ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ತಪ್ಪಿತಸ್ಥರು: ನಾಳೆ ಶಿಕ್ಷೆ ಪ್ರಕಟ

ನೇಪಾಳ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
Last Updated 4 ಸೆಪ್ಟೆಂಬರ್ 2013, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ತಪ್ಪಿತಸ್ಥರೆಂದು ಐದನೇ ತ್ವರಿತ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ (ಸೆ.6) ಕಾಯ್ದಿರಿಸಿದೆ.

ಪ್ರಕರಣ ಸಂಬಂಧ ಜ್ಞಾನಭಾರತಿ ಪೊಲೀಸರು ಬಾಲ ಆರೋಪಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. ಈ ಪೈಕಿ ರಾಮನಗರ ಜಿಲ್ಲೆ ಕೈಲಂಚ ಹೋಬಳಿಯ ಮೆಟಾರೆದೊಡ್ಡಿ ಗ್ರಾಮದ ಮದ್ದೂರ (20), ಶಿವಣ್ಣ (20), ಈರಯ್ಯ ಉರುಫ್ ಈರ (20), ಎಲಿಯಯ್ಯ ಅಲಿಯಾಸ್ ಕುಮಾರ (23), ರಾಮ (21) ಮತ್ತು ಮೈಸೂರು ಜಿಲ್ಲೆಯ ದೊಡ್ಡಈರಯ್ಯ (19) ಅವರನ್ನು ತಪ್ಪಿತಸ್ಥರೆಂದು ಐದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಸಂಗಣ್ಣವರ್ ಆದೇಶಿಸಿದರು.

`ಮಹಿಳೆಯ ಅಪಹರಣ (ಐಪಿಸಿ 366), ಸಾಮೂಹಿಕ ಅತ್ಯಾಚಾರ, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿ, ಆಕೆಯ ಸ್ನೇಹಿತ ಸೇರಿದಂತೆ 31 ಮಂದಿಯ ಹೇಳಿಕೆ ಪಡೆಯಲಾಗಿತ್ತು. ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳು ಸೇರಿದಂತೆ ಒಟ್ಟು 151 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.

ಅತ್ಯಾಚಾರ ಘಟನೆ ನಡೆದ ದಿನ (ಅ.13) ಆರೋಪಿಗಳು ಗಂಧದ ಮರ ಕಡಿದು ಸಾಗಿಸುವ ಉದ್ದೇಶಕ್ಕಾಗಿ ರಾತ್ರಿ 8.30ರ ಸುಮಾರಿಗೆ ಜ್ಞಾನಭಾರತಿ ಆವರಣಕ್ಕೆ ಬಂದಿದ್ದರು. ಅವರು ಗಂಧದ ಮರಗಳನ್ನು ಹುಡುಕುತ್ತಾ ಜ್ಞಾನಭಾರತಿ ಆವರಣದಲ್ಲಿ ಅಡ್ಡಾಡುತ್ತಿದ್ದಾಗ, ಯುವತಿ ಮತ್ತು ಆಕೆಯ ಸ್ನೇಹಿತ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಆರೋಪಿಗಳು ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಬಳಿಕ ಆಕೆಯನ್ನು ಸ್ವಲ್ಪ ದೂರ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು.

ಆರೋಪಿಗಳ ಮುಖಚರ್ಯೆ ಮತ್ತು ಲಕ್ಷಣಗಳ ಬಗ್ಗೆ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ದ ಪಶ್ಚಿಮ ವಿಭಾಗದ ಪೊಲೀಸರು, ಅ.19ರಂದು ಬಾಲಕೆ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದರು. ನಂತರ ಒಂದೇ ತಿಂಗಳಿನಲ್ಲಿ (ನ.16) ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಏಳನೇ ಆರೋಪಿ ಬಾಲಕನಾಗಿರುವುದರಿಂದ ಬಾಲ ನ್ಯಾಯಾಲಯ ಆತನ ವಿಚಾರಣೆ ನಡೆಸುತ್ತಿದೆ. ಮತ್ತೊಬ್ಬ ಆರೋಪಿ ರಾಜ ತಲೆಮರೆಸಿಕೊಂಡಿದ್ದಾನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT