ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವತ್ತು ಮಂದಿಯ ಸಖತ್ತು ದೇಶ!

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಹಸ್ರಾರು ವರ್ಷಗಳ ಹಿಂದೆ ಅಗ್ನಿಪರ್ವತದ ಲಾವಾರಸ ಗಟ್ಟಿಯಾಗಿ, ನಾಲ್ಕು ನಡುಗಡ್ಡೆಗಳಾಗಿ ಬದಲಾಯಿತು. ಈ ನಾಲ್ಕು ಸೇರಿದರೆ ‘ಪಿಟ್‌ಕೈರ್ನೆ’ ದೇಶ. ನಾಲ್ಕರ ಪೈಕಿ ಒಂದರಲ್ಲಿ ಮಾತ್ರವೇ ಮನುಷ್ಯರ ವಾಸ. ಇನ್ನುಳಿದ ಮೂರರಲ್ಲಿ (ಹೆಂಡರ್ಸನ್, ಡ್ಯೂಸಿ, ಒಎನೊ) ಜನರಿಲ್ಲ.
ಕೇವಲ ನಲವತ್ತೆರಡು ಚದರ ಕಿ.ಮೀ. ವಿಸ್ತೀರ್ಣದ ‘ಪಿಟ್‌ಕೈರ್ನೆ’ಯ ಆಂಡರ್‌ಸನ್ ದ್ವೀಪದಲ್ಲಿ ವಿಶೇಷ ಜಾತಿಯ ಗಿಡಗಳು ಮತ್ತು ಪಕ್ಷಿಗಳು ಕಾಣಸಿಗುತ್ತವೆ. ಇಲ್ಲಿಯದ್ದು ಸಂಪದ್ಭರಿತ ಭೂಪ್ರದೇಶ. ಪಿಟ್‌ಕೈರ್ನೆಯ ಸುತ್ತ ಸಮುದ್ರ ಇದ್ದರೂ ಎಲ್ಲಿಯೂ ಬೀಚ್ ಇಲ್ಲದಿರುವುದು ಒಂದು ವಿಶೇಷ. ಏಕೆಂದರೆ ಇದು ಸಮುದ್ರ ಮಟ್ಟದಿಂದ 337 ಮೀಟರ್ ಎತ್ತರದಲ್ಲಿದೆ.

ಪ್ರಕೃತಿಯ ನೋಟಗಳನ್ನು ಸವಿಯುವ ಜನರು ದೇಶದ ಮೂಲ ಮಾಹಿತಿ ಹೆಕ್ಕತೊಡಗಿದರೆ ಇನ್ನಷ್ಟು ಅಚ್ಚರಿಗಳು ಎದುರಾಗುತ್ತವೆ. ಇಲ್ಲಿನ ಪ್ರಜೆಗಳ ಸಂಖ್ಯೆ ಕೇವಲ 50. ಪ್ರಪಂಚದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಪ್ರಜಾಪ್ರಭುತ್ವ ರಾಷ್ಟ್ರವಿದು. ಆಸ್ಟ್ರೇಲಿಯ ಮತ್ತು ದಕ್ಷಿಣ ಅಮೆರಿಕ ಮಧ್ಯದ ಫೆಸಿಪಿಕ್ ಮಹಾಸಾಗರದ ಮಧ್ಯೆ ಇರುವ ಪಿಟ್‌ಕೈರ್ನೆಯಲ್ಲಿ ಬರೀ ಒಂಬತ್ತು ಕುಟುಂಬಗಳಿವೆ. ಒಬ್ಬ ಮೇಯರ್, ಒಬ್ಬ ಗೌರ್ನರ್ ಕೆಲಸ ಮಾಡುತ್ತಿದ್ದಾರೆ. 43 ವಿಧಿಗಳ ಒಂದು ಸಂವಿಧಾನ ಸಹ ಇಲ್ಲಿದೆ.

ಬ್ರಿಟನ್ನಿಗೆ ಸೇರಿದ ಹಡಗು 1767ರಲ್ಲಿ ಸಮುದ್ರದಲ್ಲಿ ಪ್ರಯಾಣಿಸುವಾಗ ಅದರಲ್ಲಿ 17 ವರ್ಷದ ಪಿಟ್‌ಕೈರ್ನೆ ಎಂಬ ಯುವಕನಿದ್ದ. ‘ಅಲ್ಲೊಂದು ದ್ವೀಪ ಇದೆ’ ಎಂದು ಮೊದಲು ಕೂಗಿದ್ದೇ ಅವನು. ಹಾಗಾಗಿ ಮುಂದೆ ಅವನ ಹೆಸರೇ ದೇಶಕ್ಕೆ ಶಾಶ್ವತವಾಗಿ ಉಳಿಯಿತು.  1790ರಲ್ಲಿ ಬ್ರಿಟನ್ನಿನ ಕೆಲವರು ಇಲ್ಲಿಗೆ ಬಂದು, ವಾಸಿಸಲು ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ ಈ ದ್ವೀಪವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು.

ಇಲ್ಲಿ ಒಂದು ಶಾಲೆ ಸಹ ಉಂಟು. ಅದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇಬ್ಬರಷ್ಟೆ. ಈ ದೇಶವನ್ನು ತಲುಪಬೇಕಾದರೆ ಹಡಗು ಪ್ರಯಾಣವೇ ಗತಿ. ವಿವಿಧ ರೀತಿಯ ಹಣ್ಣುಗಳು, ತರಕಾರಿಗಳು, ಕಬ್ಬು ಇಲ್ಲಿನ ಬೆಳೆಗಳು.

ಪಿಟ್‌ಕೈರ್ನೆಯಲ್ಲಿ ಎರಡು ಟೀವಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಆಕಾಶವಾಣಿ (ರೇಡಿಯೊ) ವ್ಯವಸ್ಥೆ ಇಲ್ಲ. ಒಟ್ಟು ರಸ್ತೆ ವಿಸ್ತೀರ್ಣ 6.4 ಕಿ.ಮೀ ಅಷ್ಟೇ. ವರ್ಷಕ್ಕೆ ಮೂರು ಬಾರಿ ನ್ಯೂಜಿಲೆಂಡ್‌ನಿಂದ ಅಗತ್ಯ ಸರಕುಗಳು ಇಲ್ಲಿಗೆ ಆಮದಾಗುತ್ತವೆ. ಈ ದೇಶ ನೋಡಲು ಹೋದವರು ಸ್ಥಳೀಯ ನಿವಾಸಿಗಳ ಮನೆಯಲ್ಲೇ ಉಳಿಯಬೇಕು. ಹೋಟೆಲ್, ರೆಸಾರ್ಟ್ ಈಗಿನ್ನೂ ಕಣ್ಣುಬಿಡುತ್ತಿವೆ. ಒಂದು ರಾತ್ರಿ ತಂಗಲು ಪ್ರವಾಸಿಗರು 70 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ. ಜನಸಂಖ್ಯೆ ಐವತ್ತಾದರೂ ಕಣ್ಣು ಕುಕ್ಕುವ ಪ್ರಕೃತಿ ಕಥನಗಳು ಇಲ್ಲಿ ಅಸಂಖ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT