ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾದರೆ ತಮಗೆ ಈ ಕೆಲಸದಿಂದ ಬಿಡುಗಡೆಯೇ ಇಲ್ಲ ಎಂದು ಭಾವಿಸಿದರು. ಎರಡೂ ಕೆರೆಗಳನ್ನು ಜೋಡಿಸುವ ಕೆಲಸ ಬೇಡವೆಂದು ಪರಿ ಪರಿಯಾಗಿ ವಿನಂತಿಸಿಕೊಂಡರು. ಆದರೆ ಕೊತ್ತಪ್ಪ ಅವರ ಮಾತಿಗೆ ಕಿವಿಕೊಡಲಿಲ್ಲ. ಹತಾಶರಾದ ಕೆಲಸಗಾರರು ಅವರನ್ನೇ ‘ಮುಗಿಸುವ’ ಸಂಚು ರೂಪಿಸಿದರು. ಕೆರೆ ಏರಿಯ ಹಿಂದೆ ಅವರ ಸಾವಿನ ಹೊಂಡ ನಿರ್ಮಿಸಿದರು. ಉಪಾಯವಾಗಿ ಕೊತ್ತಪ್ಪನವರನ್ನು ಅಲ್ಲಿಗೆ ಬರುವಂತೆ ಆಹ್ವಾನಿಸಿ ಅವರನ್ನು ಕೊಂದು ಪರಾರಿಯಾದರು. ಅವರ ಸಾವಿನೊಂದಿಗೆ ಎರಡೂ ಕೆರೆಗಳನ್ನು ಬೆಸೆಯುವ ಕನಸು ಉಳಿದು ಹೋಯಿತು.

ಕುಣಿಗಲ್ ಕೆರೆಯ ಶಿಲ್ಪಿ ಕೊತ್ತಪ್ಪನವರ ಹೆಸರನ್ನೇ ಕೊತ್ತಗೆರೆ ಹೊತ್ತು ನಿಂತಿದೆ. ಕೊತ್ತಪ್ಪನವರ ಸಮಾಧಿ ಸ್ಥಳದಲ್ಲಿ ಜನರು ಗುಡಿ ಕಟ್ಟಿಸಿ ಪೂಜೆ ಸಲ್ಲಿಸುತ್ತ ವರ್ಷಕ್ಕೊಮ್ಮೆ ‘ಪರ’ ನಡೆಸಿ ಅನ್ನ ಸಂತರ್ಪಣೆ ಮಾಡುವ ಸಂಪ್ರದಾಯವಿತ್ತು. ಈಗ ಅದೂ ನಡೆಯುತ್ತಿಲ್ಲಕುಣಿಗಲ್ ಕೆರೆ ಅಂಗಳ 1030 ಎಕರೆ ವ್ಯಾಪ್ತಿಯಲ್ಲಿದೆ. ಕೋಡಿಯ ಉದ್ದವೇ 350 ಅಡಿ. ಕೋಡಿ ಹರಿಯುವ ಜಾಗದಲ್ಲಿ 1845ರಲ್ಲಿ ಮೇಲ್ಸೇತುವೆ ನಿರ್ಮಾಣವಾಗಿದೆ. ಪಕ್ಕದ ಕೊತ್ತಗೆರೆ ಕೆರೆಗೆ 1886ರಲ್ಲಿ ಕೋಡಿ ನಿರ್ಮಾಣವಾಯಿತು.

1954ರಲ್ಲಿ ಕುಣಿಗಲ್ ಕೆರೆ ಭರ್ತಿಯಾದ ನಂತರ ಭಾರೀ ಮಳೆ ಸುರಿದ ಪರಿಣಾಮ ಕೆರೆಗೆ ನೀರಿನ ಒಳಹರಿವು ಇದ್ದಕ್ಕಿದ್ದಂತೆ ಹೆಚ್ಚಾಯಿತು. ಆಗ ಸೋಮೇಶ್ವರ ದೇವಾಲಯವಿದ್ದ ಜಾಗದಲ್ಲೇ ಕೆರೆಯ ಏರಿ ಒಡೆಯುವ ಸುಳಿವು ಕಂಡು ಬಂತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಕೋಡಿಯ ಉತ್ತರ ದಿಕ್ಕಿನ ಬಳಿ ಏರಿಯನ್ನು ಸ್ಫೋಟಕ ಬಳಸಿ ಒಡೆದು ಹಾಕಿದರು. ಅದರಿಂದಾಗಿ ಕುಣಿಗಲ್ ಪಟ್ಟಣ ಉಳಿಯಿತು ಎಂದು ಈಗಲೂ ಜನರು ನೆನಪು ಮಾಡಿಕೊಳ್ಳುತ್ತಾರೆ. ಆಗ ಕುಣಿಗಲ್ ಪಟ್ಟಣದ ಫಾಸಲೆಯಲ್ಲಿ ನೀರು ಸಮುದ್ರದೋಪಾದಿಯಲ್ಲಿ ಹರಿಯಿತು. ದೂರದ ಕಗ್ಗೆರೆ ದೇವಸ್ಥಾನ ಅದರಲ್ಲಿ ಮುಳುಗಿತ್ತು. ಅಪಾರ ಬೆಳೆ ನಷ್ಟವಾಯಿತು.

ಹಿಂದೆ ಕೆರೆಯ ಬಯಲಿನ ಪ್ರಧಾನ ಬೆಳೆಯಾಗಿದ್ದ ಕಬ್ಬು ಈಗ ಮಾಯವಾಗಿದೆ. ಭತ್ತದ ಕಣಜವೆಂಬ ಖ್ಯಾತಿ ಮಸುಕಾಗಿದೆ.ಮೈಸೂರು ಅರಸರಿಂದ ‘ಶೃಂಗಾರ ತೋಟ’ವೆಂದು ಬಿರುದು ಪಡೆದಿದ್ದ ಕೆರೆಯ ಏರಿಯ ಹಿಂದಿನ  ತೆಂಗು-ಅಡಿಕೆ ತೋಟಗಳು ಕಳಾಹೀನಗೊಂಡಿವೆ. ಕೆರೆಯ ಅಚ್ಚುಕಟ್ಟಿನ ಬಯಲು ದಶಕಗಳ ಕಾಲ ಬೆಂಗಾಡಿನಂತೆ ಕಾಣುತ್ತಿತ್ತು.

ಕುಣಿಗಲ್ ಮತ್ತು ಕೊತ್ತಗೆರೆ ಕೆರೆಗಳಿಗೆ ಹೇಮಾವತಿ ನದಿಯ ನೀರು ಹರಿಸಬೇಕು ಎಂಬ ರೈತರ ಬೇಡಿಕೆಗೆ ಅಡ್ಡಗಾಲು ಹಾಕಿದ ರಾಜಕೀಯ ಧುರೀಣರನ್ನು ಒಲಿಸಿಕೊಂಡು ಸುಮಾರು ನೂರು ಕಿ.ಮೀ ದೂರದಿಂದ ನೀರು ಹರಿಸುವ ನಲವತ್ತು ವರ್ಷಗಳ ಹೋರಾಟದ ಪ್ರಯತ್ನದಿಂದಾಗಿ ಕಳೆದ ಕೆಲ ವರ್ಷಗಳಿಂದ ಕೆರೆಗೆ ‘ಜೀವ’ ಬಂದಿದೆ.

ಅದರ ಫಲವಾಗಿ ಕುಣಿಗಲ್ ಮತ್ತು ಕೊತ್ತಗೆರೆ ಕೆರೆಗಳು ಪ್ರತಿ ವರ್ಷ ತುಂಬುತ್ತಿವೆ. ನಮ್ಮ ಕೆರೆಗೆ ಭವಿಷ್ಯವೇ ಇಲ್ಲ ಎಂದು ಹತಾಶರಾಗಿದ್ದ ರೈತರ ಮೊಗದಲ್ಲಿ ಈಗ ಸ್ವಲ್ಪ ನೆಮ್ಮದಿ ಇದೆ. ಈ ಕೆರೆಗಳು ತುಂಬುತ್ತಿರುವುದರಿಂದ ಈ ಪ್ರದೇಶದ ಅಂತರ್ಜಲ ವೃದ್ಧಿಯಾಗಿದೆ.

ಕುಣಿಗಲ್ ಕೆರೆಯ ಐಭೋಗ ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಹಿಂದಿರುಗಿದೆ ಎಂಬ ಸಣ್ಣ ಸಮಾಧಾನ ರೈತರಲ್ಲಿದೆ.ಮಳೆಗಾಲ ಮುಗಿಯುವ ಹೊತ್ತಿಗೆ ತುಂಬುವ ಕೆರೆಯ ನೀರನ್ನು ಜನವರಿ ನಂತರ ಬೇಸಿಗೆ ಬೆಳೆ ಬೆಳೆಯಲು ಪೂರೈಸುತ್ತಾರೆ. ವರ್ಷದಲ್ಲಿ ಒಮ್ಮೆ ಭತ್ತ ಬೆಳೆದುಕೊಳ್ಳುವ ಅವಕಾಶವನ್ನು ತಾಯಿ ಹೇಮಾವತಿ ಕರುಣಿಸಿದ್ದಾಳೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT