ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಕಣದಲ್ಲಿ: ರಂಗೇರಿದ ಸ್ಪರ್ಧೆ

Last Updated 6 ಜನವರಿ 2012, 8:50 IST
ಅಕ್ಷರ ಗಾತ್ರ

ಕೋಲಾರ: ಭಾರತಿಯವರ ನಿಧನದಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ ವೇಮಗಲ್ ಕ್ಷೇತ್ರಕ್ಕೆ ಉಪಚುನಾವಣೆ ಜ.10ರಂದು ನಡೆಯಲಿದೆ. ಅಂತಿಮವಾಗಿ ಐವರು ಸ್ಪರ್ಧಿಗಳು ಕಣದಲ್ಲಿದ್ದಾರೆ. ಅವರ ಹಿಂದೆ ನಿಂತಿರುವ ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಮಾತ್ರ ಚುನಾವಣೆ ಪ್ರತಿಷ್ಠೆ ಕಣವೂ ಆಗಿದೆ. ಅವರಿಗೆ ಕ್ಷೇತ್ರದಲ್ಲಿ ರಾಜಕೀಯ ಅಸ್ತಿತ್ವದ ಪ್ರಶ್ನೆಯೂ ಚುನಾವಣೆ ಮೂಲಕ ಎದುರಾಗಿದೆ.

ಹೋಬಳಿ ಕೇಂದ್ರವೂ ಆಗಿರುವ ವೇಮಗಲ್ ಮಾಜಿ ಸಚಿವ ಸಿ.ಬೈರೇಗೌಡರ ಕಾಲದಿಂದಲೂ  ತಾಲ್ಲೂಕಿನ ರಾಜಕಾರಣದಲ್ಲಿ ವಿಶಿಷ್ಟ ಛಾಪು ಹೊಂದಿದೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶರ ರಾಜಕೀಯ ಹಣಾಹಣಿಯಿಂದಲೇ ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆಯುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಾಗ ಭಾರತಿಯವರು  ವರ್ತೂರು ಬಣದಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಆಗ ಹಿನ್ನಡೆ ಅನುಭವಿಸಿದ್ದ ಶ್ರೀನಿವಾಸಗೌಡರಿಗೆ ಮತ್ತೆ ತಮ್ಮ ಬಲ ಸಾಬೀತು ಮಾಡಲು ಇದೊಂದು ಉತ್ತಮ ಅವಕಾಶ ಎಂದೇ ಕ್ಷೇತ್ರದಲ್ಲಿ ಹೇಳಲಾಗುತ್ತಿದೆ.

ಹೀಗಾಗಿ ಈ ಚುನಾವಣೆ ವಿವಿಧ ಪಕ್ಷಗಳ ಮಧ್ಯೆ ಸ್ಪರ್ಧೆಯಾಗಿ ಅಷ್ಟೇ ಅಲ್ಲದೆ, ಹಾಲಿ-ಮಾಜಿ ಸಚಿವರ ರಾಜಕೀಯ ಹಣಾಹಣಿಯಾಗಿಯೂ ಗಮನ ಸೆಳೆಯಲಿದೆ.

ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಐವರು ಸ್ಪರ್ಧಿಗಳಿದ್ದಾರೆ. ವಿಶ್ವನಗರದ ಕಲ್ಯಾಣಿ (ಕಾಂಗ್ರೆಸ್), ಚನ್ನಸಂದ್ರದ ಎಲ್.ಆಶಾ (ಜೆಡಿಎಸ್), ರಾಜಕಲ್ಲಳ್ಳಿಯ ಸರೋಜಮ್ಮ (ಬಿಜೆಪಿ), ವರ್ತೂರು ಬಣದ ಕುರುಬರಹಳ್ಳಿಯ ಭಾಗ್ಯಮ್ಮ ಮತ್ತು ಡಿ.ಆರ್.ಶಿವಕುಮಾರಗೌಡರ ಬಣದ ಬೆಟ್ಟಹೊಸಪುರದ ಎಂ.ರಾಜೇಶ್ವರಿ ಕಣದಲ್ಲಿದ್ದಾರೆ.

ಕಾಂಗ್ರೆಸ್‌ನ, ಸಚಿವ ಕೆ.ಎಚ್. ಮುನಿಯಪ್ಪ, ಜೆಡಿಎಸ್‌ನ ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಒಂದೆಡೆ, ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಬಾವುಟ ಹಾರಿಸಲು ನೆರವಾದ ಸಚಿವ ವರ್ತೂರು ಪ್ರಕಾಶ, ಬಿಜೆಪಿ ಮತ್ತೊಂದೆಡೆ ಹಾಗೂ ಕಾಂಗ್ರೆಸ್‌ನ ಮುಖಂಡರಿಂದ ಮುಖಭಂಗ ಅನುಭವಿಸುತ್ತಿರುವ ಡಿ.ಆರ್.ಶಿವಕುಮಾರಗೌಡ ಇನ್ನೊಂದೆಡೆ ಚುನಾವಣೆ ಪ್ರಚಾರದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಪಕ್ಷೇತರರ ಪ್ರಾಬಲ್ಯ: ಕಳೆದ ಡಿಸೆಂಬರ್‌ನಲ್ಲಿ ಜಿ.ಪಂ. ಚುನಾವಣೆ ನಡೆದಾಗ ತಾಲ್ಲೂಕಿನ ಆರು ಕ್ಷೇತ್ರಗಳಲ್ಲಿ ಮೂರು ಸ್ಥಾನವನ್ನು ವರ್ತೂರು ಬಣದ ಸದಸ್ಯರೇ (ವೇಮಗಲ್, ವಕ್ಕಲೇರಿ ಮತ್ತು ನರಸಾಪುರ) ಗಳಿಸಿದ್ದರು. ಕಾಂಗ್ರೆಸ್ 1 (ಹುತ್ತೂರು) ಮತ್ತು ಜೆಡಿಎಸ್ ಎರಡು (ಸುಗಟೂರು ಮತ್ತು ಹೋಳೂರು) ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಲೆಕ್ಕಕ್ಕೆ ಇಲ್ಲದ ಪಕ್ಷ ಎಂಬ ಟೀಕೆ ಎದುರಿಸಿದ್ದ ಬಿಜೆಪಿ ಅಚ್ಚರಿ ಮೂಡಿಸುವಂತೆ ಎರಡನೇ ಸ್ಥಾನಕ್ಕೆ ಏರಿತ್ತು. ಹೆಚ್ಚು ಅಭ್ಯರ್ಥಿಗಳ ಕೊರತೆ, ಕಾರ್ಯಕರ್ತರ ಕೊರತೆ, ಮಾಜಿ ಸಚಿವ ಶ್ರೀನಿವಾಸಗೌಡರ ನಿರ್ಗಮನದ ನಡುವೆಯೂ ಮಹತ್ವಾಕಾಂಕ್ಷೆಯಿಂದಿದ್ದ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ವರ್ತೂರು ಪ್ರಭಾವಳಿಯಲ್ಲಿ ತೇಲಿದ ಪಕ್ಷೇತರರು ಮಾತ್ರ ಅಚ್ಚರಿ ಮೂಡಿಸುವಂತೆ ಮೇಲೆದ್ದಿದ್ದರು. ವೇಮಗಲ್ ಕ್ಷೇತ್ರದಲ್ಲಿಯೂ ಸನ್ನಿವೇಶ ಹಾಗೇ ಇತ್ತು. ಬಿಜೆಪಿಗೆ ಮಾತ್ರ ಅವಕಾಶ ದೊರೆತಿರಲಿಲ್ಲ.

ಸೇರ್ಪಡೆ: ಉಪ ಚುನಾವಣೆ ಘೋಷಣೆಯಾದ ಕೂಡಲೇ ಪಕ್ಷಾಂತರ ಚಟುವಟಿಕೆ ಬಿರುಸಾಯಿತು. ವರ್ತೂರು ಬಣ, ಶ್ರೀನಿವಾಸಗೌಡರ ಬಣ, ಶಿವಕುಮಾರಗೌಡರ ಬಣದವರೆನ್ನಲಾದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಗಳೂ ಜೋರಾಗಿ ನಡೆದವು. ಈಗಲೂ ನಡೆಯುತ್ತಿವೆ. ಇದೂ ಕೂಡ ಚುನಾವಣೆ ಹಿನ್ನೆಲೆಯಲ್ಲೆ ನಡೆಯುತ್ತಿರುವ ಪ್ರಮುಖ ಚಟುವಟಿಕೆ ಎಂಬುದು ಸದ್ಯಕ್ಕೆ ಕ್ಷೇತ್ರದಲ್ಲಿ ಚರ್ಚೆಯಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು.

ಅದಲು-ಬದಲು: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ವರ್ತೂರು ಪ್ರಕಾಶರಿಗೆ ಇದು ಮೊದಲ ಚುನಾವಣೆ ಸವಾಲು. ಅವರ ಬೆಂಬಲಿಗರಾಗಿದ್ದವರ ಸ್ಥಾನ, ಪಕ್ಷಗಳು ಬದಲಾಗಿವೆ. ರಾಜಕೀಯ ಸೇಡು ಹೇಗೆಲ್ಲಾ ಪರಿಣಾಮ ಬೀರಬಹುದು ಎಂಬುದು ನಿರೀಕ್ಷೆಗೂ ಮೀರಿ ಕ್ಷೇತ್ರವನ್ನು ವ್ಯಾಪಿಸಿದೆ.

ಕಳೆದ ಬಾರಿ ವರ್ತೂರು ಬಣದಲ್ಲಿದ್ದ ಭಾರತಿಯವರ ಪತಿ ಪುಟ್ಟಸ್ವಾಮಾಚಾರ್ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಅವರ ಸೊಸೆ ಕಲ್ಯಾಣಿ ಕಾಂಗ್ರೆಸ್ ಅಭ್ಯರ್ಥಿ. ಶ್ರೀನಿವಾಸಗೌಡರ ಜೊತೆಗಿದ್ದು ನಂತರ ವರ್ತೂರು ಬಣ ಸೇರಿರುವ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮುನಿ ನಾರಾಯಣಪ್ಪ ಅವರ ಪತ್ನಿ ಭಾಗ್ಯಮ್ಮ ವರ್ತೂರು ಬಣದ ಅಭ್ಯರ್ಥಿ. ಒಮ್ಮೆ ಸ್ನೇಹಿತರಾಗಿದ್ದವರೇ ಈಗ ರಾಜಕೀಯ ಹಣಾಹಣಿಗಿಳಿದಿದ್ದಾರೆ.

ಈ ನಡುವೆ ಕೈಗಾರಿಕೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ನೀಡುವಾಗ ರೈತರಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸುತ್ತಿರುವ ವಿಧಾನ ಪರಿಷತ್ ಸದಸ್ಯ ವಿ.ಆರ್. ಸುದರ್ಶನ್ ಅವರ ತವರು ನೆಲವೂ ಆಗಿರುವ ವೇಮಗಲ್‌ನಲ್ಲಿ ಕಾಂಗ್ರೆಸ್ ಪ್ರಭಾವ ಹೇಗೆ ಕೆಲಸ ಮಾಡುತ್ತದೆ ಎಂಬುದೂ ಕುತೂಹಲಕರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT