ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವತ್ತರಲ್ಲಿ ನೂರಾರು ಕನಸು!

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

`ಐವತ್ತು ವರ್ಷ ಆಗೋಯ್ತಾ? ಇನ್ನು ಮುಂದೆ ನನ್ನಿಷ್ಟದ ಶಾರ್ಟ್ ಪ್ಯಾಂಟ್‌ಗಳನ್ನು ಹಾಕುವಾಗ ಇವರ ಒಪ್ಪಿಗೆ ಪಡೆಯಬೇಕು~ ಎಂದು ಕೀಟಲೆಯ ದನಿಯಲ್ಲಿ ಹೇಳುತ್ತಾ ಶಿವರಾಜ್‌ಕುಮಾರ್ ಪತ್ನಿಯ ಕಡೆ ಮುಖ ತಿರುಗಿಸಿದರು.

ಗೀತಾ ಶಿವರಾಜ್‌ಕುಮಾರ್ ಮುಗುಳ್ನಗುತ್ತಿದ್ದರು. ಅಂದು ನಟ ಶಿವರಾಜ್ ಕುಮಾರ್ ಅವರಿಗೆ ಐವತ್ತು ತುಂಬಿದ (ಜು.11) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ನಡುವೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಮ್ಮ ಅನುಭವ ಮತ್ತು ಕನಸುಗಳನ್ನು ಹಂಚಿಕೊಂಡರು.
 
ಈ ಹಂತದಲ್ಲಿ ಅವರಿಗೆ ತಾವು ನಿರ್ವಹಿಸುತ್ತಿರುವ ಪಾತ್ರಗಳಲ್ಲಿ ಭಿನ್ನತೆ ಬೇಕು ಎನಿಸಿದೆ. ಇನ್ನು ಮುಂದೆ ಎಂಥ ಪಾತ್ರಗಳನ್ನು ನಿರ್ವಹಿಸಬೇಕು/ ಬಾರದು ಎನ್ನುವ ಬಗ್ಗೆ ಎಚ್ಚರ ವಹಿಸಬೇಕು ಎನಿಸಿದೆ. ಜೊತೆಗೆ ಅವರಿಗೊಂದು ಕನಸು ಚಿಗುರಿದೆ. ಅದು `ಪಕ್ಕಾ ವಿಲನ್~ ಪಾತ್ರದ್ದು. 

`ವಿಲನ್ ಪಾತ್ರದಲ್ಲಿ ವಿಜೃಂಭಿಸಬೇಕು ಎಂಬಾಸೆ ಇದೆ.  ಆ ಸಿನಿಮಾದಲ್ಲಿ ವಿಲನ್ನೇ ಹೀರೋ ಆಗಿರುತ್ತಾನೆ~ ಎನ್ನುತ್ತಾ ಮನದುಂಬಿ ನಕ್ಕರು ಶಿವರಾಜ್. ಮರುಕ್ಷಣ ಅವರ ಮಾತು ಭಾವುಕವಾಯಿತು. `ಆರಂಭದಲ್ಲಿ ತಾಯಿ, ನಂತರ ಹೆಂಡತಿ, ಇದೀಗ ಇಬ್ಬರು ಹೆಣ್ಣುಮಕ್ಕಳು. ನನ್ನ ಜೀವನದಲ್ಲಿ ಹೆಣ್ಣುಮಕ್ಕಳದೇ ಕಾರುಬಾರು~ ಎಂದು ಮತ್ತೆ ನಗೆ ತುಂಬಿಕೊಂಡರು.

ಕನ್ನಡ ಚಿತ್ರರಂಗದ ನಾಯಕರಾಗುವಿರಾ ಎಂದಾಗ- `ನಾನೇ ಸರಿ ಇಲ್ಲ. ನನ್ನಲ್ಲೇ ಅನೇಕ ನ್ಯೂನ್ಯತೆಗಳಿವೆ. ನಾನು ಮೊದಲು ರಿಪೇರಿಯಾಗಬೇಕು~ ಎಂದರು. `ಚಲನಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಲು ಅಂಬರೀಷ್ ಇದ್ದೇ ಇರುತ್ತಾರೆ.

ಎಲ್ಲರೂ ವಿನಯವಂತರಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು~ ಎಂಬ ಸಲಹೆ ಇತ್ತರು. `ಅಮಿತಾಬ್ ಬಚ್ಚನ್ ಅವರಂಥ ಹಿರಿಯ ನಟರ ವಿನಯವಂತಿಕೆ ನಮಗೆ ಪಾಠ ವಾಗಬೇಕು~ ಎನ್ನುತ್ತಾ, ಜಾಹೀರಾತೊಂದರ ಚಿತ್ರೀಕರಣದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ, ದಿಲೀಪ್, ಶಿವಾಜಿ ಪ್ರಭು ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ಶಿವರಾಜ್, ಮೇರುನಟ ಬಚ್ಚನ್ ಅವರ ಸರಳತೆಗೆ ಮನಸೋತ್ದ್ದಿದಾರಂತೆ.
 
ಅಂತೆ ಅಂಥ ಸರಳತೆಯನ್ನು ತಮ್ಮ ನಡವಳಿಕೆಯಲ್ಲಿ ರೂಢಿಸಿಕೊಳ್ಳಬೇಕು ಎಂಬುದು ಅವರ ಸಂಕಲ್ಪವಾಗಿದೆಯಂತೆ.

`ಐವತ್ತು ವರ್ಷ ಹೇಗೆ ಕಳೆಯಿತು ಎಂದೇ ತಿಳಿಯಲಿಲ್ಲ. ನಾನು ತುಂಬಾ ಎಂಜಾಯ್ ಮಾಡಿದೆ. ಎಂಜಾಯ್ ಮಾಡುವ ಅವಕಾಶಗಳನ್ನು ನಾನು ಎಂದೂ ಕಳೆದುಕೊಳ್ಳಲಿಲ್ಲ. ಕಳೆದುಕೊಳ್ಳುವುದೂ ಇಲ್ಲ~ ಎಂದು ಮುದಗೊಂಡರು.

`ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಒಟ್ಟಾಗಿ ನಟಿಸುವ ಚಿತ್ರಕ್ಕೆ ಕಾಲ ಕೂಡಿ ಬಂದಿಲ್ಲ. ಎಕ್ಸೈಟ್ ಆಗುವ ಕತೆ ಸಿಕ್ಕಿಲ್ಲ~ ಎಂದರು. ಸದ್ಯ ಸೂರಿ ನಿರ್ದೇಶನದ `ಕಡ್ಡಿಪುಡಿ~, ಶ್ರೀನಗರ ಕಿಟ್ಟಿ, ಯೋಗೀಶ್ ಜೊತೆ `ಅಣ್ಣ ತಮ್ಮಂದಿರು~ ಮತ್ತು ಡಿ.ರಾಜೇಂದ್ರ ಬಾಬು ನಿರ್ದೇಶನದ ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ. 
                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT